ರಾಜ್ಯಾದ್ಯಂತ ಇಂದು ಕಾಂಗ್ರೆಸ್‌, ಬಿಜೆಪಿ ‘ಉಚಿತ ಅಕ್ಕಿ ಹೋರಾಟ’

By Kannadaprabha News  |  First Published Jun 20, 2023, 5:42 AM IST

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಅನ್ನಭಾಗ್ಯ’ಕ್ಕೆ ಕೇಂದ್ರ ಸರ್ಕಾರ ಅಕ್ಕಿ ನೀಡದೇ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಜೂ.20ರಂದು ರಾಜ್ಯಾದ್ಯಂತ ಬೃಹತ್‌ ಪ್ರತಿಭಟನೆ ನಡೆಸಿ ಜನಜಾಗೃತಿ ಮೂಡಿಸಲು ಕಾಂಗ್ರೆಸ್‌ ಮುಂದಾಗಿದೆ.


ಬೆಂಗಳೂರು (ಜೂ.20) ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಅನ್ನಭಾಗ್ಯ’ಕ್ಕೆ ಕೇಂದ್ರ ಸರ್ಕಾರ ಅಕ್ಕಿ ನೀಡದೇ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಜೂ.20ರಂದು ರಾಜ್ಯಾದ್ಯಂತ ಬೃಹತ್‌ ಪ್ರತಿಭಟನೆ ನಡೆಸಿ ಜನಜಾಗೃತಿ ಮೂಡಿಸಲು ಕಾಂಗ್ರೆಸ್‌ ಮುಂದಾಗಿದೆ.

ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಜನಪ್ರತಿನಿಧಿಗಳು, ಸಾವಿರಾರು ಮುಖಂಡರು, ಕಾರ್ಯಕರ್ತರು ಪಾಲ್ಗೊಂಡು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ‘ಬಿಸಿ’ ಮುಟ್ಟಿಸಲು ಸಜ್ಜಾಗಿದ್ದಾರೆ. ಮತ್ತೊಂದೆಡೆ, ಆಯಾ ಜಿಲ್ಲಾ ಕೇಂದ್ರಗಳಲ್ಲೂ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಜಿಲ್ಲಾ ಮಟ್ಟದ ಹೋರಾಟದ ಹೊಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರಿಗೆ ನೀಡಲಾಗಿದೆ.

Tap to resize

Latest Videos

ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ್ದ ಗ್ಯಾರೆಂಟಿ(Congress guarantee)ಗಳ ಪೈಕಿ ಬಿಪಿಎಲ್‌ ಕುಟುಂಬ(BPL Family)ದ ಪ್ರತಿ ವ್ಯಕ್ತಿಗೂ 10 ಕೆ.ಜಿ. ಅಕ್ಕಿ(Free rice scheme) ಉಚಿತವಾಗಿ ನೀಡುವ ‘ಅನ್ನಭಾಗ್ಯ’ಕ್ಕೆ ಕೇಂದ್ರ ಆಹಾರ ನಿಗಮವು ಮೊದಲು ಅಕ್ಕಿ ನೀಡುವುದಾಗಿ ಹೇಳಿತ್ತು. ಆದರೆ ರಾಜಕೀಯ ಒತ್ತಡದಿಂದಾಗಿ ಬಳಿಕ ಅಕ್ಕಿ ನೀಡುವುದಿಲ್ಲ ಎಂದು ಯೂಟರ್ನ್‌ ಹೊಡೆದಿದ್ದು ಇದರಲ್ಲಿ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಪ್ರತಿಭಟನೆ ನಡೆಸಲಿದೆ.

