ವಹ್ನಿಕುಲದ ಆದಿ ಶಕ್ತಿ ಬಗ್ಗೆ ಅವಹೇಳನ| ‘ದ್ರೌಪದಿ ಆಕರ್ಷಕ ಹೆಣ್ಣು, ಹಾಗಾಗಿ ಹತ್ತಾರು ಜನರ ಕಣ್ಣು ಅವಳ ಮೇಲಿತ್ತು’ ಎಂದು ಹೇಳಿದ ಭೈರಪ್ಪ| ತಮ್ಮ ಕಲ್ಪನೆ ಮೂಲಕ ಪಾತ್ರಗಳನ್ನು ತಮಗೆ ಬಂದಂತೆ ಚಿತ್ರಿಸುವ ಭೈರಪ್ಪ ಹೇಳಿಕೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಿದೆ| ಐಪಿಸಿ 295/ಎ, 298, 505, 153, 153/ಎ ಅನ್ವಯ ಕ್ರಮಕ್ಕೆ ಆಗ್ರಹ|
ಬೆಂಗಳೂರು(ಮಾ.05): ಹಿರಿಯ ಸಾಹಿತಿ ಎಸ್. ಎಲ್. ಭೈರಪ್ಪ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಹಾಭಾರತದ ದ್ರೌಪದಿ ಬಗ್ಗೆ ಅಸಹ್ಯ ರೀತಿಯಲ್ಲಿ ಮಾತನಾಡುವ ಮೂಲಕ ವಹ್ನಿಕುಲ ಸಮಾಜದ ಆರಾಧಿಸುವ ಆದಿ ಪರಾಶಕ್ತಿಗೆ ಅಪಮಾನ ಮಾಡಿದ್ದು, ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್‌ನ ಪಿ.ಅರ್. ರಮೇಶ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ವಿಧಾನ ಪರಿಷತ್‌ನ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಎಸ್.ಎಲ್. ಭೈರಪ್ಪ ಅವರು, ‘ದ್ರೌಪದಿ ಆಕರ್ಷಕ ಹೆಣ್ಣು, ಹಾಗಾಗಿ ಹತ್ತಾರು ಜನರ ಕಣ್ಣು ಅವಳ ಮೇಲಿತ್ತು’ ಎಂದೆಲ್ಲಾ ಹೇಳಿದ್ದಾರೆ. ಅವರ ಹೇಳಿಕೆ ಅಸಂಬದ್ಧ ಹಾಗೂ ಅಸಹ್ಯದಿಂದ ಕೂಡಿದೆ. ತಮ್ಮ ಕಲ್ಪನೆ ಮೂಲಕ ಪಾತ್ರಗಳನ್ನು ತಮಗೆ ಬಂದಂತೆ ಚಿತ್ರಿಸುವ ಭೈರಪ್ಪ ಅವರ ಹೇಳಿಕೆ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಾಗಿದೆ. ಈ ಸಂಬಂಧ ಈಗಾಗಲೇ ದೂರು ಸಲ್ಲಿಸಲಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಕಾರಣ ಅವರ ಮೇಲೆ ಐಪಿಸಿ 295/ಎ, 298, 505, 153, 153/ಎ ಅನ್ವಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮುಕ್ತವಾಗಿ ಮಾತನಾಡಿದರೆ ಬಲಪಂಥೀಯ ಎನ್ನುತ್ತಾರೆ
ಇದಕ್ಕೂ ಮುನ್ನ ಶೂನ್ಯ ವೇಳೆಯಲ್ಲಿ ರಮೇಶ್ ಈ ವಿಷಯ ಪ್ರಸ್ತಾಪಿಸಲು ಮುಂದಾದಾಗ, ಸಭಾಪತಿ ಬಸವರಾಜ ಹೊರಟ್ಟಿ ಈ ಬಗ್ಗೆ ತಮ್ಮೊಂದಿಗೆ ಚರ್ಚಿಸಬೇಕೆಂದು ಹೇಳಿ ಪ್ರಸ್ತಾಪಿಸಲು ಅವಕಾಶ ನೀಡಲಿಲ್ಲ. ಇದರಿಂದ ತೀವ್ರ ಕೆರಳಿದ ರಮೇಶ್, ಒಂದು ಸಮಾಜ ಆರಾಧಿಸುವ ದೇವತೆ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ವಿಷಯವನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದೇ ಇರುವುದು ಸರಿಯಲ್ಲ ಎಂದು ಪ್ರತಿಭಟನೆಗೆ ಮುಂದಾದರು. ಆಗ ಹೊರಟ್ಟಿಅವರು ಈ ಬಗ್ಗೆ ಪ್ರತಿಪಕ್ಷದ ನಾಯಕರು ಹಾಗೂ ತಮ್ಮೊಂದಿಗೆ (ಪಿ.ಆರ್. ರಮೇಶ್) ಚರ್ಚಿಸಿ ನಿರ್ಧರಿಸುವುದಾಗಿ ಹೇಳಿದರು. ನಂತರ ಕೆಲವು ನಿಮಿಷಗಳ ನಂತರ ಪ್ರಸ್ತಾಪಿಸಲು ಅವಕಾಶ ನೀಡಿದರು.