ಮಣಿಪಾಲದ ಟಿ ಮೋಹನ್ ದಾಸ್ ಎಂ ಪೈ (89)ನಿಧನ

Published : Jul 31, 2022, 09:50 PM ISTUpdated : Jul 31, 2022, 11:18 PM IST
ಮಣಿಪಾಲದ ಟಿ ಮೋಹನ್ ದಾಸ್ ಎಂ ಪೈ (89)ನಿಧನ

ಸಾರಾಂಶ

 ಮಣಿಪಾಲದ ಪೈ ಕುಟುಂಬದ ಹಿರಿಯರಾದ ವಿವಿಧ ಸಂಘಸಂಸ್ಥೆಗಳಲ್ಲಿ ತೆರೆಮರೆಯಲ್ಲಿದ್ದು ಮಾರ್ಗದರ್ಶನ ನೀಡಿ ಮುನ್ನಡೆಸುತ್ತಿದ್ದ  ಟಿ.ವಿ.ಮೋಹನ್​ದಾಸ್ ಪೈ ನಿಧನರಾಗಿದ್ದಾರೆ.

ಉಡುಪಿ, (ಜುಲೈ.31):  ಮಣಿಪಾಲದ ಶಿಲ್ಪಿ ಡಾ. ಟಿ ಎಮ್ ಎ ಪೈ ಅವರ ಹಿರಿಯ ಪುತ್ರ ಟಿ.ಮೋಹನ್​ ದಾಸ್ ಎಂ.  ಪೈ ಅವರು ನಿಧನರಾಗಿದ್ದಾರೆ ಇಂದು (ಭಾನುವಾರ) ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ  ಟಿ ಮೋಹನ್ ದಾಸ್ ಎಂ ಪೈ (89) ಸಾವನ್ನಪ್ಪಿದ್ದಾರೆ. ಎಂಜಿಎಂ ಕಾಲೇಜಿನಲ್ಲಿ ನಾಳೆ(ಆಗಸ್ಟ್ 1) ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಡಾ ಟಿ ಎಂ ಎ ಪೈ ಫೌಂಡೇಶನ್ ಹಾಗೂ ಎಂಜಿಎಂ ಕಾಲೇಜ್ ಟ್ರಸ್ಟ್ ನ ಅಧ್ಯಕ್ಷರಾಗಿದ್ದರು. 

ಇತ್ತೀಚಿಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಉಡುಪಿಯ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಮೃತರು ತಮ್ಮಂದಿರಾದ ಡಾ.ಟಿ.ರಾಮದಾಸ್ ಪೈ, ಟಿ.ನಾರಾಯಣ ಪೈ, ಟಿ.ಅಶೋಕ್ ಪೈ, ತಂಗಿಯರಾದ ವಸಂತಿ ಆರ್. ಶೆಣೈ, ಜಯಂತಿ ಪೈ, ಇಂದುಮತಿ ಪೈ, ಆಶಾ ಪೈ, ಸಹೋದರ ಟಿ.ಸತೀಶ್ ಯು. ಪೈ ಅವರನ್ನು ಅಗಲಿದ್ದಾರೆ.

ನಿಮ್ಮ ಜಿಲ್ಲೆಯ ಎಲ್ಲಾ ಸುದ್ದಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ

ಆಧುನಿಕ ಮಣಿಪಾಲದ ಶಿಲ್ಪಿ ಡಾಟಿ.ಎಂ.ಎ.ಪೈಯವರ ಹೆಸರು ಹೊತ್ತ ಡಾಟಿಎಂಎ ಪೈ ಪ್ರತಿಷ್ಠಾನ, ಡಾ. ಟಿಎಂಎ ಪೈಯವರು ಸ್ಥಾಪಿಸಿದ ಮೊದಲ ಕಾಲೇಜು ಶಿಕ್ಷಣ ಸಂಸ್ಥೆೆ ಎಂಜಿಎಂ ಕಾಲೇಜಿನ ಟ್ರಸ್ಟ್‌, ಸಿಂಡಿಕೇಟ್ ಬ್ಯಾಂಕ್ ನ ಪೂರ್ವ ರೂಪ ಐಸಿಡಿಎಸ್ ಲಿ., 'ಉದಯವಾಣಿ'ಯನ್ನು ನಡೆಸುತ್ತಿರುವ ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಮೊದಲಾದ ಸಂಸ್ಥೆಗಳ ಅಧ್ಯಕ್ಷರಾಗಿ ಹಲವು ಸಂಸ್ಥೆಗಳ ಬೆಳವಣಿಗೆಗೆ ಕಾರಣರಾದ್ದರು.

