ಸದನದಲ್ಲಿ ತುಳುವಿನಲ್ಲಿ ಸುನಿಲ್‌-ಖಾದರ್‌ ಚರ್ಚೆ, ಯಾವ ಭಾಷೆ ಕನ್ನಡದಲ್ಲಿ ಮಾತಾಡಿ ಎಂದಿದ್ದಕ್ಕೆ ಸ್ವೀಕರ್ ಉತ್ತರವಿದು

Published : Jul 26, 2024, 01:48 PM IST
ಸದನದಲ್ಲಿ ತುಳುವಿನಲ್ಲಿ ಸುನಿಲ್‌-ಖಾದರ್‌ ಚರ್ಚೆ, ಯಾವ ಭಾಷೆ ಕನ್ನಡದಲ್ಲಿ ಮಾತಾಡಿ ಎಂದಿದ್ದಕ್ಕೆ ಸ್ವೀಕರ್ ಉತ್ತರವಿದು

ಸಾರಾಂಶ

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್‌ ಹಾಗೂ ಬಿಜೆಪಿ ಸದಸ್ಯ ಸುನಿಲ್‌ಕುಮಾರ್‌ ಅವರು ಸದನದಲ್ಲಿ ಕೆಲ ಹೊತ್ತು ತುಳು ಭಾಷೆಯಲ್ಲೇ ಚರ್ಚೆ ನಡೆಸಿದ್ದು ಗಮನ ಸೆಳೆಯಿತು.

ವಿಧಾನಸಭೆ (ಜು.26): ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್‌ ಹಾಗೂ ಬಿಜೆಪಿ ಸದಸ್ಯ ಸುನಿಲ್‌ಕುಮಾರ್‌ ಅವರು ಸದನದಲ್ಲಿ ಕೆಲ ಹೊತ್ತು ತುಳು ಭಾಷೆಯಲ್ಲೇ ಚರ್ಚೆ ನಡೆಸಿದ್ದು ಗಮನ ಸೆಳೆಯಿತು. ಗುರುವಾರ ಕಲಾಪ ಆರಂಭವಾಗುತ್ತಲೇ ಸದನದ ಬಾವಿಗಿಳಿದ ಬಿಜೆಪಿ ಸದಸ್ಯರು ಮುಡಾ ಹಗರಣ ಚರ್ಚೆಗೆ ಅವಕಾಶ ಕೋರಿ ಘೋಷಣೆ ಕೂಗಲು ಶುರು ಮಾಡಿದರು.

ಈ ವೇಳೆ ಸುನಿಲ್‌ಕುಮಾರ್‌, ‘ಸ್ಪೀಕರ್‌ ಅವರೇ ನಿನ್ನೆಗೆ ಹೋಲಿಸಿದರೆ ಸ್ವಲ್ಪ ಬದಲಾಗಿದ್ದೀರಿ. ನಿಮ್ಮ ಮುಖದಲ್ಲಿ ಕಳೆ ಬಂದಿದೆ. ದಯಮಾಡಿ ಚರ್ಚೆಗೆ ಅವಕಾಶ ಕೊಡಿ’ ಎಂದು ತುಳು ಭಾಷೆಯಲ್ಲೇ ಕೋರಿದರು. ಈ ವೇಳೆ ಯು.ಟಿ. ಖಾದರ್‌, ಅದಕ್ಕಿಂತ ಮೊದಲು ಸದನಕ್ಕೆ ಬೇಗ ಬಂದವರ ಹೆಸರು ಓದುತ್ತೇನೆ ಎಂದು ಕನ್ನಡದಲ್ಲಿ ಹೇಳಿ ಸದಸ್ಯರ ಹೆಸರುಗಳನ್ನು ಓದಿದರು.

ದರ್ಶನ್ ಬಿಡುಗಡೆಗಾಗಿ ಕೊಲ್ಲೂರಿನಲ್ಲಿ ಪತ್ನಿ ವಿಜಯಲಕ್ಷ್ಮಿ ನವಚಂಡಿಕಾ ಹೋಮ!, ಏನಿದರ ವಿಶೇಷ?

