
ಬೆಂಗಳೂರು (ಜು.29): ರಾಜ್ಯದಲ್ಲಿ ನಡೆಯುತ್ತಿರುವ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಅವಧಿಯನ್ನು ಒಂದರಿಂದ ಮೂರು ತಿಂಗಳವರೆಗೆ ವಿಸ್ತರಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.
ಎಸ್‌ಐಆರ್ ನಡೆಸಲು ಉದ್ದೇಶಿಸಿರುವ ಕಾಲಮಿತಿಯನ್ನು ವಿಸ್ತರಿಸುವಂತೆ ಕೋರಿ ಸಾಹಿತಿ ದೇವನೂರು ಮಹಾದೇವ, ಇತಿಹಾಸ ತಜ್ಞ ರಾಮಚಂದ್ರ ಗುಹಾ, ನಿವೃತ್ತ ಮೇಜರ್ ಜನರಲ್ ಎಸ್ ಜಿ ವಂಬಟ್ಕೆರೆ, ಲೇಖಕಿ ಸಬೀಹಾ ಭೂಮಿಗೌಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ಪೀಠ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಎಸ್‌ಐಆರ್ ಪೂರ್ಣಗೊಳಿಸಲು ನಿಗದಿಪಡಿಸಿರುವ ಕಾಲಮಿತಿಯ ವಿಚಾರ ಆಯೋಗದ ವಿಶೇಷ ವ್ಯಾಪ್ತಿಗೆ ಒಳಪಟ್ಟಿದೆ, ಈ ವಿಚಾರವನ್ನು ಈ ನ್ಯಾಯಾಲಯ ನಿರ್ಧರಿಸಲಾಗದು ಎಂದು ಪೀಠ ಸ್ಪಷ್ಟಪಡಿಸಿತು.
ಅರ್ಜಿಯಲ್ಲಿ ಎಸ್‌ಐಆರ್ ನಡೆಸಲು ಆಯೋಗ ಅಳವಡಿಸಿಕೊಂಡಿರುವ ಪ್ರಕ್ರಿಯೆಯಲ್ಲಿ ಎದುರಾಗುವ ಸಮಸ್ಯೆಯನ್ನು ನಿವಾರಿಸಲು ಬದ್ಧವಾಗಿಲ್ಲ ಎಂದು ಹೇಳಲು ಯಾವುದೇ ಕಾರಣವಿಲ್ಲ.
ಅರ್ಜಿಯಲ್ಲಿ ಎತ್ತಿರುವ ಎಸ್‌ಐಆರ್ ಸಂಬಂಧಿತ ವಿಚಾರಗಳು ಸುಪ್ರೀಂ ಕೋರ್ಟ್ ಪರಿಗಣನೆಯಲ್ಲಿವೆ. ಹೀಗಾಗಿ, ಈ ಹಂತದಲ್ಲಿ ಹಾಲಿ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸುವುದು ಸರಿಯಲ್ಲ. ಈ ಹಂತದಲ್ಲಿ ಅರ್ಜಿಯನ್ನು ಅವಧಿ ಪೂರ್ವಗಾಗಿ ಸಲ್ಲಿಕೆ ಮಾಡಿರುವುದರಿಂದ ಅದನ್ನು ವಿಚಾರಣೆಗೆ ಪರಿಗಣಿಸಲಾಗದು ಎಂದು ತಿಳಿಸಿದ ನ್ಯಾಯಾಲಯವು ಪಿಐಎಲ್ ಇತ್ಯರ್ಥಪಡಿಸಿದೆ.
ಅಲ್ಲದೇ, ಮತದಾರರ ದೃಷ್ಟಿಯನ್ನು ಕೇಂದ್ರೀಕರಿಸಿ ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿ ಮನವಿ ಸಲ್ಲಿಸಿದೆ. ಇದಕ್ಕೆ ಆಯೋಗವು ಸೂಕ್ತ ಗಮನ ನೀಡುವುದಿಲ್ಲ ಎಂದು ಭಾವಿಸಲು ಯಾವುದೇ ಆಧಾರವಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.
