
ಬೆಂಗಳೂರು(ಜ.11): ಸಹಕಾರ ಸಚಿವರ ಪುತ್ರನಿಗೆ ಬ್ಲಾಕ್‌ಮೇಲ್ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಸಚಿವರು ಹಾಗೂ ಅವರ ಆಪ್ತ ಸಹಾಯಕರಿಗೆ ದುಬೈನಿಂದ ಆರೋಪಿ ರಾಹುಲ್ ಭಟ್ ಆಶ್ಲೀಲ ವಿಡಿಯೋ ಕಳುಹಿಸಿ ಬೆದರಿಕೆ ಹಾಕಿದ್ದ ಎಂಬ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಹೊಸ ವರ್ಷಾಚರಣೆ ಸಲುವಾಗಿ ದುಬೈಗೆ ತೆರಳಿದ್ದ ರಾಹುಲ್ ಭಟ್, ಡಿ.25ರಂದು ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಅವರ ಆಪ್ತ ಸಹಾಯಕರಿಗೆ ಸಚಿವರ ಪುತ್ರ ನಿಶಾಂತ್ ಅವರದ್ದು ಎನ್ನಲಾದ ಆಶ್ಲೀಲ ವಿಡಿಯೋವನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ನಂತರ ವಿದೇಶ ಪ್ರವಾಸ ಮುಗಿಸಿ ನಗರಕ್ಕೆ ಬಂದಿಳಿದ ಕೂಡಲೇ ಆತನನ್ನು ಬಂಧಿಸಲಾಯಿತು ಎಂದು ಸಿಸಿಬಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಸಿಸಿಬಿ ತನಿಖೆ ಮಾಹಿತಿ ಪಡೆದಿದ್ದ ರಾಹುಲ್:
ಬ್ಲ್ಯಾಕ್‌ಮೇಲ್ ಸಂಬಂಧ ನಿಶಾಂತ್ ನೀಡಿದ ದೂರಿನ ಮೇರೆಗೆ ತನಿಖೆ ಶುರು ಮಾಡಿದ ಸಿಸಿಬಿ ಅಧಿಕಾರಿಗಳು, ಸಚಿವರು ಹಾಗೂ ಅವರ ಆಪ್ತ ಸಹಾಯಕರಿಗೆ ಬಂದಿದ್ದ ವಾಟ್ಸ್‌ಆ್ಯಪ್ ನಂಬರ್ ಅನ್ನು ಪರಿಶೀಲಿಸಿದಾಗ ಶಾಸಕರ ಪುತ್ರಿ ಹೆಸರು ಬಂದಿದೆ. ಬಳಿಕ ಆಕೆಯ ಕುರಿತು ತನಿಖೆ ನಡೆಸಿದಾಗ ರಾಕೇಶ್ ಬಗ್ಗೆ ಸುಳಿವು ಸಿಕ್ಕಿತು. ತಕ್ಷಣವೇ ವಿಜಯಪುರದಲ್ಲಿದ್ದ ಆತನನ್ನು ನಗರಕ್ಕೆ ಕರೆಸಿ ಪ್ರಶ್ನಿಸಿದಾಗ, ‘ನಾನು ನನ್ನ ಸ್ನೇಹಿತೆಯಿಂದ (ಶಾಸಕರ ಪುತ್ರಿ) ಸಿಮ್ ಪಡೆದು ಖ್ಯಾತ ಜ್ಯೋತಿಷಿ ಪುತ್ರ ರಾಹುಲ್ ಭಟ್‌ಗೆ ಕೊಟ್ಟಿದ್ದೆ. ಆತನೇ ಆ ಸಿಮ್ ಬಳಸುತ್ತಿದ್ದ. ಇದರಲ್ಲಿ ನಾನಾಗಲಿ ಅಥವಾ ನನ್ನ ಗೆಳತಿಯಾಗಲಿ ಪಾತ್ರ ವಹಿಸಿಲ್ಲ. ನಮಗೆ ರಾಹುಲ್ ಕೃತ್ಯದ ಬಗ್ಗೆ ಏನೂ ಗೊತ್ತಿಲ್ಲ’ ಎಂದು ರಾಕೇಶ್ ಹೇಳಿದ್ದಾಗಿ ತಿಳಿದು ಬಂದಿದೆ.
ಸಿಸಿಬಿ ಬಲೆಗೆ ರಾಕೇಶ್ ಸಿಕ್ಕಿರುವ ಬಗ್ಗೆ ರಾಹುಲ್‌ಗೆ ಮಾಹಿತಿ ಗೊತ್ತಾಯಿತು. ಇದರಿಂದ ಎಚ್ಚೆತ್ತ ಆತ, ತನ್ನ ಮೊಬೈಲ್‌ನಲ್ಲಿದ್ದ ವಿಡಿಯೋಗಳನ್ನು ಡಿಲೀಟ್ ಮಾಡಿದ್ದ. ವಿಮಾನ ನಿಲ್ದಾಣದಲ್ಲೇ ಆತನನ್ನು ವಶಕ್ಕೆ ಪಡೆಯಲಾಯಿತು. ನಮ್ಮ ನಿಗಾದಲ್ಲೇ ರಾಕೇಶ್ ಸಹ ಇದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಹುಲ್ ಭಟ್‌ನ ಮೂರು ಮೊಬೈಲ್ ಜಪ್ತಿ
ಬ್ಲ್ಯಾಕ್‌ಮೇಲ್ ಪ್ರಕರಣ ಸಂಬಂಧ ರಾಹುಲ್‌ನನ್ನು ಬಂಧಿಸಿದ ಬಳಿಕ ಆತನ ಮೂರು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಕೆಲವು ವಿಡಿಯೋಗಳು ಡಿಲೀಟ್ ಆಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್‌ಗಳನ್ನು ಕಳುಹಿಸಲಾಗಿದೆ. ಅವುಗಳಲ್ಲಿ ನಾಶವಾಗಿರುವ ಎಲ್ಲ ಮಾಹಿತಿಯನ್ನು ರಿಟ್ರೀವ್ ಮಾಡಿ ಪಡೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಕೆ ಕ್ಯಾಂಪಸ್ ಗೆಳೆಯರು
ವಿದೇಶದಲ್ಲಿ ವ್ಯಾಸಂಗ ಮಾಡುವ ವೇಳೆ ಜ್ಯೋತಿಷಿ ಪುತ್ರ ರಾಹುಲ್ ಭಟ್, ಉದ್ಯಮಿ ಮಗ ರಾಕೇಶ್ ಹಾಗೂ ಶಾಸಕರ ಪುತ್ರಿ ಒಂದೇ ಕ್ಯಾಂಪಸ್‌ನಲ್ಲಿದ್ದರು. ರಾಕೇಶ್‌ಗೆ ನಿಶಾಂತ್ ಪರಿಚಯವಿತ್ತು. ಆದರೆ ಯಾವ ಕಾರಣಕ್ಕೆ ರಾಹುಲ್ ಈ ಕೃತ್ಯ ಎಸಗಿದ್ದಾನೆ ಎಂಬುದು ಖಚಿತವಾಗಿಲ್ಲ. ವಿಚಾರಣೆ ವೇಳೆ ಕೂಡಾ ಸರಿಯಾಗಿ ಆತ ಮಾಹಿತಿ ನೀಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