ಬಳಿಕ ಸುನಿಲ್‌ ಕುಮಾರ್‌ ಅವರು, ತುಳು ಭಾಷೆಯಲ್ಲೇ ಚರ್ಚೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪೀಕರ್‌ ಅವರು ತುಳು ಭಾಷೆಯಲ್ಲೇ ಉತ್ತರಿಸಿ ಇದೆಲ್ಲಾ ಸರಿ ಹೋಗಲಿ ಮೊದಲು ಎಂಬರ್ಥದಲ್ಲಿ ಹೇಳಿದರು. ಈ ತುಳು ಭಾಷೆಯಲ್ಲಿನ ಮಾತುಕತೆ ಮುಂದುವರೆಯುತ್ತಿದ್ದರಿಂದ ಕೆಲ ಸದಸ್ಯರು, ‘ಯಾವ ಭಾಷೆ ಮಾಡುತ್ತಿದ್ದೀರಿ. ಕನ್ನಡದಲ್ಲಿ ಮಾತನಾಡಿ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಯು.ಟಿ. ಖಾದರ್‌, ‘ಇದು ಯಾವುದೋ ಭಾಷೆಯಲ್ಲ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ರಾಜ್ಯದ ಭಾಷೆ. ಅದರ ಸಂಸ್ಕೃತಿ, ಪರಂಪರೆ ಕೇಳಿಸಿಕೊಂಡರೆ ನೀವು ಕೂಡ ಕಲಿಯುತ್ತೀರಿ. ಯಾವುದೇ ಅಧಿಕೃತ ಲಿಪಿ ಇಲ್ಲದೆ ಸಾವಿರಾರು ವರ್ಷಗಳಿಂದ ಅಸ್ತಿತ್ವ ಉಳಿಸಿಕೊಂಡಿರುವ ಭಾಷೆ ತುಳು’ ಎಂದು ಹೇಳಿ ಸಭಾಧ್ಯಕ್ಷರ ಸ್ಥಾನದಿಂದ ತುಳು ಭಾಷೆ ಬಗೆಗಿನ ಅಭಿಮಾನ ಮೆರೆದರು.

ವರ್ಷಾಂತ್ಯಕ್ಕೆ ಹಳದಿ ಮೆಟ್ರೋ ಓಪನ್, ಇನ್ಫೋಸಿಸ್ ಅನುದಾನಿತ ಕೋನಪ್ಪನ ಅಗ್ರಹಾರ ನಿಲ್ದಾಣದಲ್ಲಿ ಹೈಟೆಕ್ ಸೌಲಭ್ಯ!

ತುಳು ಭಾಷೆಗೆ ಮಾನ್ಯತೆ ನೀಡುವಂತೆ ಮನವಿ: ಮಂಗಳವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಅಶೋಕ್ ಕುಮಾರ್ ರೈ, ರಾಜ್ಯದಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೆ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಸಂಬಂಧ ಮಾತನಾಡಿದರು. ಈ  ಸಂಬಂಧ ಕಾನೂನು ಇಲಾಖೆಯ ಅಭಿಪ್ರಾಯ ಕೇಳಿದ್ದು,  ಸ್ಪೀಕರ್ ನೀಡಿರುವ ಸಲಹೆಯಂತೆ ಅಧಿವೇಶನದ ಬಳಿಕ ಅವರ ಅಧ್ಯಕ್ಷತೆಯಲ್ಲೆ ಸಚಿವರು, ಶಾಸಕರು, ತುಳು ಅಕಾಡೆಮಿಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ನೀಲನಕ್ಷೆ ಕುರಿತು ಚರ್ಚಿಸಲಾಗುವುದು. ತುಳು ಭಾಷೆಯ ಪ್ರಾಚೀನತೆ, ಇತಿಹಾಸ ಹಾಗೂ ಸೌಂದರ್ಯದ ಬಗ್ಗೆ ನಮಗೂ ಅಭಿಮಾನವಿದೆ. ಸರಕಾರ ಈ ವಿಚಾರದಲ್ಲಿ ಸಕಾರಾತ್ಮಕ ಭಾವನೆ ಹೊಂದಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ತುಳು ಭಾಷೆಯ ಕುರಿತು ಈಗಾಗಲೆ ಮೋಹನ್ ಆಳ್ವ ಸಮಿತಿಯ ವರದಿ ಸರಕಾರದ ಮುಂದಿದೆ. ಅದನ್ನು ಕಾನೂನು ಇಲಾಖೆಗೆ ಕಳುಹಿಸಿಕೊಟ್ಟಿದ್ದೇವೆ. ಆಂಧ್ರಪ್ರದೇಶದಲ್ಲಿ ತೆಲುಗು ಜೊತೆಗೆ ಉರ್ದು, ಬಿಹಾರದಲ್ಲಿ ಬಿಹಾರಿ ಜೊತೆಗೆ ಹಿಂದಿ, ಪಶ್ಚಿಮ ಬಂಗಾಳದಲ್ಲಿ ಬಂಗಾಳಿ, ಬಿಹಾರಿ, ಉರ್ದು ಹೀಗೆ ಪ್ರಾದೇಶಿಕವಾರು ಮೂರು ಭಾಷೆಗಳನ್ನು ಅಧಿಕೃತವಾಗಿ ಬಳಸಲಾಗುತ್ತಿದೆ ಎಂದು  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಪರವಾಗಿ ಪ್ರಿಯಾಂಕ್ ಖರ್ಗೆ ಉತ್ತರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