ಕರ್ನಾಟಕ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಚುನಾವಣೆ ಘೋಷಣೆ! ಜೂ.18ರ ಮತದಾನ, ಬಿಕೆ ಹರಿಪ್ರಸಾದ್ ಗೆಲ್ಲುತ್ತಾರಾ?

Kannadaprabha News   | Kannada Prabha
Published : May 27, 2026, 07:58 AM IST
Karnataka MLC Elections 2026 Voting for 7 Council Seats on June 18 rav

ಸಾರಾಂಶ

ಕರ್ನಾಟಕ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಜೂ.18ರಂದು ಚುನಾವಣೆ ನಡೆಯಲಿದ್ದು, ಕೇಂದ್ರ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಪ್ರಕಟಿಸಿದೆ. ವಿಧಾನಸಭೆಯ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ, ಆಡಳಿತಾರೂಢ ಕಾಂಗ್ರೆಸ್ ಐದು ಮತ್ತು ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲುವುದು ಬಹುತೇಕ ನಿಶ್ಚಿತವಾಗಿದೆ.

 ಬೆಂಗಳೂರು (ಮೇ.27) ಜೂ.30ರಂದು ಕರ್ನಾಟಕ ವಿಧಾನ ಪರಿಷತ್ತಿನ ಏಳು ಮಂದಿ ಸದಸ್ಯರು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಈ ಏಳು ಸ್ಥಾನಗಳಿಗೆ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದೆ.

ಚುನಾವಣೆ ಸಂಬಂಧ ಜೂ.1ರಂದು ಅಧಿಕೃತ ಅಧಿಸೂಚನೆ ಹೊರ ಬೀಳಲಿದೆ. ಜೂ.8 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜೂ.18ರಂದು ಮತದಾನ ನಡೆಯಲಿದ್ದು, ಅಂದೇ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಈ ಏಳು ಸ್ಥಾನಗಳ ಪೈಕಿ ಕಾಂಗ್ರೆಸ್‌ ಮತ್ತು ಬಿಜೆಪಿಯ ತಲಾ ಮೂವರು ಮತ್ತು ಜೆಡಿಎಸ್‌ನ ಓರ್ವ ಸದಸ್ಯರ ಅವಧಿ ಜೂ.30ರಂದು ಅಂತ್ಯಗೊಳ್ಳಲಿದೆ.

ಚುನಾವಣಾ ವೇಳಾ ಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಮೂರು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಆಕಾಂಕ್ಷಿಗಳು ಅಲರ್ಟ್ ಆಗಿದ್ದಾರೆ. ಈ ಚುನಾವಣೆಯಲ್ಲಿ ವಿಧಾನಸಭೆ ಶಾಸಕರು ಗೌಪ್ಯ ಮತದಾನ ಮಾಡಲಿದ್ದಾರೆ. ಒಂದು ಸ್ಥಾನ ಗೆಲ್ಲಲು 28 ಮತಗಳ ಅಗತ್ಯವಿದೆ. ವಿಧಾನಸಭೆಯಲ್ಲಿ ರಾಜಕೀಯ ಪಕ್ಷಗಳ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಆಡಳಿತ ಪಕ್ಷ ಕಾಂಗ್ರೆಸ್‌ ಐದು ಮತ್ತು ವಿರೋಧ ಪಕ್ಷ ಬಿಜೆಪಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಬಹುತೇಕ ನಿಶ್ಚಿತ. ಆದರೆ, ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದ 8ನೇ ಅಭ್ಯರ್ಥಿ ಸ್ಪರ್ಧೆಗಿಳಿದರೆ ಚುನಾವಣೆ ರೋಚಕತೆ ಪಡೆದುಕೊಳ್ಳಲಿದೆ.

ಪ್ರಸ್ತುತ ಕಾಂಗ್ರೆಸ್‌ ಸ್ಪೀಕರ್ ಸೇರಿ 135, ಬಿಜೆಪಿ 62, ಜೆಡಿಎಸ್‌ 18 ಶಾಸಕರನ್ನು ಹೊಂದಿದೆ. ಉಳಿದಂತೆ ಸರ್ವೋದಯ ಕರ್ನಾಟಕ ಪಕ್ಷದ(ಕೆಎಸ್‌ಪಿ) ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ಹರಪ್ಪನಹಳ್ಳಿ ಸ್ವತಂತ್ರ ಶಾಸಕಿ ಲತಾ ಮಲ್ಲಿಕಾರ್ಜುನ್‌ ಮತ್ತು ಗೌರಿಬಿದನೂರು ಸ್ವತಂತ್ರ ಶಾಸಕ ಕೆ.ಎಚ್‌.ಪುಟ್ಟಸ್ವಾಮಿಗೌಡ ಕಾಂಗ್ರೆಸ್‌ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನೇ ಈ ಮೂವರು ಬೆಂಬಲಿಸುವ ಸಾಧ್ಯತೆಯಿದೆ.

ಇನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕರಾದ ಎಸ್‌.ಟಿ.ಸೋಮಶೇಖರ್‌ ಮತ್ತು ಶಿವರಾಮ ಹೆಬ್ಬಾರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಬೆಂಬಲಿಸುವುದು ನಿಚ್ಚಳ. ಇದರೊಂದಿಗೆ ಕಾಂಗ್ರೆಸ್‌ ಸಂಖ್ಯಾಬಲ 140ಕ್ಕೆ ಏರಿಕೆಯಾಗಲಿದೆ.