ಸಂದೇಶ ರವಾನೆ:

‘ಹಣ ನೀಡುತ್ತೇವೆ ಎಂದರೂ ಕೇಂದ್ರ ಸರ್ಕಾರ ಅಕ್ಕಿ ನೀಡದೆ ದ್ವೇಷದ ರಾಜಕಾರಣ ಮಾಡುತ್ತಿದ್ದು, ಬಿಜೆಪಿಯ ಷಡ್ಯಂತ್ರವನ್ನು ನಾಡಿನ ಜನತೆಗೆ ತಿಳಿಸುವ ಅಗತ್ಯವಿದೆ. ತೆಲಂಗಾಣ, ಆಂಧ್ರಪ್ರದೇಶಗಳ ಜೊತೆ ಚರ್ಚಿಸಿದರೂ ಅಲ್ಲಿ ಅಗತ್ಯ ದಾಸ್ತಾನಿಲ್ಲ. ಛತ್ತೀಸ್‌ಗಢವು ಅಕ್ಕಿ ನೀಡಲು ಸಿದ್ಧವಿದ್ದು ಸಾಗಣೆ ವೆಚ್ಚ ಅಧಿಕ ಆಗುವುದರಿಂದ ಆರ್ಥಿಕವಾಗಿ ಹೊರೆಯಾಗುತ್ತದೆ. ಏನೇ ಆದರೂ ಉಚಿತವಾಗಿ ಅಕ್ಕಿ ನೀಡುವುದರಿಂದ ಹಿಂದೆ ಸರಿಯುವುದಿಲ್ಲ’ ಎಂಬ ಸಂದೇಶ ರವಾನಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

ಕೇಂದ್ರ ಸರ್ಕಾರ ಅಕ್ಕಿ ನೀಡದೆ ರಾಜಕೀಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ರಾಜ್ಯ ಕಾಂಗ್ರೆಸ್‌ ನಾಯಕರು ಬಿಜೆಪಿ ವಿರುದ್ಧ ಕೆಲ ದಿನಗಳಿಂದ ವಾಗ್ದಾಳಿ ನಡೆಸಿದ್ದರು. ಇದು ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿತ್ತು. ಜು.1ರಿಂದ ಅಕ್ಕಿ ನೀಡದಿದ್ದರೆ ಜನತೆ ಸುಮ್ಮನಿರುವುದಿಲ್ಲ ಎಂದು ಬಿಜೆಪಿ ಮುಖಂಡರು ಹೇಳಿಕೆ ನೀಡುತ್ತಿದ್ದಾರೆ. ಪ್ರತಿಭಟನೆ ನಡೆಸಿದರೆ ಈ ಸನ್ನಿವೇಶ ಬಿಜೆಪಿಗೆ ‘ತಿರುಗುಬಾಣ’ವಾಗಿ ಇರಿಸುಮುರಿಸು ಉಂಟಾಗಲಿದೆ ಎಂದು ಕಾಂಗ್ರೆಸ್‌ ಲೆಕ್ಕಾಚಾರ ಹಾಕಿದೆ.

ಕೇಂದ್ರ ಸರ್ಕಾರವೇನೂ ಭತ್ತ ಬೆಳೆಯಲು ಜಮೀನು ಇಟ್ಟುಕೊಂಡಿಲ್ಲ. ಅವರೂ ರಾಜ್ಯಗಳಿಂದ ಅಕ್ಕಿಯನ್ನು ಪಡೆದಿದ್ದಾರೆ. ಹೀಗಾಗಿ ಪದೇ ಪದೇ ಸಹಕಾರ ಒಕ್ಕೂಟ ತತ್ವದ ಬಗ್ಗೆ ಮಾತನಾಡುವ ಪ್ರಧಾನಮಂತ್ರಿಗಳು ಒಕ್ಕೂಟ ತತ್ವದಡಿ ನಡೆದುಕೊಳ್ಳಬೇಕು.

