Covid Threat: ಅರ್ಧ ರಾಜ್ಯದಲ್ಲಿ ಕೊರೋನಾ ಗಂಭೀರ ಸ್ಥಿತಿ!

By Kannadaprabha NewsFirst Published Jan 11, 2022, 4:23 AM IST
Highlights

* ಬೆಂಗಳೂರು ಮಾತ್ರವಲ್ಲ, ಮಂಡ್ಯ ಸೇರಿ ಹಲವು ಜಿಲ್ಲೆಗಳಲ್ಲಿ ಕೊರೋನಾ ಅಬ್ಬರ

* ನಿಯಂತ್ರಣ ಮೀರಿದ ಸೋಂಕು

*  11 ಜಿಲ್ಲೆಗಳಲ್ಲಿ ಶೇ.5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ

* ಇನ್ನೂ 4 ಜಿಲ್ಲೆಯಲ್ಲಿ ಶೇ.5ರ ಹತ್ತಿರ

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು(ಜ.11): ರಾಜಧಾನಿ ಬೆಂಗಳೂರು ಮಾತ್ರವಲ್ಲ, ಹೆಚ್ಚು ಕಡಿಮೆ ಅರ್ಧ ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣ ಮಟ್ಟಮೀರಿದೆ!

ಸಾಂಕ್ರಾಮಿಕ ತಜ್ಞರ ಪ್ರಕಾರ, ಒಂದು ಪ್ರದೇಶದ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇರಬೇಕು. ಆದರೆ, ಕಳೆದ ಮೂರು ದಿನಗಳಿಂದ 11 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.5ಕ್ಕಿಂತ ಅಧಿಕ ದಾಖಲಾಗುತ್ತಿದ್ದು, ನಾಲ್ಕು ಜಿಲ್ಲೆಗಳಲ್ಲಿ ಶೇ.5ರ ಆಸುಪಾಸಿಗೆ ಹೆಚ್ಚಿದೆ. ಮಂಡ್ಯ ಜಿಲ್ಲೆಯಲ್ಲಿ ಬೆಂಗಳೂರಿಗಿಂತಲೂ ಅಧಿಕ ಶೇ.12.5ರಷ್ಟುಪಾಸಿಟಿವಿಟಿ ದರವಿದೆ.

"

ಸೋಂಕು ಪರೀಕ್ಷೆಗಳ ಪಾಸಿಟಿವಿ ದರ ಎಂದರೆ, ನಿಗದಿತ ಪ್ರದೇಶವೊಂದರಲ್ಲಿ ನೂರು ಮಂದಿಗೆ ಸೋಂಕು ಪರೀಕ್ಷೆ ಮಾಡಿದಾಗ ಇಂತಿಷ್ಟುಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂಬುದಾಗಿದೆ. ಈ ದರದ ಮೂಲಕವೇ ಆ ಪ್ರದೇಶದ ಸೋಂಕಿನ ತೀವ್ರತೆಯನ್ನು ಅಳೆಯಲಾಗುತ್ತದೆ. ಕೊರೋನಾ ನಿರ್ಬಂಧ ವಿಧಿಸಲು ಕೂಡಾ ಇದೇ ಮಾನದಂಡವನ್ನು ರಾಜ್ಯ ಸರ್ಕಾರ ಪಾಲಿಸುತ್ತದೆ.

ಎರಡನೇ ಅಲೆಯಲ್ಲಿ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆಯಾದ ಜಿಲ್ಲೆಗಳನ್ನು ಮಾತ್ರ ಅನ್‌ಲಾಕ್‌ ಮಾಡುತ್ತಾ ಬರಲಾಗಿತ್ತು. ಎರಡನೇ ಅಲೆ ಬಳಿಕ ಬರೋಬ್ಬರಿ ಐದು ತಿಂಗಳಿಂದ (ಆಗಸ್ಟ್‌ 15) ಶೇ.1ಕ್ಕಿಂತ ಕಡಿಮೆ ಇದ್ದ ಪಾಸಿಟಿವಿಟಿ ದರವು ಹೊಸ ವರ್ಷದಿಂದೀಚೆಗೆ ಏರಿಕೆಯಾಗುತ್ತಾ ಸಾಗಿ ಸೋಮವಾರ ರಾಜ್ಯದಲ್ಲಿ ಶೇ.7ಕ್ಕೆ, ಬೆಂಗಳೂರಿನಲ್ಲಿ ಶೇ.10ಕ್ಕೆ ಹೆಚ್ಚಳವಾಗಿದೆ. ಪ್ರತಿ ಮೂರು ದಿನಕ್ಕೆ ಪಾಸಿಟಿವಿಟಿ ದರ ದುಪ್ಪಟ್ಟಾಗುತ್ತಿದೆ.

