ದಾಖಲೆಯ 30 ಲಕ್ಷ ಮಂದಿಗೆ ಇಂದು ಲಸಿಕೆ ನೀಡುವ ಗುರಿ

By Kannadaprabha News  |  First Published Sep 17, 2021, 7:22 AM IST

*   ಬೃಹತ್‌ ಮೇಳಕ್ಕೆ ಕಲಬುರಗಿಯಲ್ಲಿಂದು ಸಿಎಂ ಚಾಲನೆ
*  ರಾಜ್ಯಾದ್ಯಂತ 12,700 ಸರ್ಕಾರಿ ಕೋವಿಡ್‌ ಲಸಿಕಾ ಕೇಂದ್ರ
*  ರಾಜ್ಯದಲ್ಲಿ ಈವರೆಗೆ ಒಟ್ಟು 4.8 ಕೋಟಿ ಡೋಸ್‌ ಲಸಿಕೆ ವಿತರಣೆ


ಬೆಂಗಳೂರು(ಸೆ.17): ರಾಜ್ಯದಲ್ಲಿ ಶುಕ್ರವಾರ 30 ಲಕ್ಷ ಮಂದಿಗೆ ಕೋವಿಡ್‌ ಲಸಿಕೆ ನೀಡುವ ದಾಖಲೆಯ ಗುರಿಯೊಂದಿಗೆ ಬೃಹತ್‌ ಲಸಿಕಾ ಮೇಳ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಲಬುರಗಿಯಲ್ಲಿ ಲಸಿಕಾ ಮೇಳಕ್ಕೆ ಚಾಲನೆ ನೀಡಲಿದ್ದಾರೆ.

ಲಸಿಕಾ ಮೇಳಕ್ಕೆ ರಾಜ್ಯಾದ್ಯಂತ 12,700 ಸರ್ಕಾರಿ ಕೋವಿಡ್‌ ಲಸಿಕಾ ಕೇಂದ್ರ, 300 ಖಾಸಗಿ ಲಸಿಕಾ ಕೇಂದ್ರಗಳು ಮತ್ತು 14,666 ಲಸಿಕಾ ಶಿಬಿರಗಳನ್ನು ಗುರುತಿಸಲಾಗಿದ್ದು ಒಟ್ಟು ಸುಮಾರು 27 ಸಾವಿರ ಕೇಂದ್ರದಲ್ಲಿ ಲಸಿಕೆ ವಿತರಣೆ ನಡೆಯಲಿದೆ. ಒಟ್ಟು 34 ಲಕ್ಷ ಡೋಸ್‌ ಲಸಿಕೆಯನ್ನು ಜಿಲ್ಲೆಗಳಿಗೆ ಹಂಚಲಾಗಿದೆ.

Latest Videos

undefined

ರಾಜ್ಯದಲ್ಲಿ ಈವರೆಗೆ ಒಂದೇ ದಿನ ಗರಿಷ್ಠ 12 ಲಕ್ಷ ಲಸಿಕೆ ವಿತರಣೆ ನಡೆದಿದ್ದು ಈ ದಾಖಲೆಯನ್ನು ಮೀರಿ ಲಸಿಕಾಕರಣ ನಡೆಸಲು ರಾಜ್ಯ ಆರೋಗ್ಯ ಇಲಾಖೆ ಸಜ್ಜಾಗಿದೆ. ಲಸಿಕೆ ಪಡೆಯಲು ಬಾಕಿ ಇರುವ ಫಲಾನುಭವಿಗಳ ಸಂಖ್ಯೆಗಳಿಗೆ ಅನುಗುಣವಾಗಿ ಪ್ರತಿ ಜಿಲ್ಲೆಗೆ ಗುರಿ ನಿಗದಿ ಪಡಿಸಲಾಗಿದೆ. ಹಾಗೆಯೇ ಆದ್ಯತಾ ಗುಂಪುಗಳಿಗೆ ವಿಶೇಷ ಒತ್ತು ನೀಡುವಂತೆ ಆರೋಗ್ಯ ಇಲಾಖೆ ಜಿಲ್ಲಾಡಳಿತಗಳಿಗೆ ತಿಳಿಸಿದೆ. ವೈದ್ಯಕೀಯ ವಿದ್ಯಾಲಯ, ನರ್ಸಿಂಗ್‌ ಶಾಲೆಗಳು ಮತ್ತು ಖಾಸಗಿ ಕೋವಿಡ್‌ -19 ಲಸಿಕಾ ಕೇಂದ್ರಗಳ ಬೆಂಬಲವು ದೊರೆಯಲಿದೆ.

ಲಸಿಕಾ ಅಭಿಯಾನ ಅಮೆರಿಕ, ಜಪಾನ್ ಸೇರಿ 18 ದೇಶಗಳನ್ನು ಹಿಂದಿಕ್ಕಿದ ಭಾರತ!

ರಾಜ್ಯದಲ್ಲಿ ಈವರೆಗೆ ಒಟ್ಟು 4.8 ಕೋಟಿ ಡೋಸ್‌ ಲಸಿಕೆ ವಿತರಣೆಯಾಗಿದೆ. 18 ವರ್ಷ ಮೇಲ್ಪಟ್ಟವರಲ್ಲಿ ಶೇ.73 ಮಂದಿ ಮೊದಲ ಡೋಸ್‌ ಮತ್ತು ಶೇ.27 ಮಂದಿ ಎರಡನೇ ಡೋಸ್‌ ಪಡೆದುಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಎರಡನೇ ಡೋಸ್‌ ಲಸಿಕೆ ಹೆಚ್ಚಿನ ಪ್ರಮಾಣದಲ್ಲಿ ವಿತರಣೆಯಾಗುತ್ತಿದೆ.

ನವೆಂಬರ್‌ ಅಂತ್ಯದ ಹೊತ್ತಿಗೆ ರಾಜ್ಯದಲ್ಲಿನ 18 ವರ್ಷ ಮೇಲ್ಪಟ್ಟಎಲ್ಲರಿಗೂ ಕೋವಿಡ್‌ ಲಸಿಕೆಯ ಎರಡೂ ಡೋಸ್‌ ನೀಡಬೇಕು ಎಂಬ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರತಿದಿನ 5 ಲಕ್ಷ ಲಸಿಕೆ ವಿತರಿಸಲು ಗುರಿ ಹೊಂದಲಾಗಿದೆ.
 

click me!