ಸರ್ಕಾರಿ ಆಸ್ಪತ್ರೆಗಳಲ್ಲೂ ಕೀಮೋಥೆರಪಿ ಸೌಲಭ್ಯ ಪರಿಚಯಿಸಲು ಕ್ರಮ: ಸಚಿವ ದಿನೇಶ್‌ ಗುಂಡೂರಾವ್‌

Published : May 18, 2025, 05:33 PM IST
ಸರ್ಕಾರಿ ಆಸ್ಪತ್ರೆಗಳಲ್ಲೂ ಕೀಮೋಥೆರಪಿ ಸೌಲಭ್ಯ ಪರಿಚಯಿಸಲು ಕ್ರಮ: ಸಚಿವ ದಿನೇಶ್‌ ಗುಂಡೂರಾವ್‌

ಸಾರಾಂಶ

ಸರ್ಕಾರಿ ಆಸ್ಪತ್ರೆಗಳಲ್ಲೂ ಕೀಮೋಥೆರಪಿ ಸೌಲಭ್ಯವನ್ನು ಪರಿಚಯಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿದ್ದು, ಮುಖ್ಯಮಂತ್ರಿಗಳು ಮೈಸೂರಿನಲ್ಲಿ ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಘೋಷಿಸಿದರು. 

ಬೆಂಗಳೂರು (ಮೇ.18): ಸರ್ಕಾರಿ ಆಸ್ಪತ್ರೆಗಳಲ್ಲೂ ಕೀಮೋಥೆರಪಿ ಸೌಲಭ್ಯವನ್ನು ಪರಿಚಯಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿದ್ದು, ಮುಖ್ಯಮಂತ್ರಿಗಳು ಮೈಸೂರಿನಲ್ಲಿ ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಘೋಷಿಸಿದರು. ಸ್ಪರ್ಶ್‌ ಆಸ್ಪತ್ರೆ ಸಮೂಹ ಸಂಸ್ಥೆಯು ಬೆಂಗಳೂರಿನ ಹೆಣ್ಣೂರು ರಸ್ತೆಯಲ್ಲಿ ಭಾನುವಾರ ನೂತನವಾಗಿ ಆರಂಭಿಸಿದ ವಿಶೇಷ ಚಿಕಿತ್ಸಾ ಸೌಲಭ್ಯಗಳನ್ನೊಳಗೊಂಡ 'ಸ್ಪರ್ಶ್‌ ಆಸ್ಪತ್ರೆ' ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು, ಬಡರೋಗಿಗಳು ಕಿಮೋಥೆರಪಿ ಮಾಡಿಸಲು ಸಾವಿರಾರು ರೂಪಾಯಿ ವ್ಯಯಿಸುತ್ತಿದ್ದಾರೆ, ಸರ್ಕಾರಿ ಆಸ್ಪತ್ರೆಯಲ್ಲೂ ಈ ಸೌಲಭ್ಯ ಒದಗಿಸಿದರೆ ಸಾಕಷ್ಟು ಜನರಿಗೆ ಸಹಕಾರಿಯಾಗಿದೆ, ಈ ನಿಟ್ಟಿನಲ್ಲಿ ಕಿಮೋಥೆರಪಿಯನ್ನೂ ಸಹ ಸರ್ಕಾರಿ ಆಸ್ಪತ್ರೆಗಳಲ್ಲಿ ಒದಗಿಸಲು ಮುಂದಾಗಿದ್ದು, ಶೀಘ್ರವೇ ಈ ಸೇವೆಗೆ ಚಾಲನೆ ಸಿಗಲಿದೆ ಎಂದರು. 

ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳ ರೀತಿಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳನ್ನಾಗಿ ಮಾಡುವುದು ಕಷ್ಟಸಾಧ್ಯ, ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲೂ ಆಧುನಿಕ ತಂತ್ರಜ್ಞಾನಗಳೊಂದಿಗೆ ಸುಧಾರಿತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಕೈಗೊಂಡಿದ್ದೇವೆ,  ಸಾಕಷ್ಟು ಸೌಲಭ್ಯಗಳನ್ನು ರೋಗಿಗಳ ಸೇವೆಗೆ ಲಭ್ಯವಿದೆ ಎಂದು ತಿಳಿಸಿದರು. ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್‌ ಮಾತನಾಡಿ, ನಮ್ಮ ರಾಜ್ಯದಲ್ಲಿ ಬಡ ಮಕ್ಕಳೂ ಸಹ ವೈದ್ಯರಾಗಬೇಕು ಎಂಬ ಕನಸನ್ನು ನನಸು ಮಾಡಲು, ಸರ್ಕಾರಿ ಕೋಟಾದಡಿ ಲಭ್ಯವಿರುವ ವೈದ್ಯಕೀಯ ಸೀಟುಗಳ ಸಂಖ್ಯೆ ಹೆಚ್ಚಿಸಿದ್ದೇವೆ. ಇತರೆ ರಾಜ್ಯಗಳಿ ಹೋಲಿಸಿದರೆ ನಮ್ಮಲ್ಲಿಯೇ ಹೆಚ್ಚು ಸರ್ಕಾರಿ ಕೋಟಾ ವೈದ್ಯಕೀಯ ಸೀಟು ಮೀಸಲಿಡಲಾಗಿದೆ ಎಂದರು. 

ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಿಸಲ್ಲ: ಸಚಿವ ಶರಣ್‌ ಪ್ರಕಾಶ್ ಪಾಟೀಲ್‌

ಹೆಣ್ಣೂರಿನಲ್ಲಿ 300 ಹಾಸಿಗೆಯುಳ್ಳ  ಸ್ಪರ್ಶ್‌ ಆಸ್ಪತ್ರೆ ಶಾಖೆ ಉದ್ಘಾಟನೆ: ಸ್ಪರ್ಶ್‌ ಆಸ್ಪತ್ರೆ ಸಮೂಹವು ಬೆಂಗಳೂರಿನ ಹೆಣ್ಣೂರು ರಸ್ತೆಯಲ್ಲಿ ನೂತನವಾಗಿ ವಿಶೇಷ ಚಿಕಿತ್ಸಾ ಸೌಲಭ್ಯಗಳನ್ನೊಳಗೊಂಡ ಬಹು ವಿಭಾಗೀಯ ರೋಗಿ ಕೇಂದ್ರಿತ ಚಿಕಿತ್ಸೆ, ಅತ್ಯುತ್ತಮ ಗುಣಮಟ್ಟದ ಮತ್ತು ಎಲ್ಲರಿಗೂ ಲಭ್ಯವಾಗುವಂತಿರುವ 300 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರಯನ್ನು ಭಾನುವಾರ ಚಾಲನೆ ನೀಡಲಾಗಿದೆ.  ಸಮಗ್ರ ಚಿಕಿತ್ಸಾ ಸೇವೆಗಳನ್ನೊಳಗೊಂಡ ಹೆಣ್ಣೂರು ರಸ್ತೆ ಸ್ಪರ್ಶ್‌ ಆಸ್ಪತ್ರೆಯು ಮೂಳೆ, ನರ ವಿಜ್ಞಾನ, ಹೃದ್ರೋಗ ವಿಭಾಗ, ಕ್ಯಾನ್ಸರ್‌ ಚಿಕಿತ್ಸೆಗಳೂ ಸೇರಿದಂತೆ ಅಂಗಾಂಗ ಕಸಿ ವಿಭಾಗಗಳನ್ನೊಳಗೊಂಡಿದ್ದು ಮಹಿಳೆಯರು ಮತ್ತು ಮಕ್ಕಳ ಪ್ರತ್ಯೇಕ ಕೇಂದ್ರವನ್ನೊಳಗೊಂಡಿದೆ.

