ವಿದ್ಯುತ್‌ ಖಾಸಗೀಕರಣದ ವಿರುದ್ಧ ಹೊತ್ತಿಕೊಂಡ ಹೋರಾಟದ ಕಿಡಿ, ಆಕ್ಷೇಪಣೆ ಅಭಿಯಾನಕ್ಕೆ ಕರೆ

Published : May 27, 2026, 12:54 PM IST
Power

ಸಾರಾಂಶ

ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಟಾಟಾ ಪವರ್ ಕಂಪನಿ ಪರವಾನಗಿ ಕೋರಿದೆ. ಇದನ್ನು ವಿದ್ಯುತ್ ಕ್ಷೇತ್ರದ ಖಾಸಗೀಕರಣದ ಸಂಚು ಎಂದು ವಿರೋಧಿಸಿರುವ ವಿದ್ಯುತ್ ನೌಕರರ ಸಂಘಗಳ ಒಕ್ಕೂಟ, ರಾಜ್ಯಾದ್ಯಂತ ಹೋರಾಟಕ್ಕೆ ಇಳಿದಿದ್ದು, ಪ್ರಸ್ತಾವನೆ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಕರೆ ನೀಡಿದೆ.

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿದ್ಯುತ್‌ ವಿತರಣೆಗೆ ‘ದಿ ಟಾಟಾ ಪವರ್‌ ಕಂಪೆನಿ ಲಿಮಿಟೆಡ್‌’ ಪರವಾನಗಿ ಕೋರಿರುವ ಬೆನ್ನಲ್ಲೇ ಕರ್ನಾಟಕ ವಿದ್ಯುತ್‌ ನೌಕರರ ಸಂಘಗಳ ಒಕ್ಕೂಟ ಹೋರಾಟಕ್ಕೆ ಇಳಿದಿದ್ದು, ಪ್ರಸ್ತಾವನೆ ವಿರುದ್ಧ ಕೆಇಆರ್‌ಸಿಗೆ ಆಕ್ಷೇಪಣೆ ಸಲ್ಲಿಸಲು ಅಭಿಯಾನಕ್ಕೆ ಕರೆ ನೀಡಿದೆ.

ಖಾಸಗಿ ವಿದ್ಯುತ್‌ ಉತ್ಪಾದನೆ ಹಾಗೂ ವಿತರಣಾ ಕಂಪನಿಯಾದ ‘ದಿ ಟಾಟಾ ಪವರ್‌ ಕಂಪೆನಿ ಲಿಮಿಟೆಡ್‌’ ರಾಜ್ಯದ ಪ್ರಮುಖ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಪರವಾನಗಿ ಕೋರಿ ಕೆಇಆರ್‌ಸಿಗೆ ಅರ್ಜಿ ಸಲ್ಲಿಸಿದೆ. ಇದನ್ನು ರಾಜ್ಯದಲ್ಲಿ ವಿದ್ಯುತ್‌ ವಿತರಣೆ ಖಾಸಗೀಕರಣದ ಪ್ರಥಮ ಹೆಜ್ಜೆ ಎಂದೇ ವ್ಯಾಖ್ಯಾನಿಸಲಾಗುತ್ತಿದ್ದು, ಸಾರ್ವಜನಿಕ ವಲಯ ಹಾಗೂ ವಿದ್ಯುತ್‌ ನೌಕರರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಬೆಸ್ಕಾಂ ಕೇಂದ್ರ ಕಚೇರಿ ಎದುರು ಕರ್ನಾಟಕ ವಿದ್ಯುತ್‌ ನೌಕರರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ನೂರಾರು ಮಂದಿ ನೌಕರರು ಪ್ರತಿಭಟನೆ ನಡೆಸಿದರು.

