SSLC ಪರೀಕ್ಷೆಯ ಸಾಧಕರಿವರು; ಆಟೋ ಚಾಲಕನ ಮಗಳಿಗೆ 612 ಅಂಕ

Suvarna News   | Asianet News
Published : Aug 11, 2020, 11:37 AM IST
SSLC ಪರೀಕ್ಷೆಯ ಸಾಧಕರಿವರು; ಆಟೋ ಚಾಲಕನ ಮಗಳಿಗೆ 612 ಅಂಕ

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಕಟವಾಗಿದ್ದು 6 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದಾರೆ. ಇದು ಕಡೆಯಾದರೆ ಮತ್ತೆ ರಾಜ್ಯದ ಹಲವು ಭಾಗಗಳಲ್ಲಿ ಕಷ್ಟದ ನಡುವೆಯೂ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಮೂಲ್ಕಿಯ ಆಟೋ ಚಾಲಕರ ಮಗಳು 612 ಅಂಕ ಗಳಿಸಿದ್ದರೆ, ಚಹಾ ಅಂಗಡಿಯಾತನ ಮಗ ಶೇ.94ರಷ್ಟು ಅಂಕಗಳಿಸಿದ್ದಾರೆ. ಇನ್ನು ವಾಚ್‌ಮನ್ ಪುತ್ರ 623 ಅಂಕ ಗಳಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಮೂಲ್ಕಿ(ಆ.11): ಬಾಗಲಕೋಟೆಯ ಗುಳ್ಳೆಗೂಡ್‌ ಗ್ರಾಮದ ರಿಕ್ಷಾ ಚಾಲಕರಾಗಿರುವ ಸಂಗಯ್ಯ ಮತ್ತು ಕಮಲಾಕ್ಷಿ ದಂಪತಿಯ ಹಿರಿಯ ಪುತ್ರಿ, ಕಿನ್ನಿಗೊಳಿ ಬಳಿಯ ಕಮ್ಮಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಸೌಮ್ಯಾ ಎಸ್‌.ಎಂ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 612 ಅಂಕ ಪಡೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸೌಮ್ಯಾ, ಕಳೆದ ನಾಲ್ಕು ವರ್ಷದಿಂದ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದು, ಪ್ರಾಂಶುಪಾಲ ಡಾ.ಎಸ್‌.ಪುಟ್ಟಸ್ವಾಮಿ ಸಹಿತ ಎಲ್ಲ ಶಿಕ್ಷಕರು ವಿಶೇಷವಾಗಿ ತರಗತಿ ಮಾಡುತ್ತಿದ್ದರು. ಗೊತ್ತಾಗದ ವಿಷಯವನ್ನು ಆಗಾಗ ಕೇಳಿ ಮಾಹಿತಿ ಪಡೆಯುತ್ತಿದ್ದೆ. ಇನ್ನೂ ಹೆಚ್ಚು ಅಂಕಗಳ ನಿರೀಕ್ಷೆ ಮಾಡಿದ್ದೆ. ಮುಂದೆ ವೈದ್ಯಳಾಗುವ ಆಸೆ ಇದ್ದು, ವಿಜ್ಞಾನ ವಿಷಯ ಆರಿಸಿಕೊಳ್ಳುವೆ. ಶಿಕ್ಷಣಕ್ಕೆ ಉತ್ತಮ ವಾತಾವರಣ ಇರುವ ಮಂಗಳೂರಿನಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸಲು ಇಚ್ಛಿಸಿದ್ದೇನೆ ಎಂದರು.

ಚಹಾ ಅಂಗಡಿಯಾತನ ಮಗನಿಗೆ ಶೇ.94 ಅಂಕ

ಆಲಮಟ್ಟಿ: ಚಹಾ ಅಂಗಡಿ ಮಾಲೀಕರೊಬ್ಬರ ಪುತ್ರನೊಬ್ಬ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.94 ಅಂಕ ಗಳಿಸಿದ್ದಾನೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯದ ಬಳಿ ಅಂಗಡಿ ಇಟ್ಟುಕೊಂಡು ಚಹಾ ಹಾಗೂ ಇನ್ನಿತರ ಸಣ್ಣಪುಟ್ಟ ವಸ್ತುಗಳ ಮಾರಾಟ ಮಾಡುತ್ತಿರುವ ಮುತ್ತಪ್ಪ ರಾಠೋಡನ ಮಗ ಕೃಷ್ಣಕುಮಾರ ರಾಠೋಡ ಈ ಸಾಧನೆ ಮೆರೆದಿರುವಾತ. 

SSLC ಫಲಿತಾಂಶ: ಸಿಲಿಕಾನ್ ಸಿಟಿ ಬೆಂಗಳೂರಿಗೆ 'B' ಗ್ರೇಡ್

ಕನ್ನಡದಲ್ಲಿ 125 ಅಂಕ, ಇಂಗ್ಲಿಷ್‌ 94, ಹಿಂದಿ 96, ಗಣಿತದಲ್ಲಿ 90, ಸಮಾಜದಲ್ಲಿ 93, ವಿಜ್ಞಾನದಲ್ಲಿ 89 ಅಂಕ ಸೇರಿ ಒಟ್ಟಾರೆ 587 ಅಂಕ ಪಡೆದಿದ್ದಾನೆ. ನನ್ನ ಮಗನ ವಿದ್ಯಾಭ್ಯಾಸದ ಕಡೆ ಲಕ್ಷ್ಯ ವಹಿಸಿಲ್ಲ. ಯಾವುದೇ ಟ್ಯೂಷನ್‌ಗೂ ಆತ ಹೋಗಲ್ಲ. ಶಾಲೆಯಲ್ಲಿ ಶಿಕ್ಷಕರು ಪಾಠವನ್ನೇ ಕೇಳಿ, ಮನೆಯಲ್ಲಿ ಅಭ್ಯಾಸ ಮಾಡಿ ಈ ಸಾಧನೆ ಮಾಡಿದ್ದಾನೆ. ನಾನು ಬೆಳಗ್ಗೆ ಕೆಲಸಕ್ಕೆ ಬಂದರೆ ರಾತ್ರಿಯೇ ಮನೆಗೆ ಹೋಗುತ್ತೇನೆ. ಇಂತಹ ಸ್ಥಿತಿಯಲ್ಲೂ ಮಗ ಸಾಧನೆ ಮಾಡಿದ್ದು ಹೆಮ್ಮೆ ತಂದಿದೆ ಎಂದು ವಿದ್ಯಾರ್ಥಿಯ ತಂದೆ ಮುತ್ತಪ್ಪ ರಾಠೋಡ ಹೇಳುತ್ತಾರೆ.

ಕೃಷಿ ಚಟುವಟಿಕೆ ಮಾಡಿ ವೀರಭದ್ರ ಸಾಧನೆ

ಬೆಳಗಾವಿ: ಬಿಡುವಿನ ವೇಳೆಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದ ಗೂಡ್ಸ್‌ ವಾಹನ ಚಾಲಕರೊಬ್ಬರ ಪುತ್ರನೊಬ್ಬ ಎಸ್ಸೆಸ್ಸೆಲ್ಸಿಯಲ್ಲಿ ವಿಶೇಷ ಸಾಧನೆ ಮೆರೆದಿದ್ದಾನೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಉಡಕೇರಿ ಗ್ರಾಮದ ವೀರಭದ್ರ ಬಸವರಾಜ ಕಲಭಾಂವಿ ಈ ಸಾಧನೆ ಮೆರೆದಿರುವಾತ. 

ಖಾಸಗಿ ಅನುದಾನಿತ ಶಾಲೆ ಶ್ರೀ ರಾಮಲಿಂಗೇಶ್ವರ ಪ್ರೌಢ ಶಾಲೆ ವಿದ್ಯಾರ್ಥಿಯಾದ ಈತ ಒಟ್ಟು 622 ಅಂಕದೊಂದಿಗೆ ಶೇ.99.52ರಷ್ಟು ಸಾಧನೆ ಮಾಡಿದ್ದಾನೆ. ಈತನಿಗೆ ವಿಜ್ಞಾನ, ಗಣಿತ, ಹಿಂದಿ, ಸಮಾಜ ವಿಜ್ಞಾನ ವಿಷಯಗಳಲ್ಲಿ ತಲಾ 100 ಅಂಕ, ಉಳಿದಂತೆ ಕನ್ನಡದಲ್ಲಿ 124, ಇಂಗ್ಲಿಷ್‌ನಲ್ಲಿ 98 ಅಂಕ ಲಭಿಸಿದೆ. 

ಬಡ ಕುಟುಂಬದಲ್ಲಿ ಜನಿಸಿದ ವೀರಭದ್ರನ ತಾಯಿ ಗೌರಮ್ಮ ಮನೆಗೆಲಸ ಮಾಡುತ್ತಿದ್ದರೆ, ತಂದೆ ಬಸವರಾಜ ಟಾಟಾ ಎಸ್‌ ಗೂಡ್ಸ್‌ ವಾಹನ ಚಲಾಯಿಸುತ್ತಾರೆ. ವೀರಭದ್ರ ಬಿಡುವಿನ ವೇಳೆ ತಮ್ಮ ಹೊಲದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದ. ಪ್ರತಿ ದಿನ ನಾಲ್ಕೈದು ತಾಸು ಓದಿ, ಶಿಕ್ಷಕರ ಪಾಠದಿಂದ ಸಾಧನೆ ಮಾಡಿದ್ದಾಗಿ ಹಾಗೂ ಮುಂದೆ ವಿಜ್ಞಾನ ವಿಷಯ ಓದಿ ಎಂಜಿನಿಯರಿಂಗ್‌ ಮಾಡಿ ನಾಡಿನ ಸೇವೆ ಮಾಡುವ ಬಯಕೆ ಹೊಂದಿದ್ದಾಗಿ ತಿಳಿಸಿದ್ದಾನೆ.

