ಮೋದಿ ಜನ್ಮದಿನದಿಂದ ಗಾಂಧಿ ಜಯಂತಿವರೆಗೂ ಆಂದೋಲನ, ರಾಜ್ಯ ಆರೋಗ್ಯ ಇಲಾಖೆಯಿಂದ ಆಯೋಜನೆ
ಬೆಂಗಳೂರು(ಸೆ.17): ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಿಂದ (ಸೆಪ್ಟೆಂಬರ್ 17) ಮಹಾತ್ಮ ಗಾಂಧಿ ಜಯಂತಿವರೆಗೆ (ಅಕ್ಟೋಬರ್ 2) ರಾಜ್ಯಾದ್ಯಂತ ವಿಶೇಷ ಆರೋಗ್ಯ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ.
ಆರೋಗ್ಯ ಕೇಂದ್ರಗಳಲ್ಲಿ ರಕ್ತದಾನ, ಮಕ್ಕಳ ಆರೋಗ್ಯ ತಪಾಸಣೆ, ಕ್ಯಾನ್ಸರ್ ತಪಾಸಣೆ, ಕಣ್ಣಿನ ತಪಾಸಣೆ ಹಾಗೂ ವೃದ್ಧರು ಮತ್ತು ಶಾಲಾ ಮಕ್ಕಳಿಗೆ ಕನ್ನಡಕ ವಿತರಣೆ, ಮಕ್ಕಳು ಹಾಗೂ ವೃದ್ಧರಿಗೆ ಕಿವಿ ಆರೋಗ್ಯ ತಪಾಸಣೆ, ಗರ್ಭಿಣಿ ಹಾಗೂ ಮಕ್ಕಳಿಗಾಗಿ ಅನೀಮಯಾ ತಪಾಸಣೆ. ಅಸಾಂಕ್ರಾಮಿಕ ರೋಗಗಳ ತಪಾಸಣೆ, ವಿಶೇಷವಾಗಿ ಯುವಜನರಲ್ಲಿ ಹಾಗೂ ಮಕ್ಕಳಲ್ಲಿ ಹೃದಯ ಸಂಬಂಧಿ ರೋಗಗಳ ತಪಾಸಣೆ, ಮಧುಮೇಹ ತಪಾಸಣೆ, ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ, ಅಂಗಾಂಗ ದಾನ ಅಭಿಯಾನ, ಕೊರೋನಾ ಬೂಸ್ಟರ್ ಲಸಿಕೆ ವಿತರಣೆ, ಆಹಾರ ಸುರಕ್ಷತೆಯಡಿ ಈಟ್ ರೈಟ್ ಅಭಿಯಾನ ಆರೋಗ್ಯ ಇಲಾಖೆ ವತಿಯಿಂದ ನಡೆಯಲಿದೆ.
Narendra Modi Birthday: ಪ್ರಧಾನಿ ನರೇಂದ್ರ ಮೋದಿ ನಡೆದು ಬಂದ ಹಾದಿ, ಸಾಧನೆಯ ಮುನ್ನೋಟ
ಈ ವಿಶೇಷ ಅಭಿಯಾನದ ಹಿನ್ನೆಲೆ ಶುಕ್ರವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ವಿವಿಧ ಆಸ್ಪತ್ರೆಗಳ ನಿರ್ದೇಶಕರು ಹಾಗೂ ಜಿಲ್ಲಾ ಮಟ್ಟದ ಆರೋಗ್ಯಾಧಿಕಾರಿಗಳೊಂದಿಗೆ ವಿಡಿಯೋ ಸಭೆ ನಡೆಸಿದರು. ಆರೋಗ್ಯ ಉಪಕೇಂದ್ರಗಳ ವ್ಯಾಪ್ತಿಯಲ್ಲಿ 15 ದಿನಗಳ ಕಾಲ ನಿರಂತರವಾಗಿ ವಿಶೇಷ ಅಭಿಯಾನಗಳು ನಡೆಯಬೇಕು. ಆಶಾ ಕಾರ್ಯಕರ್ತೆಯರಿಗೆ ಈ ಬಗ್ಗೆ ತಿಳಿಸಿ, ಗುರಿ ನಿಗದಿ ಮಾಡಿ ಜನರನ್ನು ಉಪಕೇಂದ್ರಕ್ಕೆ ಕರೆದುಕೊಂಡು ಬರಲು ಕ್ರಮವಹಿಸಬೇಕು. ಎನ್‌ಜಿಒಗಳು ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳನ್ನು ಆಹ್ವಾನಿಸಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಕರೆ ನೀಡಬೇಕು