ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಶುಕ್ರವಾರದಿಂದ ಆರಂಭವಾಗಲಿದ್ದು, ಸಿಸಿ ಕ್ಯಾಮೆರಾ ಮತ್ತು ವೆಬ್‌ಕಾಸ್ಟಿಂಗ್ ಕಣ್ಗಾವಲಿನಲ್ಲಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗೆ 8.96 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಮತ್ತು 2,818 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಬೆಂಗಳೂರು (ಮಾ.21): ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಕ್ತಾಯಗೊಂಡ ಬೆನ್ನಲ್ಲೇ ಶುಕ್ರವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭಗೊಳ್ಳಲಿದ್ದು, ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆಗಳು ನಡೆಯಲಿವೆ. ಕಳೆದ ಬಾರಿಯಂತೆ ಈ ಸಾಲಿನಲ್ಲೂ ಸಿ.ಸಿ,ಕ್ಯಾಮೆರಾ, ವೆಬ್‌ಕಾಸ್ಟಿಂಗ್ ಕಣ್ಗಾವಲಿನಲ್ಲಿ ಪರೀಕ್ಷೆಗಳು ನಡೆಯಲಿವೆ.
ಏ.4ರವರೆಗೆ ನಡೆಯುವ ಪರೀಕ್ಷೆಗಳಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ. ಪರೀಕ್ಷೆಗೆ 8.42 ಲಕ್ಷ ತರಗತಿ ವಿದ್ಯಾರ್ಥಿಗಳು ಸೇರಿ ಒಟ್ಟು 8,96,887 ಮಕ್ಕಳು ನೋಂದಾಯಿಸಿದ್ದಾರೆ. ಈ ಪೈಕಿ 3.35 ಲಕ್ಷಕ್ಕೂ ಹೆಚ್ಚು ಗಂಡುಮಕ್ಕಳು, 3.78 ಲಕ್ಷಕ್ಕೂ ಹೆಚ್ಚು ಬಾಲಕಿಯರು ಮತ್ತು 5 ತೃತೀಯ ಲಿಂಗಿಗಳು ಇದ್ದಾರೆ.
2,818 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಏನೇನು ಮಾಡ್ಬೇಕು?: ಬೆಳಗ್ಗೆ 10ಕ್ಕೆ ಪರೀಕ್ಷೆ ಆರಂಭವಾಗುವುದರಿಂದ 9 ಗಂಟೆಯೊಳಗೆ ಪರೀಕ್ಷಾ ಕೇಂದ್ರ ತಲುಪಿ ತಮ್ಮ ನೋಂದಣಿ ಸಂಖ್ಯೆ ಯಾವ ಕೊಠಡಿಯಲ್ಲಿ ದಾಖಲಿಸಲಾಗಿದೆ ಎನ್ನುವುದನ್ನು ಕೇಂದ್ರದ ಆವರಣದಲ್ಲಿ ಪ್ರಕಟಿಸಿರುವ ಫಲಕ ನೋಡಿಕೊಳ್ಳಿ. ಮನೆಯಿಂದ ಹೊರಡುವಾಗ ತಪ್ಪದೆ ಹಾಲ್ ಟಿಕೆಟ್, ನೀಲಿ ಬಾಲ್ ಪಾಯಿಂಟ್‌ನ ಎರಡ್ಮೂರು ಪೆನ್ನುಗಳನ್ನು ತೆಗೆದುಕೊಂಡು ಹೋಗಿ. ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೊಂಡೊಯ್ಯಬೇಡಿ. ಉತ್ತರ ಪತ್ರಿಕೆಯಲ್ಲಿ ನೋಂದಣಿ ಸಂಖ್ಯೆ ದಾಖಲಿಸುವುದನ್ನು ವಿದ್ಯಾರ್ಥಿಗಳು ಮರೆಯಬಾರದು.
ಪರೀಕ್ಷಾ ಕೇಂದ್ರ, ಸುತ್ತಮುತ್ತ ಬಿಗಿ ಭದ್ರತೆ
ಎಲ್ಲೆಡೆ ಸುಸೂತ್ರವಾಗಿ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತೆ, ಮುಂಜಾಗ್ರತಾ ಕ್ರಮ ಹಾಗೂ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. 2,818 ಸ್ಥಾನಿಕ ದಳ, ಜಿಲ್ಲಾ ಹಂತದಲ್ಲಿ 400, ತಾಲೂಕು ಹಂತದಲ್ಲಿ 1,662 ವಿಚಕ್ಷಣ ದಳವನ್ನು ಪರೀಕ್ಷಾ ಭದ್ರತೆ ದೃಷ್ಟಿಯಿಂದ ನೇಮಿಸಲಾಗಿದೆ. ವೆಬ್‌ಕಾಸ್ಟಿಂಗ್ ವ್ಯವಸ್ಥೆ ಇರಲಿದ್ದು ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒ ಸೇರಿ ಉನ್ನತ ಅಧಿಕಾರಿಗಳು ಜಿಲ್ಲಾ ನಿಯಂತ್ರಣ ಕೊಠಡಲ್ಲೇ ಕೂತು ತಮ್ಮ ಜಿಲ್ಲಾ ವ್ಯಾಪ್ತಿಯ ಕೇಂದ್ರಗಳ ಪ್ರತಿ ಕೊಠಡಿಯ ಚಿತ್ರಣ ವೀಕ್ಷಣೆ ಮಾಡುತ್ತಿರುತ್ತಾರೆ. ಪರೀಕ್ಷಾ ಸಮಯದಲ್ಲಿ ಕೇಂದ್ರಗಳ ಸುತ್ತ ೨೦೦ ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜೆರಾಕ್ಸ್, ಸೈಬರ್, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯುವಂತಿಲ್ಲ.
ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿಯಿಂದ ಕಳೆದ ಬಾರಿ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಬಿದ್ದು ಪಾರದರ್ಶಕತೆ ಹೆಚ್ಚಾಗಿತ್ತು. ಇದರಿಂದ ಫಲಿತಾಂಶ ಭಾರೀ ಪ್ರಮಾಣದಲ್ಲಿ ಕುಸಿದಿತ್ತು. ಇದನ್ನು ತಕ್ಕಮಟ್ಟಿಗೆ ಸರಿದೂಗಿಸಲು ಅದುವರೆಗೂ ಇದ್ದ ಶೇ.10ರಷ್ಟು ಗ್ರೇಸ್ ಅಂಕದ ಪ್ರಮಾಣವನ್ನು ಏಕಾಏಕಿ ಶೇ.20ಕ್ಕೆ ಹೆಚ್ಚಿಸಲಾಗಿತ್ತು. ಇದರಿಂದ 1.70 ಲಕ್ಷಕ್ಕೂ ಹೆಚ್ಚು ಮಕ್ಕಳು ಫೇಲ್ ಆಗುವುದರಿಂದ ತಪ್ಪಿಸಿಕೊಂಡಿದ್ದರು. ಆದರೆ, ಗ್ರೇಸ್ ಅಂಕ ದ್ವಿಗುಣಗೊಳಿಸಿದ್ದಕ್ಕೆ ಎಲ್ಲೆಡೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಮುಖ್ಯಮಂತ್ರಿಯವರೂ ಶಿಕ್ಷಣ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಹಾಗಾಗಿ 2023-24ರಲ್ಲಿ ಇದ್ದಂತೆ ಶೇ.10ರಷ್ಟು ಗ್ರೇಸ್ ಅಂಕ ಮಾತ್ರ ನೀಡಲು ತೀರ್ಮಾನಿಸಲಾಗಿದೆ.