ಕಾನೂನು ಪದವಿಯಲ್ಲಿ ಮೊದಲ ರ್ಯಾಂಕ್: 1933ರ ಜೂ. 20ರಂದು ಜನಿಸಿದ ಮೋಹನದಾಸ್ ಪೈಯವರು ಡಾಟಿಎಂಎ ಪೈಯವರ ಹಿರಿಯ ಪುತ್ರ. ಇವರಿಗೆ ಮೂರು ವರ್ಷ ಆಗಿರುವಾಗ ತಂದೆಯವರು ಉಡುಪಿಯಿಂದ ಮಣಿಪಾಲಕ್ಕೆ ಸ್ಥಳಾಂತರವಾದ ಕಾರಣ ಇವರೂ ಮಣಿಪಾಲದಲ್ಲಿ ಬೆಳೆದರು. ತಂದೆಯವರು ಆರಂಭಿಸಿದ ಹೊಸ ಶಾಲೆಯಲ್ಲಿ (ಮಣಿಪಾಲ ಅಕಾಡೆಮಿ ಶಾಲೆ), ಉಡುಪಿಯ ಮೋಡರ್ನ್ ಶಾಲೆಯಲ್ಲಿ ಪ್ರಾಾಥಮಿಕ ಶಿಕ್ಷಣವನ್ನು, ಉಡುಪಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಬಳಿಕ ತಂದೆಯವರು ನೂತನವಾಗಿ ಆರಂಭಿಸಿದ ಎಂಜಿಎಂ ಕಾಲೇಜಿನಲ್ಲಿ (1949-51) ಇಂಟರ್‌ಮೀಡಿಯೆಟ್ ಶಿಕ್ಷಣ ಪಡೆದರು. 

ಎಂಜಿಎಂ ಕಾಲೇಜಿನ ಮೊದಲ ತಂಡದ ವಿದ್ಯಾರ್ಥಿ ಇವರು. ಕೊಲ್ಹಾಪುರದಲ್ಲಿ ಕಾನೂನು ಶಿಕ್ಷಣ ಪಡೆದ (1951-53) ಮೋಹನದಾಸ್ ಪೈಯವರು ಪುಣೆ ವಿ.ವಿ.ಯಲ್ಲಿ ಪ್ರಥಮ ರ್ಯಾಂಕ ಗಳಿಸಿದ್ದರು. ಆಗ ಕಾನೂನು ಪದವಿ ಅಧ್ಯಯನ ನಡೆಸಲು ಇಲ್ಲಿ ಅವಕಾಶವಿರಲಿಲ್ಲ. ಕರಾವಳಿ ಪ್ರದೇಶ ಮದ್ರಾಾಸ್ ಪ್ರಾಾಂತ್ಯಕ್ಕೆ ಸೇರಿದ ಕಾರಣ ಒಂದೋ ಮದ್ರಾಾಸ್‌ಗೆ ತೆರಳಬೇಕಿತ್ತು. ಇಲ್ಲವಾದರೆ ಮುಂಬಯಿ ಪ್ರಾಾಂತ್ಯಕ್ಕೆ ಹೋಗಬೇಕಿತ್ತು. ಕರಾವಳಿಯವರಿಗೆ ಮದ್ರಾಸ್‌ಗಿಂತ ಮುಂಬಯಿ ಪ್ರಾಾಂತ್ಯ ಹೆಚ್ಚು ಪರಿಚಿತವಾಗಿದ್ದರಿಂದ ಅವರು ಮುಂಬಯಿ ಪ್ರಾಂತ್ಯದ ಕೊಲ್ಹಾಪುರಕ್ಕೆ ಹೋದರು. 

