ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿರುವ ಕಿಡಿಗೇಡಿಗಳು ಎಷ್ಟೇ ಪ್ರಬಲರಾಗಿದ್ದರೂ, ಅವರ ಹಿಂದೆ ಎಷ್ಟೇ ದೊಡ್ಡ ರಾಜಕೀಯ ಒತ್ತಾಸೆ ಇದ್ದರೂ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು (ಸೆ.06): ಜಾತಿ ಅಸಮಾನತೆ ಹಾಗೂ ಧರ್ಮ ಸಂಘರ್ಷವನ್ನು ಯಾರು ವಿರೋಧಿಸುತ್ತಾರೋ ಅವರೆಲ್ಲರಿಗೂ ಬೆದರಿಕೆ ಪತ್ರಗಳನ್ನು ಬರೆಯುತ್ತಿದ್ದಾರೆ. ಹೀಗೆ ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿರುವ ಕಿಡಿಗೇಡಿಗಳು ಎಷ್ಟೇ ಪ್ರಬಲರಾಗಿದ್ದರೂ, ಅವರ ಹಿಂದೆ ಎಷ್ಟೇ ದೊಡ್ಡ ರಾಜಕೀಯ ಒತ್ತಾಸೆ ಇದ್ದರೂ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಗಳವಾರ ನಗರದ ಟೌನ್‌ಹಾಲ್‌ನಲ್ಲಿ ಗೌರಿ ಸ್ಮಾರಕ ಟ್ರಸ್ಟ್ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ‘ಸರ್ವಾಧಿಕಾರದ ಕಾಲದಲ್ಲಿ ಭಾರತವನ್ನು ಮರುಕಟ್ಟುವ ಕಲ್ಪನೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾತ್ಮಗಾಂಧಿ, ಗೌರಿ ಲಂಕೇಶ್ ಮಾತ್ರವಲ್ಲ. ಯಾರಾರಯರು ಬಸವಾದಿ ಶರಣರು, ಅಂಬೇಡ್ಕರ್, ಬುದ್ಧರ ವಿಚಾರ ಧಾರೆಗಳನ್ನು ಆಚರಿಸುತ್ತಾ ಜಾತಿ ಅಸಮಾನತೆ ಹಾಗೂ ಧರ್ಮ ಸಂಘರ್ಷವನ್ನು ವಿರೋಧಿಸುವವರನ್ನು ಬೆದರಿಸುವ ಪ್ರಯತ್ನವನ್ನು ಸರ್ಕಾರ ಸಹಿಸುವುದಿಲ್ಲ ಎಂದರು. ಮಹಾತ್ಮಗಾಂಧಿ ಅವರನ್ನು ಕೊಂದ ಮನಸ್ಥಿತಿ ಇರುವವರೇ ಪ್ರಗತಿಪರ ಚಿಂತಕರಾದ ಗೌರಿ ಲಂಕೇಶ್, ನರೇಂದ್ರ ದಾಭೋಲ್ಕರ, ಗೋವಿಂದ ಪಾನ್ಸರೆ, ಡಾ. ಎಂ.ಎಂ.ಕಲ್ಬುರ್ಗಿ ಅವರನ್ನು ಕೊಂದಿದ್ದಾರೆ ಎಂದು ಅವರು ಹೇಳಿದರು.
ಪ್ರಾಣಿ ದಾಳಿ ತಡೆಯಲು ಅರಣ್ಯ ಒತ್ತುವರಿ ತೆರವು: ಸಿಎಂ ಸಿದ್ದು ಸೂಚನೆ
ಗೌರಿ ಲಂಕೇಶ್ ಪತ್ರಕರ್ತೆ ಅನ್ನುವುದಕ್ಕಿಂತ ಹೋರಾಟಗಾರ್ತಿ. ಕೋಮುಸೌಹಾರ್ದತೆ, ಕೊಡಗಿನ ಆದಿವಾಸಿಗಳು, ನಕ್ಸಲಿಯರು ಸಮಾಜದ ಮುಖ್ಯವಾಹಿನಿಗೆ ತರುವುದು, ರೈತರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ದನಿಯಾಗಿ ಕೆಲಸ ಮಾಡುತ್ತಿದ್ದರು. ಎಲ್ಲಿ ಅನ್ಯಾಯವಾದರೂ ಪ್ರತಿಭಟಿಸುತ್ತಾ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದರು. ಅವರು ಕೋಮುವಾದಿಗಳಿಂದ ಹತ್ಯೆಯಾಗಿ ನಮ್ಮನ್ನು ಅಗಲಿದ್ದಾರೆ. ಆದರೆ, ಅವರ ಆದಮ್ಯ ಚೇತನ ನಮ್ಮೊಂದಿಗಿದೆ. ಸಮಾಜದಲ್ಲಿ ಅನ್ಯಾಯಕ್ಕೊಳಗಾದವರ ಪರವಾಗಿ ಹೋರಾಟ ಮಾಡಲು ಗೌರಿ ಬದುಕಿರಬೇಕಿದತ್ತು ಎಂದು ಹೇಳಿದರು.
