ಪಿಪಿಇ ಕಿಟ್ ಧರಿಸಿ, ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ| ಮಹಿಳೆ ಚೇತರಿಸಿಕೊಂಡಿದ್ದು, ಅಪಾಯದಿಂದ ಪಾರು| ಸೋಂಕಿತರ ಸಂಪರ್ಕದಿಂದ ಕೆಲ ವೈದ್ಯರು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ| 30ಕ್ಕೂ ಅಧಿಕ ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿ ನಿಗಾದಲ್ಲಿದ್ದಾರೆ|
ಬೆಂಗಳೂರು(ಆ.30): ಮಿದುಳಿನ ರಕ್ತಸ್ರಾವ ಸಮಸ್ಯೆಗೊಳಗಾಗಿದ್ದ ಕೊರೋನಾ ಸೋಂಕಿತ ಮಹಿಳೆಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಮಿದುಳಿನ ಸಮಸ್ಯೆಗೆ ಒಳಗಾಗಿದ್ದ 35 ವರ್ಷದ ಮಹಿಳೆಗೆ ಕೊರೋನಾ ಸೋಂಕು ಕೂಡ ದೃಢಪಟ್ಟಿತ್ತು. ಅವರಿಗೆ ಮಿದುಳಿನ ರಕ್ತಸ್ರಾವ ಉಂಟಾಗಿ ಗಂಭೀರ ಸ್ಥಿತಿ ತಲುಪಿದ್ದರು. ತಕ್ಷಣ ನಿಮ್ಹಾನ್ಸ್‌ನ ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಎಸ್. ದ್ವಾರಕನಾಥ್ ಹಾಗೂ ಅರಿವಳಿಕೆ ತಜ್ಞ ಡಾ. ಕೆ. ರಾಧಾಕೃಷ್ಣನ್ ನೇತೃತ್ವದ ವೈದ್ಯರ ತಂಡ ವೈಯಕ್ತಿಕ ಸುರಕ್ಷತಾ ಸಾಧನಗಳ (ಪಿಪಿಇ ಕಿಟ್) ಧರಿಸಿ, ಶಸ್ತ್ರಚಿಕಿತ್ಸೆ ನಡೆಸಿದೆ. ಈಗ ಮಹಿಳೆ ಚೇತರಿಸಿಕೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶನಿವಾರ ಕರ್ನಾಟಕದಲ್ಲಿ ಕೊರೋನಾ ಅಬ್ಬರ: ಗುಣಮುಖರಾವದರ ಸಂಖ್ಯೆಯೂ ಹೆಚ್ಚಳ
ಮಿದುಳಿನ ರಕ್ತಸ್ರಾವ ಉಂಟಾದ 24 ಗಂಟೆಗಳಲ್ಲಿ ಶೇ.25 ವ್ಯಕ್ತಿಗಳು ಮೃತಪಡುವ ಸಾಧ್ಯತೆಗಳು ಇರುತ್ತವೆ. ಇಂತಹ ಸಂದರ್ಭದಲ್ಲಿ ಕೋವಿಡ್ ಪರೀಕ್ಷೆ ವರದಿ ಪಡೆದು ಶಸ್ತ್ರಚಿಕಿತ್ಸೆ ನಡೆಸುವುದು ಕೂಡ ಸವಾಲಿನ ಕೆಲಸವಾಗಿತ್ತು. ಇಷ್ಟಾಗಿಯೂ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ. ಇಂತಹ ಗಂಭೀರ ಪರಿಸ್ಥಿಯಲ್ಲಿ ರೋಗಿಗಳು ಧೈರ್ಯ ಕಳೆದುಕೊಳ್ಳಬಾರದು ಎಂದು ವೈದ್ಯರು ತಿಳಿಸಿದ್ದಾರೆ.
ಕೋವಿಡ್‌ನಿಂದಾಗಿ ವೈದ್ಯರು ಹಾಗೂ ಶುಶ್ರೂಷಕರು ಹಲವು ಸವಾಲುಗಳ ನಡುವೆಯೇ ಕಾರ್ಯನಿರ್ವಹಿಸಬೇಕಾಗಿದೆ. ಸೋಂಕಿತರ ಸಂಪರ್ಕದಿಂದ ಕೆಲ ವೈದ್ಯರು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 30ಕ್ಕೂ ಅಧಿಕ ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿ ನಿಗಾದಲ್ಲಿದ್ದಾರೆ. ಇಷ್ಟಾಗಿಯೂ ಕಳೆದ ನಾಲ್ಕೂ ತಿಂಗಳುಗಳಲ್ಲಿ ನರಶಸ್ತ್ರ ಚಿಕಿತ್ಸಕರು 2,250ಕ್ಕೂ ಅಧಿಕ ಪ್ರಕರಣಗಳಿಗೆ ಚಿಕಿತ್ಸೆ ನೀಡಿದ್ದಾರೆ. ತಲೆ ಮತ್ತು ಬೆನ್ನು ಮೂಳೆಗಳ ಗಾಯ, ಮಿದುಳಿನಲ್ಲಿ ರಕ್ತಸ್ರಾವದಂತಹ ಗಂಭೀರ ಸಮಸ್ಯೆಯುಳ್ಳ 949 ಪ್ರಕರಣಗಳನ್ನು ನಿರ್ವಹಿಸಿದ್ದಾರೆ ಎಂದು ಹಿರಿಯ ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ.