
ಬೆಂಗಳೂರು, (ಆಗಸ್ಟ್.28): ಗಣಪ ಮತ್ತೆ ಬಂದಿದ್ದಾನೆ. ಇದೇ ಆಗಸ್ಟ್ 31ರಂದು ಎಲ್ಲೆಡೆ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗುತ್ತೆ, ಇದರಿಂದ ಸಂಭ್ರಮ ಮನೆ ಮಾಡಿದ್ದು, ಗಣೇಶ್ ಹಬ್ಬ ಆಚರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದ್ರೆ, ಹಬ್ಬಕ್ಕೆಂದು ಊರಿಗೆ ಹೋಗಬೇಕಿರುವವರು ಖಾಸಗಿ ಬಸ್ ಟಿಕೆಟ್ ದರ ನೋಡಿ ಕಕ್ಕಾಬಿಕ್ಕಿಯಾಗಿದ್ದಾರೆ.
ಹೌದು... ಗಣೇಶ ಹಬ್ಬ ಹಿನ್ನೆಲೆ ಖಾಸಗಿ ಬಸ್ ಮಾಲೀಕರು ಟಿಕೆಟ್ ದರವನ್ನು 2-3 ಪಟ್ಟು ಹೆಚ್ಚಿಸಿ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದಾರೆ. ಇದು ಸಾರಿಗೆ ಸಚಿವ ಶ್ರೀರಾಮುಲು ಗಮನಕ್ಕೆ ಬಂದಿದ್ದು, ಬಸ್ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಗಣೇಶ ಹಬ್ಬದ ಹಿನ್ನೆಲೆ ಸುಲಿಗೆ, ಖಾಸಗಿ ಬಸ್‌ಗಳ ಮೇಲೆ ಆರ್‌ಟಿಒ ದಾಳಿ
ಈ ಬಗ್ಗೆ ಟ್ವೀಟ್ ಮಾಡಿರುವ ಶ್ರೀರಾಮುಲು, ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರಗಳಿಂದ ತಮ್ಮ ಗ್ರಾಮಗಳಿಗೆ ತೆರಳುವ ಪ್ರಯಾಣಿಕರಿಗೆ ಕೆಲವು ಧನದಾಹಿ ಖಾಸಗಿ ಬಸ್ಗಳು ನಿಗದಿತ ದರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಣ ವಸೂಲಿ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಖಾಸಗಿ ಬಸ್ಗಳು ರೂಟ್ಗೆ ನಿಗದಿ ಪಡಿಸಿದ ದರವನ್ನಷ್ಟೇ ಪ್ರಯಾಣಿಕರಿಂದ ಪಡೆಯಬೇಕು. ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ದರವನ್ನು ಪಡೆದರೆ, ಅಂತಹ ಬಸ್ ಮಾಲೀಕರ ಮೇಲೆ ಯಾವುದೇ ಮುಲಾಜಿಲ್ಲದೆ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ನಾನು ಈಗಲೂ ಖಾಸಗಿ ಬಸ್ ಮಾಲೀಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಪ್ರಯಾಣಿಕರಿಗೆ ಹೊರೆಯಾಗದಂತೆ ನಿಗದಿಪಡಿಸಿದ ದರವನ್ನು ಮಾತ್ರ ತೆಗೆದುಕೊಳ್ಳಬೇಕು. ಅನಗತ್ಯವಾಗಿ ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ. ಅಕ್ರಮವಾಗಿ ಹಣ ಸಂಪಾದನೆಯೇ ನಮ್ಮ ಏಕೈಕ ಗುರಿ ಎಂದರೆ ಕ್ರಮಕ್ಕೆ ಸಿದ್ದರಾಗಿ ಎಂದಿದ್ದಾರೆ.
ಖಾಸಗಿ ಬಸ್‌ಗಳ ಮೇಲೆ RTO ದಾಳಿ
ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದ ಬೆಂಗಳೂರಿನ ಖಾಸಗಿ ಬಸ್‌ಗಳ ಮೇಲೆ ಸಾರಿಗೆ ಇಲಾಖೆ ಅಧಿಕಾರಿಗಳು ಶನಿವಾರ ರಾತ್ರಿ ದಿಢೀರ್ ದಾಳಿ ನಡೆಸಿದ್ದಾರೆ. ರಾಜ್ಯ ಸಾರಿಗೆ ಇಲಾಖೆ ಆಯುಕ್ತ ಕುಮಾರ್ ಸೂಚನೆ ಮೇರೆಗೆ ನಗರದ ಆನಂದರಾವ್ ಸರ್ಕಲ್, ಮೆಜೆಸ್ಟಿಕ್, ಕೆ.ಆರ್.ಪುರಂ. ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್, ಗೊರಗುಂಟೆಪಾಳ್ಯ, ಕಲಾಸಿಪಾಳ್ಯ, ಕೆ.ಆರ್.ಮಾರುಕಟ್ಟೆಸೇರಿ ವಿವಿಧ ಕಡೆ ಖಾಸಗಿ ಬಸ್ ನಿಲ್ದಾಣಗಳಿಗೆ ತೆರಳಿದ ಸಾರಿಗೆ ಅಧಿಕಾರಿಗಳು ದುಬಾರಿ ಟಿಕೆಟ್ ದರದ ಕುರಿತು ಕಾರ್ಯಾಚರಣೆ ನಡೆಸಿದರು. ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ತೆರಳುತ್ತಿದ್ದ ಬಸ್‌ಗಳನ್ನು ಏಕಾಏಕಿ ನಿಲ್ಲಿಸಿದ ಅಧಿಕಾರಿಗಳು ಬಸ್ ಒಳಗೆ ತೆರಳಿ ಪ್ರಯಾಣಿಕರ ಬಳಿ ಟಿಕೆಟ್ ದರದ ಬಗ್ಗೆ ವಿಚಾರಿಸಿದರು. ಬಳಿಕ ಹೆಚ್ಚು ಟಿಕೆಟ್ ದರ ಪಡೆದ ಬಸ್ ನಿರ್ವಾಹಕರು, ಏಜೆಂಟರ್ ಹಾಗೂ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.
ಹಬ್ಬ ಎಂದು ಮನಬಂದಂತೆ ಪ್ರಯಾಣ ದರ ಏರಿಸಿ ಗ್ರಾಹಕರ ಸುಲಿಗೆ ಮಾಡುವಂತಿಲ್ಲ. ಒಂದು ವೇಳೆ ಹೆಚ್ಚು ದರ ಪಡೆದರೆ ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಿ, ರಹದಾರಿ ರದ್ಧತಿಗೆ ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ (ಆರ್‌ಟಿಎ) ಶಿಫಾರಸು ಮಾಡುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದರು. ಹೆಚ್ಚುವರಿ ಟಿಕೆಟ್ ದರ ಪಡೆದ ಬಸ್‌ಗಳಿಗೆ ದಂಡ ವಿಧಿಸಿದ್ದು, ಕೆಲವೆಡೆ ಪ್ರಯಾಣಿಕರಿಗೆ ಟಿಕೆಟ್‌ನ ಹೆಚ್ಚುವರಿ ಮೊತ್ತವನ್ನು ಹಿಂದಿರುಗಿಸಲಾಗಿದೆ.
ದರ ಪರಿಶೀಲನೆಗೆ ಸಿಬ್ಬಂದಿ ನೇಮಕ
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳ ಟಿಕೆಟ್ ದರವನ್ನು ಸಾಮಾನ್ಯ ದರಕ್ಕಿಂತ ಎರಡು ಪಟ್ಟು ಹೆಚ್ಚಿಸಿರುವುದು ಸಾರಿಗೆ ಇಲಾಖೆಯ ಗಮನಕ್ಕೂ ಬಂದಿದೆ. ಸಾಮಾನ್ಯ ದಿನಗಳಲ್ಲಿ 800 ರೂಪಾಯಿ ಇರುತ್ತಿದ್ದ ಟಿಕೆಟ್ ದರವು 1,500ಕ್ಕೆ ಹೆಚ್ಚಾಗಿದೆ. ಇದರಿಂದ ಇದಕ್ಕೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ದರ ಪರಿಶೀಲನೆ ಮಾಡಲು ಪ್ರಮುಖ ಕಡೆಗಳಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಿದೆ.
ಆನಂದರಾವ್ ವೃತ್ತ, ಮೆಜೆಸ್ಟಿಕ್, ರೇಸ್‌ಕೋರ್ಟ್ ರಸ್ತೆ, ಕಲಾಸಿಪಾಳ್ಯ ರಸ್ತೆ, ಮೈಸೂರು ರಸ್ತೆ, ಪಾರ್ಲೆಜಿ ಫ್ಯಾಕ್ಟರಿ ಟೋಲ್, ಮಡಿವಾಳ, ಹೊಸೂರು ರಸ್ತೆ, ಹೊಸಕೋಟೆ ಟೋಲ್, ದೇವನಹಳ್ಳಿ ಟೋಲ್, ದೊಡ್ಡಬಳ್ಳಾಪುರ ರಸ್ತೆಯಲ್ಲಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಇವು ಸಂಜೆ 6ರಿಂದ ಮಧ್ಯರಾತ್ರಿವರೆಗೆ ಖಾಸಗಿ ಬಸ್‌ಗಳನ್ನು ಪರಿಶೀಲಿಸಲಿದ್ದಾರೆ. ಹೆಚ್ಚು ಟಿಕೆಟ್ ದರವನ್ನು ಅಕ್ರಮವಾಗಿ ಏರಿಕೆ ಮಾಡಿರುವುದು ಕಂಡುಬಂದರೆ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