CD Case: ಸುಪ್ರೀಂನಲ್ಲಿ ರಮೇಶ್‌ ಜಾರಕಿಹೊಳಿಗೆ ಹಿನ್ನಡೆ: ಮತ್ತೆ ಸಂಕಷ್ಟದಲ್ಲಿ ಸಾಹುಕಾರ್..!

Kannadaprabha News   | Asianet News
Published : Feb 19, 2022, 09:24 AM IST
CD Case: ಸುಪ್ರೀಂನಲ್ಲಿ ರಮೇಶ್‌ ಜಾರಕಿಹೊಳಿಗೆ ಹಿನ್ನಡೆ: ಮತ್ತೆ ಸಂಕಷ್ಟದಲ್ಲಿ ಸಾಹುಕಾರ್..!

ಸಾರಾಂಶ

*  ಎಸ್‌ಐಟಿ ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ಗೆ ಸುಪ್ರೀಂಕೋರ್ಟ್‌ ತಡೆ *  ಮಾ.9ರಂದು ಪ್ರಕರಣ ವಿಲೇವಾರಿಗೆ ಹೈಕೋರ್ಟ್‌ಗೆ ಸೂಚನೆ *  ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಎಸ್‌ಐಟಿ   

ನವದೆಹಲಿ(ಫೆ.19): ಮಾಜಿ ಸಚಿವ ರಮೇಶ್‌ ಜಾರಕಿಹೊಳಿಗೆ(Ramesh Jarkiholi) ಸುಪ್ರೀಂಕೋರ್ಟ್‌ನಲ್ಲಿ(Supreme Court) ಹಿನ್ನಡೆಯಾಗಿದೆ. ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಿದ್ದ ತನಿಖಾ ವರದಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆ ನೀಡಿದೆ.

ಸಂತ್ರಸ್ತ ಯುವತಿಯು(Victim) ಎಸ್‌ಐಟಿ ರಚನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾ.ಇಂದಿರಾ ಬ್ಯಾನರ್ಜಿ ಹಾಗೂ ಜೆ.ಕೆ.ಮಾಹೇಶ್ವರಿ ಅವರಿದ್ದ ಪೀಠ, ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಅಮಾನತಿನಲ್ಲಿ ಇರಿಸಿತು. ಸಿಡಿ ಪ್ರಕರಣದಲ್ಲಿ(CD Case) ಎಸ್‌ಐಟಿಯಿಂದ ಕ್ಲೀನ್‌ ಚಿಟ್‌ ಪಡೆದಿದ್ದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಇದರಿಂದಾಗಿ ಮತ್ತೆ ಸಂಕಷ್ಟ ಎದುರಾದಂತಾಗಿದೆ.

CD Scandal: ಜಾರಕಿಹೊಳಿ ಸಿಡಿ ಕೇಸ್‌ ತನಿಖಾ ವರದಿ ಸಲ್ಲಿಕೆಗೆ ಅಸ್ತು

ಮತ್ತೆ ಹೈಕೋರ್ಟ್‌ ಅಂಗಳಕ್ಕೆ :

ಎಸ್‌ಐಟಿ ರಚನೆಯ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆಗೆ ನಿಗದಿಯಾಗಿರುವ ಮಾರ್ಚ್‌ 9ರಂದೇ ಪ್ರಕರಣದ ವಿಲೇವಾರಿ ಮಾಡುವಂತೆ ಪೀಠವು ಹೈಕೋರ್ಟ್‌ಗೆ(High Court) ಸೂಚಿಸಿದೆ.

ತನಿಖೆ(Investigation) ನಡೆಸಿರುವ ಎಸ್‌ಐಟಿಯು ಅಂತಿಮ ವರದಿಯನ್ನು ಈಗಾಗಲೇ ಒಂದನೇ ಜೆಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೂ ಈ ಪ್ರಕರಣವನ್ನು ವಹಿಸಲಾಗಿದೆ. ಈ ಸಂಬಂಧ ದೂರುದಾರ ಯುವತಿಗೂ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಜಾರಕಿಹೊಳಿ ಪರ ವಕೀಲ ರಂಜಿತ್‌ ಕುಮಾರ್‌ ಪೀಠದೆದುರು ತಿಳಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಅರ್ಜಿದಾರ ಯುವತಿ ಪರ ವಾದ ಮಂಡಿಸಿದ ವಿಕಾಸ್‌ ಸಿಂಗ್‌, ಇದು ಸಚಿವ ಸ್ಥಾನದಲ್ಲಿದ್ದವರ ವಿರುದ್ಧದ ಅತ್ಯಾಚಾರ ಆರೋಪ. ಆರೋಪಿಯು ಈ ಸಂಬಂಧ ಮುಖ್ಯಮಂತ್ರಿಗೆ ದೂರು ನೀಡಿದ್ದು, ಮುಖ್ಯಮಂತ್ರಿಯವರೇ ತನಿಖೆಗಾಗಿ ಎಸ್‌ಐಟಿ ರಚಿಸಿದ್ದಾರೆ. ಸಂತ್ರಸ್ತ ಯುವತಿ ಬೆಂಗಳೂರಿನ ಕಬ್ಬನ್‌ ಪಾರ್ಕ್ ಪೊಲೀಸ್‌ ಠಾಣೆಗೆ ನೀಡಿದ್ದ ದೂರಿನ ತನಿಖೆಯನ್ನೂ ಅದೇ ಎಸ್‌ಐಟಿಗೆ ವಹಿಸಲಾಗಿದೆ. ಇದರಿಂದ ಯಾರು ತನಿಖೆ ನಡೆಸಬೇಕು ಎಂಬುದನ್ನು ಆರೋಪಿಯೇ ನಿರ್ಧರಿಸಿದಂತಾಗಿದೆ. ಅಲ್ಲದೆ, ಎಸ್‌ಐಟಿ ರಚನೆಯ ಸಿಂಧುತ್ವವನ್ನು ಪ್ರಶ್ನಿಸಲಾದ ಅರ್ಜಿಯ ವಿಚಾರಣೆಯು ಹೈಕೋರ್ಟ್‌ನಲ್ಲಿ ಬಾಕಿ ಇದೆ. ಆದರೂ ತನಿಖೆ ಪೂರ್ಣಗೊಳಿಸಿರುವ ಎಸ್‌ಐಟಿಯು ಸಾಕ್ಷಾಧಾರಗಳ(Evidence) ಕೊರತೆ ಇದೆ ಎಂಬ ಕಾರಣ ಮುಂದಿರಿಸಿ, ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್‌ ಸಲ್ಲಿಸಿದೆ ಎಂದು ವಾದ ಮಂಡಿಸಿದರು.