ಗೌರಿಯನ್ನು ಕೊಂದ ಆರೋಪಿಗಳಿಗೆ ಶಿಕ್ಷೆ ಆದಾಗ ಮಾತ್ರ ಗೌರಿ ಆತ್ಮಕ್ಕೆ ಶಾಂತಿ ಸಿಗುತ್ತದೆ. ಪೊಲೀಸ್ ಅಧಿಕಾರಿಗಳ ಜತೆ ಈ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದೇನೆ. ಸಾವಿರಕ್ಕೂ ಅಧಿಕ ಪುಟಗಳ ಆರೋಪ ಪಟ್ಟಿಸಲ್ಲಿಕೆಯಾಗಿ, 500 ಕ್ಕೂ ಹೆಚ್ವು ಸಾಕ್ಷಿಗಳನ್ನು ಪಟ್ಟಿಮಾಡಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಕೂಡ ವೇಗವಾಗಿ ನಡೆಯುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಹೀಗಾಗಿ ತನಿಖಾ ತಂಡದ ವೃತ್ತಿಪರತೆ ಮತ್ತು ಶ್ರಮ ವ್ಯರ್ಥ ಆಗುವುದಿಲ್ಲ. ಆರೋಪಿಗಳಿಗೆ ಖಂಡಿತಾ ಶಿಕ್ಷೆ ಆಗುತ್ತದೆ ಎನ್ನುವ ಭರವಸೆ ನನಗಿದೆ ಎಂದು ತಿಳಿಸಿದರು.
ಹಿರಿಯ ಚಿತ್ರ ನಟ ಪ್ರಕಾಶ್ ರಾಜ್ ಮಾತನಾಡಿ, ದೇಹಕ್ಕೆ ಗಾಯ ಆದರೆ ಮೌನವಾಗಿದ್ದರೂ ವಾಸಿ ಆಗುತ್ತದೆ. ದೇಶಕ್ಕೆ ಗಾಯ ಆದಾಗ ಮೌನವಾಗಿದ್ದರೆ ಅದು ಜಾಸ್ತಿಯಾಗುತ್ತದೆ. ಆದ್ದರಿಂದ ನಾವು ಧ್ವನಿ ಎತ್ತಬೇಕು. ಗೌರಿಯನ್ನು ನಾವು ಹೂತಿಲ್ಲ, ಬಿತ್ತಿದ್ದೇವೆ. ಒಂದು ಧ್ವನಿಯನ್ನು ಅಡಗಿಸಿದರೆ ಸಾವಿರಾರು ಧ್ವನಿಗಳು ಏಳುತ್ತವೆ ಎಂದರು. ಕಾರ್ಯಕ್ರಮದಲ್ಲಿ ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆತಲ್ವಾಡ್, ರಾಜಕೀಯ ಕಾರ್ಯಕರ್ತೆ ಏಂಜೆಲಾ ರಂಗದ್, ಕೇರಳದ ಮಾಜಿ ಸಚಿವೆ ಶೈಲಜಾ ಟೀಚರ್, ಎಐಸಿಸಿ ವಕ್ತಾರೆ ಹಾಗೂ ಪತ್ರಕರ್ತೆ ಸುಪ್ರಿಯಾ ಶ್ರೀನೇತ್, ಮುಸ್ಲಿಂ ಒಕ್ಕೂಟದ ಮುಖಂಡರಾದ ಯಾಸಿನ್ ಮಲ್ಪೆ ಉಪಸ್ಥಿತರಿದ್ದರು.
ಎಸ್ಸೆಸ್ಸೆಲ್ಸಿ, ಪಿಯುಗೆ ಇನ್ಮುಂದೆ 3 ಪರೀಕ್ಷೆ: ಪರೀಕ್ಷಾ ವ್ಯವಸ್ಥೆ ಭಾರೀ ಬದಲಾವಣೆ
ಭಾರತೀಯರು ಹಿಂದುಗಳು: ರೈತ ನಾಯಕ ರಾಕೇಶ್ ಟಿಕಾಯತ್ ಮಾತನಾಡಿ, ಕೇಂದ್ರ ಸರ್ಕಾರ ಪರೋಕ್ಷವಾಗಿ ನಾಗಪುರದ ಹಿಡಿತದಲ್ಲಿದೆ. ಅವರು ಏನು ನಿರ್ದೇಶನ ಕೊಡುತ್ತಾರೋ ಅಂತೆಯೇ ಕೇಂದ್ರ ಕೆಲಸ ಮಾಡುವುದು ಸರಿಯಲ್ಲ. ನಾವು ಕೂಡ ಹಿಂದುಗಳೇ, ಭಾರತೀಯ ಹಿಂದುಗಳು. ಆದರೆ, ಸಂಘಪರಿವಾರದವರು ಇದನ್ನು ಬೇರೆ, ಬೇರೆ ರೀತಿಯಲ್ಲೇ ವ್ಯಾಖ್ಯಾನ ಮಾಡುತ್ತಾರೆ ಎಂದ ಅವರು, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ಇಡೀ ದೇಶಕ್ಕೆ ದೊಡ್ಡ ಸಂದೇಶ ನೀಡಿದ್ದು ಅದು ಮುಂದುವರೆಯಬೇಕು. ಮಣಿಪುರದ ಗಲಭೆಗೆ ಗಣಿ ಲಾಭಿ ನಡೆಯುತ್ತಿರುವುದೇ ಕಾರಣ. ಅಲ್ಲಿನ ಆದಿವಾಸಿಗಳನ್ನು ತೆರವುಗೊಳಿಸಲು ಕುತಂತ್ರ ಮಾಡಲಾಗುತ್ತಿದೆ ಎಂದು ಹೇಳಿದರು.