ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ತೀರ್ಮಾನವೇನು?

By Kannadaprabha NewsFirst Published Mar 20, 2020, 7:31 AM IST
Highlights

ಮಾರ್ಚ್ 27ರಂದು ಆರಂಭವಾಗಬೇಕಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೇಲೆ ಅನಿಶ್ಚಿತತೆಯ ಕತ್ತಿ ತೂಗಲಾರಂಭಿಸಿದೆ. ಪರೀಕ್ಷೆ ನಡೆಸುವ ಕುರಿತು ಶುಕ್ರವಾರವೇ ಶಿಕ್ಷಣ ಸಚಿವರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ. 

ಬೆಂಗಳೂರು [ಮಾ.20]:  ಕೊರೋನಾ ವೈರಾಣು ಹರಡುತ್ತಿರುವ ಕಾರಣ ಮಾರ್ಚ್ 27ರಂದು ಆರಂಭವಾಗಬೇಕಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೇಲೆ ಅನಿಶ್ಚಿತತೆಯ ಕತ್ತಿ ತೂಗಲಾರಂಭಿಸಿದೆ. ಪರೀಕ್ಷೆ ನಡೆಸುವ ಕುರಿತು ಶುಕ್ರವಾರವೇ ಶಿಕ್ಷಣ ಸಚಿವರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ. ಇನ್ನೊಂದೆಡೆ ‘ಪರಿಸ್ಥಿತಿ ಅವಲೋಕಿಸಿ ಮಾ.23ರೊಳಗೆ ಸಚಿವರು ನಿರ್ಧಾರ ಕೈಗೊಳ್ಳುತ್ತಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದರೆ ಮುಂದೂಡುವ ಸಾಧ್ಯತೆ ಇದೆ’ ಎಂದು ಶಿಕ್ಷಣ ಇಲಾಖೆ ಮೂಲಗಳು ಹೇಳಿವೆ.

ಸುದ್ದಿಗಾರರ ಜತೆ ಮಾತನಾಡಿದ ಸುಧಾಕರ್‌, ‘ಸುಮಾರು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವುದರಿಂದ ಪರಿಸ್ಥಿತಿ ಅಧರಿಸಿ ಸೂಕ್ತ ನಿರ್ಧಾರ ತೆಗೆದು ಕೊಳ್ಳುವಂತೆ ಕೊರೋನಾ ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ಸಲಹೆ ಕೇಳಿಬಂದಿವೆ. ಶಿಕ್ಷಣ ಸಚಿವರೇ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.

ಕೊರೋನಾ ವೈರಸ್‌ನಿಂದ ದೇಶವನ್ನ ಉಳಿಸಲು ನಮೋ ಮಂತ್ರ..!.

ಆದರೆ ಶಿಕ್ಷಣ ಇಲಾಖೆ ಮೂಲಗಳು, ‘ಕೊರೋನಾ ಹರಡಬಹುದು ಎಂಬ ಆತಂಕದಲ್ಲಿ ಸಿಬಿಎಸ್‌ಇ, ಐಸಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷೆಯನ್ನು ಮುಂದೂಡಲಾಗಿದೆ. ರಾಜ್ಯದಲ್ಲಿಯೂ ಪರಿಸ್ಥಿತಿಯನ್ನು ಅವಲೋಕಿಸಿ 23ರೊಳಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದಿವೆ.

‘ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಲ್ಲಿ ಪರೀಕ್ಷೆ ನಿಗದಿತ ದಿನಾಂಕಗಳಂತೆ ನಡೆಯಲಿದೆ. ಪರಿಸ್ಥಿತಿ ಭಿನ್ನವಾಗಿದ್ದರೆ ಪರೀಕ್ಷೆ ಮುಂದೂಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಶಿಕ್ಷಣ ಸಚಿವರು ನಿರಂತರ ಸಭೆಯನ್ನು ನಡೆಸಿದ್ದಾರೆ. ಮುಂದಿನ ಮೂರು ದಿನಗಳಲ್ಲಿ ಸೂಕ್ತ ನಿರ್ಧಾರ ಘೋಷಿಸಲಿದ್ದಾರೆ’ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಈಗಾಗಲೇ ಶಾಲಾ, ಕಾಲೇಜುಗಳಿಗೆ ರಜಾ ಘೋಷಣೆ ಮಾಡಲಾಗಿದೆ. ವಿಶ್ವವಿದ್ಯಾಲಯಗಳ ಪರೀಕ್ಷೆಯನ್ನು ಮಾ.31ರ ವರೆಗೆ ಮುಂದೂಡಲಾಗಿದೆ. ಹೀಗಾಗಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿರುವ ರಾಜ್ಯದ ವಿದ್ಯಾರ್ಥಿಗಳ ಪಾಲಕ, ಪೋಷಕರಲ್ಲಿ ಸಹಜವಾಗಿಯೇ ಆತಂಕ, ಗೊಂದಲ ಸೃಷ್ಟಿಯಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

click me!