
ನೈಋತ್ಯ ರೈಲ್ವೆ (South Western Railway) ಅಧೀನದಲ್ಲಿರುವ ಬೆಂಗಳೂರು ಡಿವಿಜನ್ ವ್ಯಾಪ್ತಿಯಲ್ಲಿ ಮಲ್ಲಸಂದ್ರ ಮತ್ತು ಗುಬ್ಬಿ ರೈಲು ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ (LC No.50) ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಯ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸುವ ಮೊದಲು ಈ ಬದಲಾವಣೆಗಳನ್ನು ಗಮನಿಸುವಂತೆ ಸೂಚಿಸಲಾಗಿದೆ.
ಕಾಮಗಾರಿಯ ಕಾರಣದಿಂದ ಕೆಲವು ಪ್ರಮುಖ ರೈಲುಗಳನ್ನು ನಿರ್ದಿಷ್ಟ ದಿನಗಳಲ್ಲಿ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 16239/16240 ಚಿಕ್ಕಮಗಳೂರು – ಯಶವಂತಪುರ – ಚಿಕ್ಕಮಗಳೂರು ದೈನಂದಿನ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 12614 KSR ಬೆಂಗಳೂರು – ಮೈಸೂರು ಒಡೆಯರ್ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳನ್ನು ಏಪ್ರಿಲ್ 8 ಮತ್ತು 15, 2026 ರಂದು ರದ್ದುಗೊಳಿಸಲಾಗಿದೆ. ಇದೇ ರೀತಿ ರೈಲು ಸಂಖ್ಯೆ 66567 ಕೆಎಸ್ಆರ್ ಬೆಂಗಳೂರು–ತುಮಕೂರು ಮೆಮು ಹಾಗೂ ರೈಲು ಸಂಖ್ಯೆ 66572 ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು ರೈಲುಗಳನ್ನು ಏಪ್ರಿಲ್ 8, 2026 ರಂದು ರದ್ದುಗೊಳಿಸಲಾಗಿದೆ.
ಏಪ್ರಿಲ್ 8, 11, 12 ಮತ್ತು 15 ರಂದು ರೈಲು ಸಂಖ್ಯೆ 20652 ತೆಲಂಗಾಣ – ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಅರಸೀಕೆರೆ ಮತ್ತು ಬೆಂಗಳೂರು ನಡುವಿನ ಸಂಚಾರವನ್ನು ರದ್ದುಗೊಳಿಸಲಾಗುತ್ತದೆ. ಈ ರೈಲು ಅರಸೀಕೆರೆಯಲ್ಲಿ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ. ಇದೇ ದಿನಗಳಲ್ಲಿ ರೈಲು ಸಂಖ್ಯೆ 12725 ಕೆಎಸ್ಆರ್ ಬೆಂಗಳೂರು–ದಾರವಾಡ ಸಿದ್ದಗಂಗಾ ಎಕ್ಸ್‌ಪ್ರೆಸ್ ಬೆಂಗಳೂರು ಮತ್ತು ಅರಸೀಕೆರೆ ನಡುವೆ ಸಂಚರಿಸುವುದಿಲ್ಲ. ಈ ರೈಲು ಬೆಂಗಳೂರಿನ ಬದಲು ಅರಸೀಕೆರೆಯಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ. ಹಾಗೆಯೇ ಏಪ್ರಿಲ್ 8 ಮತ್ತು 15 ರಂದು ರೈಲು ಸಂಖ್ಯೆ 12726 ಧಾರವಾಡ–ಕೆಎಸ್ಆರ್ ಬೆಂಗಳೂರು ಸಿದ್ದಗಂಗಾ ಎಕ್ಸ್‌ಪ್ರೆಸ್ ರೈಲು ಅರಸೀಕೆರೆ ಮತ್ತು ಬೆಂಗಳೂರು ನಡುವೆ ರದ್ದಾಗಲಿದ್ದು, ಅರಸೀಕೆರೆಯಲ್ಲೇ ಪ್ರಯಾಣ ಮುಕ್ತಾಯಗೊಳಿಸಲಿದೆ.
ಏಪ್ರಿಲ್ 7 ಮತ್ತು 14 ರಂದು ವಾಸ್ಕೋ-ಡ-ಗಾಮ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17310 ವಾಸ್ಕೋಡಗಾಮ–ಯಶವಂತಪುರ ಎಕ್ಸ್‌ಪ್ರೆಸ್ ರೈಲು ಹಾಸನ ಮತ್ತು ನೆಲಮಂಗಲ ಮಾರ್ಗವಾಗಿ ಯಶವಂತಪುರಕ್ಕೆ ತಲುಪಲಿದೆ. ಈ ಕಾರಣದಿಂದಾಗಿ ಈ ರೈಲು ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ. ಅದೇ ರೀತಿ ಏಪ್ರಿಲ್ 7 ಮತ್ತು 14 ರಂದು ವೇಲಂಕಣ್ಣಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17316 ವೇಲಂಕಣ್ಣಿ–ವಾಸ್ಕೋಡಗಾಮ ವೀಕ್ಲಿ ಎಕ್ಸ್‌ಪ್ರೆಸ್ ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ ಈ ರೈಲು ತುಮಕೂರು ಮತ್ತು ತಿಪಟೂರು ನಿಲ್ದಾಣಗಳನ್ನು ತಪ್ಪಿಸಲಿದೆ.
