
ನವದೆಹಲಿ (ಏ.29): ದಶಕದ ಹಿಂದೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಧರ್ಮಸ್ಥಳದ 17 ವರ್ಷದ ಬಾಲಕಿ ಸೌಜನ್ಯ ಅ*ತ್ಯಾಚಾರ ಮತ್ತು ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ಆದೇಶ ನೀಡಿದೆ. ಪ್ರಕರಣದ ಮರು ತನಿಖೆ (De novo investigation) ನಡೆಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ಬಗ್ಗೆ ತನ್ನ ಸ್ಪಷ್ಟ ನಿಲುವನ್ನು ತಿಳಿಸುವಂತೆ ಕರ್ನಾಟಕ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಸಿಬಿಐ ತನಿಖೆಯ ನಂತರವೂ ಆರೋಪಿ ಖುಲಾಸೆಗೊಂಡಿರುವ ಹಿನ್ನೆಲೆಯಲ್ಲಿ, ಮರು ತನಿಖೆಯ ಅಗತ್ಯತೆ ಕುರಿತು ಸರ್ಕಾರವು ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ. ಈ ಹಿಂದೆ ಕಾಲಾವಕಾಶ ಕೇಳಿದ್ದರೂ ಸಹ, ಈವರೆಗೆ ಕ್ರಮಗಳ ವಿವರಗಳನ್ನು ಸಲ್ಲಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. "ಈ ಪ್ರಕರಣದ ಬಗ್ಗೆ ಮರು ತನಿಖೆ ನಡೆಸಲು ನೀವು ವಿಶೇಷ ತನಿಖಾ ದಳವನ್ನು (SIT) ರಚಿಸಬಹುದೇ ಎಂಬ ಬಗ್ಗೆ ಅಫಿಡವಿಟ್ ಸಲ್ಲಿಸಿ. ಇತರ ಆರೋಪಿಗಳ ಪಾತ್ರದ ಬಗ್ಗೆ ತನಿಖೆ ನಡೆಸುವ ಸಾಧ್ಯತೆ ಇದೆಯೇ ಎಂಬ ಬಗ್ಗೆ ನಮಗೆ ಸ್ಪಷ್ಟ ನಿಲುವನ್ನು ನೀಡಿ," ಎಂದು ರಾಜ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ (AAG) ಅವಿಷ್ಕರ್ ಸಿಂಘ್ವಿ ಅವರಿಗೆ ಪೀಠವು ಖಡಕ್ ಸೂಚನೆ ನೀಡಿತು.
ಸಂತ್ರಸ್ತೆಯ ಪರವಾಗಿ ಹಾಜರಿದ್ದ ಹಿರಿಯ ವಕೀಲರಾದ ಶೋಭಾ ಗುಪ್ತಾ, ಆನಂದ್ ಸಂಜಯ್ ಎಂ. ನುಲಿ ಮತ್ತು ಶೇಖರ್ ಜಿ. ದೇವಸಾ ಅವರು ನ್ಯಾಯಾಲಯಕ್ಕೆ ಆತಂಕಕಾರಿ ವಿಷಯವೊಂದನ್ನು ತಿಳಿಸಿದರು. "ಈ ಪ್ರಕರಣದಲ್ಲಿ ಅನೇಕ ಸಾಕ್ಷಿಗಳು ನಿಗೂಢ ಸಂದರ್ಭಗಳಲ್ಲಿ ಸಾವನ್ನಪ್ಪಿದ್ದಾರೆ," ಎಂದು ಅವರು ವಾದಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಎಎಜಿ ಅವರಿಗೆ ನಿರ್ದೇಶನ ನೀಡಿತು.
