ಸಿಹಿ ಸುದ್ದಿ- ಉತ್ತಮ ಮಳೆಯಿಂದ ರೈತರಲ್ಲಿ ಉತ್ಸಾಹ| ಈ ವೇಳೆಗೆ 46 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಬೇಕಿತ್ತು, ಆದರೆ 51 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ| ಸಕಾಲದಲ್ಲಿ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ಉತ್ತಮ ಬಿತ್ತನೆ: ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್|
ಸಂಪತ್ ತರೀಕೆರೆ
ಬೆಂಗಳೂರು(ಆ.08): ಕೋವಿಡ್-19 ಸಂಕಷ್ಟದ ಕಾಲದಲ್ಲಿಯೂ ರೈತರ ಉತ್ಸಾಹ ಕಡಿಮೆಯಾಗಿಲ್ಲ. ರಾಜ್ಯದ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿತ್ತನೆ ಪ್ರಮಾಣ ಕೂಡ ಹೆಚ್ಚಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ ಶೇ.114 ರಷ್ಟು ಜಾಗದಲ್ಲಿ ಬಿತ್ತನೆಯಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ (ಜುಲೈ 31) ರಾಜ್ಯದಲ್ಲಿ 44.99 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು. ಈ ಬಾರಿ 51.27 ಲಕ್ಷ ಹೆಕ್ಟೇರ್ (ಗುರಿ 73 ಲಕ್ಷ ಹೆಕ್ಟೇರ್) ನಲ್ಲಿ ಬಿತ್ತನೆ ಪೂರ್ಣಗೊಂಡಿದೆ. ವಾಡಿಕೆಯಂತೆ ಈ ಅವಧಿಯಲ್ಲಿ 46.11 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಬೇಕಿತ್ತು. ಒಳ್ಳೆಯ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಬಿತ್ತನೆ ಕೂಡ ಉತ್ತಮವಾಗಿದೆ. ಸೆಪ್ಟೆಂಬರ್ ಅಂತ್ಯದವರೆಗೆ ಬಿತ್ತನೆ ನಡೆಯಲಿರುವುದರಿಂದ ಶೇ.100 ರಷ್ಟು ಗುರಿ ಸಾಧಿಸುವ ನಿರೀಕ್ಷೆ ಇದೆ ಎಂದು ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ಈ ಸಲ ಬಂಪರ್ ಬಿತ್ತನೆ: ಭರ್ಜರಿ ಬೆಳೆ ಸಾಧ್ಯತೆ!
ರಾಜ್ಯದಲ್ಲಿ ಏಕದಳ ಧಾನ್ಯಗಳಾದ ಭತ್ತ (2.47 ಲಕ್ಷ ಹೆಕ್ಟೇರ್), ಜೋಳ (59 ಸಾವಿರ), ರಾಗಿ (2.19 ಲಕ್ಷ), ಮೆಕ್ಕೆಜೋಳ (10.85 ಲಕ್ಷ), ಸಜ್ಜೆ (1.32 ಲಕ್ಷ), ತೃಣಧಾನ್ಯಗಳು (14 ಸಾವಿರ) ಹಾಗೂ ದ್ವಿದಳ ಧಾನ್ಯಗಳಾದ ತೊಗರಿ (10.26 ಲಕ್ಷ ಹೆಕ್ಟೇರ್), ಹುರುಳಿ (2 ಸಾವಿರ), ಉದ್ದು (1.01 ಲಕ್ಷ), ಹೆಸರು (3.44 ಲಕ್ಷ), ಅಲಸಂದೆ ಮತ್ತು ಇತರೆ (58 ಸಾವಿರ), ಅವರೆ (17 ಸಾವಿರ), ಮಟಕಿ (2 ಸಾವಿರ ಹೆಕ್ಟೇರ್) ಹೀಗೆ ಆಹಾರ ಧಾನ್ಯಗಳನ್ನು ಒಟ್ಟು 33.11 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.
