ಸೂಲಗಿತ್ತಿ ನರಸಮ್ಮ ಆರೋಗ್ಯ ಸ್ಥಿತಿ ಗಂಭೀರ

By Web DeskFirst Published Nov 30, 2018, 9:08 AM IST
Highlights

15 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಸೂಲಗಿತ್ತಿ ನರಸಮ್ಮ (98) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ನಗರದ ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಬೆಂಗಳೂರು[ನ.30]: ಹದಿನೈದು ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿದ್ದ ಸೂಲಗಿತ್ತಿ ನರಸಮ್ಮ (98) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ನಗರದ ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮೀಣ ಭಾಗದ ಗರ್ಭಿಣಿಯರಿಗೆ ತೊಂದರೆಯಾಗದಂತೆ ಸಾವಿರಾರು ಹೆರಿಗೆಗಳನ್ನು ಅವರು ಮಾಡಿಸಿದ್ದರು. ಸರ್ಕಾರ ಅವರ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ನರಸಮ್ಮ ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ 10 ದಿನಗಳಿಂದ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟ್ರೈಕ್ಯಾಸ್ಟಮಿ ಚಿಕಿತ್ಸೆ ಸಹ ನಡೆಸಲಾಗಿತ್ತು. ಕ್ರಮೇಣ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಿಗ್ನಲ್‌ ಮುಕ್ತ ಸಂಚಾರ ವ್ಯವಸ್ಥೆಯೊಂದಿಗೆ ಕೆಂಗೇರಿ ಬಳಿಯ ಬಿಜಿಎಸ್‌ ಆಸ್ಪತ್ರೆಗೆ ಕರೆತರಲಾಗಿದೆ.

ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸೂಲಗಿತ್ತಿ ನರಸಮ್ಮ ಅವರಿಗೆ 8 ಮಂದಿ ಗಂಡು ಹಾಗೂ ನಾಲ್ವರು ಹೆಣ್ಣು ಸೇರಿದಂತೆ ಒಟ್ಟು 12 ಮಂದಿ ಮಕ್ಕಳು. ಇವರಲ್ಲಿ ಹಿರಿಯ ಮಗಳು ಸೇರಿದಂತೆ ಈಗಾಗಲೇ ನಾಲ್ವರು ಮೃತಪಟ್ಟಿದ್ದಾರೆ. ಕೆಲ ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ನರಸಮ್ಮ ಬಳಲುತ್ತಿದ್ದಾರೆ ಎಂದು ಪುತ್ರ ಪಾವಗಡ ಶ್ರೀರಾಮ್‌ ತಿಳಿಸಿದ್ದಾರೆ.

click me!