* ಬಜೆಟ್ ಘೋಷಣೆಗೆ ಮುನ್ನ ಒಂದೇ ದಿನದಲ್ಲಿ 4 ಆದೇಶ
* 80 ಕೋಟಿ ಮಂಜೂರು, 8.28 ಕೋಟಿ ಬಿಡುಗಡೆ
* ಎರಡೆರಡು ಕೋಟಿ ಮಂಜೂರು
ಮಲ್ಲಿಕಾರ್ಜುನ ಸಿದ್ದಣ್ಣವರ
ಹುಬ್ಬಳ್ಳಿ(ಮಾ.16): ಪರಿಶಿಷ್ಟ ಪಂಗಡದ(ST) ಸಮುದಾಯವನ್ನು ಮೂಲವಾಹಿನಿಗೆ ತರುವ ಉದ್ದೇಶದಿಂದ ಅವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ(Government of Karnataka) ಮೀಸಲಿಟ್ಟ ಸಹಾಯಧನದ ಅನುದಾನ ಬಜೆಟ್‌ಗೆ ಮುನ್ನ ಅಧಿಕಾರಿಗಳು ತರಾತರಿಯಲ್ಲಿ ಬಿಡುಗಡೆ ಮಾಡಿರುವ ಪ್ರಸಂಗ ಬೆಳಕಿಗೆ ಬಂದಿದೆ. ವರ್ಷವಿಡೀ ಸುಮ್ಮನಿದ್ದ ಅಧಿಕಾರಿಗಳು ಬಜೆಟ್(Budget) ಘೋಷಣೆಯಾಗುವುದಕ್ಕಿಂತ ಮುಂಚೆ ಒಂದೇ ದಿನ ನಾಲ್ಕು ಆದೇಶಗಳನ್ನು ಹೊರಡಿಸಿ ಬರೊಬ್ಬರಿ 80 ಕೋಟಿ ಮಂಜೂರು ಮಾಡಿ ಅದರಲ್ಲಿ 8.28 ಕೋಟಿ ಬಿಡುಗಡೆಯನ್ನೂ ಮಾಡಿದ್ದಾರೆ!
ಈ ಶೋಷಿತ ಸಮುದಾಯದ ಕಲ್ಯಾಣ ಕಾರ್ಯಕ್ರಮಗಳಲ್ಲಿ ಅವರು ನಡೆಸುವ ಧಾರ್ಮಿಕ ಸಂಸ್ಥೆ, ಶಾಲಾ-ಕಾಲೇಜು, ಹಾಸ್ಟೆಲ್ ಮತ್ತು ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕಾಗಿ ‘ಸಹಾಯಧನ’ ನೀಡುವುದು ಕೂಡ ಒಂದು. ಪ್ರತಿವರ್ಷ ಇಂತಿಷ್ಟು ಕೋಟಿ ಅನುದಾನ(Grant) ಮೀಸಲಿಟ್ಟು, ಅರ್ಹ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗುತ್ತದೆ. ಆದರೆ ಈ ಬಾರಿ ಆ ಮೀಸಲು ಅನುದಾನ ಹಂಚಿಕೆ ಮಾಡುವಲ್ಲಿ ವರ್ಷದುದ್ದಕ್ಕೂ ತೆಪ್ಪಗಿದ್ದ ಅಧಿಕಾರಿಗಳು ವರ್ಷಾಂತ್ಯದಲ್ಲಿ ಖರ್ಚುಮಾಡುವ ಧಾವಂತಕ್ಕೆ ಬಿದ್ದು ಈ ಮೊತ್ತವನ್ನು ಬಿಡುಗಡೆ ಮಾಡಿದ್ದಾರೆ.
ಸಾರಿಗೆ ಸಿಬ್ಬಂದಿ ಸಂಬಳಕ್ಕಾಗಿ ಕಾಯಬಾರದು, ಹೀಗಾಗಿ ಸಂಸ್ಥೆ ಆಸ್ತಿ ಅಡ ತೀರ್ಮಾನ: ಸಚಿವ ಬಿ. ಶ್ರೀರಾಮುಲು!