ಸಂತ್ರಸ್ತ ಕುಟುಂಬದ ಪರ ವಕೀಲರು ಹೊಸದಾಗಿ ಸಿಬಿಐ ತನಿಖೆಗೆ ಒತ್ತಾಯಿಸಿದರು. "ಘಟನೆ 2012ರಲ್ಲಿ ನಡೆದಿದೆ, 2013ರಲ್ಲೇ ಸಿಬಿಐಗೆ ವಹಿಸಲಾಗಿತ್ತು" ಎಂದು ಪೀಠವು ಈ ವೇಳೆ ನೆನಪಿಸಿತು. ಅದಕ್ಕೆ ಉತ್ತರಿಸಿದ ವಕೀಲರು, "ಅದೃಷ್ಟವಶಾತ್ ಸಂತ್ರಸ್ತೆಯ ವಸ್ತುಗಳು ಇನ್ನೂ ಸಂರಕ್ಷಿಸಲ್ಪಟ್ಟಿವೆ, ಡಿಎನ್ಎ ಪರೀಕ್ಷೆ ಮಾಡಬಹುದು. ಅಸಲಿ ಅಪರಾಧಿಗಳು ಬೇರೆಯೇ ವ್ಯಕ್ತಿಗಳಾಗಿದ್ದಾರೆ ಎಂದು ವಿಚಾರಣಾ ನ್ಯಾಯಾಲಯವೇ ಹೇಳಿದೆ," ಎಂದು ಗಮನಸೆಳೆದರು. ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 14ಕ್ಕೆ ನಿಗದಿಪಡಿಸಿದೆ.
2023 ಜೂನ್ 16ಕ್ಕೆ ವಿಚಾರಣಾ ನ್ಯಾಯಾಲಯವು ಆರೋಪಿ ಸಂತೋಷ್ ರಾವ್‌ನನ್ನು ಖುಲಾಸೆಗೊಳಿಸಿತ್ತು. ಪ್ರಾಸಿಕ್ಯೂಷನ್ ಆರೋಪವನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ಹೇಳಿದ್ದ ನ್ಯಾಯಾಲಯ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಮಿತಿ ರಚಿಸಲು ಸೂಚಿಸಿತ್ತು. 2024ರಲ್ಲಿ ಸಂತ್ರಸ್ತೆಯ ತಂದೆ ಕರ್ನಾಟಕ ಹೈಕೋರ್ಟ್‌ನಲ್ಲಿ ಮರು ತನಿಖೆಗೆ ಅರ್ಜಿ ಸಲ್ಲಿಸಿದ್ದರು. ಅದೇ ವರ್ಷದ ಆಗಸ್ಟ್ 20ರಂದು ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ಆದರೆ, "ಸಂತೋಷ್ ರಾವ್ ಖುಲಾಸೆಯಾಗಿರುವುದರಿಂದ ಅಸಲಿ ಅಪರಾಧಿ ಯಾರು ಎಂಬ ಪ್ರಶ್ನೆ ಏಳುತ್ತದೆ, ಇದು ಖಂಡಿತವಾಗಿಯೂ ಮರು ತನಿಖೆಯನ್ನು ಬಯಸುತ್ತದೆ," ಎಂದು ಅಭಿಪ್ರಾಯಪಟ್ಟಿತ್ತು.
ಧರ್ಮಸ್ಥಳದ ಸುತ್ತಮುತ್ತ ನೂರಾರು ಶವಗಳನ್ನು ಹೂತುಹಾಕಲಾಗಿದೆ ಎಂಬ ವ್ಯಕ್ತಿಯೊಬ್ಬನ ಹೇಳಿಕೆಯ ಆಧಾರದ ಮೇಲೆ, ಕಳೆದ 20 ವರ್ಷಗಳಲ್ಲಿ ನಡೆದ ಕೊ*ಲೆ, ಅ*ತ್ಯಾಚಾರ ಮತ್ತು ನಾಪತ್ತೆ ಪ್ರಕರಣಗಳ ತನಿಖೆಗೆ ಕರ್ನಾಟಕ ಸರ್ಕಾರ ಈಗಾಗಲೇ ಎಸ್‌ಐಟಿ ರಚಿಸಿದ್ದು, ಅದರ ಅಂತಿಮ ವರದಿ ಇನ್ನೂ ಸಲ್ಲಿಕೆಯಾಗಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