
ಬೆಂಗಳೂರು : ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಅಕ್ರಮವಾಗಿ ಸಮಾಧಿ ಮಾಡಲಾಗಿದೆ ಎನ್ನಲಾದ ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಸಂಬಂಧ ಮುಂದಿನ ತನಿಖಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿ ಅ.30ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ಬುಧವಾರ ತೆರವುಗೊಳಿಸಿದೆ. ಇದರೊಂದಿಗೆ ಬುರುಡೆ ಗ್ಯಾಂಗ್‌ಗೆ ಭಾರೀ ಹಿನ್ನಡೆ ಆಗಿದೆ.
ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ (ಸಂಖ್ಯೆ- 39/2025) ಮತ್ತು ಪ್ರಕರಣದ ವಿಚಾರಣೆಗೆ ಹಾಜರಾಗಲು ಸೂಚಿಸಿ ತಮಗೆ ನೀಡಿರುವ ನೋಟಿಸ್ ರದ್ದುಪಡಿಸಬೇಕು ಎಂದು ಕೋರಿ ಸೌಜನ್ಯ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್, ಮಹೇಶ್ ತಿಮರೋಡಿ, ವಿಠ್ಠಲಗೌಡ ಮತ್ತು ಟಿ.ಜಯಂತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅ.30ರಂದು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಎಫ್‌ಐಆರ್‌ಗೆ ಸಂಬಂಧಿಸಿದ ಮುಂದಿನ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿತ್ತು. ಅರ್ಜಿಯು ಬುಧವಾರ ಮತ್ತೆ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ತಡೆಯಾಜ್ಞೆ ತೆರವುಗೊಳಿಸದಿದ್ದರೆ ತನಿಖೆಗೆ ಅಡ್ಡಿಯಾಗುತ್ತದೆ. ಆದ್ದರಿಂದ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರು ಕೋರಿದರು.
ಮನವಿಗೆ ಒಪ್ಪಿ ತಡೆಯಾಜ್ಞೆ ತೆರವುಗೊಳಿಸಿದ ಪೀಠ, ಆರೋಪಿಗಳಿಗೆ ಕಿರುಕುಳ ನೀಡದಂತೆ ಸೂಚಿಸಿದ್ದ ಮಧ್ಯಂತರ ರಕ್ಷಣಾ ಆದೇಶ ವಿಸ್ತರಿಸಿತು.
ಇದಕ್ಕೂ ಮುನ್ನ ಎಸ್‌ಐಟಿ ತನಿಖಾಧಿಕಾರಿಗಳ ಪರ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಹಾಜರಾಗಿ, ತಮ್ಮ ವಿಚಾರಣೆ ನಡೆಸಲು ಎಸ್‌ಐಟಿ ಅಧಿಕಾರಿಗಳು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಅನುಮತಿ ಪಡೆದಿಲ್ಲ ಎಂದು ತಿಳಿಸಿ ಅರ್ಜಿದಾರರು ಎಫ್‌ಐಆರ್‌ಗೆ ತಡೆಯಾಜ್ಞೆ ಪಡೆದುಕೊಂಡಿದ್ದಾರೆ. ಆದರೆ, ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲು ಹಾಗೂ ನೋಟಿಸ್ ನೀಡಲು ಮ್ಯಾಜಿಸ್ಟ್ರೇಟ್ ಅನುಮತಿ ಪಡೆಯಲಾಗಿದೆ ಎಂದು ತಿಳಿಸಿ, ಅನುಮತಿ ಪ್ರತಿಯನ್ನು ಕೋರ್ಟ್‌ಗೆ ಸಲ್ಲಿಸಿದರು.
ಈ ಮೊದಲು ಎಸ್‌ಐಟಿ ತನಿಖೆಯನ್ನು ಅರ್ಜಿದಾರರು ಶ್ಲಾಘಿಸಿದ್ದರು. ನಂತರದ ದಿನಗಳಲ್ಲಿ ಪ್ರಕರಣದ ಕುರಿತು ವಿಚಾರಣೆಗೆ ಹಾಜರಾಗಲು ಸೂಚಿಸಿ ಅವರಿಗೇ ನೋಟಿಸ್ ನೀಡುತ್ತಿದ್ದಂತೆ ಕೋರ್ಟ್‌ಗೆ ಬಂದು ಎಸ್‌ಐಟಿ ಅಧಿಕಾರಿಗಳು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಆಗ ಅರ್ಜಿದಾರರನ್ನು ಸಾಕ್ಷಿಗಳಾಗಿ ವಿವರಣೆ ಕೇಳಲು ನೋಟಿಸ್ ನೀಡಲಾಗಿತ್ತು. ಈಗ ಅವರನ್ನು ಆರೋಪಿಗಳನ್ನಾಗಿಸಲಾಗಿದ್ದು, ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಎಸ್ಐಟಿ ತನಿಖೆಯನ್ನು ಶ್ಲಾಘಿಸಿರುವಾಗ, ಅರ್ಜಿದಾರರಿಗೆ ಹಿಂಸೆ ನೀಡುವ ಪ್ರಶ್ನೆ ಎದುರಾಗುವುದಿಲ್ಲ ಎಂದರು.
- ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿದ್ದ ಪ್ರಕರಣ
- ತನಿಖೆ ಆರಂಭಿಸಿ ಬುರುಡೆ ಗ್ಯಾಂಗ್‌ಗೆ ನೋಟಿಸ್ ನೀಡಿದ್ದ ಎಸ್‌ಐಟಿ
- ಎಫ್‌ಐಆರ್, ನೋಟಿಸ್ ರದ್ದತಿ ಕೋರಿದ್ದ ಬುರುಡೆ ಗ್ಯಾಂಗ್ ಸದಸ್ಯರು
- ಈ ಸಂಬಂಧ ತಿಮರೋಡಿ, ಮಟ್ಟಣ್ಣವರ್ ಸೇರಿ ನಾಲ್ವರಿಂದ ಅರ್ಜಿ
- ಅ.30ರಂದು ಪ್ರಕರಣದ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ
- ಇದೀಗ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು ಮಾಡಿದ ಕೋರ್ಟ್
- ಆದರೆ ಬುರುಡೆ ಟೀಂಗೆ ಕಿರುಕುಳ ನೀಡದಂತೆ ಪೀಠದ ಸೂಚನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