ಎಣ್ಣೆ ಕಾಳುಗಳಾದ ಶೇಂಗಾ (3.57 ಲಕ್ಷ ಹೆಕ್ಟೇರ್), ಎಳ್ಳು (25 ಸಾವಿರ), ಸೂರ್ಯಕಾಂತಿ (62 ಸಾವಿರ), ಹರಳು (4 ಸಾವಿರ), ಹುಚ್ಚೆಳ್ಳು (3 ಸಾವಿರ), ಸೋಯಾ ಅವರೆ (3.21 ಲಕ್ಷ) ಮತ್ತು ವಾಣಿಜ್ಯ ಬೆಳೆಗಳಾದ ಹತ್ತಿ (4.82 ಲಕ್ಷ ಹೆಕ್ಟೇರ್), ಕಬ್ಬು (4.88 ಲಕ್ಷ), ತಂಬಾಕು (82 ಸಾವಿರ) ಹೀಗೆ ಎಣ್ಣೆಕಾಳು ಮತ್ತು ವಾಣಿಜ್ಯ ಬೆಳೆಗಳು ಒಟ್ಟು 18.16 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಆಹಾರ ಧಾನ್ಯ, ಎಣ್ಣೆಕಾಳು ಮತ್ತು ವಾಣಿಜ್ಯ ಬೆಳೆಗಳು ಒಟ್ಟು ಸೇರಿ 51.27 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆ ಕನ್ನಡ ಪ್ರಭಕ್ಕೆ ಮಾಹಿತಿ ನೀಡಿದೆ.
ಈ ಬಾರಿ ನೈಋುತ್ಯ ಮಂಗಾರು ಮಳೆ ಜೂ.1ರಿಂದ ಜುಲೈ 31ರವರೆಗೆ ಸಾಮಾನ್ಯವಾಗಿ 471 ಮಿ.ಮೀ ಮಳೆಯಾಗಬೇಕಿತ್ತು. ವಾಸ್ತವಿಕವಾಗಿ 445 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.5ರಷ್ಟುಮಳೆ ಕಡಿಮೆಯಾಗಿದೆ. ಆದರೆ ಆಗಸ್ಟ್ ಮೊದಲ ಮತ್ತು ಎರಡನೇ ವಾರದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು, ಬಿತ್ತನೆಯೂ ಚುರುಕುಗೊಳ್ಳುವ ಸಾಧ್ಯತೆ ಇದೆ.
ಈ ಮುಂಗಾರು ಹಂಗಾಮಿಗೆ 5.97 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದ್ದು ಈವರೆಗೆ ರೈತ ಸಂಪರ್ಕ ಕೇಂದ್ರಗಳಲ್ಲಿ 3,42,692.80 ಕ್ವಿಂಟಾಲ್‌ಗಳಷ್ಟುಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. 54,576.27 ಕ್ವಿಂಟಾಲ್‌ಗಳಷ್ಟುಬಿತ್ತನೆ ಬೀಜ ದಾಸ್ತಾನಿದೆ. ಹಾಗೆಯೇ 14.49 ಲಕ್ಷ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರ ಸರಬರಾಜು ಮಾಡಲಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ಸಕಾಲದಲ್ಲಿ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ಉತ್ತಮ ಬಿತ್ತನೆಯಾಗಿರುತ್ತದೆ. ಬೆಳೆಗಳ ಪರಿಸ್ಥಿತಿ ಚೆನ್ನಾಗಿದೆ. ಬಿತ್ತನೆ ಕಾರ್ಯ ಮುಂದುವರೆದಿದೆ. ಮುಖ್ಯವಾಗಿ ನೀರಾವರಿ ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯ ಪ್ರಗತಿಯಲ್ಲಿದೆ. ಶೇ.100 ರಷ್ಟು ಬಿತ್ತನೆಯಾಗುವ ನಿರೀಕ್ಷೆ ಇದೆ ಎಂದು ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.