- ಸಿದ್ದರಾಮಯ್ಯ ಮುಖ್ಯಮಂತ್ರಿ

 

10 ಕೇಜಿಗೆ ಬಿಜೆಪಿ ಬಿಗಿ ಪಟ್ಟು

ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಮತ್ತು ಗ್ಯಾರಂಟಿ ಯೋಜನೆಯಡಿ ಬಡವರಿಗೆ ಹತ್ತು ಕೆ.ಜಿ. ಅಕ್ಕಿ ವಿತರಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮಂಗಳವಾರ ಪ್ರತಿಭಟನೆ ಹಮ್ಮಿಕೊಂಡಿದೆ. ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಒಟ್ಟು ಮೂರು ಹಂತದಲ್ಲಿ ಹೋರಾಟಕ್ಕೆ ಮುಂದಾಗಿದೆ. ಈ ಪೈಕಿ ಮೊದಲ ಹಂತವಾಗಿ ಬಿಜೆಪಿ ವತಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಹತ್ತು ಸಂಘಟನಾತ್ಮಕ ವಿಭಾಗ ಕೇಂದ್ರಗಳಲ್ಲಿ ಹೋರಾಟ ನಡೆಯಲಿದೆ.

ಎರಡನೇ ಹಂತವಾಗಿ ಬರುವ ಜುಲೈ 4ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ. ಮೂರನೇ ಹಂತವಾಗಿ ಜುಲೈ ಮೊದಲ ವಾರದಲ್ಲಿ ನಡೆಯುವ ವಿಧಾನಮಂಡಲದ ಅಧಿವೇಶನದಲ್ಲಿ ಹೋರಾಟ ನಡೆಸಲು ಬಿಜೆಪಿ ನಿರ್ಧರಿಸಿದೆ. ‘ಹೇಳಿದ್ದೇನು, ಮಾಡಿದ್ದೇನು? ನುಡಿದಂತೆ ನಡೆಯದ ಕಾಂಗ್ರೆಸ್‌ ಸರ್ಕಾರ’ ಎಂಬುದು ಒಟ್ಟಾರೆ ಹೋರಾಟದ ಘೋಷವಾಕ್ಯ ಆಗಿರಲಿದೆ.

ಸೋಮವಾರ ಪಕ್ಷದ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ನಡೆದ ಮುಖಂಡರ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಮಾಜಿ ಸಚಿವ ಹಾಗೂ ಶಾಸಕ ಆರ್‌.ಅಶೋಕ್‌, ಪಕ್ಷದ ಸಂಘಟನಾತ್ಮಕ ವಿಭಾಗಗಳಾದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಗಳೂರು, ಶಿವಮೊಗ್ಗ, ದಾವಣಗೆರೆ, ಧಾರವಾಡ, ಬೆಳಗಾವಿ, ಕಲಬುರ್ಗಿ ಹಾಗೂ ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಪಕ್ಷದ ಶಾಸಕರು, ಸಂಸದರು, ಮುಖಂಡರು ಹಾಗೂ ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

 

'ಮೋದಿ ಸರ್ಕಾರದ ಅಕ್ಕಿ, ಸಿದ್ದರಾಮಣ್ಣನ ಜಾತ್ರೆನಾ?' ಪ್ರತಾಪ್ ಸಿಂಹ ವಾಗ್ದಾಳಿ

ಎಲ್ಲವೂ ಉಚಿತ ಎಂದಿದ್ದ ಕಾಂಗ್ರೆಸ್ಸಿಗರು ಈಗ ಷರತ್ತುಗಳನ್ನು ಹಾಕುತ್ತಿದ್ದಾರೆ. ಕೆಲವಂತೂ ಅನುಷ್ಠಾನಕ್ಕೆ ಸಾಧ್ಯವಿಲ್ಲದ ಷರತ್ತುಗಳನ್ನು ಹಾಕಿದ್ದಾರೆ. ಹಿಂದೆ ಎಲ್ಲ ನಿರುದ್ಯೋಗಿ ಪದವೀಧರ ಯುವಕರಿಗೆ 3 ಸಾವಿರ ರು., ಡಿಪ್ಲೊಮಾ ಪಡೆದ ನಿರುದ್ಯೋಗಿಗಳಿಗೆ 1,500 ರು. ಕೊಡುವುದಾಗಿ ತಿಳಿಸಿದ್ದರು. ಈಗ 2022-23ರಲ್ಲಿ ಪದವಿ, ಡಿಪ್ಲೊಮಾ ಪಡೆದು ಆರು ತಿಂಗಳ ಪ್ರಯತ್ನದ ಬಳಿಕವೂ ಉದ್ಯೋಗ ಲಭಿಸದವರು ಎಂಬ ಷರತ್ತು ಹಾಕುತ್ತಿದ್ದಾರೆ ಎಂದು ಹರಿಹಾಯ್ದರು.