ವೃತ್ತಿ ಪ್ರವೇಶ: ಶಿಕ್ಷಣದ ಬಳಿಕ ತಂದೆಯವರು ಆರಂಭಿಸಿದ ಸಂಸ್ಥೆಗಳಲ್ಲಿ ತೊಡಗಿದರು. ಅವರು ಮೊದಲಾಗಿ ಪ್ರವೇಶಿಸಿದ್ದು ಮಣಿಪಾಲದಲ್ಲಿ ಹೆಂಚಿನ ಕಾರ್ಖಾನೆ ನಡೆಸುತ್ತಿದ್ದ ಕೆನರಾ ಲ್ಯಾಂಡ್ ಇನ್‌ವೆಸ್‌ಟ್‌‌ಮೆಂಟ್‌ಸ್‌‌ನ ಜನರಲ್ ಮೆನೇಜರ್ ಆಗಿ. ಇದರ ಜತೆ ಮಣಿಪಾಲ್ ಪವರ್ ಪ್ರೆೆಸ್‌ನ ಆಡಳಿತ ಪಾಲುದಾರರಾಗಿ ಹೆಚ್ಚುವರಿ ಹೊಣೆಗಾರಿಕೆಯನ್ನು ವಹಿಸಿಕೊಂಡರು. 

ಆಡಳಿತ ತಜ್ಞ- ಯೋಜನತಜ್ಞ: ಪೈಯವರು ಆಡಳಿತ ಮತ್ತು ಹಣಕಾಸು ಯೋಜನೆಯ ಜವಾಬ್ದಾಾರಿಯನ್ನು ನೋಡಿಕೊಂಡಿದ್ದರೆ ಟಿ.ಸತೀಶ್ ಪೈಯವರು ಉತ್ಪಾಾದನೆಯ ಜವಾಬ್ದಾಾರಿಯನ್ನು ನೋಡಿಕೊಂಡಿರುತ್ತಿಿದ್ದರು. ಹೊಸ ರೀತಿ ಆಟೋಮೆಟಿಕ್ ಟೈಪ್‌ಸೆಟ್ಟಿಂಗ್ ಮೆಶಿನ್ ಮತ್ತು ಮುದ್ರಣ ಯಂತ್ರವನ್ನು ಗುಣಮಟ್ಟದ ಮುದ್ರಣಕ್ಕಾಾಗಿ ಹೊರದೇಶದಿಂದ ತರಿಸಲಾಯಿತು. 1961ರಲ್ಲಿ ಪುಸ್ತಕದ ಗುಣಮಟ್ಟದ ಮುದ್ರಣಕ್ಕಾಾಗಿ ಪ್ರೆೆಸ್ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದರ ಬಳಿಕ ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಮಣಿಪಾಲ್ ಪ್ರೆಸ್‌ಗೆ ಬಂದವು. 

ಅತ್ಯಾಾಧುನಿಕ ಆಫ್‌ಸೆಟ್ ಮೆಶಿನ್, ಫೋಟೋ ಕಂಪೋಸಿಂಗ್‌ನೊಂದಿಗೆ ಮುದ್ರಣ ಕ್ಷೇತ್ರದಲ್ಲಿ ದಾಪುಗಾಲು ಇರಿಸಿರುವುದರಲ್ಲಿ ಮೋಹನದಾಸ್ ಪೈಯವರ ಅಪಾರ ಕೊಡುಗೆ ಇದೆ. ಈ ಮೂಲಕ ಮಣಿಪಾಲ ಪ್ರೆೆಸ್ ದೇಶಮಟ್ಟದ ಮಾನ್ಯತೆಯನ್ನು ಪಡೆಯಿತು. ಮೈಸೂರು, ಕರ್ನಾಟಕ ವಿ.ವಿ.ಗಳ ಮತ್ತು ವಿವಿಧ ಪ್ರಕಾಶನ ಸಂಸ್ಥೆೆಗಳ ಪಠ್ಯ, ಪುಸ್ತಕಗಳನ್ನು ಮುದ್ರಿಿಸಿದ ಕೀರ್ತಿಯು ಈಗಲೂ ಮುನ್ನಡೆಯುತ್ತಿಿದೆ. ಉದಯವಾಣಿ ಶಕೆ 1970ರಲ್ಲಿ ಪೈಯವರ ಮುಂದಾಳತ್ವದಲ್ಲಿ ‘ಉದಯವಾಣಿ’ ದಿನ ಪತ್ರಿಕೆ ಆರಂಭವಾಗಿ ಅಲ್ಪಾವಧಿಯಲ್ಲಿಯೇ ಜನಪ್ರಿಯಗೊಂಡಿತು. ಮೋಹನದಾಸ್ ಪೈಯವರು ಆಡಳಿತ ನಿರ್ದೇಶಕರಾಗಿ, ಸತೀಶ್ ಪೈಯವರು ಜಂಟಿ ಆಡಳಿತ ನಿರ್ದೇಶಕರಾಗಿರುವ ಮಣಿಪಾಲ್ ಪ್ರಿಂಟರ್‌ಸ್‌ ಆ್ಯಂಡ್ ಪಬ್ಲಿಷರ್‌ಸ್‌ ಲಿ.ನಿಂದ ಉದಯವಾಣಿ ಆರಂಭಗೊಂಡಿತು. 

