ಎಸ್ಸಿ-ಎಸ್ಟಿ ಐಎಎಸ್, ಕೆಎಎಸ್ ತರಬೇತಿಗೆ ಶಿಷ್ಯವೇತನ ಇಲ್ಲ; ಅಲ್ಪಸಂಖ್ಯಾತರಿಗೆ 6000 ಭತ್ಯೆ: ಆರ್.ಅಶೋಕ್ ತರಾಟೆ!

Published : Mar 12, 2026, 05:06 PM IST
R Ashok Vidhana Soudha

ಸಾರಾಂಶ

ಸರ್ಕಾರಿ ಸಂಸ್ಥೆಗಳಿಂದ ನೀಡಲಾಗುವ ಐಎಎಸ್/ಕೆಎಎಸ್ ತರಬೇತಿಯಲ್ಲಿ ಎಸ್ಸಿ, ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಶಿಷ್ಯವೇತನ ಇಲ್ಲ. ಆದರೆ, ಅಲ್ಪಸಂಖ್ಯಾತರಿಗೆ ಮಾಸಿಕ 6000 ಸಹಾಯಧನ ಕೊಡಲಾಗುತ್ತಿದೆ. ಈ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಸದನದಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಬೆಂಗಳೂರು (ಮಾ.12): ರಾಜ್ಯದ ಸರ್ಕಾರಿ ಸಂಸ್ಥೆಗಳಿಂದ ನೀಡಲಾಗುವ ಐಎಎಸ್, ಕೆಎಎಸ್ ತರಬೇತಿ ಪಡೆಯಲು ಬರುವ ಎಸ್ಸಿ, ಎಸ್‌ಟಿ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಯಾವುದೇ ವಸತಿ ಅಥವಾ ಶಿಷ್ಯವೇತನ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮತ್ತೊಂದೆಡೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಎಸ್‌ಎಸ್‌ಸಿ ಹಾಗೂ ಆರ್‌ಆರ್‌ಬಿ ಉದ್ಯೋಗಕ್ಕೆ ಅಲ್ಪಸಂಖ್ಯಾತರಿಗೆ ಮಾಸಿಕ 6,000 ಶಿಷ್ಯವೇತನ ನೀಡಲಾಗುತ್ತದೆ. ಇದ್ಯಾವ ತಾರತಮ್ಯ ಎಂದು ಗೊತ್ತಾಗುತ್ತಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ಹೊರಹಾಕಿದರು.

ರಾಜ್ಯ ಬಜೆಟ್ ಅಧಿವೇಶನದಲ್ಲಿ ಗುರುವಾರ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸರ್ಕಾರಿ ತರಬೇತಿ ಸಂಸ್ಥೆಗಳಲ್ಲಿ ನಡೆಯುತ್ತಿರುವ ಗೊಂದಲ ಹಾಗೂ ತಾರತಮ್ಯದ ನೀತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗಾಗಿ ಮೀಸಲಿಟ್ಟ ಐಎಎಸ್ ಹಾಗೂ ಕೆಎಎಸ್ ತರಬೇತಿ ಯೋಜನೆಯಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತದ ನಡುವಿನ ಸಮನ್ವಯದ ಕೊರತೆಯನ್ನು ತೀವ್ರವಾಗಿ ಟೀಕಿಸಿದರು.

ಜಿಲ್ಲಾಧಿಕಾರಿ ವಿರುದ್ಧ ಅಶೋಕ್ ಕಿಡಿ:

'ಕಲ್ಯಾಣ ಕರ್ನಾಟಕದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳಾಗಬೇಕು ಎಂಬ ಆಶಯದೊಂದಿಗೆ 100 ಐಎಎಸ್ ಹಾಗೂ 400 ಕೆಎಎಸ್ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಸರ್ಕಾರ ಆದೇಶಿಸಿತ್ತು. ಆದರೆ, ಈ ಆದೇಶ ಜಾರಿಯಲ್ಲಿ ಜಿಲ್ಲಾಧಿಕಾರಿಗಳು ತಮಗಿಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ' ಎಂದು ಅಶೋಕ್ ಆರೋಪಿಸಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಬಯೋಮೆಟ್ರಿಕ್ ಹಾಜರಾತಿ ಆಧಾರದ ಮೇಲೆ ಶಿಷ್ಯವೇತನ ನೀಡಲಾಗುವುದು ಎಂದು ಹೇಳಿದ್ದರೆ, ಜಿಲ್ಲಾಧಿಕಾರಿಗಳು ಮಾತ್ರ ಶಿಷ್ಯವೇತನ ಹಾಗೂ ವಸತಿ ಸೌಲಭ್ಯ ಇರುವುದಿಲ್ಲ ಎಂದು ಪ್ರತ್ಯೇಕ ಆದೇಶ ಹೊರಡಿಸಿದ್ದಾರೆ. 'ಸರ್ಕಾರಿ ಆದೇಶವಿದ್ದರೂ ಜಿಲ್ಲಾಧಿಕಾರಿಗಳು ಬೇರೆಯದೇ ಆದೇಶ ಹೊರಡಿಸಲು ಅವನ್ಯಾರು ದೊಣ್ಣೆ ನಾಯಕ?' ಎಂದು ಅಶೋಕ್ ಸದನದಲ್ಲಿ ಗುಡುಗಿದರು.