ಸ್ಪರ್ಶ್‌ ಆಸ್ಪತ್ರೆ ಸಮೂಹದ ಅಧ್ಯಕ್ಷ ಡಾ.ಶರಣ್‌ ಶಿವರಾಜ್‌ ಪಾಟೀಲ್‌ ಮಾತನಾಡಿ“ ಈ ನೂತನ ಆಸ್ಪತ್ರೆ ಉದ್ಘಾಟನೆಯೊಂದಿಗೆ ನಾವು ನಿಖರವಾದ, ಸಹಾನುಭೂತಿಯ ಹಾಗೂ ಎಲ್ಲ ವರ್ಗಗಳ ಕೈಗೆಟಕುವಂತೆ ಸೇವೆ ನೀಡುವ ನಮ್ಮ ಧ್ಯೇಯವನ್ನು ಮುಂದುವರಿಸುತ್ತಿದ್ದೇವೆ. ರೋಬೊಟಿಕ್ ನೆರವಿನ ಶಸ್ತ್ರಚಿಕಿತ್ಸೆಗಳು, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ರೋಗನಿರ್ಣಯಗಳು ಹಾಗೂ 3 ಡಿ ಮುದ್ರಣ ತಂತ್ರಜ್ಞಾನವೂ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಈ ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದು ನಮ್ಮ ಸಮುದಾಯಗಳಿಗೆ ಸುಧಾರಿತ ಚಿಕಿತ್ಸಾ ಆಯ್ಕೆಗಳನ್ನು ಹೆಚ್ಚು ಹೆಚ್ಚಾಗಿ ನೀಡುವ ಗುರಿ ಹೊಂದಿದ್ದೇವೆ." ಎಂದರು. 

ಭವಿಷ್ಯದ ಮುನ್ನೋಟದೊಂದಿಗೆ ವಿನ್ಯಾಸಗೊಳಿಸಲಾದ ಸ್ಪರ್ಶ್‌ ಹೆಣ್ಣೂರು ಆಸ್ಪತ್ರೆಯು ಬಹು ವಿಭಾಗೀಯ ಮತ್ತು ವಿಶೇಷ ಚಿಕಿತ್ಸಾ ವಿಭಾಗಗಳು, ಮೂಳೆ, ನರವಿಜ್ಞಾನ, ಹೃದ್ರೋಗ ವಿಭಾಗ, ಅಂಗಾಂಗ ಕಸಿ, ಕ್ಯಾನ್ಸರ್‌ ಚಿಕಿತ್ಸೆ ಸೇರಿದಂತೆ ಮಹಿಳೆಯರು ಮತ್ತು ಮಕ್ಕಳ ಪ್ರತ್ಯೇಕ ವಿಭಾಗಗಳನ್ನು ಹೊಂದಿದೆ. ನವಯುಗದ ತಂತ್ರಜ್ಞಾನಗಳ ಆವಿಷ್ಕಾರಗಳನ್ನೂ ಅಳವಡಿಸಿಕೊಂಡಿರುವ ಸ್ಪರ್ಶ್‌ ಹೆಣ್ಣೂರು ಆಸ್ಪತ್ರೆಯಲ್ಲಿ ಅಂಕಿ ಅಂಶ ಚಾಲಿತ ಸೇವಾ ಸೌಕರ್ಯಗಳು, ನೈಜ ಅವಧಿಯ ಚಿಕಿತ್ಸಾ ವಿಶ್ಲೇಷಣೆಗಳು, ರೊಬೋಟಿಕ್‌ ಸಹಾಯದೊಂದಿಗೆ ಶಸ್ತ್ರಚಿಕಿತ್ಸೆಗಳು, ಕೃತಕ ಬುದ್ಧಿಮತ್ತೆ ಚಾಲಿತ ರೋಗ ನಿರ್ಣಯಗಳು ಹಾಗೂ ವೈಯಕ್ತಿಕ ಔಷಧೋಪಚಾರಗಳೊಂದಿಗೆ ರೋಗಿಗಳ ಆರೈಕೆಯ ನಿಟ್ಟಿನಲ್ಲಿ ಶ್ರೇಷ್ಟ ಗುಣಮಟ್ಟವನ್ನು ಒದಗಿಸಲಿದೆ. ವೈದ್ಯಕೀಯ ಶಿಕ್ಷಣ ಮತ್ತು  ಕ್ಲಿನಿಕಲ್‌ ಸಂಶೋಧನೆಗೂ ಈ ಆಸ್ಪತ್ರೆಯು ಅನುವು ಮಾಡಲಿದೆ.