1983ರಲ್ಲಿ ಆರಂಭಗೊಂಡ ‘ತರಂಗ’ ವಾರಪತ್ರಿಕೆಯೂ ಮೋಹನದಾಸ್ ಪೈಯವರ ಕನಸಿನ ಕೂಸು. ಮುಖಪುಟ ಮತ್ತು ಒಳಪುಟಗಳನ್ನು ಕಲರ್‌ನಲ್ಲಿ ಮುದ್ರಿಸಲು ಬೇಕಾದ ಅಲ್ಟ್ರಾಮೋಡರ್ನ್ ವೆಬ್ ಆಫ್‌ಸೆಟ್ ಯಂತ್ರವನ್ನು ಸ್ಥಾಪಿಸಲಾಯಿತು. ತರಂಗಕ್ಕೆ ಅಗತ್ಯವಾದ ಸ್ವಯಂಚಾಲಿತ ಬೈಂಡಿಂಗ್ ಯಂತ್ರವನ್ನೂ ಅಳವಡಿಸಲಾಯಿತು. ಈ ಗುಣಮಟ್ಟಕ್ಕಾಾಗಿ 2 ಲಕ್ಷ ಪ್ರಸರಣ ಸಂಖ್ಯೆ ದಾಟಿತು. 

ವಿದೇಶ ಪ್ರವಾಸಾನುಭವ: ಯುನೈಟೆಡ್ ಕಿಂಗ್‌ಡಮ್, ಯೂರೋಪ್, ಅಮೆರಿಕ, ಜಪಾನ್ ಮೊದಲಾದ ದೇಶಗಳಲ್ಲಿ ಸಂಚರಿಸಿದ ಪೈಯವರು, ದ್ರುಪ (ಜರ್ಮನಿ), ಐಪೆಕ್‌ಸ್‌ (ಯುಕೆ), ಪ್ರಿಂಟ್ (ಶಿಕಾಗೋ, ಅಮೆರಿಕ) ಮೊದಲಾದ ಮುದ್ರಣ ವಸ್ತುಪ್ರದರ್ಶನಗಳಲ್ಲಿ ಪಾಲ್ಗೊಂಡು ಅಲ್ಲಿನ ಅನುಭವಗಳನ್ನು, ಹೊಸ ಹೊಸ ತಂತ್ರಜ್ಞಾನಗಳನ್ನು ಮಣಿಪಾಲದಲ್ಲಿ ಅಳವಡಿಸಲು ಪ್ರಯತ್ನಿಿಸಿ ಅದರಲ್ಲಿ ಯಶಸ್ಸು ಕಂಡಿದ್ದಾಾರೆ. ವಿದೇಶಗಳ ಪತ್ರಿಕೆಗಳ ವಿನ್ಯಾಾಸ, ಸುದ್ದಿ ವಿಶ್ಲೇಷಣೆಗಳನ್ನು ಗಮನಿಸಿ ಉದಯವಾಣಿಯಲ್ಲಿ ಜಾರಿಗೆ ತರಲು ಶ್ರಮಿಸಿದರು.