ಏಪ್ರಿಲ್ 8 ಮತ್ತು 15 ರಂದು ರೈಲು ಸಂಖ್ಯೆ 20689 ಯಶವಂತಪುರ– ಶಿವಮೊಗ್ಗ ಟೌನ್ ಡೈಲಿ ಎಕ್ಸ್‌ಪ್ರೆಸ್ ಚಿಕ್ಕಬಾಣಾವರ, ನೆಲಮಂಗಲ, ಹಾಸನ ಹಾಗೂ ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಮತ್ತು ತಿಪಟೂರಿನಲ್ಲಿ ನಿಲುಗಡೆ ಇರುವುದಿಲ್ಲ. ಇದೇ ರೀತಿ ಏಪ್ರಿಲ್ 8 ಮತ್ತು 15 ರಂದು ರೈಲು ಸಂಖ್ಯೆ 20676 ಮೈಸೂರು–ಬೆಳಗಾವಿ ವಿಶ್ವಮಾನವ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮೈಸೂರು, ಹೊಳೆನರಸೀಪುರ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಪಾಂಡವಪುರದಿಂದ ತಿಪಟೂರಿನವರೆಗೆ ನಿಲುಗಡೆ ಇರುವುದಿಲ್ಲ.
ಏಪ್ರಿಲ್ 10 ಮತ್ತು 11 ರಂದು ವಾಸ್ಕೋಡಗಾಮದಿಂದ ಹೊರಡುವ ರೈಲು ಸಂಖ್ಯೆ 17310 ವಾಸ್ಕೋಡಗಾಮ–ಯಶವಂತಪುರ ಎಕ್ಸ್‌ಪ್ರೆಸ್ ಮಾರ್ಗಮಧ್ಯೆ ಸುಮಾರು 20 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ. ಇದೇ ರೀತಿ ಏಪ್ರಿಲ್ 11 ಮತ್ತು 12 ರಂದು ರೈಲು ಸಂಖ್ಯೆ 20689 ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ಮಾರ್ಗಮಧ್ಯೆ ಸುಮಾರು 60 ನಿಮಿಷಗಳ ಕಾಲ ತಾತ್ಕಾಲಿಕ ನಿಯಂತ್ರಣಕ್ಕೆ ಒಳಪಡಲಿದೆ.
ಏಪ್ರಿಲ್ 6 ಮತ್ತು 13 ರಂದು ರೈಲು ಸಂಖ್ಯೆ 19667 ಉದಯಪುರ ಸಿಟಿ – ಮೈಸೂರು ಹಮ್‌ಸಫರ್ ಎಕ್ಸ್‌ಪ್ರೆಸ್ ಉದಯಪುರದಿಂದ ಸುಮಾರು 200 ನಿಮಿಷ ತಡವಾಗಿ ಹೊರಡಲಿದೆ. ಅದೇ ದಿನಗಳಲ್ಲಿ ರೈಲು ಸಂಖ್ಯೆ 22497 Sri ಗಂಗಾನಗರ – ತಿರುಚಿರಾಪಳ್ಳಿ ಹಮ್‌ಸಫರ್ ಎಕ್ಸ್‌ಪ್ರೆಸ್ ಶ್ರೀಗಂಗಾನಗರದಿಂದ ಸುಮಾರು 150 ನಿಮಿಷ ತಡವಾಗಿ ಹೊರಡಲಿದೆ. ಇದೇ ವೇಳೆ ಏಪ್ರಿಲ್ 8 ಮತ್ತು 15 ರಂದು ರೈಲು ಸಂಖ್ಯೆ 12649 ಯಶವಂತಪುರ–Hazrat Nizamuddin ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ಯಶವಂತಪುರದಿಂದ ಸುಮಾರು 30 ನಿಮಿಷ ತಡವಾಗಿ ಹೊರಡಲಿದೆ.
ಹಾಗೆಯೇ ಏಪ್ರಿಲ್ 8 ಮತ್ತು 15 ರಂದು ರೈಲು ಸಂಖ್ಯೆ 12777 ಹುಬ್ಬಳ್ಳಿ – ತಿರುವನಂತಪುರಂ ನಾರ್ಥ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹುಬ್ಬಳ್ಳಿಯಿಂದ ಸುಮಾರು 60 ನಿಮಿಷ ತಡವಾಗಿ ಹೊರಡಲಿದ್ದು, ಮಾರ್ಗಮಧ್ಯೆ ಸುಮಾರು 40 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ. ರೈಲ್ವೆ ಇಲಾಖೆ ಪ್ರಕಟಿಸಿರುವ ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರು ತಮ್ಮ ಪ್ರಯಾಣ ಯೋಜನೆಗಳನ್ನು ಮುಂಚಿತವಾಗಿ ತಿದ್ದುಪಡಿ ಮಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