
ಬೆಂಗಳೂರು (ಅ.29): ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ್ ಜೋಶಿ ವಿರುದ್ಧ ಅಧಿಕಾರ ದುರ್ಬಳಕೆ, ಹಣಕಾಸು ದುರುಪಯೋಗ ಸೇರಿ ವಿವಿಧ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯತ್ರಿ ಅವರನ್ನು ಪರಿಷತ್ತಿನ ಆಡಳಿತಾಧಿಕಾರಿಯಾಗಿ ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಈ ಮೂಲಕ ರಾಜ್ಯಾಧ್ಯಕ್ಷರನ್ನು ಪರಿಷತ್ತಿನ ಆಡಳಿತದಿಂದ ದೂರ ಇಡಲಾಗಿದೆ. ಮುಂದಿನ ಮೂರು ತಿಂಗಳ ಅವಧಿಗೆ ಅಥವಾ ಕಸಾಪ ಅಧ್ಯಕ್ಷರ ವಿರುದ್ಧದ ಆರೋಪಗಳ ವಿಚಾರಣೆ ಪೂರ್ಣಗೊಳ್ಳುವವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮಾತ್ರ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಆದೇಶದ ಬೆನ್ನಲ್ಲೇ ಕೆ.ಎಂ.ಗಾಯತ್ರಿ ಅವರು ಮಂಗಳವಾರ ಪರಿಷತ್ತಿನ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ಪರಿಷತ್ತಿನಲ್ಲಿ ಹಣಕಾಸು ಅವ್ಯವಹಾರ ಹಾಗೂ ಅಧಿಕಾರ ದುರ್ಬಳಕೆ ಆರೋಪಗಳ ವಿಚಾರಣೆಗೆ ಸಂಬಂಧಿಸಿ ಸಹಕಾರ ಇಲಾಖೆ ಜುಲೈನಲ್ಲಿ ಆದೇಶ ಹೊರಡಿಸಿ ವಿಚಾರಣಾಧಿಕಾರಿಯನ್ನು ನೇಮಕ ಮಾಡಿತ್ತು. ಆದರೆ, ಪರಿಷತ್ತಿನವರು ನಿಗದಿತ ಕಾಲಾವಧಿಯಲ್ಲಿ ವಿಚಾರಣೆಗೆ ಹಾಜರಾಗಿರಲಿಲ್ಲ. ಜತೆಗೆ ಅಗತ್ಯ ದಾಖಲೆಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ನೇಮಿಸುವಂತೆ ಸಹಕಾರ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಸಹಕಾರ ಇಲಾಖೆಯ ಶಿಫಾರಸು ಮತ್ತು ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದನ್ವಯ ಆಡಳಿತಾಧಿಕಾರಿಯನ್ನು ಸರ್ಕಾರ ನೇಮಿಸಿದೆ.
17 ವಿಚಾರಣಾಂಶಗಳಲ್ಲಿ 7ಕ್ಕೆ ಮಾತ್ರ ಮಾಹಿತಿ: ಪರಿಷತ್ತಿನ ಅಧ್ಯಕ್ಷರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ ವಿಚಾರಣೆಯನ್ನು ವಿವಿಧ ದಿನಾಂಕಗಳಂದು ವಿಚಾರಣಾಧಿಕಾರಿಗಳು ನಡೆಸಿದ್ದಾರೆ. 17 ವಿಚಾರಣಾಂಶಗಳಿಗೆ ಸಂಬಂಧಿಸಿ ಮಾಹಿತಿ ಹಾಗೂ ದಾಖಲೆ ಒದಗಿಸಲು ಪದೇ ಪದೆ ಕಾಲಾವಕಾಶವನ್ನು ಸಂಘ ಕೋರಿತ್ತು. ಸಾಕಷ್ಟು ಕಾಲಾವಕಾಶ ನೀಡಿದ್ದರೂ 17 ವಿಚಾರಣಾಂಶಗಳ ಮಾಹಿತಿ, ದಾಖಲೆಗಳ ಪೈಕಿ 7 ವಿಚಾರಣಾಂಶಗಳಿಗೆ ಮಾತ್ರ ಭಾಗಶಃ ಮಾಹಿತಿ ಸಲ್ಲಿಸಿತ್ತು. ಸಂಘವು ವಿಚಾರಣೆಗೆ ಸರಿಯಾಗಿ ಸ್ಪಂದಿಸದೆ, ಕಾಲಾವಕಾಶ ಕೋರುತ್ತಾ, ಕಾರಣಗಳನ್ನು ಹೇಳುತ್ತಾ ಸಮಯ ಮುಂದೂಡುತ್ತಾ ಅನಗತ್ಯ ವಿಳಂಬ ಮಾಡುತ್ತಿತ್ತು. ಹಣಕಾಸಿಗೆ ಸಂಬಂಧಿಸಿ ಗಂಭೀರ ಸ್ವರೂಪದ ಆರೋಪದ ಬಾಕಿ 10 ವಿಚಾರಣಾಂಶಗಳಿಗೆ ಸಂಘ ದಾಖಲೆ ಮತ್ತು ಲಿಖಿತ ಹೇಳಿಕೆ ಸಲ್ಲಿಸಿಲ್ಲ ಎಂದು ಸಹಕಾರ ಸಂಘಗಳ ಉಪ ನಿಬಂಧಕರು ವರದಿ ಮಾಡಿದ್ದರು.
