ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಕೇಸಿನಲ್ಲಿ ಜಾಮೀನು ಅರ್ಜಿ ವಜಾಗೊಂಡಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬೇಲಾ ತ್ರಿವೇದಿ ಅವರ ಪೀಠವು 'ಆರೋಪಿ ಸೋ ಪವರ್ ಫುಲ್' ಎಂದು ಹೇಳಿ ಅರ್ಜಿ ವಜಾಗೊಳಿಸಿದೆ.
ಬೆಂಗಳೂರು (ನ.11): ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಕೇಸಿನಲ್ಲಿ ಜೈಲು ಸೇರಿದ್ದು, ಸ್ಥಳೀಯ ಮತ್ತು ಹೈಕೋರ್ಟ್‌ನಲ್ಲಿಯೂ ಜಾಮೀನು ಸಿಕ್ಕಿರಲಿಲ್ಲ. ಕೆಳಹಂತದ ನ್ಯಾಯಾಲಯಗಳ ಆದೇಶ ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ತೆರಳಿದ್ದರು. ಆದರೆ, ಇಂದು ಜಾಮೀನು ಅರ್ಜಿ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬೇಲಾ ತ್ರಿವೇದಿ ಅವರ ಪೀಠವು 'ಆರೋಪಿ ಸೋ ಪವರ್ ಫುಲ್' ಅರ್ಜಿ ವಜಾಗೊಳಿಸಲಾಗಿದೆ ಎಂದು ಆದೇಶ ಹೊರಡಿಸಿದರು.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅತ್ಯಾಚಾರ ಕೇಸಿನಲ್ಲಿ ಐದಾರು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಹಾಸನದಲ್ಲಿ ಅವರ ಮನೆ ಕೆಲಸದ ಮಹಿಳೆ, ಜೆಡಿಎಸ್ ಕಾರ್ಯಕರ್ತರ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಕೇಸ್ ದಾಖಲಾಗಿತ್ತು. ಈಗಾಗಲೇ ಅತ್ಯಾಚಾರ ಕೇಸಿಗೆ ಸಂಬಂಧಪಟ್ಟಂತೆ ಚಾರ್ಜ್ ಶೀಟ್ ಕೂಡ ಸಲ್ಲಿಕೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಬಂಧವಾಗಿ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ, ಜಾಮೀನಿನ ಮೇಲೆ ಹೊರಬರಲು ಶತಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಸ್ಥಳೀಯ ನ್ಯಾಯಾಲಯ ಮತ್ತು ಹೈಕೋರ್ಟ್‌ನಿಂದ ಜಾಮೀನು ನಿರಾಕರಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ, ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋಗಿ ಜಾಮೀನು ಪಡೆದುಕೊಂಡು ಬರಬಹುದು ಎಂದು ನಿರೀಕ್ಷೆ ಮಾಡಿದ್ದರು.
undefined
ಇದನ್ನೂ ಓದಿ: ರೇಪ್ ಕೇಸ್: ಜಾಮೀನು ಅರ್ಜಿ ವಜಾ, ಬೇಲ್ ಪಡೆಯಲು ಪ್ರಜ್ವಲ್ ರೇವಣ್ಣ ಅರ್ಹರಲ್ಲ ಎಂದ ಹೈಕೋರ್ಟ್!
