
ಬೆಂಗಳೂರು[ನ.30]: ಮೈತ್ರಿ ಸರ್ಕಾರದ ಅತ್ಯಂತ ಪ್ರಭಾವಿ ಸಚಿವ ಎಚ್.ಡಿ.ರೇವಣ್ಣ ಅವರ ವಿರುದ್ಧ ಹಾಸನ ಜಿಲ್ಲಾ ಕಾಂಗ್ರೆಸ್ ನಾಯಕರು ಕೆಂಡಾಮಂಡಲಗೊಂಡಿದ್ದು, ಮೈತ್ರಿ ಧರ್ಮ ಮೀರಿ ವೈಯಕ್ತಿಕ ದ್ವೇಷ ಸಾಧನೆ ಮಟ್ಟಕ್ಕೆ ಇಳಿದಿರುವ ರೇವಣ್ಣ ಅವರಿಗೆ ಮೂಗುದಾರ ಹಾಕಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೇಲೆ ಒತ್ತಡ ತರುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರು, ರೇವಣ್ಣ ಹಸ್ತಕ್ಷೇಪ ವಿಚಾರವನ್ನು ಡಿ.5ರಂದು ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಕಂಗೆಟ್ಟಿರುವ ಹಾಸನ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಗೆ ಉತ್ಸಾಹ ತುಂಬಲು ಹಾಸನ ಜಿಲ್ಲಾ ಕಾಂಗ್ರೆಸ್ ಬೆಳಗಾವಿ ಅಧಿವೇಶನದ ನಂತರ ಹಾಸನದಲ್ಲಿ ಆಯೋಜಿಸುವ ಕಾರ್ಯಕರ್ತರ ಸಮಾವೇಶದಲ್ಲೂ ಪಾಲ್ಗೊಳ್ಳುವುದಾಗಿ ಅಭಯ ನೀಡಿದರು ಎಂದು ಮೂಲಗಳು ತಿಳಿಸಿವೆ.
ಗುರುವಾರ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಚ್.ಎಂ.ವಿಶ್ವನಾಥ್, ಮಂಜೇಗೌಡ, ಜಿಲ್ಲಾ ಪಂಚಾಯ್ತಿ ಸದಸ್ಯ ಮಂಥರ್‌ಗೌಡ ಸೇರಿದಂತೆ ನೂರಕ್ಕೂ ಹೆಚ್ಚು ಹಾಸನ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡರು.
ಕಾಂಗ್ರೆಸ್ ಬೆಂಬಲದಿಂದಲೇ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಿದೆ. ಆದರೆ ಈ ವಿಶ್ವಾಸವಿಲ್ಲದೆ ಮೈತ್ರಿ ಸರ್ಕಾರದ ಜೆಡಿಎಸ್ ಸಚಿವ ಎಚ್.ಡಿ.ರೇವಣ್ಣ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕಿರುಕುಳ ನೀಡುತ್ತಿದ್ದಾರೆ. ಇಷ್ಟೂದಿನ ಸಹಿಸಿಕೊಂಡು ಬಂದಿದ್ದೇವೆ, ಇನ್ನು ಮುಂದೆ ಸಹಿಸಿಕೊಳ್ಳಲು ಆಗುವುದಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಉಳಿಯಬೆಕಾದರೆ ನೀವು ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ಮೇಲೆ ವೈಯಕ್ತಿಕ ದ್ವೇಷ ಸಾಧಿಸುವ ಹಂತಕ್ಕೆ ರೇವಣ್ಣ ಹೋಗಿದ್ದಾರೆ. ಸುಳ್ಳು ಕೇಸು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ವರ್ಗಾವಣೆ ಪ್ರಕ್ರಿಯೆಯನ್ನು ಸಂಪೂರ್ಣ ಹತೋಟಿಗೆ ತೆಗೆದುಕೊಂಡಿದ್ದಾರೆ. ಸ್ಥಳೀಯ ಪ್ರಾಧಿಕಾರಗಳ ನೇಮಕಾತಿ, ಅಭಿವೃದ್ಧಿ ವಿಚಾರದಲ್ಲೂ ಕಾಂಗ್ರೆಸ್ ನಾಯಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ ಎಂದು ದೂರಿದರು.
ಕಿರುಕುಳ ನೀಡಿಲ್ಲ
ಹಾಸನ ಜಿಲ್ಲೆ ಕಾಂಗ್ರೆಸ್ ಕಾರ್ಯಕರ್ತರಿಗೆ ನಾನು ಯಾವ ಕಿರುಕುಳವನ್ನೂ ನೀಡಿಲ್ಲ. ನನ್ನ ಮೇಲೆ ಏಕೆ ದೂರು ನೀಡಿದರೋ ಗೊತ್ತಿಲ್ಲ. ಈ ಬಗ್ಗೆ ಸಿದ್ದರಾಮಣ್ಣ ಕರೆದರೆ ಹೋಗಿ ಸ್ಪಷ್ಟನೆ ನೀಡುತ್ತೇನೆ. ನಾನು ನನ್ನ ಪಾಡಿಗೆ ಕೆಲಸ ಮಾಡಿಕೊಂಡಿದ್ದೇನೆ.
- ಎಚ್.ಡಿ.ರೇವಣ್ಣ, ಲೋಕೋಪಯೋಗಿ ಸಚಿವ
ಡಿಕೆಶಿ-ಪರಂ ಬಗ್ಗೆಯೂ ದೂರು:
ಇಷ್ಟೆಲ್ಲಾ ಸಮಸ್ಯೆ ಹೇಳಿಕೊಂಡು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ಬಳಿ ಹೋದರೆ ಹಾಸನದವರು ನನ್ನ ಹತ್ತಿರ ಬರಲೇಬೇಡಿ ಎಂದು ಹೇಳುತ್ತಿದ್ದಾರೆ. ರೇವಣ್ಣ ಅವರಿಗೆ ಕಾಂಗ್ರೆಸ್ನ ಈ ಪ್ರಭಾವಿ ಸಚಿವರೇ ಹೆದರಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿ ನಿರ್ಮಾಣವಾದರೆ ನಾವು ಎಲ್ಲಿಗೆ ಹೋಗಬೇಕು ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಹೀಗಾದರೆ ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಹೇಗೆ ಉಳಿಸಬೇಕು ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರು ಹಾಸನ ಜಿಲ್ಲಾ ಕಾಂಗ್ರೆಸ್ ನಾಯಕರ ಹಿತ ಕಾಯುವ ಆಶ್ವಾಸನೆಯನ್ನು ನೀಡಿದರು ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