ಸಬ್‌ ಅರ್ಬನ್‌ ರೈಲ್ವೆ ‘ಮಲ್ಲಿಗೆ ಕಾರಿಡಾರ್‌’ ಆಮೆಗತಿ; ಡೆಡ್‌ಲೈನ್ ಒಳಗೆ ಪೂರ್ಣಗೊಳಿಸುವುದು ಅಸಾಧ್ಯ

By Kannadaprabha NewsFirst Published Nov 20, 2023, 1:13 PM IST
Highlights

ಉಪನಗರ ರೈಲ್ವೆ ಯೋಜನೆಯ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ನಡುವಿನ ‘ಮಲ್ಲಿಗೆ ಕಾರಿಡಾರ್‌’ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಕಳೆದೊಂದು ವರ್ಷದಲ್ಲಿ ಕೇವಲ ಶೇಕಡ 12ರಷ್ಟು ಕೆಲಸವಾಗಿದೆ. ಸಾಕಷ್ಟು ಅಡೆತಡೆ ನಿವಾರಿಸಿಕೊಂಡಿದ್ದು, ದೀಪಾವಳಿ ಬಳಿಕ ಕಾಮಗಾರಿ ಚುರುಕಾಗಲಿದೆ ಎಂದು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್‌) ಹೇಳುತ್ತಿದ್ದರೂ ತಳಮಟ್ಟದಲ್ಲಿ ಅಂತಹ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ.

ಜಿ.ಆರ್‌.ಮಯೂರ್‌

ಬೆಂಗಳೂರು (ನ.20): ಉಪನಗರ ರೈಲ್ವೆ ಯೋಜನೆಯ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ನಡುವಿನ ‘ಮಲ್ಲಿಗೆ ಕಾರಿಡಾರ್‌’ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಕಳೆದೊಂದು ವರ್ಷದಲ್ಲಿ ಕೇವಲ ಶೇಕಡ 12ರಷ್ಟು ಕೆಲಸವಾಗಿದೆ. ಸಾಕಷ್ಟು ಅಡೆತಡೆ ನಿವಾರಿಸಿಕೊಂಡಿದ್ದು, ದೀಪಾವಳಿ ಬಳಿಕ ಕಾಮಗಾರಿ ಚುರುಕಾಗಲಿದೆ ಎಂದು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್‌) ಹೇಳುತ್ತಿದ್ದರೂ ತಳಮಟ್ಟದಲ್ಲಿ ಅಂತಹ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ.

ಮಲ್ಲಿಗೆ ಕಾರಿಡಾರ್‌ನ ಎತ್ತರಿಸಿದ ಮಾರ್ಗದಲ್ಲಿ ನಿರ್ಮಾಣ ಆಗಬೇಕಾದ 400 ಪಿಲ್ಲರ್‌ಗಳ ಪೈಕಿ ಮೊದಲ ಪಿಲ್ಲರ್‌ (ಪಿ-11) ಹೆಬ್ಬಾಳದಲ್ಲಿ ಇನ್ನು ಕೆಲವೇ ದಿನಗಳಲ್ಲಿ ತಲೆ ಎತ್ತುತ್ತಿದೆ. ಒಟ್ಟಾರೆ ಉಪನಗರ ರೈಲ್ವೆಯ ಸಾಧನೆ ತೆಗೆದುಕೊಂಡರೂ ಕಣ್ಣಿಗೆ ಗೋಚರಿಸಲಿರುವ ಯೋಜನೆಯ ಮೊದಲ ಕುರುಹಾಗಿ ಈ ಸ್ತಂಭ ನಿಲ್ಲುತ್ತಿದೆ. ಆದರೆ, ಇದು ಕಳೆದ ಐದಾರು ತಿಂಗಳ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು ಎಂಬುದೂ ಸತ್ಯ.

ಈ ಮಾರ್ಗದ ಕಾಮಗಾರಿಯನ್ನು ಗುತ್ತಿಗೆ ಪಡೆದ ಎಲ್‌ ಆ್ಯಂಡ್‌ ಟಿ ಕಂಪನಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೆಲಸ ಆರಂಭಿಸಿದೆ. 26 ತಿಂಗಳಲ್ಲಿ ಮುಗಿಯಬೇಕಾದ ಯೋಜನೆ ಇದು. ಆದರೆ, ತಿಂಗಳಿಗೆ ಕೇವಲ ಶೇ.1ರಷ್ಟು ಮಾತ್ರ ಕಾಮಗಾರಿ ಆಗುತ್ತಿದೆ. ಇದು ನಗರ ಸಾರಿಗೆ ತಜ್ಞರ ಬೇಸರಕ್ಕೆ ಕಾರಣವಾಗಿದ್ದು, ಹೀಗೆ ಮುಂದುವರಿದರೆ ಮಲ್ಲಿಗೆ ಕಾರಿಡಾರ್‌ 2026ರ ಡೆಡ್‌ಲೈನ್‌ ಮೀರಿ 2030ಕ್ಕೆ ಪೂರ್ಣಗೊಂಡರೂ ಆಶ್ಚರ್ಯವಿಲ್ಲ ಎಂದು ಹೇಳುತ್ತಿದ್ದಾರೆ.