ವಿದ್ಯುತ್‌ ದರ ಹೆಚ್ಚಳ, ಠೇವಣಿ ಹೆಚ್ಚಳ, ಲೋಡ್‌ ಶೆಡ್ಡಿಂಗ್‌, ಪಠ್ಯಪುಸ್ತಕ ಏಕಾಏಕಿ ಬದಲಾವಣೆ, ಮತಾಂತರ ನಿಷೇಧ ಕಾಯ್ದೆ ರದ್ದು ಪ್ರಸ್ತಾಪ, ಗೋಹತ್ಯಾ ನಿಷೇಧ ಕಾಯ್ದೆ ಹಿಂದೆಗೆತ ವಿರೋಧಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜುಲೈ 4ರಂದು ಬಿಜೆಪಿ ಪ್ರತಿಭಟನೆ ನಡೆಸಲಿದೆ. ಮತಾಂತರ ನಿಷೇಧ ಕಾಯ್ದೆ ಹಿಂದೆಗೆತವನ್ನು ಖಂಡಿಸಿ ರಾಜ್ಯವ್ಯಾಪಿ ಹೋರಾಟ ರೂಪಿಸುತ್ತೇವೆ. ವಿಧಾನಸಭೆ ಒಳಗಡೆಯೂ ದೊಡ್ಡ ರೀತಿಯ ಹೋರಾಟ ಮಾಡುತ್ತೇವೆ. ಕಾಂಗ್ರೆಸ್‌ ಆಡಳಿತ ಮಂಡಿಸುವ ವಿಧೇಯಕ ಆಧರಿಸಿ ಹೋರಾಟದ ದಿನಾಂಕವನ್ನು ಪ್ರಕಟಿಸುತ್ತೇವೆ. ರಾಜ್ಯದ ಜನರನ್ನು ಒಳಗೊಂಡು ಜೈಲ… ಭರೋ ಅಥವಾ ಇನ್ಯಾವುದಾದರೂ ದೊಡ್ಡ ಹೋರಾಟ ನಡೆಸುತ್ತೇವೆ ಎಂದು ಅಶೋಕ್‌ ವಿವರಿಸಿದರು.

ಉಚಿತ ಅಕ್ಕಿ ಕೊಡದೆ ಜಾರಿಕೊಳ್ಳಲು ಸಿಎಂ ಸಿದ್ದು ಯತ್ನ: ಸಿ.ಟಿ.ರವಿ, ಸುನೀಲ್‌, ವಿಜಯೇಂದ್ರ ತಿರುಗೇಟು

ಹೇಳಿದ್ದೇನು? ಮಾಡಿದ್ದೇನು?

10 ಕೇಜಿ ಉಚಿತ ಅಕ್ಕಿ ಸೇರಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳ ಜಾರಿಗೆ ಆಗ್ರಹಿಸಿ ಮೊದಲಿಗೆ 10 ವಿಭಾಗಗಳಲ್ಲಿ, ಬಳಿಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, ನಂತರ ವಿಧಾನಮಂಡಲದ ಅಧಿವೇಶನದಲ್ಲಿ 3 ಹಂತದಲ್ಲಿ ‘ಹೇಳಿದ್ದೇನು? ಮಾಡಿದ್ದೇನು?’ ಹೋರಾಟ ನಡೆಸುತ್ತೇವೆ.

- ಆರ್‌.ಅಶೋಕ್‌ ಬಿಜೆಪಿ ನಾಯಕ

click me!