ಹಲವು ಜಿಲ್ಲೆಗಳಲ್ಲಿ ಬೆಂಗಳೂರಿನಷ್ಟೇ ತೀವ್ರತೆ:

ಕೊರೋನಾ ಸೋಂಕು ಪ್ರಕರಣಗಳು ಬೆಂಗಳೂರಿನಲ್ಲಿ ಹೆಚ್ಚಿದ್ದು, ಅದಕ್ಕಿಂತಲೂ ಅಧಿಕ ಅಥವಾ ಹೆಚ್ಚುಕಮ್ಮಿ ಅಷ್ಟೇ ಪಾಸಿಟಿವಿಟಿ ದರವನ್ನು ಮಂಡ್ಯ, ಕೊಡಗು, ಬೆಳಗಾವಿ ಹೊಂದಿವೆ. ಸದ್ಯ ರಾಜ್ಯದಲ್ಲಿ ನಡೆಯುವ ಒಟ್ಟಾರೆ ಪರೀಕ್ಷೆಯಲ್ಲಿ ಶೇ.50ರಷ್ಟುಬೆಂಗಳೂರಿನಲ್ಲಿ ನಡೆಯುತ್ತಿವೆ. ಮಂಡ್ಯ, ಕೊಡಗು, ಬೆಳಗಾವಿಯಲ್ಲಿ ಸರಾಸರಿ ನಾಲ್ಕೈದು ಸಾವಿರ ಪರೀಕ್ಷೆಗಳು ನಡೆಯುತ್ತಿವೆ. ಒಂದು ವೇಳೆ ಪಾಸಿಟಿವಿಟಿ ದರ ಹೆಚ್ಚಿರವ ಜಿಲ್ಲೆಗಳಲ್ಲಿಯೂ ಬೆಂಗಳೂರಿನಷ್ಟುಪರೀಕ್ಷೆಗಳು ನಡೆದರೆ ಆ ಜಿಲ್ಲೆಗಳಲ್ಲಿಯೂ ಹೊಸ ಪ್ರಕರಣಗಳ ಸ್ಫೋಟವೇ ಆಗುವ ಸಾಧ್ಯತೆಗಳಿವೆ.

ಅಸಡ್ಡೆ ಮಾತು ಬೇಡ:

ರಾಜ್ಯದಲ್ಲಿ ಕೊರೋನಾ ಪರೀಕ್ಷೆ ಹೆಚ್ಚು ನಡೆಯುತ್ತಿದ್ದು, ಸೋಂಕು ಪ್ರಕರಣಗಳು ಹೆಚ್ಚಾಗಿವೆ ಎಂದು ಅನೇಕರು ವಾದ ಮಾಡುತ್ತಾರೆ. ಆದರೆ, ಪಾಸಿಟಿವಿಟಿ ದರ ಕೂಡಾ ದುಪ್ಪಟ್ಟಾಗಿದ್ದು, ಇದು ಸೋಂಕಿನ ತೀವ್ರತೆಗೆ ಹಿಡಿದ ಕೈಗನ್ನಡಿ. ಕಳೆದ ವಾರವೂ ಸರಾಸರಿ 1.4 ಲಕ್ಷ ಪರೀಕ್ಷೆಗಳು ನಡೆಯುತ್ತಿದ್ದು, ಈ ವಾರ 1.7 ಲಕ್ಷಕ್ಕೆ (30 ಸಾವಿರ) ಹೆಚ್ಚಳವಾಗಿವೆ. ಆದರೆ, ಸೋಂಕಿತರ ಸಂಖ್ಯೆ ಮಾತ್ರ 10 ಪಟ್ಟು ಹೆಚ್ಚಳವಾಗಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಒಮಿಕ್ರೋನ್‌ ಸೋಂಕು 8 ಪಟ್ಟು ಹೆಚ್ಚಳ

ಡಿ.1ರಿಂದ 31ವರೆಗೂ ರಾಜ್ಯದಲ್ಲಿ 66 ಇದ್ದ ಒಮಿಕ್ರೋನ್‌ ಸೋಂಕು ಪ್ರಕರಣಗಳು ಜ.10ಕ್ಕೆ 479ಕ್ಕೆ ಹೆಚ್ಚಳವಾಗಿವೆ. ಕೇವಲ 10 ದಿನಗಳಲ್ಲಿಯೇ 413 ಮಂದಿಯಲ್ಲಿ ರೂಪಾಂತರಿ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಮಿಕ್ರೋನ್‌ ಎಂಟು ಪಟ್ಟು ಹೆಚ್ಚಳವಾಗಿದೆ. ಇನ್ನು ಒಟ್ಟಾರೆ ಸೋಂಕಿನಲ್ಲಿ ಒಮಿಕ್ರೋನ್‌ ಹೆಚ್ಚಳವೇ ಸೋಂಕಿನ ಸ್ಫೋಟಕ್ಕೆ ಕಾರಣ ಎನ್ನುತ್ತಾರೆ ಆರೋಗ್ಯ ತಜ್ಞರು.

5%ಗಿಂತ ಹೆಚ್ಚು ಪಾಸಿಟಿವಿಟಿ ಜಿಲ್ಲೆಗಳು

ಮಂಡ್ಯ (12.5%), (ಬೆಂಗಳೂರು 10%), ಕೊಡಗು (8.3%), ಬೆಳಗಾವಿ (8.3%), ಬೆಂಗಳೂರು ಗ್ರಾಮಾಂತರ (8.1%), ರಾಮನಗರ (7%), ಶಿವಮೊಗ್ಗ (7%), ಮೈಸೂರು (6%), ಹಾಸನ (6%), ಉಡುಪಿ (5%), ಧಾರವಾಡ (5%).

5% ಗಡಿಯಲ್ಲಿರುವ ಜಿಲ್ಲೆಗಳು

ಕೋಲಾರ, ಚಾಮರಾಜನಗರ, ಕಲಬುರಗಿ, ತುಮಕೂರು, ಬಳ್ಳಾರಿ

ಪಾಸಿಟಿವಿಟಿ 1%ಗಿಂತ ಕಡಿಮೆ ಇರುವ ಜಿಲ್ಲೆಗಳು

ರಾಯಚೂರು, ಬಾಗಲಕೋಟೆ, ಯಾದಗಿರಿ, ಹಾವೇರಿ

click me!