
ಕಲಬುರಗಿ (ಅ.29): ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಚಿತ್ತಾಪುರದಲ್ಲಿ ನ.2ರಂದು ಆರೆಸ್ಸೆಸ್ ಪಥ ಸಂಚಲನ ನಡೆಸುವ ಸಂಬಂಧ ಉದ್ಭವವಾಗಿರುವ ಕಗ್ಗಂಟು ಶಮನಕ್ಕಾಗಿ ಹೈಕೋರ್ಟ್ ಸೂಚನೆಯಂತೆ ಜಿಲ್ಲಾಡಳಿತ ಮಂಗಳವಾರ ನಡೆಸಿದ ಶಾಂತಿಸಭೆ ಮಾತಿನ ಚಕಮಕಿ, ವಾಕ್ಸಮರ, ಕೋಲಾಹಲಗಳಿಗೆ ಸಾಕ್ಷಿಯಾಗಿ ಯಾವುದೇ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದೆ. ‘ಚಿತ್ತಾಪುರ ಪಥ ಸಂಚಲನ’ ವಿವಾದ ತಿಳಿಗೊಳಿಸುವ ಪ್ರಯತ್ನವಾಗಿ ಹೈಕೋರ್ಟ್ ಪೀಠದ ಸೂಚನೆಯಂತೆ ಮಂಗಳವಾರ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಶಾಂತಿಸಭೆ ನಡೆಸಿತು. ಆರೆಸ್ಸೆಸ್ ಸೇರಿದಂತೆ 10 ಸಂಘಟನೆಗಳ 30ಕ್ಕೂ ಅಧಿಕ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಕೋಲಾಹಲದ ಕಾರಣ ಜಿಲ್ಲಾಧಿಕಾರಿಗಳು ಅರ್ಧಕ್ಕೇ ಹೊರನಡೆಯುವವ ಮೂಲಕ ಸಭೆ ಮೊಟಕಾಯಿತು.
ವಾಕ್ಸಮರ-ಮಾತಿನ ಚಕಮಕಿ: ಸಭೆಯಲ್ಲಿ ಪ್ರತಿ ಸಂಘಟನೆಗೆ ತಲಾ 5 ನಿಮಿಷಗಳ ಕಾಲ ಮಾತನಾಡಲು ಅವಕಾಶ ಕಲ್ಪಿಸಲಾಯಿತು. ಆರ್‌ಎಸ್‌ಎಸ್ ಪರವಾಗಿ ಮಾತು ಆರಂಭಿಸಿದ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ, ‘ಪ್ರತಿಭಟನೆ, ಪಥ ಸಂಚಲನಕ್ಕೆ ಸಂವಿಧಾನದಲ್ಲೇ ಅವಕಾಶವಿದೆ. ನಾವು ಲಾಠಿ ಹಿಡಿದೇ ಪಥಸಂಚಲನ ನಡೆಸುತ್ತೇವೆ’ ಎಂದಾಗ ಉಳಿದ ಸಂಘಟನೆಗಳವರು ತೀವ್ರ ವಿರೋಧ ವ್ಯಕ್ತಪಡಿಸಿದರು. ‘ಪಥಸಂಚಲನದ ಪರವಾಗಿ ಆರ್‌ಎಸ್‌ಎಸ್‌ನವರು ಮಾತನಾಡಲಿ. ದಲಿತ ಸಮುದಾಯದವರಾಗಿ ನೀವೇಕೆ ಅವರ ಪರ ಮಾತನಾಡುವಿರಿ?’ ಎಂದು ತಕರಾರು ಎತ್ತಿದರು.