ಎಸ್‌ಐಟಿಯು ತನಿಖಾ ವರದಿಯನ್ನು ಈಗಾಗಲೇ ಸೂಚಿಸಿದ ನ್ಯಾಯಾಲಯಕ್ಕೆ ಸಲ್ಲಿಸಿದೆ. ಸಂತ್ರಸ್ತೆ ಮತ್ತು ಆರೋಪಿಗೆ ಸಂಬಂಧಿಸಿದ ಆಯಾಮಗಳ ಕುರಿತು ನ್ಯಾಯಾಲಯವು ಪರಿಶೀಲನೆ ನಡೆಸಲಿದೆ ಎಂದು ಎಸ್‌ಐಟಿ ಪರ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ನ್ಯಾಯಪೀಠಕ್ಕೆ ಹೇಳಿದರು.

Jarkiholi CD Scandal: ಅರ್ಜಿ ವಿಚಾರಣೆ ಮುಂದಕ್ಕೆ,  SIT ಅಂತಿಮ ವರದಿ ಸಲ್ಲಿಕೆ ಡೇಟ್ ಫಿಕ್ಸ್!

ಹೈಕೋರ್ಟ್‌ ಸಮಾಜದ ಹಿತದೃಷ್ಟಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಲಿ. ಅಲ್ಲಿಯವರೆಗೆ ಎಸ್‌ಐಟಿ ಸಲ್ಲಿಸಿರುವ ವರದಿಯ ಕುರಿತು ಯಾವುದೇ ಕ್ರಮ ಕೈಗೊಳ್ಳುವುದು ಬೇಡ ಎಂದು ಸುಪ್ರೀಂ ಕೋರ್ಟ್‌ ಪೀಠ ಆದೇಶದಲ್ಲಿ ತಿಳಿಸಿದೆ.

ಜಾರಕಿಹೊಳಿ ಪ್ರಕರಣ: ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಯುವತಿ

ಮಾಜಿ ಸಚಿವ, ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಎಸ್‌ಐಟಿ (ವಿಶೇಷ ತನಿಖಾ ದಳ) ಬಿ ರಿಪೋರ್ಟ್‌ (B Report) ಸಲ್ಲಿಸಿದ ಬೆನ್ನಲ್ಲೇ ಇದೀಗ ಎಸ್‌ಐಟಿ ರಚನೆಯನ್ನೇ ಪ್ರಶ್ನಿಸಿ ಸಂತ್ರಸ್ತೆ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಅತ್ಯಾಚಾರ ಪ್ರಕರಣದಲ್ಲಿ ತನಿಖೆ ನಡೆಸಿರುವ ಎಸ್‌ಐಟಿ (SIT) ವರದಿ ಮೇಲೆ ನನಗೆ ನಂಬಿಕೆಯಿಲ್ಲ ಎಂದು ಸಂತ್ರಸ್ತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣದಲ್ಲಿ ಎಸ್‌ಐಟಿ ರಚನೆಯೇ ಸರಿ ಇಲ್ಲ. ಸರ್ಕಾರ ಸ್ವಯಂ ಪ್ರೇರಿತವಾಗಿ ಎಸ್‌ಐಟಿ ರಚನೆ ಮಾಡಿಲ್ಲ. ಪರಿಸ್ಥಿತಿ ಹೀಗಿದ್ದಾಗ ಎಸ್‌ಐಟಿ ವರದಿಯನ್ನು ಕೋರ್ಟಿಗೆ ಸಲ್ಲಿಕೆ ಮಾಡಿ, ವಿಚಾರಣೆ ನಡೆಸುವುದು ಎಷ್ಟುಸರಿ? ಹೀಗಾಗಿ ಎಸ್‌ಐಟಿ ವರದಿ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!