ಬಾಕ್ಸ್...

ಎಷ್ಟು ಕೆಲಸವಾಗಿದೆ?

ಒಟ್ಟು ನಿರ್ಮಾಣ ಆಗಬೇಕಾದ 17.551 ಕಿ.ಮೀ. ಉದ್ದದ ತಡೆಗೋಡೆ ಪೈಕಿ ಪ್ರಸ್ತುತ ಚಿಕ್ಕಬಾಣಾವರ ಮತ್ತು ಮೈದರಹಳ್ಳಿ ನಡುವೆ ಲಿಂಗರಾಜಪುರ, ಲಿಡ್ಕರ್‌ ಕಾಲನಿ, ಮೈದರಹಳ್ಳಿ ಸೇರಿ 500 ಮೀ. ತಡೆಗೋಡೆ ಸಿವಿಲ್‌ ಕಾಮಗಾರಿ ನಡೆಯುತ್ತಿದೆ. ಹೆಬ್ಬಾಳದ ಬಳಿ 26 ಪಿಲ್ಲರ್‌ ನಿರ್ಮಾಣ ಪ್ರಗತಿಯಲ್ಲಿದೆ. ನಿರ್ಮಾಣ ಆಗಬೇಕಾದ 53 ಕಿರುಸೇತುವೆಗಳ ಪೈಕಿ 4 ಪೂರ್ಣಗೊಂಡಿದ್ದರೆ, ಹೆಬ್ಬಾಳ, ಕನಕ ನಗರ ನಿಲ್ದಾಣದ ನಡುವೆ 6 ಕಿರುಸೇತುವೆ ಕಾಮಗಾರಿ ಸಾಗಿದೆ.

ಪ್ರಮುಖವಾಗಿ ನಾಗವಾರ ಬಳಿಯ ಶ್ಯಾಂಪುರ ಗೇಟ್‌ನಲ್ಲಿನ ರೈಲ್ವೆ ಹಳಿಯ ಲೇವಲ್‌ ಕ್ರಾಸಿಂಗ್‌ (ಸಂಖ್ಯೆ 143) ನಿವಾರಣೆಗೆ ರಸ್ತೆ ಕೆಳಸೇತುವೆ ಕಟ್ಟಲಾಗುತ್ತಿದೆ. ಜಾಲಹಳ್ಳಿಯಲ್ಲಿ ಭೂಸ್ವಾದೀನ ಮಾಡಿಕೊಂಡ ವಾಯುಪಡೆ ಸ್ಥಳಕ್ಕೆ ಪರಿಹಾರವಾಗಿ ವಾಯುನೆಲೆಗಾಗಿ ತಡೆಗೋಡೆ ನಿರ್ಮಾಣವಾಗುತ್ತಿದೆ. ಗೊಲ್ಲಹಳ್ಳಿಯಲ್ಲಿ ಸಿವಿಲ್‌ ಕಾಮಗಾರಿಗೆ ಅಗತ್ಯವಿರುವ ಯಾರ್ಡ್‌ ನಿರ್ಮಿಸಲಾಗಿದ್ದು, ಎತ್ತರಿಸಿದ ಮಾರ್ಗಕ್ಕೆ ಅಗತ್ಯವಾದ ಯು-ಗರ್ಡರ್‌ಗಳ ತಯಾರಿಕೆ ನಡೆದಿದೆ. ಯೋಜನೆಗಾಗಿ 2098 ಮರ ಕಡಿಯುವ ಹಾಗೂ 178 ಮರಗಳ ಕಸಿಗೆ ಅನುಮತಿ ಸಿಕ್ಕಿದ್ದು, ಕಟಾವು ಮಾಡಿಕೊಳ್ಳುತ್ತಿರುವುದಾಗಿ ಕೆ-ರೈಡ್ ತಿಳಿಸಿದೆ.

ಬಾಕ್ಸ್‌...