ಬಿಜೆಪಿ ಮತ್ತೋರ್ವ ಉಚ್ಚಾಟಿತ ಶಾಸಕ ಬಸನಗೌಡ ಯತ್ನಾಳ್‌ ಯಾರಿಗೆ ಮತ ಹಾಕಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಇನ್ನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ(ಕೆಆರ್‌ಪಿಪಿ) ಶಾಸಕ ಜನಾರ್ಧನ ರೆಡ್ಡಿ ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದು, ಚುನಾವಣೆಯಲ್ಲಿ ಬಿಜೆಪಿಯನ್ನೇ ಬೆಂಬಲಿಸುವುದು ಸ್ಪಷ್ಟ. ಒಂದು ವೇಳೆ ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದಾಗಿ 8ನೇ ಅಭ್ಯರ್ಥಿ ಕಣಕ್ಕಿಳಿಸಿದರೆ ಚುನಾವಣೆ ಕೊಂಚ ರೋಚಕತೆ ಪಡೆದುಕೊಳ್ಳಲಿದೆ. ಹೇಗೆಂದರೆ, ಜೆಡಿಎಸ್‌ನ 18 ಮತ್ತು ಬಿಜೆಪಿ ಉಳಿಕೆ 7 ಮತಗಳು ಸೇರಿದರೆ ಒಟ್ಟು 25 ಮತಗಳಾಗಲಿದೆ. ಗೆಲ್ಲಲು 3 ಮತಗಳ ಕೊರತೆ ಉಂಟಾಗಲಿದೆ. ಕಾಂಗ್ರೆಸ್‌ನ ಅಥವಾ ಕಾಂಗ್ರೆಸ್‌ ಬೆಂಬಲಿತ ಮೂವರು ಶಾಸಕರು ಅಡ್ಡ ಮತದಾನ ಮಾಡಿದರೆ, 8ನೇ ಅಭ್ಯರ್ಥಿ ಗೆಲ್ಲುವ ಸಾಧ್ಯತೆಯಿದೆ. ಆದರೆ, ಈ ಚುನಾವಣೆಯಲ್ಲಿ ಅಡ್ಡಮತದಾನದ ಸಾಧ್ಯತೆ ಸದ್ಯಕ್ಕೆ ಕಂಡು ಬರುತ್ತಿಲ್ಲ.

ಚುನಾವಣಾ ವೇಳಾ ಪಟ್ಟಿ:

ಜೂ.1ರಂದು ಅಧಿಸೂಚನೆ ಪ್ರಕಟ

ಜೂ.8 ನಾಮಪತ್ರ ಸಲ್ಲಿಕೆಗೆ ಕೊನೆ ದಿನ

ಜೂ.9 ನಾಮಪತ್ರ ಪರಿಶೀಲನೆ

ಜೂ.11 ನಾಮಪತ್ರ ಹಿಂಪಡೆಯಲು ಕೊನೆ ದಿನ

ಜೂ.18 ಮತದಾನ, ಫಲಿತಾಂಶ ಪ್ರಕಟ

ಜೂ.30ರಂದು ಯಾರು ನಿವೃತ್ತಿ?

ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್, ನಾಸೀರ್ ಅಹಮ್ಮದ್‌, ತಿಪ್ಪಣ್ಣಪ್ಪ, ಬಿಜೆಪಿಯ ಪ್ರತಾಪ್‌ ಸಿಂಹ ನಾಯಕ್‌, ಎಂಟಿಬಿ ನಾಗರಾಜ್‌, ಸುನೀಲ್‌ ವಲ್ಯಾಪುರ್‌ ಹಾಗೂ ಜೆಡಿಎಸ್‌ನ ಗೋವಿಂದರಾಜು.

ಪಕ್ಷ ಸದಸ್ಯ ಬಲ

ಕಾಂಗ್ರೆಸ್‌ 135

ಬಿಜೆಪಿ 62

ಬಿಜೆಪಿಯಿಂದ ಉಚ್ಚಾಟಿತರು 3

ಜೆಡಿಎಸ್‌ 18

ಕೆಆರ್‌ಪಿಪಿ 1

ಎಸ್‌ಕೆಪಿ 1

ಸ್ವತಂತ್ರ 2

ಖಾಲಿ 2

ಒಟ್ಟು 224

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹುಬ್ಬಳ್ಳಿ ಬಳಿಕ ಮತ್ತೆ ರಾಜ್ಯದಲ್ಲಿ ಸರ್ಕಾರದಿಂದ ಮತ್ತೆ 4 ಕಡೆ ಹೊಸ ಐವಿಎಫ್‌ ಕೇಂದ್ರ
Karnataka CM change Buzz: DK Shivakumar - ದೆಹಲಿ ಹೈವೋಲ್ಟೇಜ್ ಸಭೆ ಬಳಿಕ ಎಲ್ಲವೂ ಸಸ್ಪೆನ್ಸ್! ಸಿದ್ದು ರಾತ್ರಿಯೇ ವಾಪಸಾದ್ರೂ ಡಿಕೆಶಿ ದೆಹಲಿಯಲ್ಲೇ ಉಳಿದಿರುವುದೇಕೆ?