ವೈದ್ಯಕೀಯ ವಿಚಾರದಲ್ಲಿ ಅತ್ಯುನ್ನತ ಮಟ್ಟದ ಚಿಕಿತ್ಸೆ ಜೊತೆಗೆ ಸುಮಾರು 2,500 ಮಂದಿಗೆ ನೇರ ಉದ್ಯೋಗಾವಕಾಶವನ್ನೂ ಈ ಬೃಹತ್‌ ಆಸ್ಪತ್ರೆಯು ಒದಗಿಸುತ್ತಿದ್ದು ಈ ಭಾಗದ ಆರ್ಥಿಕ ಅಭಿವೃದ್ಧಿಗೂ ಕೊಡುಗೆ ನೀಡಲಿದೆ ಎಂದು ಡಾ.ಪಾಟೀಲ್‌ ತಿಳಿಸಿದರು.  ಸ್ಪರ್ಶ್‌ ಆಸ್ಪತ್ರೆ ಸಮಮೂಹದ ವಿಸ್ತರಣಾ ಯೋಜನೆಯಲ್ಲಿ ಹೆಣ್ಣೂರು ಆಸ್ಪತ್ರೆ ಉದ್ಘಾಟನೆಯು ಮಹತ್ವದ ಮೈಲಿಗಲ್ಲಾಗಿದ್ದು ಈ ವರ್ಷಾಂತ್ಯದೊಳಗೆ 9 ಆಸ್ಪತ್ರೆಗಳಲ್ಲಿ 1,700 ಹಾಸಿಗೆ ಸಾಮರ್ಥ್ಯದ ಗುರಿ ಹೊಂದಲಾಗಿದೆ. ವಿಸ್ತರಣೆಯು ಹೆಣ್ಣೂರು ಸೌಲಭ್ಯದ ಮೇಲೆ ಗಣನೀಯ ಪ್ರಮಾಣದ ಹೂಡಿಕೆಯನ್ನೂ ಒಳಗೊಂಡಿದೆ. 

ಆಸ್ಪತ್ರೆಯು ಈ ಭಾಗದ ಜನರ ಆರೋಗ್ಯದ ಅಗತ್ಯತೆಗಳನ್ನು ಪೂರೈಸುವುದರೊಂದಿಗೆ ಆಸ್ಪತ್ರೆಯ ವಿನ್ಯಾಸವು ಕೂಡ ರೋಗಿಗಳಿಗೆ ಆಹ್ಲಾದಕರವಾದ ಅನುಭವವನ್ನು ನೀಡುವಂತೆ ನಿರ್ಮಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನವು ಮಾನವೀಯ ಸ್ಪರ್ಶವನ್ನು ಮಿಳಿತಗೊಳಿಸುವಂತೆ ಸ್ಪರ್ಶ್‌ ಹೆಣ್ಣೂರು ವಿಭಾಗವು ತಲೆ ಎತ್ತಿದ್ದು ಸ್ಪರ್ಶ್‌ ಸೇವಾ ಬದ್ಧತೆಗೆ ಸಾಕ್ಷಿಯಾಗಿದೆ.  ಹೆಣ್ಣೂರು ರಸ್ತೆಯಲ್ಲಿ ಸ್ಪರ್ಶ್‌ ಆಸ್ಪತ್ರೆ ಕಾರ್ಯಾರಂಭದೊಂದಿಗೆ ಸ್ಪರ್ಶ್‌ ಸಮೂಹವು ಸ್ಥಳೀಯವಾಗಿ ಆರೋಗ್ಯ ಸೇವೆಯಲ್ಲಿ ಜಾಗತಿಕ ಗುಣಮಟ್ಟದ ಮಾನದಂಡಗಳೊಂದಿಗೆ ಕ್ರಾಂತಿಕಾರಕ ಬದಲಾವಣೆ ಮಾಡುವ ಸ್ಪರ್ಶ್‌ ಆಸ್ಪತ್ರೆ ಸಮೂಹದ ಬದ್ಧತೆಯನ್ನು ಪುನರುಚ್ಛರಿಸುತ್ತದೆ ಎಂದು ಡಾ.ಶರಣ್‌ ಶಿವರಾಜ್‌ ಪಾಟೀಲ್‌ ವಿವರಿಸಿದರು. 

ಟ್ರಂಪ್‌ ಹೆಸರು ಹೇಳುವುದಕ್ಕೆ ಪ್ರಧಾನಿ ಮೋದಿಗೆ ಭಯ: ಸಚಿವ ದಿನೇಶ್‌ ಗುಂಡೂರಾವ್‌

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀಗಳಾದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿಯವರ ದಿವ್ಯಸಾನಿಧ್ಯ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ವಿ.ಪಾಟೀಲ್‌, ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ,ಬಿ.ಎ.ಬಸವರಾಜ ಭಾಗವಹಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!
ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!