ಈ ಹಿನ್ನೆಲೆಯಲ್ಲಿ ಭಾರತದ ಪ್ರಭಾವಿ ವಕೀಲರಲ್ಲಿ ಒಬ್ಬರಾದ ಮುಕುಲ್ ರೋಹಟಗಿ ಅವರ ನೇತೃತ್ವದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಬೇಲಾ ತ್ರಿವೇದಿ ಅವರು ಪ್ರಜ್ವಲ್ ಪರ ವಕೀಲರಿಗೆ ಹೆಚ್ಚಿನ ವಾದ ಮಂಡಿಸಲು ಅವಕಾಶವನ್ನೇ ನೀಡಲಿಲ್ಲ. ಅರ್ಜಿ ಕೈಗೆತ್ತಿಕೊಳ್ಳುತ್ತಿದ್ದಂತೆ ವಕೀಲ ಮುಕುಲ್ ರೋಹಟಗಿ ಅವರು ತಮ್ಮ ಕಕ್ಷಿದಾರರ ಪರ ಗಂಭೀರ ಆರೋಪದ ಬಗ್ಗೆ 2-3 ಅಂಶಗಳಿವೆ. ದೂರಿನಲ್ಲಿ 376 (ಅತ್ಯಾಚಾರ) ವಿಷಯದ ಬಗ್ಗೆ ಮಾತನಾಡುವುದಿಲ್ಲ ಎಂದರು. ಆಗ ನ್ಯಾಯಮೂರ್ತಿ ತ್ರಿವೇದಿ ಅವರು ಆರೋಪ ಪಟ್ಟಿ ಸಲ್ಲಿಕೆ ಆಗಿದೆಯೇ? ಎಂದು ಪ್ರಶ್ನೆ ಮಾಡಿದರು. ವಕೀಲ ರೋಹಟಗಿ ಹೌದು ಎಂದರು. ಇದಾದ ತಕ್ಷಣವೇ ನ್ಯಾಯಮೂರ್ತಿಗಳು ಆರೋಪಿ ತುಂಬಾ ಪ್ರಭಾವಶಾಲಿ ಆಗಿದ್ದಾರೆ. ಅರ್ಜಿ ವಜಾಗೊಳಿಸಲಾಗಿದೆ ಎಂದು ಹೇಳಿ ಆದೇಶ ನೀಡಿದರು.
ಇನ್ನು ಪ್ರಜ್ವಲ್ ರೇವಣ್ಣಗೆ ಜಾಮೀನು ನಿರಾಕರಣೆ ಮಾಡಿರುವುದು ಖಚಿತ ಆಗುತ್ತಿದ್ದಂತೆ ಬೇರೆ ವಾದ ಮಂಡಿಸದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, ನಾವು 6 ತಿಂಗಳ ನಂತರ ಮತ್ತೆ ಅರ್ಜಿ ಸಲ್ಲಿಸಬಹುದೇ? ಎಂದು ಪ್ರಶ್ನೆ ಮಾಡಿದರು. ಆದರೆ, ಇದಕ್ಕೆ ನ್ಯಾಯಮೂರ್ತಿಗಳು ನಾವು ಏನನ್ನೂ ಹೇಳುವುದಿಲ್ಲ ಎಂದು ಕಡ್ಡಿ ತುಂಡರಿಸಿದಂತೆ ಆದೇಶ ಹೊರಡಿಸಿದರು.
ಇದನ್ನೂ ಓದಿ: ದೇವೇಗೌಡರ ಸರ್ಕಾರಿ ಗೆಸ್ಟ್ ಹೌಸಲ್ಲೂ ಪ್ರಜ್ವಲ್ ಅತ್ಯಾಚಾರ: ಗಂಡನನ್ನು ಕೊಲ್ಲೋದಾಗಿ ಬೆದರಿಸಿ 3 ವರ್ಷ ಬಲಾತ್ಕಾರ..!
ಕನಿಷ್ಠ 6 ತಿಂಗಳು ಜೈಲೇ ಗತಿ: ಪ್ರಜ್ವಲ್ ರೇವಣ್ಣ ಅವರು ಅತ್ಯಾಚಾರ ಕೇಸಿನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಜಾಮೀನು ಪಡೆದು ಜೈಲಿನಿಂದ ಹೊರಗೆ ಬರಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ. ದೊಡ್ಡ ವಕೀಲರನ್ನು ಹಿಡಿದುಕೊಂಡು ತಮ್ಮ ಮನೆಯವರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದು, ಜಾಮೀನು ಸಿಗುತ್ತದೆ ಎಂಬ ಭಾರೀ ನಿರೀಕ್ಷೆಯಲ್ಲಿದ್ದರು. ಆದರೆ, ಇದೀಗ ಸುಪ್ರೀಂ ಕೋರ್ಟ್‌ನಲ್ಲೂ ಜಾಮೀನು ಅರ್ಜಿ ವಜಾ ಆಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ 6 ತಿಂಗಳ ಕಾಲ ಜಾಮೀನು ಸಿಗುವುದಿಲ್ಲ ಎಂಬುದು ಖಚಿತವಾಗಿದೆ. ಇದರ ನಂತರ ಅರ್ಜಿ ಸಲ್ಲಿಕೆ ಮಾಡಿದರೂ ಜಾಮೀನಿನ ಮೇಲೆ ಹೊರಗೆ ಬರುತ್ತಾರಾ? ಎನ್ನುವುದು ಖಚಿತವಿಲ್ಲ.