ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ಲಂಚ ಕೇಳುತ್ತಾರೆಂದ ರಾಜ್ಯಪಾಲರಿಗೆ ಪತ್ರ ಬರೆದಿದ್ದ ಪ್ರಕರಣಕ್ಕೆ ಸಿಐಡಿ ತನಿಖೆಯಲ್ಲಿ ರೋಚಕ ಟ್ವಿಸ್ಟ್ ಸಿಕ್ಕಿದೆ.
ಮಂಡ್ಯ (ಆ.20): ರಾಜ್ಯದಲ್ಲಿ ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎನ್. ಚಲುವರಾಯಸ್ವಾಮಿ ಅವರ ಮೇಲೆ ಮಂಡ್ಯ ಜಿಲ್ಲೆಯ 7 ತಾಲೂಕಿನ ಕೃಷಿ ಸಹಾಯಕ ನಿರ್ದೇಶಕರು ತಲಾ 6ರಿಂದ 8 ಲಕ್ಷ ರೂ. ಲಂಚವನ್ನು ಕೊಡಬೇಕು ಎಂದು ಬೇಡಿಕೆಯಿಟ್ಟಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ನೀಡಲಾಗಿತ್ತು. ಆದರೆ, ಈ ಪತ್ರವನ್ನು ತಾವು ಬರೆದಿಲ್ಲವೆಂದು ಅಧಿಕಾರಿಗಳು ಹೇಳಿದ್ದರು. ಸಚಿವರ ಮೇಲೆ ಸುಳ್ಳು ಆರೋಪ ಮಾಡಿದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು. ಇನ್ನು ಕೃಷಿ ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ರೋಚಕ ಟ್ವಿಸ್ಟ್ ಸಿಕ್ಕಿದೆ.
ಹೌದು, ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಳೆದ ಬಾರಿ ಸೋಲನ್ನಪ್ಪಿದ ಕಾಂಗ್ರೆಸ್ ನಾಯಕರು ಗೆದ್ದು ಶಾಸಕರಾಗಿದ್ದಾರೆ. ಇದರಲ್ಲಿ ಹಿರಿಯರಾದ ಹಾಗೂ ಪಕ್ಷ ಸಂಘಟನೆ ಮಾಡಿದ ಎನ್. ಚಲುವರಾಯಸ್ವಾಮಿ ಈಗ ಕೃಷಿ ಸಚಿವರು ಆಗಿದ್ದು, ಜೊತೆಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ. ಇದರಿಂದ ಇಡೀ ಮಂಡ್ಯ ಜಿಲ್ಲೆಯೇ ಅವರ ನಿಯಂತ್ರಣಕ್ಕೆ ಬರುತ್ತಿದೆ. ಈ ಹಿಂದೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಎಲ್ಲ ಜೆಡಿಎಸ್‌ನ ಅಭ್ಯರ್ಥಿಗಳು ಈಗ ಮಾಜಿ ಶಾಸಕರಾಗಿದ್ದು, ಸರ್ಕಾರದ ಮಟ್ಟದಲ್ಲಿ ಅವರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ.
ಇದರಿಂದ ಹೇಗಾದರೂ ಮಾಡಿ ಚಲುವರಾಯಸ್ವಾಮಿಯನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲೇಬೇಕು ಎಂದು ಹುನ್ನಾರ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ಅದರ ಪ್ರಯತ್ನವಾಗಿ ಈ ಹಿಂದೆ ನಾಗಮಂಗಲ ಕೆಎಸ್‌ಆರ್‌ಟಿಸಿ ಡಿಪೋದ ಡ್ರೈವರ್ ತನ್ನ ಸಾವಿಗೆ ಸಚಿವ ಚಲುವರಾಯಸ್ವಾಮಿ ಕಿರುಕುಳವೇ ಕಾರಣವೆಂದು ಪತ್ರ ಬರೆದಿಟ್ಟು, ವಿಷ ಸೇವನೆ ಮಾಡಿದ್ದನು. ಇನ್ನು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇದಾದ ನಂತರ ಮಂಡ್ಯ ಜಿಲ್ಲೆಯ 7 ತಾಲೂಕಿನ ಕೃಷಿ ಸಹಾಯಕ ನಿರ್ದೇಶಕರಿಂದ ತಲಾ 6-8 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಪತ್ರ ಬರೆಯಲಾಗಿತ್ತು. ಇದು ಸುಳ್ಳು ಎಂದು ಸಚಿವರು ಅಲ್ಲಗಳೆದಿದ್ದರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸಿದ ಕೃಷಿ ಸಚಿವ ಚಲುವರಾಯಸ್ವಾಮಿ ಸಿಐಡಿ ತನಿಖೆಗೆ ವಹಿಸುವಂತೆ ಮನವಿ ಮಾಡಿದ್ದರು.