ಎಂದು ಸೂಚಿಸಿದರು. ರಾಜ್ಯದಲ್ಲಿ ಕೊರೋನಾ ಮೂರನೇ ಡೋಸ್ ಪ್ರಮಾಣ ಶೇ.20 ರಷ್ಟುಮಾತ್ರ ಆಗಿದೆ. ಈ 15 ದಿನಗಳಲ್ಲಿ ಲಸಿಕಾಕರಣವು ದೊಡ್ಡ ಮಟ್ಟದಲ್ಲಿ ನಡೆಯಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಸಾಂಕ್ರಾಮಿಕ ಕಾಯಿಲೆ ಪತ್ತೆಗೆ ಸೂಚನೆ:
ರಾಜ್ಯದಲ್ಲಿ ಅಸಾಂಕ್ರಾಮಿಕ ಕಾಯಿಲೆಗಳಿಂದಾಗಿ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಆದ್ದರಿಂದ ಮಧುಮೇಹ, ಬಿಪಿ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ಎಷ್ಟುಎಂಬುದನ್ನು ಪತ್ತೆ ಮಾಡಬೇಕಿದೆ. ಜಿಲ್ಲಾ ಮಟ್ಟಅಥವಾ ತಾಲೂಕು ಮಟ್ಟದಲ್ಲಿ ಕ್ಯಾನ್ಸರ್ ತಪಾಸಣೆ ಶಿಬಿರ ಹಮ್ಮಿಕೊಳ್ಳಬೇಕು. 35 ವರ್ಷ ಮೇಲ್ಪಟ್ಟಮಹಿಳೆಯರು ಹಾಗೂ ಪುರುಷರನ್ನು ಕರೆದುಕೊಂಡು ಬಂದು ತಪಾಸಣೆ ಮಾಡಿಸಬೇಕು. 8, 9, 10 ನೇ ವರ್ಷ ವಯಸ್ಸಿನ ಮಕ್ಕಳಿಗೆ ಕಣ್ಣಿನ ತಪಾಸಣೆ ಮಾಡಬೇಕು ಎಂದು ತಿಳಿಸಿದರು.
ವಿಶ್ವವೇ ಭಾರತದತ್ತ ಮುಖ ಮಾಡುವಂತೆ ಮಾಡಿದ ಪ್ರಧಾನಿ ಮೋದಿ: ಸಂಸದ ಕರಡಿ
ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‌ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
1 ಕೋಟಿ ಆಯುಷ್ಮಾನ್ ಕಾರ್ಡ್ ವಿತರಣೆ ಗುರಿ
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು 35 ಲಕ್ಷ ಜನರಿಗೆ ನೀಡಲಾಗಿದೆ. ಇನ್ನೂ 65 ಲಕ್ಷದಷ್ಟುಕಾರ್ಡ್‌ಗಳನ್ನು ನೀಡಿ 1 ಕೋಟಿಯ ಗುರಿಯನ್ನು ತಲುಪಬೇಕು. ದೇಶದಲ್ಲಿ ಕರ್ನಾಟಕವೇ 1 ಕೋಟಿಯ ಗುರಿಯನ್ನು ಮೊದಲು ತಲುಪಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದರು.
ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ರಕ್ತದಾನ
ಪ್ರತಿ ಆರೋಗ್ಯ ಕೇಂದ್ರಗಳಲ್ಲಿಯೂ ರಕ್ತದಾನ ಶಿಬಿರ ಆಯೋಜಿಸಿ 15 ದಿನಕ್ಕೆ ನಿರ್ದಿಷ್ಟಗುರಿ ನೀಡಿ ರಕ್ತ ಸಂಗ್ರಹ ಮಾಡುವಂತೆ ಸೂಚಿಸಬೇಕು. ಹಾಗೆಯೇ ಅಂಗಾಂಗಗಳ ದಾನಕ್ಕೆ ಹೆಸರು ನೋಂದಾಯಿಸುವ ಚಟುವಟಿಕೆ ನಡೆಸಬೇಕು ಎಂದು ಸಚಿವ ಸುಧಾಕರ್ ತಿಳಿಸಿದರು.