2.50 ಕೋಟಿ ಬಳಕೆ ಪ್ರಮಾಣ ಪತ್ರ ಸಲ್ಲಿಸಿಲ್ಲ: ಸಂಘದ 108ನೇ ವಾರ್ಷಿಕ ಅಧಿವೇಶನದ ವಾರ್ಷಿಕ ವರದಿಯಲ್ಲಿ ಹಾಗೂ 2023-24ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ. ಪರಿಷತ್ತಿನ ಕಚೇರಿಯ ವಾರ್ಷಿಕ ನಿರ್ವಹಣೆಯ ಕಾರ್ಯಗಳನ್ನು ವಿವಿಧ ಸಂಸ್ಥೆಗಳು ಕೈಗೊಂಡಿರುವುದರಲ್ಲಿ ಹಾಗೂ ಪರಿಷತ್ತಿನ ಕಾಮಗಾರಿಗಳಲ್ಲಿ ನ್ಯೂನತೆಗಳನ್ನು ಗಮನಿಸಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿ ಸರ್ಕಾರದಿಂದ ಬಿಡುಗಡೆ ಮಾಡಿದ ಅನುದಾನದ ಪೈಕಿ 2.50 ಕೋಟಿ ಹಣದ ಬಳಕೆ ಪ್ರಮಾಣ ಪತ್ರವನ್ನು ಮಂಡ್ಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿಲ್ಲ. ಅನುದಾನ ವಿಧಿಸಲಾದ ಷರತ್ತು ಹಾಗೂ ನಿಬಂಧನೆಗಳ ರೀತ್ಯಾ ಬಳಸದೆ ಇರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
2ನೇ ಬಾರಿ ಆಡಳಿತಾಧಿಕಾರಿ ನೇಮಕ: ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಆಡಳಿತಾಧಿಕಾರಿ ನೇಮಿಸುತ್ತಿರುವುದು ಇದು 2ನೇ ಬಾರಿ. ಈ ಹಿಂದೆ ಹಂ.ಪ. ನಾಗರಾಜಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಅವಧಿಯಲ್ಲೂ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿತ್ತು. ಈಗ ಮತ್ತೆ ಹಣಕಾಸು ಅವ್ಯವಹಾರ, ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದ ಆರೋಪ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ನೇಮಿಸಿದೆ.
ಕಸಾಪ ರಾಜ್ಯಾಧ್ಯಕ್ಷರ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಈ ಸ್ಥಾನಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಈ ಮೂಲಕ ರಾಜ್ಯಾಧ್ಯಕ್ಷರನ್ನು ಪರಿಷತ್ತಿನ ಆಡಳಿತದಿಂದ ದೂರ ಇಡಲಾಗಿದೆ. ಆದರೆ, ಉಳಿದ ಎಲ್ಲಾ ಜಿಲ್ಲಾಧ್ಯಕ್ಷರು ಎಂದಿನಂತೆ ಕಾರ್ಯಚಟುವಟಿಕೆಗಳನ್ನು ಮುಂದುವರೆಸಲು ಯಾವುದೇ ಅಡ್ಡಿಯಿಲ್ಲ. ಆದರೆ, ಆಯಾ ಕೆಲಸಗಳ ಕುರಿತು ಆಡಳಿತಾಧಿಕಾರಿಯವರಿಗೆ ಲೆಕ್ಕಪತ್ರ ಸಲ್ಲಿಸಬೇಕು. ಯಾವುದೇ ಆರ್ಥಿಕ ಚಟುವಟಿಕೆ ನಡೆಸುವುದಿದ್ದರೂ ಆಡಳಿತಾಧಿಕಾರಿ ಅನುಮತಿ ಅಗತ್ಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