ಇನ್ನು ಸಿಐಡಿ ಅಧಿಕಾರಿಗಳು ಮಂಡ್ಯದ ಎಲ್ಲ ಕೃಷಿ ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆದರೆ, ಈ ವೇಳೆ ಮಂಡ್ಯ ಜಿಲ್ಲೆಯ ಯಾವುದೇ ತಾಲೂಕಿನ ಕೃಷಿ ಸಹಾಯಕ ನಿರ್ದೇಶಕರು ತಾವು ಪತ್ರವನ್ನು ಬರೆದಿಲ್ಲ. ಸಚಿವರಿಂದಲೂ ಇಂತಹ ಲಂಚದ ಬೇಡಿಕೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಇದರ ಜಾಡನ್ನು ಹಿಡಿದು ಹೊರಟಾಗ ಮೈಸೂರು ಜಿಲ್ಲೆಯ ಕೃಷಿ ಅಧಿಕಾರಿಗಳ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಮೈಸೂರು ಜಿಲ್ಲೆಯ ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ಪತ್ರದಲ್ಲಿ ಒಂದೇ ಪೆನ್ನಿನಲ್ಲಿ ಒಂದೇ ಮಾದರಿಯ ಏಳು ಸಹಿ: ಸಚಿವ ಚಲುವರಾಯಸ್ವಾಮಿ
ಸಿಐಡಿ ಖೆಡ್ಡಾಕ್ಕೆ ಬಿದ್ದ ಗುರುಪ್ರಸಾದ್, ಸುದರ್ಶನ್: ಕೃಷಿ ಸಚಿವರ ವಿರುದ್ದ ರಾಜ್ಯಪಾಲರಿಗೆ ದೂರು ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೃಷಿ ಸಹಾಯಕ ನಿರ್ದೇಶಕರಾದ ಗುರುಪ್ರಸಾದ್ ಹಾಗೂ ಕೃಷಿ ಅಧಿಕಾರಿ ಸುದರ್ಶನ್ ಸಿಐಡಿ ಖೆಡ್ಡಾಕ್ಕೆ ಬಿದ್ದಿದ್ದಾರೆ. ಮೈಸೂರಿನ ಕೆ.ಆರ್.ನಗರ ಮೂಲದ ಇಬ್ಬರು ಅಧಿಕಾರಿಗಳು. ಪ್ರಸ್ತುತ ಮೈಸೂರು ಕೃಷಿ ಇಲಾಖೆ ಕಚೇರಿಯಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಇವರನ್ನು ವಶಕ್ಕೆ ಪಡೆದು ಇಂದು ಬೆಳಿಗ್ಗೆಯಿಂದಲೇ ತೀವ್ರ ವಿಚಾರಣೆ ಮಾಡಲಾಗುತ್ತಿದೆ. ಇನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆಗೆ ಮಾಡಲಾಗುತ್ತಿದ್ದು, ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗ್ತಾರಾ ಎಂಬ ಅನುಮಾನಗಳೂ ಕೇಳಿಬಂದಿವೆ. ಮಂಡ್ಯ ಅಧಿಕಾರಿಗಳ ಹೆಸರಲ್ಲಿ ಪತ್ರ ಬರೆದ ಹಿಂದಿನ ರಹಸ್ಯವಾದ್ರು ಏನು? ನಕಲಿ ದೂರಿನ ಹಿಂದೆ ಇದ್ಯಾ ರಾಜಕೀಯ ಷಡ್ಯಂತ್ರ ನಡೆದಿದೆಯೇ ಎಂಬ ಅನುಮಾನ ಬಂದಿದೆ.