
ಬೆಂಗಳೂರು(ಜ.11): ಕೋವಿಡ್ ನಿಯಮ ಉಲ್ಲಂಘಿಸಿರುವವರು ಎಷ್ಟೇ ದೊಡ್ಡ ನಾಯಕರಿರಲಿ, ಜನ ಸಾಮಾನ್ಯರಿರಲಿ ಯಾವುದೇ ಭೇದ ಭಾವವಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಇದು ಪಾದಯಾತ್ರೆ ವೇಳೆ ನಿಯಮ ಉಲ್ಲಂಘಿಸಿದವರಿಗೂ ಅನ್ವಯಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀಕ್ಷ$್ಣವಾಗಿ ಹೇಳಿದ್ದಾರೆ.
ಸೋಮವಾರ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಾದಯಾತ್ರೆ ಸಂಘಟಕರು ಹಾಗೂ ಕಾನೂನು ಉಲ್ಲಂಘನೆ ಮಾಡಿರುವವರ ಮೇಲೆ ಕಾನೂನಿನ ಕ್ರಮ ಜರುಗಿಸಲಾಗುವುದು. ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವವರ ಆರೋಗ್ಯದ ಚಿಂತೆ ಸರ್ಕಾರಕ್ಕಿದೆ. ಸುಧೀರ್ಘವಾಗಿ ನಡೆದು ಬಂದವರ ಆರೋಗ್ಯ ತಪಾಸಣೆ, ಆರೋಗ್ಯ ಇಲಾಖೆಯ ಕರ್ತವ್ಯ. ಇದಕ್ಕೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವವರು ಸಹಕರಿಸಬೇಕು ಎಂದು ಹೇಳಿದರು.
ಸ್ವಾಬ್‌ಟೆಸ್ಟ್ ವೇಳೆ ಅಧಿಕಾರಿಗಳ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ. ಆದರೆ, ಅವರ ಆರೋಗ್ಯದ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ಅವರೊಬ್ಬರಿಗೆ ಅಲ್ಲ ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಬೇಕು. ಇದು ಆರೋಗ್ಯ ಇಲಾಖೆ ಕರ್ತವ್ಯ. ಇದನ್ನು ಅರ್ಥ ಮಾಡಿಕೊಳ್ಳದೇ ಬಾಯಿಗೆ ಬಂದ ಹಾಗೇ ಮಾತನಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕಾನೂನು ಪಾಲನೆ ಮಾಡದವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ವಿಫಲವಾಗಿಲ್ಲ. ಯಾರು ಕಾನೂನು ಉಲ್ಲಂಘನೆ ಮಾಡುತ್ತಾರೋ, ಅವರ ಮೇಲೆ ಪ್ರಕರಣ ದಾಖಲಾಗುತ್ತದೆ. ಪಾದಯಾತ್ರೆ ಮಾಡುವವರ ಮೇಲೂ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
ಕೋರ್ಟಲ್ಲಿ ಉತ್ತರಿಸಲಿ- ಗೃಹ ಸಚಿವ:
ಕೊರೋನಾ ಸೋಂಕು ನಿಯಂತ್ರಣ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ರಾಮನಗರ ಜಿಲ್ಲಾಡಳಿತ ಕಾನೂನು ರೀತ್ಯ ಕ್ರಮ ತೆಗೆದುಕೊಂಡಿದೆ. ತಮ್ಮ ಮೇಲೆ ದಾಖಲಾಗಿರುವ ಎಫ್‌ಐಆರ್ ಬಗ್ಗೆ ಕಾಂಗ್ರೆಸ್ ನಾಯಕರು ನ್ಯಾಯಾಲದಲ್ಲಿ ಉತ್ತರ ನೀಡಲಿ ಎಂದು ರಾಜ್ಯ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕಿನ ನಡುವೆಯೂ ಪಾದಯಾತ್ರೆ ಮೂಲಕ ಜನರ ಬದುಕಿನ ಜತೆ ಕಾಂಗ್ರೆಸ್ ನಾಯಕರು ಚೆಲ್ಲಾಟವಾಡುತ್ತಿದ್ದಾರೆ. ಕಾನೂನು ಉಲ್ಲಂಘಿಸಿದವರ ವಿರುದ್ಧ ರಾಮನಗರ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುತ್ತಿದೆ. ನೀರಿನ ಮೇಲೆ ರಾಜಕೀಯ ಮಾಡುವುದು ಕಾಂಗ್ರೆಸ್ಸಿಗರ ದುರುದ್ದೇಶವಾಗಿದೆ. ನಮ್ಮ ಆತಂಕವಿರುವುದು ಸಾರ್ವಜನಿಕರ ಆರೋಗ್ಯ ಕಾಪಾಡಿಕೊಳ್ಳುವುದಾಗಿದೆ. ಕೊರೋನಾ ಸೋಂಕು ಉಲ್ಬಣಗೊಂಡು ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಮುಂದಿನ ಪರಿಸ್ಥಿತಿಗೆ ಕಾಂಗ್ರೆಸ್ ನಾಯಕರು ಹೊಣೆ ಹೊರಬೇಕಾದಿತು ಎಂದು ಸಚಿವರು ಎಚ್ಚರಿಕೆ ನೀಡಿದರು.
ಪಶ್ಚಾತ್ತಾಪದ ಯಾತ್ರೆ- ಅಶ್ವತ್ಥ:
ಸಾಮಾನ್ಯ ಜನರು ಸಂಕಷ್ಟಅನುಭವಿಸಿದರೂ ಪರವಾಗಿಲ್ಲ, ತಮಗೆ ಪ್ರಚಾರ ಸಿಕ್ಕಿದರೆ ಸಾಕು ಎನ್ನುವ ದುರುದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಕೆದಾಟು ಯೋಜನೆಯ ಹೆಸರು ಹೇಳಿಕೊಂಡು ಪಾದಯಾತ್ರೆಯ ನಾಟಕವಾಡುತ್ತಿದ್ದಾರೆ. ಇದು ಪಶ್ಚಾತ್ತಾಪದ ಯಾತ್ರೆಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಕಿಡಿಕಾರಿದ್ದಾರೆ.
ಶಿವಕುಮಾರ್ ಅವರು ಸದನದಲ್ಲಿ ಒಂದು ಬಾರಿಯೂ ಮೇಕೆದಾಟು ಯೋಜನೆಯ ಬಗ್ಗೆ ಮಾತನಾಡಿಲ್ಲ. ಹಿಂದಿನ ಸರ್ಕಾರದಲ್ಲಿ ತ್ರಿಮೂರ್ತಿಗಳಾಗಿದ್ದ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಎಂ.ಬಿ.ಪಾಟೀಲ್ ಅವರ ಅಸಲಿ ಬಣ್ಣ ಎಲ್ಲರಿಗೂ ಗೊತ್ತಿದೆ. ಈಗ ಕೆಪಿಸಿಸಿ ಆಧ್ಯಕ್ಷರ ಬಯಲಾಟವನ್ನು ನೋಡುವ ಸ್ಥಿತಿಗೆ ಕಾಂಗ್ರೆಸ್ ಬಂದಿರುವುದು ನಗೆಪಾಟಲಿನ ವಿಷಯ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