ಫೆ.28ರೊಳಗೆ ಕನ್ನಡ ನಾಮಫಲಕ ಕಡ್ಡಾಯ ಮಾಡದಿದ್ದರೆ ಮತ್ತೆ ಹೋರಾಟ ಮಾಡುತ್ತೇವೆ. ಕನ್ನಡ ನಾಮಫಲಕ ಕಡ್ಡಾಯಕ್ಕೆ ಆಗ್ರಹಿಸಿ ಮತ್ತೊಮ್ಮೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದರು.
ಬೆಳಗಾವಿ (ಫೆ.24) : ಫೆ.28ರೊಳಗೆ ಕನ್ನಡ ನಾಮಫಲಕ ಕಡ್ಡಾಯ ಮಾಡದಿದ್ದರೆ ಮತ್ತೆ ಹೋರಾಟ ಮಾಡುತ್ತೇವೆ. ಕನ್ನಡ ನಾಮಫಲಕ ಕಡ್ಡಾಯಕ್ಕೆ ಆಗ್ರಹಿಸಿ ಮತ್ತೊಮ್ಮೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಬೆಂಗಳೂರಿನಂತೆಯೇ ಬೆಳಗಾವಿಯಲ್ಲಿಯೂ ಕನ್ನಡೀಕರಣವಾಗಬೇಕು. ಅದಕ್ಕೆ ನಮ್ಮ ಹೋರಾಟ ಗಟ್ಟಿಯಾಗಿರುತ್ತದೆ. ಇದಕ್ಕೆ ಎಂಇಎಸ್ ವಿರೋಧಿಸಿದರೆ, ಬೆಂಗಳೂರು ಮಾದರಿಯಲ್ಲಿ ಹೋರಾಟ ಮಾಡುತ್ತೇವೆ. ಕನ್ನಡ ನಾಮಫಲಕಕ್ಕೆ ಎಂಇಎಸ್, ಶಿವಸೇನೆ ವಿರೋಧಿಸಿದರೆ ನಾವು ಜಗ್ಗಲ್ಲ. ನಾಡದ್ರೋಹಿ ಎಂಇಎಸ್ ಸರ್ವನಾಶವಾಗಬೇಕು ಎಂದು ಆಗ್ರಹಿಸಿದರು.
ನಾಮಫಲಕಗಳಲ್ಲಿ 60% ಕನ್ನಡ: ನಾರಾಯಣಗೌಡ ಸಂತಸ
ನನಗೆ ಬೆಳಗಾವಿ ಜಿಲ್ಲೆ ಅಚ್ಚುಮೆಚ್ಚು. ಇಲ್ಲಿ ಕರವೇ ಗಟ್ಟಿಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ನಾಡು-ನುಡಿ ವಿಚಾರದಲ್ಲಿ ಕಳೆದ 25 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಕನ್ನಡ ಕಟ್ಟುವ, ಕಾಯುವ ಕೆಲಸ ಮಾಡುತ್ತಿದ್ದೇವೆ. ಶನಿವಾರ ಬೆಳಗಾವಿಯಲ್ಲಿ ಕರವೇಯ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ಅಧ್ಯಕ್ಷರು ಪಾಲ್ಗೊಳ್ಳುವರು. ಈ ವೇಳೆ, ಮುಂದಿನ ಹೋರಾಟದ ರೂಪುರೇಷೆಗಳನ್ನು ತೀರ್ಮಾನಿಸಲಾಗುವುದು ಎಂದರು.
ನಮ್ಮ ಹೋರಾಟದ ಫಲವಾಗಿ ಬೆಂಗಳೂರಿನ ವಾತಾವರಣ ಬದಲಾಗಿದೆ. ಬೆಂಗಳೂರಂತೆ ಗಡಿ ನಾಡು ಬೆಳಗಾವಿ ಕೂಡ ಸಂಪೂರ್ಣ ಕನ್ನಡ ಮಯವಾಗಬೇಕು. ಬೆಂಗಳೂರಲ್ಲಿ ನಡೆದ ಈ ಹೋರಾಟದಲ್ಲಿ ನಾವು 15 ದಿನ ಜೈಲುವಾಸ ಅನುಭವಿಸಬೇಕಾಯಿತು. ಕನ್ನಡ ನಾಡಿನ ಹೋರಾಟದ ವಿಚಾರವಾಗಿ ನಾನು 6 ಸಲ ಜೈಲಿಗೆ ಹೋಗಿದ್ದೇನೆ. ಸಿದ್ದರಾಮಯ್ಯ ಸರ್ಕಾರ ನನ್ನ ವಿರುದ್ಧ ಸಂಚು ಮಾಡಿ ನನ್ನನ್ನು ಜೈಲಿಗೆ ಕಳಿಸಿತು. ಇಲ್ಲಸಲ್ಲದ ಕೇಸ್ ಹಾಕಿ ನನಗೆ ಹಿಂಸೆ ಕೊಟ್ಟರು. ಆದರೆ, ಕನ್ನಡದ ವಿಚಾರವಾಗಿ ನನ್ನ ಧ್ವನಿ ಅಡಗಿಸಲು ಸರ್ಕಾರದಿಂದ ಸಾಧ್ಯವಿಲ್ಲ. ಜೀವ ಇರುವವರೆಗೆ ಕನ್ನಡ ಪರ ನನ್ನ ಹೋರಾಟ ಇರುತ್ತದೆ. ಕನ್ನಡದ ವಿಚಾರದಲ್ಲಿ ಯಾರೊಂದಿಗೂ ರಾಜೀಯಾಗುವ ಪ್ರಶ್ನೆಯೇ ಇಲ್ಲ. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಅವರು ಹೇಳಿದರು.
ಬೆಳಗಾವಿ ಗಡಿ ವಿಚಾರವನ್ನು ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಗಡಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದೆ. ಆದರೆ, ಕರ್ನಾಟಕ ಸರ್ಕಾರ ಉದಾಸೀನ ನೀತಿ ಅನುಸರಿಸುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಯಾರು?, ಅವರು ಏನು ಮಾಡುತ್ತಿದ್ದಾರೆ ಎಂಬುದೇ ನಮಗೆ ಗೊತ್ತಿಲ್ಲ. ಯಾರೇ ಏನೇ ಅಂದರೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಯಾರೇ ಸುಪ್ರೀಂಕೋರ್ಟ್‌ಗೆ ಹೋದರೂ, ಮೈ ಪರಚಿಕೊಂಡರೂ ಬೆಳಗಾವಿ ಕನ್ನಡಮಯವಾಗಬೇಕು ಎಂದರು.