ಈ ವೇಳೆ ಯಾವುದೇ ಕಾರಣಕ್ಕೂ ವಿದ್ಯುತ್‌ ಕ್ಷೇತ್ರ ಕಾರ್ಪೊರೇಟ್ ಕಂಪನಿಗಳ ಪಾಲಾಗಲು ಬಿಡುವುದಿಲ್ಲ. ಕೆಪಿಟಿಸಿಎಲ್‌ ಹಾಗೂ ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿದ್ಯುತ್‌ ವಿತರಣೆಗೆ ಟಾಟಾ ಪವರ್‌ ಕಂಪನಿ ಪರವಾನಗಿ ಪಡೆಯುತ್ತಿರುವುದು ವಿದ್ಯುತ್‌ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ವ್ಯವಸ್ಥಿತ ಸಂಚು. ಹೀಗಾಗಿ ಪರವಾನಗಿ ನೀಡುವುದಕ್ಕೆ ಆಕ್ಷೇಪಣೆ ಸಲ್ಲಿಸಬೇಕು ಎಂದು ನೌಕರರು ಹಾಗೂ ಸಾರ್ವಜನಿಕರಿಗೆ ಒಕ್ಕೂಟದ ಅಧ್ಯಕ್ಷ ಬಲರಾಮ್ ಕರೆ ನೀಡಿದರು.

ಆಕ್ಷೇಪಣೆ ಸಲ್ಲಿಸಲು ಅಭಿಯಾನ:

ಟಾಟಾ ಪವರ್‌ ಕಂಪನಿ ಪ್ರಸ್ತಾಪಕ್ಕೆ ಆಕ್ಷೇಪಣೆ ಸಲ್ಲಿಸಿ ಒಕ್ಕೂಟದ ಪರವಾಗಿ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯಲ್ಲಿರುವ ಎಂ.ಎಲ್‌. ವೈಶಾಲಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಇದೇ ವೇಳೆ ಕೆಇಆರ್‌ಸಿಗೆ ಆಕ್ಷೇಪಣೆ ಸಲ್ಲಿಸಲು 2026ರ ಜೂ.23ರವರೆಗೆ ಮಾತ್ರ ಸಮಯ ನೀಡಲಾಗಿದೆ. ಹೀಗಾಗಿ ನೌಕರರು ಹಾಗೂ ಸಾರ್ವಜನಿಕರು, ರೈತರು ಇಮೇಲ್‌ ವಿಳಾಸ: asst.secykerc@gmail.com ಮೂಲಕವೂ ಆಕ್ಷೇಪಣೆ ಸಲ್ಲಿಸಲು ಕರೆ ನೀಡಲಾಯಿತು.

ಖಾಸಗೀಕರಣದ ಹಿಂಬಾಗಿಲ ಯತ್ನ:

ಕರ್ನಾಟಕ ವಿದ್ಯುತ್‌ ನೌಕರರ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ. ಬಲರಾಮ್‌ ಮಾತನಾಡಿ, ವಿತರಣಾ ಜಾಲದ ಪರವಾನಗಿ ಕೇಳಿರುವುದನ್ನು ಖಂಡಿಸುತ್ತೇವೆ. ರಾಜ್ಯದ ಜನತೆಯ ಆಸ್ತಿಯಾಗಿರುವ ವಿದ್ಯುತ್‌ ವಲಯವನ್ನು ಖಾಸಗೀಕರಣಗೊಳಿಸುವ ಹಿಂಬಾಗಿಲ ಯತ್ನವಿದು. ಇದು ನೌಕರರು ಮಾತ್ರವಲ್ಲದೆ ರಾಜ್ಯದ ಗ್ರಾಹಕರ ಹಿತಾಸಕ್ತಿಗೆ ಮಾರಕವಾಗಿದೆ. ರಾಜ್ಯದ ಸಾವಿರಾರು ಕೋಟಿ ರು. ಮೌಲ್ಯದ ವಿತರಣಾ ಜಾಲ, ಉಪಕೇಂದ್ರ, ಯಂತ್ರೋಪಕರಣ ಮೂಲಸೌಕರ್ಯ ಲೂಟಿ ಹೊಡೆಯುವ ಷಡ್ಯಂತ್ರ ಇದು. ಖಾಸಗೀಕರಣದಿಂದ ಬಡ ಮತ್ತು ಮಧ್ಯಮ ವರ್ಗದವರ ಮೇಲೆ ದರ ಏರಿಕೆಯ ಬರೆ ಬೀಳಲಿದೆ. ಹೀಗಾಗಿ ಇದರ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಸರ್ಕಾರದ ಗಮನಕ್ಕೆ ತರುತ್ತೇವೆ: ವೈಶಾಲಿ