ಸಮಾಜ ಕಲ್ಯಾಣ ಇಲಾಖೆಯ(Department of Social Welfare) ಅಧೀನ ಕಾರ್ಯದರ್ಶಿ ಶಿವಲಿಂಗಪ್ರಭು ವಾಲಿ ಜನವರಿ 4 (2022) ರಂದು ಹೊರಡಿಸಿದ ಆದೇಶದಲ್ಲಿ ಈ ಭಾರೀ ಮೊತ್ತ ದಾಖಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಮಾ.4 ರಂದು ‘ರಾಜ್ಯ ಬಜೆಟ್’ ಮಂಡಿಸುವ ಮುನ್ನವೇ ಅಧಿಕಾರಿಗಳು ‘ಭರ್ಜರಿ ಹಣ’ ಮಂಜೂರು ಮಾಡಿದ್ದಾರೆ.
ಎರಡೆರಡು ಕೋಟಿ ಮಂಜೂರು!:
ಒಂದೇ ದಿನ ಹೊರಡಿಸಿರುವ ನಾಲ್ಕು ಆದೇಶಗಳಲ್ಲಿ ಒಟ್ಟು 33 ಸಂಸ್ಥೆಗಳಿಗೆ 80 ಕೋಟಿ ಸಹಾಯಧನ ಮಂಜೂರು ಮಾಡಲಾಗಿದೆ. ಅದರಲ್ಲಿ .8.28 ಕೋಟಿ ಸಹಾಯಧನ ಬಿಡುಗಡೆಯೂ ಆಗಿದೆ. ವಿಜಾಪುರದ ದುರ್ಗಾದೇವಿ ಮಹಿಳಾ ಸ್ವಸಹಾಯ ಸಂಘಕ್ಕೆ .2 ಕೋಟಿ, ಚಿತ್ರದುರ್ಗದ ಆನಂದಮಯಿ ಟ್ರಸ್ಟ್‌ಗೆ .2 ಕೋಟಿ, ಹೊಸದುರ್ಗದ ಎಸ್‌ವಿಎಸ್ ಎಜ್ಯುಕೇಶನ್ ಟ್ರಸ್ಟ್‌ಗೆ .2 ಕೋಟಿ, ಮಾನ್ವಿಯ ನೇತಾಜಿ ಎಜ್ಯುಕೇಶನ್ ಟ್ರಸ್ಟ್‌ಗೆ .2 ಕೋಟಿ, ನವಲಗುಂದದ ಮಹರ್ಷಿ ವಾಲ್ಮೀಕಿ ಮಹಿಳಾ ಸಂಘಕ್ಕೆ .2 ಕೋಟಿ, ಮುದ್ದೇಬಿಹಾಳದ ಶ್ರೀರಾಮ ವಾಲ್ಮೀಕಿ ಗ್ರಾಮೀಣಭಿವೃದ್ಧಿ ಸಂಘಕ್ಕೆ .1.5 ಕೋಟಿ... ಹೀಗೆ ಕೋಟಿ ಕೋಟಿ ಸಹಾಯಧನ ಮಂಜೂರು ಮಾಡಲಾಗಿದೆ. ಉಳಿದ 18 ಸಂಸ್ಥೆಗಳಿಗೆ ತಲಾ ಒಂದು ಕೋಟಿ ಹಂಚಿಕೆ ಮಾಡಲಾಗಿದ್ದು, ಐವತ್ತು ಲಕ್ಷ ಪಡೆದವರೂ ಇದ್ದಾರೆ.
