
ಬೆಂಗಳೂರು : ಖಾದಿ ಉತ್ಪನ್ನಗಳ ಬಳಕೆ ಉತ್ತೇಜಿಸಲು ಸರ್ಕಾರಿ ನೌಕರರು ಸ್ವಯಂ ಪ್ರೇರಣೆಯಿಂದ ಖಾದಿ ಬಟ್ಟೆಗಳನ್ನು ಧರಿಸುವ ಪದ್ಧತಿಗೆ ಏ.21ರ ‘ಸರ್ಕಾರಿ ನೌಕರರ ದಿನಾಚರಣೆ’ಯಂದು ಚಾಲನೆ ನೀಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಿಳಿಸಿದೆ.
ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ಸಂಘದ ಪದಾಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಯಿತು.
ಈ ವೇಳೆ ಪ್ರತಿ ತಿಂಗಳ ಮೊದಲ ಶನಿವಾರದಂದು ಸರ್ಕಾರಿ, ಸರ್ಕಾರಿ ಸ್ವಾಮ್ಯದ ನಿಗಮ-ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಅನುದಾನಿತ ಸಂಸ್ಥೆಗಳ ಅಧಿಕಾರಿ-ನೌಕರರು ಖಾದಿ ಬಟ್ಟೆಗಳನ್ನು ಧರಿಸಿ ಕರ್ತವ್ಯ ನಿರ್ವಹಿಸಬೇಕು. ಸರ್ಕಾರಿ ಸ್ವಾಮ್ಯದ ಖಾದಿ ಗ್ರಾಮೋದ್ಯೋಗ ಮಂಡಳಿ ಮಳಿಗೆಗಳಲ್ಲಿ ಖಾದಿ ಬಟ್ಟೆ ಖರೀದಿಸಲು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಲಾಯಿತು.
ಖಾದಿ ಗ್ರಾಮೋದ್ಯೋಗ ಮಂಡಳಿಯು ಹಾಲಿ ನೀಡುತ್ತಿರುವ ರಿಯಾಯ್ತಿಯ ಹೊರತಾಗಿ ಸರ್ಕಾರಿ ನೌಕರರಿಗೆ ಶೇ.5ರಷ್ಟು ಹೆಚ್ಚುವರಿ ರಿಯಾಯಿತಿ ನೀಡಲು, ಪುರುಷ ನೌಕರರು ಖಾದಿ ಬಟ್ಟೆಯ ಶರ್ಟ್, ಪ್ಯಾಂಟ್, ಓವರ್ ಕೋಟ್ ಹಾಗೂ ಇತರ ಶಿಸ್ತಿನ ಉಡುಪುಗಳು ಹಾಗೂ ಮಹಿಳಾ ನೌಕರರು ಖಾದಿ ಹಾಗೂ ಖಾದಿ ಸಿಲ್ಕ್ ಬಟ್ಟೆಯ ಸೀರೆ, ಚೂಡಿದಾರ್ ಇತರೆ ಶಿಸ್ತಿನ ಉಡುಪುಗಳನ್ನು ಧರಿಸುವಂತೆ ಉತ್ತೇಜಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಸೇನಾ ಕ್ಯಾಂಟೀನ್ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ದಿನಬಳಕೆ ವಸ್ತುಗಳನ್ನು ರಿಯಾಯ್ತಿ ದರದಲ್ಲಿ ಪೂರೈಸಲು ಸರ್ಕಾರಿ ನೌಕರರ ಕ್ಯಾಂಟೀನ್ ಪ್ರಾರಂಭಿಸಲು 2026-27ನೇ ಸಾಲಿನ ಬಜೆಟ್‌ನಲ್ಲಿ ಈ ಯೋಜನೆ ಘೋಷಣೆ ಮಾಡಬೇಕು. ಕೆ.ಎಸ್.ಐ.ಸಿ ಸಂಸ್ಥೆಯ ಭಾರತೀಯ ಆಡಳಿತ ಸೇವೆ ಅಧಿಕಾರಿಗಳು ಖರೀದಿಸುವ ರೇಷ್ಮೆ ಸೀರೆ ಮತ್ತು ರೇಷ್ಮೆ ವಸ್ತ್ರಗಳಿಗೆ ಹೆಚ್ಚುವರಿ ಶೇ.5ರಷ್ಟು ವಿಶೇಷ ರಿಯಾಯ್ತಿ ನೀಡುತ್ತಿದೆ. ಅದೇ ಮಾದರಿಯಲ್ಲೇ ರಾಜ್ಯ ಸರ್ಕಾರದ ಎಲ್ಲ ಅಧಿಕಾರಿ, ನೌಕರರಿಗೂ ಹೆಚ್ಚುವರಿ ಶೇ.5ರಷ್ಟು ವಿಶೇಷ ರಿಯಾಯಿತಿ ನೀಡಬೇಕು ಎಂದು ಮನವಿ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಯಂ ಪ್ರೇರಣೆಯಿಂದ ಖಾದಿ ವಸ್ತ್ರ ಬಳಕೆ ಉತ್ತೇಜಿಸಲು ಸಂಘದ ಕ್ರಮ
ಸರ್ಕಾರದ ಖಾದಿ ಗ್ರಾಮೋದ್ಯೋಗ ಮಳಿಗೆಗಳಲ್ಲಿ ಬಟ್ಟೆ ಖರೀದಿ ನಿರ್ಧಾರ
ಈ ಮಳಿಗೆಗಳಲ್ಲಿ ನೌಕರರಿಗೆ ಹೆಚ್ಚುವರಿ ರಿಯಾಯಿತಿ ಕೇಳಲೂ ನಿರ್ಧಾರ
ಪುರುಷರಿಗೆ ಖಾದಿ ಪ್ಯಾಂಟ್, ಶರ್ಟ್, ಮಹಿಳೆಯರಿಗೆ ಸೀರೆ, ಚೂಡಿದಾರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