ಪ್ರಾಕೃತಿಕ ವಿಕೋಪ, ಅಪಘಾತ, ಅನಾಹುತಾಗಳಾದ ಜೀವ ಉಳಿಸಿಕೊಂಡರೆ ಸಾಕು ಅನ್ನೋದು ಎಲ್ಲರ ಬಯಕೆ. ಇದು ಸಹಜ ಕೂಡ. ಈ ಪರಿಸ್ಥಿತಿಯಲ್ಲಿ ತಮ್ಮ ಪ್ರಾಣಕ್ಕಿಂತ ಇತರರ ಪ್ರಾಣ ಉಳಿಸುವುದೇ ದೊಡ್ಡ ಕಾರ್ಯ ಎಂದು ನಂಬಿರುವವರ ಸಂಖ್ಯೆ ತೀರಾ ಕಡಿಮೆ. ಹೀಗೆ ಈ ಬಾರಿಯ ಪ್ರವಾಹದಲ್ಲಿ ಸಿಲುಕಿದ್ದ 300 ಮಂದಿ ಹಾಗೂ ನೂರೂರು ಜಾನುವರ ರಕ್ಷಿಸಿ, ಸುವರ್ಣನ್ಯೂಸ್-ಕನ್ನಡ ಪ್ರಭ ಪ್ರಶಸ್ತಿ ಪಡೆದ ಬೆಳಗಾವಿಯ ರಾವಸಾಬ- ನಂಜಯ ಅಂಬಿಯ ಸಾಹಸಗಾಥೆ ಹಾಗೂ ಕಿರು ಪರಿಚಯ ಇಲ್ಲಿದೆ.
ಬೆಂಗಳೂರು(ಡಿ.21): ಈ ವರ್ಷ ಸುರಿದ ಭೀಕರ ಮಳೆ ಹಾಗೂ ಪ್ರವಾಹದ ರಾಜ್ಯದ ಜನತೆಯ ನಗುವನ್ನೇ ಕಸಿದಿದೆ. ಉತ್ತರ ಕರ್ನಾಟಕ, ಕೊಡುಗು ಸೇರಿದಂತೆ ಕರ್ನಾಟಕದ ಹಲವು ಭಾಗಗಳು ಪ್ರವಾಹಕ್ಕೆ ತತ್ತರಿಸಿತ್ತು. ಈ ಪ್ರವಾಹದಲ್ಲಿ ಸಿಲುಕಿದ್ದ ಬರೋಬ್ಬರಿ 300 ಮಂದಿಯನ್ನು ಹಾಗೂ ನೂರಾರು ಜಾನುವಾರು ರಕ್ಷಿಸಿದ ಬೆಳಗಾವಿಯ ತಂದೆ-ಮಗ ರಾವಸಾಬ ಅಂಬ ಹಾಗೂ ನಂಜಯ ಅಂಬಿ ಈ ವರ್ಷದ ಸುವರ್ಣನ್ಯೂಸ್, ಕನ್ನಡಪ್ರಭ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾವಸಾಬ ಅಂಬಿ ಹಾಗೂ ನಂಜಯ ಅಂಬಿ ಸಾಧನೆ:
ವೃತ್ತಿಯಲ್ಲಿ ಅಂಬಿಗರಾದ ಬೆಳಗಾವಿಯ ಖೇಮಲಾಪುರ ಗ್ರಾಮದ ತಂದೆ ಮಗ ರಾವಸಾಬ ಅಂಬಿ ಹಾಗೂ ನಂಜಯ ಅಂಬಿ ಪ್ರವಾಹದಲ್ಲಿ ಜೀವದ ಹಂಗು ತೊರೆದು ಇತರರ ಪ್ರಾಣ ಉಳಿಸಿದ ವೀರರು. ಖೇಮಲಾಪುರ ಮತ್ತು ಕೃಷ್ಣಾ ಕಿತ್ತೂರು ಗ್ರಾಮದ ಲ್ಲಿ ಬೋಟ್ ನಡೆಸುತ್ತಿರುವ ತಂದೆ-ಮಗ ಈ ಗ್ರಾಮದ ಪಾಲಿಗೆ ದೇವರಾಗಿದ್ದಾರೆ. ರಣಭೀಕರ ಮಳೆ ಹಾಗೂ ಪ್ರವಾಹದಿಂದ ಕೃಷ್ಣ ನದಿ ತುಂಬಿ ಹರಿದಿತ್ತು. ಕೃಷ್ಣಾ ನದಿಯ ಪ್ರವಾಹದ ನೀರು ಕಿತ್ತೂರು ಗ್ರಾಮವನ್ನೇ ಜಲಾವೃತ ಮಾಡಿತ್ತು. ಈ ಪ್ರವಾಹದಲ್ಲಿ ಸಿಲುಕಿದ್ದ 300 ಜನರನ್ನು ತಂದೆ ರಾವಸಾಬ ಅಂಬಿ ಹಾಗೂ ಮಗ ನಂಜಯ ಅಂಬಿ ತಮ್ಮ ಬೋಟ್ ಮೂಲಕ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
ಪ್ರಾಣ ಒತ್ತೆಯಿಟ್ಟು ಇನ್ನೊಬ್ಬರ ಜೀವ ಕಾಪಾಡಿದವರಿಗೆ ಕನ್ನಡಪ್ರಭ-ಸುವರ್ಣ ನ್ಯೂಸ್ ಶೌರ್ಯ ಪ್ರಶಸ್ತಿ
ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ನೂರಾರು ಜಾನುವಾರುಗಳನ್ನು ಬೋಟ್ ಮೂಲಕ ರಕ್ಷಿಸಿದ್ದಾರೆ. ರಕ್ಷಣಾ ತಂಡ ಬೆಳಗಾವಿ ಪ್ರವೇಶಿಸುವಾಗ ರಾವಸಾಬ ಅಂಬಿ ಹಾಗೂ ನಂಜಯ ಅಂಬಿ ಹಲವರನ್ನು ರಕ್ಷಿಸಿದ್ದರು. ಪ್ರವಾಹ ಮೀತಿ ಮೀರಿದಾಗ ಜಿಲ್ಲಾಡಳಿತ ಯಾರೂ ಕೂಡ ನದಿ ಪಾತ್ರದ ಕಡೆಗೆ ತೆರಳದಂತೆ ಎಚ್ಚರಿಕೆ ನೀಡಿತ್ತು. ಆದರೆ ನದಿ ಪಾತ್ರದಲ್ಲಿ ಸಿಲುಕಿದ್ದ ಗ್ರಾಮದ ಜನರನ್ನು ರಕ್ಷಿಸಲು ಜಿಲ್ಲಾಡಳಿತದ ಬಳಿ ಯಾವ ಅಸ್ತ್ರಗಳು ತಕ್ಷಣಕ್ಕೆ ಇರಲಿಲ್ಲ. ಹೀಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ತಂದೆ ಮಗ ಹಲವರ ಜೀವ ಉಳಿಸಿದ್ದಾರೆ.
ಹೆಸರು: ರಾವಸಾಬ ಅಂಬಿ, ‘ನಂಜಯ ಅಂಬಿ(ತಂದೆ ಮಗ)
ಊರು: ಖೇಮಲಾಪುರ ಗ್ರಾಮ, ಬೆಳಗಾವಿ
ಸಂಪರ್ಕ: 9743992297 (‘ನಂಜಯ ಅಂಬಿ)
ವೃತ್ತಿ: ಅಂಬಿಗ
ಸಾಧನೆ : ಪ್ರವಾಹದಲ್ಲಿ ಸಿಲುಕಿದ 300 ಮಂದಿ ಹಾಗೂ ಕೊಚ್ಚಿ ಹೋಗುತ್ತಿದ್ದ ನೂರಾರು ಜಾನುವಾರ ರಕ್ಷಣೆ