ಇದಕ್ಕೂ ಮುನ್ನ, ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ಅವರು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಬಿಎಲ್‌ಒಗಳಿಗೆ ಹತ್ತು ದಿನ ಮಾತ್ರ ತರಬೇತಿ ನೀಡಲಾಗಿದೆ. ಅಂಗನವಾಡಿ ಕೆಲಸಗಾರರು, ಶಿಕ್ಷಕರನ್ನು ಈ ಕೆಲಸಕ್ಕೆ ನಿಯೋಜಿಸಲಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರಿಗೆ ಆಗಸ್ಟ್ 5ರಿಂದ ಸೆಪ್ಟೆಂಬರ್ ೪4ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನಂತರ ಒಂದು ತಿಂಗಳಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಸುಮಾರು 70 ಲಕ್ಷ ಮಂದಿ ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ಮತದಾನದ ಹಕ್ಕಿನಿಂದ ವಂಚಿತವಾಗಲಿದ್ದಾರೆ ಎನ್ನಲಾಗಿದೆ. ಎಸ್‌ಐಆರ್ ನಗರ ಕೇಂದ್ರಿತ ಜನ ಮಾತ್ರವಲ್ಲ, ಗ್ರಾಮೀಣ, ಅನಕ್ಷರಸ್ಥರೂ ಸೇರಿದ್ದಾರೆ. ಹೀಗಾಗಿ, ಸೂಕ್ತ ಕಾಲಾವಕಾಶ ನೀಡಲು ನಿರ್ದೇಶಿಸಬೇಕು ಎಂದು ಕೋರಿದರು.
ಕೇಂದ್ರ ಚುನಾವಣಾ ಆಯೋಗ ಪರ ವಕೀಲರರು, ಅರ್ಜಿದಾರರು ಕರಡು ಪಟ್ಟಿ ಪ್ರಕಟವಾಗುವುದರೊಳಗೆ ಎಲ್ಲವನ್ನು ಮಾಡಬೇಕು ಎನ್ನುತ್ತಿದ್ದಾರೆ. ಒಂದೊಮ್ಮೆ ಅಗತ್ಯ ಎನಿಸಿದರೆ ಆಯೋಗವು ಕಾಲಮಿತಿಯನ್ನು ವಿಸ್ತರಿಸಲಿದೆ. ಕಾಲಮಿತಿ ನಿಗದಿಪಡಿಸಿರುವುದಕ್ಕೆ ಸಂಬಂಧಿಸಿದಂತೆ ಇಸಿಐ ಎಚ್ಚರಿಕೆ ವಹಿಸಿದ್ದು, ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳಿಸಲು ಸಮಸ್ಯೆಯಾದರೆ ಆಯೋಗವು ಅಗತ್ಯ ಕ್ರಮಕೈಗೊಳ್ಳಲಿದೆ. ಕರಡು ಮತಪಟ್ಟಿ ಬಿಡುಗಡೆ ಮಾಡುವುದಕ್ಕೂ ಮುನ್ನ ಹೆಸರು ಇಲ್ಲದವರಿಗೆ ನೋಟಿಸ್ ಜಾರಿಗೊಳಿಸಬೇಕು ಎಂಬುದು ಸರಿಯಲ್ಲ. ಕರಡು ಪರಿಷ್ಕತ ಮತಪಟ್ಟಿ ಬಿಡುಗಡೆಯಾದ ಬಳಿಕ ನೋಟಿಸ್ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಸರ್ಕಾರದ ಪರ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಸಚಿವ ಸಂಪುಟ ಕೆಲವು ಸಲಹೆ, ಶಿಫಾರಸ್ಸುಗಳನ್ನು ಆಯೋಗಕ್ಕೆ ಮಾಡಿದೆ. ಇದುವರೆಗೆ ಆಯೋಗ ಪ್ರತಿಕ್ರಿಯೆ ನೀಡಿಲ್ಲ. ಜನರ ಮೂಲಭೂತ ಹಕ್ಕು ರಕ್ಷಿಸಬೇಕು ಎಂದು ಕೋರಲಾಗಿದೆ. ಕಾಲಮಿತಿಯ ಅನುಗುಣವಾಗಿ ಹೋಗದೆ ಜನರ ಅನುಕೂಲಕ್ಕೆ ತಕ್ಕಂತೆ ಕ್ರಮಕೈಗೊಳ್ಳುವಂತೆ ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