ಹರಿಹರದ ಎಂ.ಅಭಿಷೇಕ್‌ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ

ಹರಿಹರ: ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಗುತ್ತೂರು ಗ್ರಾಮದ ಟ್ಯಾಕ್ಸಿ ಚಾಲಕ ಮಂಜುನಾಥ್‌ ಪುತ್ರ ಎಂ.ಅಭಿಷೇಕ್‌ ಎಸ್‌ಎಸ್‌ಎಲ್‌ಸಿ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸುವ ಮೂಲಕ ದಾವಣಗೆರೆ ಜಿಲ್ಲೆ ಹಾಗೂ ತಾಲೂಕಿಗೂ ಕೀರ್ತಿ ತಂದಿದ್ದಾನೆ. 

ಟ್ಯಾಕ್ಸಿ ಚಾಲಕ ಮಂಜುನಾಥ್‌ ಹಾಗೂ ನೇತ್ರಾವತಿ ದಂಪತಿ ಮೊದಲನೇ ಮಗನಾದ ಅಭಿಷೇಕ್‌ ನಗರದ ಎಂಕೆಇಟಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು ಕನ್ನಡ ಪರೀಕ್ಷೆಯಲ್ಲಿ 625ಕ್ಕೆ 623 ಅಂಕಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಅಭಿಷೇಕ್‌ ತಂದೆ ಹರಿಹರ ತಾಲೂಕಿನ ಗುತ್ತೂರು ಗ್ರಾಮದ ನಿವಾಸಿಯಾಗಿದ್ದು, ಕಳೆದ ಹಲವು ವರ್ಷಗಳಿಂದ ಟ್ಯಾಕ್ಸಿ ಚಾಲಕನಾಗಿ ಮಂಜುನಾಥ್‌ ಜೀವನ ಸಾಗಿಸುತ್ತಿದ್ದಾರೆ.

ವಾಚ್‌ಮನ್‌ ಪುತ್ರನ ‘ಆಕಾಶ’ದೆತ್ತರ ಸಾಧನೆ

ದಾವಣಗೆರೆ: ಕಚೇರಿಗಳ ಮುಂಚೆ ಅಲ್ಪಸಂಬಳಕ್ಕೆ ವಾಚ್‌ಮನ್‌ ಕೆಲಸ ಮಾಡುವವರ ಪುತ್ರನೊಬ್ಬ ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯವೇ ತನ್ನತ್ತ ತಿರುಗಿ ನೋಡುವಂಥ ಸಾಧನೆ ಮಾಡಿದ್ದಾನೆ. ನಿಟುವಳ್ಳಿಯ 32ನೇ ವಾರ್ಡ್‌ನ ಕರಿಯಮ್ಮ ದೇವಸ್ಥಾನ ಸಮೀಪದ ವಾಸಿ ಆರ್‌.ರೇವಣಸಿದ್ದಯ್ಯ, ಎಂ.ಸಿ.ಮಾಲಾ ದಂಪತಿಯ ಪುತ್ರ ಆರ್‌.ಪ್ರಕಾಶ್‌ 623 ಅಂಕ ಗಳಿಸಿದ್ದಾನೆ. ಈತ ತಾಯಿ ಮಗನ ಓದಿಗಾಗಿ ಮನೆಯಲ್ಲೇ ಹೂವು ಕಟ್ಟುವ ಕಾಯಕ ನಡೆಸಿದರೆ, ಅಜ್ಜ ಬಸಯ್ಯ ಮನೆ ಮನೆಗಳಿಗೆ ಬಿಲ್ಪಪತ್ರೆ ನೀಡುವ ಕಾಯಕ ಮಾಡುತ್ತಾರೆ. ಇಲ್ಲಿನ ಸಿದ್ಧಗಂಗಾ ವಿದ್ಯಾಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿ ಆರ್‌.ಆಕಾಶ್‌ 625 ಅಥವಾ 624 ಅಂಕ ಗಳಿಸುವ ನಿರೀಕ್ಷೆ ಹೊಂದಿದ್ದ. ಆದರೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ತಲಾ 1 ಅಂಕ ಕಡಿಮೆಯಾಗಿದೆ. ಸಿದ್ಧಗಂಗಾ ಸಂಸ್ಥೆಯ ಶಿಕ್ಷಕರ ಮಾರ್ಗದರ್ಶನವೇ ಈ ಸಾಧನೆಗೆ ಕಾರಣ ಎಂದು ಹೇಳುವ ಪ್ರಕಾಶನಿಗೆ ಐಎಎಸ್‌ ಮಾಡುವ ಗುರಿ ಇದೆಯಂತೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