ವಿದ್ಯುತ್‌ ನೌಕರರ ಒಕ್ಕೂಟದ ಮನವಿ ಆಲಿಸಿದ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸ್ಥಾನದ ಹೆಚ್ಚುವರಿ ಜವಾಬ್ದಾರಿಯಲ್ಲಿರುವ ಎಂ.ಎಲ್‌. ವೈಶಾಲಿ ಅವರು, ಒಕ್ಕೂಟದ ಆಕ್ಷೇಪಣೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ವಿದ್ಯುತ್‌ ಮಂಡಳಿ ನೌಕರರ ಸಂಘದಿಂದ ಕಾನೂನು ಹೋರಾಟದ ಎಚ್ಚರಿಕೆ

ರಾಜ್ಯದಲ್ಲಿ ವಿದ್ಯುತ್ ವಿತರಣೆಯನ್ನು ಖಾಸಗಿ ಕಂಪನಿಗಳಿಗೆ ನೀಡಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವ ಜತೆಗೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತೇವೆ ಎಂದು ಕರ್ನಾಟಕ ವಿದ್ಯುತ್‌ ಮಂಡಳಿ ನೌಕರರ ಸಂಘಗಳ ಒಕ್ಕೂಟ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ಬಲರಾಮ್‌, ವಿದ್ಯುತ್ ವಿತರಣೆಗೆ ಪರವಾನಗಿ ಕೋರಿ ಟಾಟಾ ಪವರ್‌ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ಕೆಇಆರ್‌ಸಿ ತಕ್ಷಣ ತಿರಸ್ಕರಿಸಬೇಕು. ಇಲ್ಲದಿದ್ದರೆ ಕೆಪಿಟಿಸಿಎಲ್‌ ಒಕ್ಕೂಟ ರಾಜ್ಯಾದ್ಯಂತ ಹೋರಾಟ ಮಾಡಲಿದೆ ಎಂದು ಹೇಳಿದರು.

ಖಾಸಗೀಕರಣಕ್ಕೆ ಅವಕಾಶ ನೀಡಿದರೆ ರಾಜ್ಯದ ವಿದ್ಯುತ್‌ ಕಂಪನಿಗಳು ಈಗಾಗಲೇ ಸೃಷ್ಟಿಸಿರುವ ಸಾವಿರಾರು ಕೋಟಿ ರು. ಮೌಲ್ಯದ ವಿತರಣಾ ಜಾಲ, ಉಪಕೇಂದ್ರ, ಯಂತ್ರೋಪಕರಣ ಸೇರಿ ಸಾವಿರಾರು ಕೋಟಿ ರು. ಆಸ್ತಿ ಲೂಟಿ ಆಗಲಿದೆ. ಖಾಸಗಿ ಕಂಪನಿಗಳ ಏಕೈಕ ಧ್ಯೇಯ ಲಾಭ. ಗ್ರಾಮೀಣ ವಿದ್ಯುತ್‌ ಜಾಲಸಂಪೂರ್ಣ ಕುಸಿಯುತ್ತದೆ. ಇಲಾಖೆಯಲ್ಲಿ 35,000 ಹುದ್ದೆ ಖಾಲಿ ಇದ್ದರೂ ಅತಿಯಾದ ಒತ್ತಡದ ನಡುವೆಯೂ ಗುಣಮಟ್ಟದ ಸೇವೆ ನೀಡುತ್ತಿದ್ದಾರೆ. ಖಾಸಗೀಕರಣದಿಂದಾಗಿ ಹೊಸ ಉದ್ಯೋಗ ಸೃಷ್ಟಿ ನಿಲ್ಲುವುದಲ್ಲದೆ, ಪ್ರಸ್ತುತ ಇರುವ ಗುತ್ತಿಗೆ, ಹೊರಗುತ್ತಿಗೆ ಹಾಗೂ ಕಾಯಂ ನೌಕರರ ಉದ್ಯೋಗದ ಭದ್ರತೆಗೆ ಮತ್ತು ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ದೂರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದರಾಮಯ್ಯಗೆ ರಾಜ್ಯಸಭಾ ಆಫರ್‌ ಜೊತೆಗೆ ಡಿಕೆಶಿ ಪಟ್ಟಾಭಿಷೇಕದ ಹಿಂದೆ ಪ್ರಿಯಾಂಕಾ ಗಾಂಧಿ ಮಾಸ್ಟರ್ ಮೈಂಡ್!
ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ನಾಳೆ ಬೆಳಗ್ಗೆ 10:30ಕ್ಕೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ, ಶಾಸಕರ ಸುಳಿವು