ಕರ್ನಾಟಕ ಪತ್ರಿಕಾ ಅಕಾಡೆಮಿಯು ಪತ್ರಿಕಾರಂಗದ ಕ್ಷೇತ್ರಕ್ಕಾಾಗಿ ಸಲ್ಲಿಸಿದ ಕೊಡುಗೆಗಾಗಿ ಮಣಿಪಾಲ್ ಪ್ರಿಂಟರ್‌ಸ್‌ ಆ್ಯಂಡ್ ಪಬ್ಲಿಷರ್‌ಸ್‌ ಲಿ.ಗೆ ಕೊಡಮಾಡಿದ ಪ್ರಶಸ್ತಿಯನ್ನು ಮೋಹನದಾಸ್ ಪೈಯವರು ಸ್ವೀಕರಿಸಿದ್ದರು. ಪೈಯವರು ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿಯ (ಐಎನ್‌ಎಸ್) ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿ ಎರಡು ಅವಧಿ ಸೇವೆ ಸಲ್ಲಿಸಿದ್ದರು. ಐಸಿಡಿಎಸ್‌ನ ಜಂಟಿ ಆಡಳಿತ ನಿರ್ದೇಶಕರಾಗಿ 1989ರಲ್ಲಿ ನೇಮಕಗೊಂಡ ಪೈಯವರು 1995ರಲ್ಲಿ ಆಡಳಿತ ನಿರ್ದೇಶಕರಾದರು. ಬಳಿಕ ಚೆಯರ್‌ಮ್ಯಾಾನ್ ಮತ್ತು ಆಜೀವ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. 

ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ: ಹಿರಿಯ ಉದ್ಯಮಿ, ಉದಯವಾಣಿ ದಿನಪತ್ರಿಕೆಯ ಸಂಸ್ಥಾಕರು ಆಗಿದ್ದ ಟಿ. ಮೋಹನದಾಸ್ ಪೈ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೋಹನದಾಸ ಪೈ ಅವರು ನಿಧನ ಹೊಂದಿದ್ದಾರೆ ಎನ್ನುವ ವಿಷಯ ನನಗೆ ಆಘಾತ ಉಂಟು ಮಾಡಿದೆ. ಹಿರಿಯ ಚೇತನರು, ಎಲ್ಲರ ಮಾರ್ಗದರ್ಶಕರಂತಿದ್ದ ಟಿ. ಮೋಹನ್ ದಾಸ್ ಪೈ ಅವರ ಆತ್ಮಕ್ಕೆ ಆ ಭಗವಂತ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರಿಗೆ ಪೈ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಕೋರಿದ್ದಾರೆ.

ಸಚಿವ ಡಾ.ಅಶ್ವತ್ಥನಾರಾಯಣ ಕಂಬನಿ: ಹಿರಿಯ ಉದ್ಯಮಿ, ಉದಯವಾಣಿ ದಿನಪತ್ರಿಕೆಯ ಸಂಸ್ಥಾಪಕರಾದ ಟಿ. ಮೋಹನದಾಸ್ ಪೈ ಅವರ ನಿಧನಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಸಂತಾಪ ಸೂಚಿಸಿದ್ದಾರೆ. ಟಿಎಂಎ ಪೈ, ಮಣಿಪಾಲ್ ಮೀಡಿಯಾ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳ ಅಧ್ಯಕ್ಷರಾಗಿ‌ದ್ದ ಅವರು ದೂರದೃಷ್ಟಿಯ ನಾಯಕರಾಗಿದ್ದರು. ನಾನು ಮಂಗಳೂರಿನಲ್ಲಿ ವೈದ್ಯಕೀಯ ಪದವಿ ವ್ಯಾಸಂಗ ಮಾಡುವಾಗ ಹತ್ತಿರದಿಂದ ಇವರನ್ನು ಬಲ್ಲೆ. ಒಳ್ಳೆಯ ಉದ್ಯಮಿಯಾಗಿ ಹೆಸರು ಮಾಡಿದ್ದ ಅವರ ಅಗಲಿಕೆಯಿಂದ ಇಡೀ ಸಮಾಜಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದು ಸಚಿವರು ಕಂಬನಿ ಮಿಡಿದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