ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ವಿತರಣೆ ಸ್ಥಗಿತ: ರಾಜ್ಯ ಸರ್ಕಾರದಿಂದ ಆದೇಶ

Published : Mar 30, 2023, 09:07 PM ISTUpdated : Mar 30, 2023, 09:13 PM IST
ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ವಿತರಣೆ ಸ್ಥಗಿತ: ರಾಜ್ಯ ಸರ್ಕಾರದಿಂದ ಆದೇಶ

ಸಾರಾಂಶ

ರಾಜ್ಯಾದ್ಯಂತ ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ನೀಡಲಾಗುತ್ತಿದ್ದ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ (ಎಬಿ-ಎಆರ್‌ಕೆ) ಕಾರ್ಡ್‌ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಬೆಂಗಳೂರು (ಮಾ.30): ರಾಜ್ಯಾದ್ಯಂತ ಬಿಪಿಎಲ್ ಕಾರ್ಡುದಾರರು ಹಾಗೂ ರಾಷ್ರ್ಟೀಯ ಸ್ವಾಸ್ಥ್ಯ ಭೀಮಾ ಯೋಜನೆಯಲ್ಲಿ ನೋಂದಾಯಿತವಾಗಿರುವ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ (ಎಬಿಆರ್‌ಕೆ) ಗುರುತಿನ ಚೀಟಿ (ಕಾರ್ಡ್‌) ವಿತರಣೆಯನ್ನು ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ 2023ರ ನೀತಿ ಸಂಹಿತೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ಪ್ರಮುಖ ಯೋಜನೆಯಾದ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಣೆ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ರಾಜ್ಯದ ಎಲ್ಲ ಅರ್ಹ ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಸದ್ಯಕ್ಕೆ ಸಿಗುವುದಿಲ್ಲ. ರಾಜ್ಯಾದ್ಯಂತ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಎಬಿ-ಎಆರ್‌ಕೆ ಕಾರ್ಡನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ರೂ.10 ಶುಲ್ಕದೊಂದಿಗೆ ನೀಡಲಾಗುತ್ತಿತ್ತು. ಜೊತೆಗೆ, ಬೆಂಗಳೂರು ಒನ್ ಕರ್ನಾಟಕ ಒನ್ ಮತ್ತು ಸೇವಾ ಸೀಂಧು ಕೇಂದ್ರಗಳಲ್ಲಿ 35 ರೂ. ಶುಲ್ಕದೊಂದಿಗೆ ಎಬಿ-ಎಆರ್‌ಕೆ ಕಾರ್ಡ್ ನೀಡಲಾಗುತ್ತಿತ್ತು. ಆದರೆ, ಈಗ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಡ್‌ ವಿತರಣೆ ಮಾತ್ರ ಸ್ಥಗಿತ ಮಾಡಲಾಗಿದೆ. 

ಪಂಚಮಸಾಲಿ ಲಿಂಗಾಯತರು ವಿಜಯೋತ್ಸವದ ಹಬ್ಬ ಆಚರಿಸಿ: ಜಯಮೃತ್ಯುಂಜಯ ಸ್ವಾಮೀಜಿ ಕರೆ

ಮುಂದಿನ ಆದೇಶದವರೆಗೆ ಕಾರ್ಡ್‌ ವಿತರಣೆ ಇಲ್ಲ: ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ ಗುರುತಿನ  ಚೀಟಿ ವಿತರಣೆ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದು, ಗುರುತಿನ ಚೀಟಿ ಕುರಿತಂತೆ ಎಲ್ಲಾ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಇನ್ನು ಮುಂದಿನ ಆದೇಶದವರೆಗೆ ರಾಜ್ಯದ ಯಾವುದೇ ಕೇಂದ್ರಗಳಲ್ಲಿ ಹಾಗೂ ಸಾರ್ವಜಿಕ ಆಸ್ಪತ್ರೆಗಳಲ್ಲಿ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು  ವಿತರಣೆ ಮಾಡದಂತೆ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್‌ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ ಜೋಡಣೆ: ರಾಜ್ಯದ ಎಲ್ಲ ನಿವಾಸಿಗಳಿಗೆ ಆರೋಗ್ಯ ಕರ್ನಾಟಕ ಎಂಬ ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯನ್ನು ಕರ್ನಾಟಕ ಸರ್ಕಾರವು ದಿನಾಂಕ: 02.03.2018 ರಿಂದ ಅನುಷ್ಠಾನಗೊಳಿಸುತ್ತಿತ್ತು. ನಂತರ ಭಾರತ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸಿರುತ್ತದೆ. ಈ ಎರಡೂ ಯೋಜನೆಗಳ ಉದ್ದೇಶ, ವ್ಯಾಪ್ತಿಗಳಲ್ಲಿ ಹೋಲಿಕೆ ಇರುವುದರಿಂದ ಎರಡೂ ಯೋಜನೆಗಳನ್ನು ಸಂಯೋಜಿಸಿ 'ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಅರ್ಹತೆ ಹಾಗೂ ಚಿಕಿತ್ಸಾ ಮೊತ್ತ: ಬಿಪಿಎಲ್ ಪಡಿತರ ಕಾರ್ಡು ಹೊಂದಿರುವವರು ಹಾಗೂ ರಾಷ್ರ್ಟೀಯ ಸ್ವಾಸ್ಥ್ಯ ಭೀಮಾ ಯೋಜನೆಯಲ್ಲಿ ನೋಂದಾಯಿತವಾಗಿರುವ ಫಲಾನುಭವಿಗಳಿಗೆ ಒಂದು ವರ್ಷಕ್ಕೆ ರೂ.5.00 ಲಕ್ಷಗಳವರೆಗೆ ಉಚಿತ ಚಿಕಿತ್ಸೆ ಲಭ್ಯ. ಎಪಿಎಲ್ ಕಾರ್ಡುದಾರರು ಆಥವಾ ಬಿಪಿಎಲ್ ಕಾರ್ಡು ಹೊಂದಿಲ್ಲದವರಿಗೆ ಸಹ-ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ 30% ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ರೂ.1.50 ಲಕ್ಷ ಇರುತ್ತದೆ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಹಾಜರುಪಡಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು.

ಕೋವಿಡ್‌ ಸನ್ನದ್ಧತೆ ಟೆಸ್ಟ್‌ಗೆ ಏ.10, 11ಕ್ಕೆ ದೇಶಾದ್ಯಂತ ಅಣಕು ಡ್ರಿಲ್‌

ಚಿಕಿತ್ಸೆಗಳು: ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು, ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು, ಮಾರಣಾಂತಿಕ ಕಾಯಿಲೆಗಳಾದ ಹೃದಯರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಕಾಯಿಲೆ ಮುಂತಾದ ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸೆಗಳು ಮತ್ತು 36 ಉಪಚಿಕಿತ್ಸಾ ವಿಧಾನಗಳು ಸೇರಿ ಒಟ್ಟು 1650 ಚಿಕಿತ್ಸೆಗಳು ಲಭ್ಯ. 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