ಬೇರೆ ಜಿಲ್ಲೆಯ ಸಂಸ್ಥೆಗೂ ಮಂಜೂರು:
ಹೀಗೆ ಸಹಾಯಧನ ನೀಡುವಾಗ ಆಯಾ ಜಿಲ್ಲೆಯಲ್ಲಿನ ಸಂಸ್ಥೆಗಳ ಅದೇ ಜಿಲ್ಲೆಯಲ್ಲಿನ ಕಟ್ಟಡ ಕಾಮಗಾರಿಗೆ ನೆರವು ನೀಡುವುದು ವಾಡಿಕೆ. ಆದರೆ ಧಾರವಾಡ ಜಿಲ್ಲೆ ನವಲಗುಂದ ತಾಲೂಕು ತುಪ್ಪದಕುರಹಟ್ಟಿಯ ಮಹರ್ಷಿ ವಾಲ್ಮೀಕಿ ಮಹಿಳಾ ಸಂಘ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಗಡ್ಡಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ಶಾಲಾ ಕಟ್ಟಡಕ್ಕೆ .2 ಕೋಟಿ ಹಾಗೂ ವಿಜಯಪುರ ಜಿಲ್ಲೆಯ ತಾಳಿಕೋಟೆಯ ವಾಲ್ಮೀಕಿ ಸಂಸ್ಥೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕು ಶಾಂತಗಿರಿಯಲ್ಲಿ ನಿರ್ಮಿಸುತ್ತಿರುವ ಶಾಲಾ ಕಟ್ಟಡಕ್ಕೆ .2 ಕೋಟಿ ಸಹಾಯಧನ ಮಂಜೂರು ಮಾಡಲಾಗಿದೆ.
Karnataka Politcs: ಬಿಜೆಪಿ ಶಾಸಕರ ಕ್ಷೇತ್ರಕ್ಕೆ 5 ಪಟ್ಟು ಹೆಚ್ಚು ಅನುದಾನ: ರಾಮಲಿಂಗಾ ರೆಡ್ಡಿ
ಅಲ್ಲದೇ ವಿಜಯನಗರ ಜಿಲ್ಲೆ ಕೂಡ್ಲಗಿಯ ಬಾಬು ಜಗಜೀವನರಾಮ ವಿದ್ಯಾಸಂಸ್ಥೆಗೆ .1 ಕೋಟಿ ಮಂಜೂರು ಮಾಡಲಾಗಿದೆ. ಅಚ್ಚರಿಯೆಂದರೆ ಬಾಬುಜಗಜೀವನ ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ ವಿಭಾಗದಲ್ಲಿ ಕಟ್ಟಡ ಸಹಾಯಧನ ಸಿಗುತ್ತಿದ್ದರೂ ಪರಿಶಿಷ್ಟ ಪಂಗಡದ ವಿಭಾಗದಲ್ಲಿ ಕಟ್ಟಡ ಸಹಾಯಧನ ನೀಡಲಾಗಿದೆ. ಅಧಿಕಾರಿಗಳ ಈ ನಿಲುವು ಶಂಕೆ ಮೂಡಿಸಿದೆ.
80 ಕೋಟಿ ಆದದ್ದು ಹೇಗೆ?:
ಶಿವಲಿಂಗಪ್ರಭು ವಾಲಿ ಜ.4ರಂದು ಮೊದಲು ಹೊರಡಿಸಿದ ಆದೇಶದಲ್ಲಿ ‘2021-22 ಸಾಲಿನ ಪರಿಶಿಷ್ಟಪಂಗಡದ ವಿವಿಧ ಅಭಿವೃದ್ಧಿ ಯೋಜನೆ’ (ಎಸ್‌ಟಿಪಿ) ಅಡಿ . 15 ಕೋಟಿ ಮಾತ್ರ ಮೀಸಲಿತ್ತು, ಬೇಡಿಕೆ ಹೆಚ್ಚಿದ ಕಾರಣ ಬೇರೆ ಶೀರ್ಷಿಕೆಯಡಿ .5 ಕೋಟಿ ಪಡೆದು ಒಟ್ಟು .20 ಕೋಟಿ ಅನುದಾನವನ್ನು ಸಹಾಯಧನವಾಗಿ ಹಂಚಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಅಚ್ಚರಿಯೆಂದರೆ ನಾಲ್ಕೂ ಆದೇಶದಲ್ಲಿ ಇದೇ ಮಾತನ್ನು ಪುನಃರುಚ್ಚರಿಸಿದ್ದಾರೆ. ಅಲ್ಲಿಗೆ ಬರೊಬ್ಬರಿ 80 ಕೋಟಿ ಸಹಾಯಧನ ಮಂಜೂರು ಮಾಡಲಾಗಿದೆ. ಅದರಲ್ಲಿನ ಶೇ.20 ಮೊತ್ತ (.8.28 ಕೋಟಿ) ಬಿಡುಗಡೆಯಾಗಿದೆ.