ಒತ್ತುವರಿ ವಿಳಂಬಕ್ಕೆ ಕಾರಣ

ನೈಋತ್ಯ ರೈಲ್ವೆ ವಿಭಾಗದಿಂದ ಭೂಮಿ ಹಸ್ತಾಂತರವಾದ ಬಳಿಕ ಕೆ-ರೈಡ್‌ಗೆ ಒತ್ತುವರಿ ತೆರವು ನಿವಾರಣೆಯೇ ದೊಡ್ಡ ತಲೆನೋವಾಗಿತ್ತು. ಉಪನಗರ ರೈಲ್ವೆ ಹಳಿ, ನಿಲ್ದಾಣ ನಿರ್ಮಾಣ ಆಗಬೇಕಾದ ಸ್ಥಳದಲ್ಲಿ ಒತ್ತುವರಿ ಆಗಿತ್ತು. ಇದರ ತೆರವಿಗೆ ಸಮಯ ವ್ಯರ್ಥವಾಗಿದೆ. ಜೊತೆಗೆ ಮರಗಳ ತೆರವಿಗೆ ಅನುಮತಿ, ವಾಯುನೆಲೆ ಜೊತೆ ಒಪ್ಪಂದ ಪ್ರಕ್ರಿಯೆ ಸೇರಿ ಕಾಮಗಾರಿ ಮಂದಗತಿಯಾಗಿದೆ.

ಬಾಕ್ಸ್‌...

ಕಾಮಗಾರಿ ಚುರುಕಾಗಲಿ

ತಿಂಗಳಿಗೆ ಕನಿಷ್ಠ ಶೇ.4-5 ರಷ್ಟು ಕಾಮಗಾರಿ ಪೂರ್ಣಗೊಳಿಸುತ್ತ ಸಾಗುವ ಅಗತ್ಯವಿದೆ. ಮಧ್ಯಂತರ ಡೆಡ್‌ಲೈನ್‌ ನಿಗದಿಸಿಕೊಂಡು ಕೆಲಸ ನಿರ್ವಹಣೆ ಮಾಡಬೇಕು. ಜೊತೆಗೆ ಈಗಲೇ ಟ್ಯಾಕ್‌ ಸಿಗ್ನಲಿಂಗ್‌, ರೋಲಿಂಗ್‌ ಸ್ಟಾಕ್‌ ಟೆಂಡರ್‌ ಕರೆಯಬೇಕು. ಇಲ್ಲದಿದ್ದರೆ ಈ ಪ್ರಕ್ರಿಯೆಯಿಂದಲೂ ಮತ್ತಷ್ಟು ವಿಳಂಬ ಆಗಬಹುದು ಎಂದು ರೈಲ್ವೆ ಹೋರಾಟಗಾರ ರಾಜ್‌ಕುಮಾರ್‌ ದುಗರ್‌ ಒತ್ತಾಯಿಸಿದ್ದಾರೆ.

ಕಳೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆ-ರೈಡ್‌, ಗುತ್ತಿಗಾ ಸಂಸ್ಥೆ ಎಲ್‌ ಆ್ಯಂಡ್‌ ಟಿ ಕೂಡ ವಿಳಂಬದ ಬಗ್ಗೆ ಚರ್ಚಿಸಿದ್ದು, ಈವರೆಗೆ ಒತ್ತುವರಿ ತೆರವು ಸೇರಿ ಇತರೆಲ್ಲ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿಕೊಳ್ಳಲಾಗಿದೆ. ದೀಪಾವಳಿ ಬಳಿಕ ಕಾಮಗಾರಿ ಚುರುಕುಗೊಳಿಸಲಾಗುವುದು ಎಂದು ಕೆ-ರೈಡ್‌ ತಿಳಿಸಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

---

ಅಂಕಿ ಅಂಶಗಳು

ಮಲ್ಲಿಗೆ ಕಾರಿಡಾರ್‌ ಉದ್ದ: 24.866 ಕಿ.ಮೀ.

ಯೋಜನಾ ವೆಚ್ಚ: ₹859 ಕೋಟಿ

ಎತ್ತರಿಸಿದ ಮಾರ್ಗ: 7.223 ಕಿ.ಮೀ.

ನೆಲಹಂತದ ಮಾರ್ಗ: 17.143 ಕಿ.ಮೀ.

ಡಿಪೋ: ಜಾಲಹಳ್ಳಿ ಡಿಪೋ

ಎತ್ತರಿಸಿದ ನಿಲ್ದಾಣ: 6

ನೆಲಹಂತದ ನಿಲ್ದಾಣಗಳು: 8

--

ಫೋಟೋ

ಹೆಬ್ಬಾಳದ ಬಳಿ ತಲೆ ಎತ್ತುತ್ತಿರುವ ಉಪನಗರ ರೈಲ್ವೆಯ ಮಲ್ಲಿಗೆ ಕಾರಿಡಾರ್‌ನ ಮೊದಲ ಪಿಲ್ಲರ್‌.

click me!