ಕೆರಳಿದ ಅಂಬಾರಾಯ ಅಷ್ಟಗಿ, ಪ್ರತ್ಯುತ್ತರ ನೀಡಲು ಮುಂದಾಗುತ್ತಿದ್ದಂತೆಯೇ ಸಭೆಯಲ್ಲಿ ತೀವ್ರ ಗದ್ದಲ, ಕೋಲಾಹಲ ಶುರುವಾಯಿತು. ಡಿಸಿ ಸಮ್ಮುಖದಲ್ಲಿಯೇ ಕೋಲಾಹಲದ ವಾತಾವರಣ ನಿರ್ಮಾಣವಾದಾಗ ಕೆಲವು ಸಂಘಟನೆಯ ಮುಖಂಡರು ಸಭೆಯನ್ನು ಬಹಿಷ್ಕರಿಸಿ, ಹೊರ ಬಂದರು. ಬಳಿಕ, ಸಂಘಟನೆಗಳ ಮುಖಂಡರ ಕಿತ್ತಾಟದಿಂದ ಬೇಸತ್ತ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಕೂಡ ಸಭೆಯಿಂದ ಎದ್ದು ಹೊರ ನಡೆದರು. ನಂತರ, ಅಂಬಾರಾಯ ಅಷ್ಟಗಿ, ಆರೆಸ್ಸೆಸ್ ಜಿಲ್ಲಾ ಬೌದ್ಧಿಕ ಪ್ರಮುಖ ಕೃಷ್ಣಾ ಜೋಶಿ, ಪ್ರಲ್ಹಾದ ವಿಶ್ವಕರ್ಮ ಅವರನ್ನು ಪೊಲೀಸ್ ಭದ್ರತೆಯೊಂದಿಗೆ ಸಭೆಯಿಂದ ಹೊರಗೆ ಕರೆ ತರಲಾಯಿತು. ಈ ಹಂತದಲ್ಲಿ ಉಳಿದ ಸಂಘಟನೆಯವರು ಒಟ್ಟಾಗಿ ಆರೆಸ್ಸೆಸ್ ವಿರುದ್ದ ಧಿಕ್ಕಾರ ಘೋಷಣೆ ಕೂಗಿದರು. ‘ಆರೆಸ್ಸೆಸ್ ರಾಷ್ಟ್ರದ್ವಜ, ಸಂವಿಧಾನ ಪೀಠಿಕೆ ಹಿಡಿದು ಪಥ ಸಂಚಲನ ಮಾಡಲಿ, ನಾವೂ ಬೆಂಬಲಿಸುತ್ತೇವೆ’ ಎಂದು ಸವಾಲು ಹಾಕಿದರು ಎಂದು ತಿಳಿದು ಬಂದಿದೆ.
ಸಭೆಯಲ್ಲೇ ಬಿಜೆಪಿ ಮುಖಂಡನ ಮೇಲೆ ಹಲ್ಲೆಗೆ ಯತ್ನ?: ಸಭೆ ಬಳಿಕ ಮಾತನಾಡಿದ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ, ‘ನಾನು ಆರ್‌ಎಸ್‌ಎಸ್ ಪರ ಮಾತನಾಡಲು ಮುಂದಾದಾಗ ಸಭೆಯಲ್ಲೇ ನನ್ನ ಮೇಲೆ ಹಲವು ಸಂಘಟನೆಗಳ ಮುಖಂಡರು ಹಲ್ಲೆಗೆ ಮುಂದಾದರು. ಡೀಸಿ, ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿಯೇ ನನ್ನ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ನನ್ನ ಮೇಲೆ ಹಲ್ಲೆ ಯತ್ನದ ಹಿಂದೆ ಸಚಿವ ಪ್ರಿಯಾಂಕ ಖರ್ಗೆ ಅವರ ಕೈವಾಡ ಇದೆ, ಸಚಿವರ ಕುಮ್ಮಕ್ಕಿನಿಂದಲೇ ನನ್ನ ಮೇಲೆ ಹಲ್ಲೆ ಯತ್ನ ನಡೆದಿದೆ. ಶಾಂತಿ ಸಭೆಯಲ್ಲಿ ನನಗೆ ಜೀವ ಬೆದರಿಕೆ ಸಹ ಹಾಕಲಾಗಿದೆ. ನನಗೆ ಆರ್‌ಎಸ್‌ಎಸ್ ಪರ ಮಾತನಾಡಲು ಕೆಲವರು ಬಿಡಲಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆ’ ಎಂದು ಆರೋಪಿಸಿದ್ದಾರೆ.
ಪಥ ಸಂಚಲನ ವಿಷಯವಾಗಿ ಶಾಂತಿ ಸಭೆಯಲ್ಲಿ ಒಮ್ಮತಕ್ಕೆ ಬರಲು ವಿಫಲವಾದ ಹಿನ್ನೆಲೆಯಲ್ಲಿ ಈಗ ಎಲ್ಲರ ಚಿತ್ತ ಅ.30ರಂದು ಹೊರ ಬೀಳಲಿರುವ ಹೈಕೋರ್ಟ್‌ನ ಕಲಬುರಗಿ ಪೀಠದ ತೀರ್ಪಿನತ್ತ ನೆಟ್ಟಿದೆ. ಅ.19ರಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಚಿತ್ತಾಪುರ ತಹಸೀಲ್ದಾರ್ ಅನುಮತಿ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ, ಆರ್‌ಎಸ್‌ಎಸ್, ಕೋರ್ಟ್ ಮೊರೆ ಹೋಗಿತ್ತು. ಬಳಿಕ, ಹೈಕೋರ್ಟ್‌ನ ಕಲಬುರಗಿ ಪೀಠದ ಆದೇಶದಂತೆ ಮಂಗಳವಾರ ಜಿಲ್ಲಾಡಳಿತದ ವತಿಯಿಂದ ಶಾಂತಿಸಭೆ ಆಯೋಜಿಸಲಾಗಿತ್ತು. ಸಭೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದ್ದು, ಅ.30ರಂದು ಇದರ ವಿಚಾರಣೆ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