ಸಮುದಾಯಗಳ ನಡುವೆ ತಾರತಮ್ಯದ ಆರೋಪ:

ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ನೀಡುವ ಸೌಲಭ್ಯಗಳಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಅಶೋಕ್ ದೂರಿದರು. 'ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು ತನ್ನ ಅಭ್ಯರ್ಥಿಗಳಿಗೆ 12 ತಿಂಗಳ ಕಾಲ ವಸತಿ ಸಹಿತ ತರಬೇತಿ ನೀಡುತ್ತಿದೆ. ಅಷ್ಟೇ ಅಲ್ಲದೆ, ಎಸ್‌ಎಸ್‌ಸಿ ಹಾಗೂ ಆರ್‌ಆರ್‌ಬಿ ಪರೀಕ್ಷೆಗಳಿಗೆ ಸಿದ್ಧರಾಗುವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 6,000 ರೂ. ಶಿಷ್ಯವೇತನ ನೀಡಲಾಗುತ್ತಿದೆ. ಆದರೆ, ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಶಿಷ್ಯವೇತನವೂ ಇಲ್ಲ, ವಸತಿ ಸೌಲಭ್ಯವೂ ಇಲ್ಲ. ಇದು ಯಾವ ನ್ಯಾಯ?' ಎಂದು ಅವರು ಪ್ರಶ್ನಿಸಿದರು.

ತರಬೇತಿ ಸಂಸ್ಥೆಗಳ ಅಕ್ರಮ ಹಾಗೂ ಹಾಜರಾತಿ ಕೊರತೆ:

ಸರ್ಕಾರದ ಅವಾಂತರಗಳಿಂದಾಗಿ 500 ಅಭ್ಯರ್ಥಿಗಳ ಪೈಕಿ ತರಬೇತಿಗೆ ಬರುತ್ತಿರುವುದು ಕೇವಲ 40 ರಿಂದ 50 ಜನ ಮಾತ್ರ. ಸೂಕ್ತ ಸೌಲಭ್ಯಗಳಿಲ್ಲದ ಕಾರಣ ಅಭ್ಯರ್ಥಿಗಳು ತರಬೇತಿಯಿಂದ ದೂರ ಉಳಿಯುತ್ತಿದ್ದಾರೆ. ಇದೇ ವೇಳೆ ಐಎಎಸ್ ಮತ್ತು ಕೆಎಸ್ಎಸ್ ತರಬೇತಿ ನೀಡುವ ಖಾಸಗಿ ಸಂಸ್ಥೆಗಳ ಜೊತೆ ಸರ್ಕಾರ ಮಾಡಿಕೊಂಡಿರುವ ಒಪ್ಪಂದಗಳಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆಯುತ್ತಿದೆ ಎಂಬ ಸಂಶಯವನ್ನು ವ್ಯಕ್ತಪಡಿಸಿದರು. 'ತರಬೇತಿ ನೀಡುವ ಸಂಸ್ಥೆಗಳ ಗುಣಮಟ್ಟ ಹಾಗೂ ಅಲ್ಲಿ ನಡೆಯುತ್ತಿರುವ ಹಣಕಾಸಿನ ವ್ಯವಹಾರಗಳ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು' ಎಂದು ಅಶೋಕ್ ಒತ್ತಾಯಿಸಿದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಮಾತನಾಡುವ ಸರ್ಕಾರ, ಅದೇ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಲ್ಲಿ ಇಷ್ಟು ನಿರ್ಲಕ್ಷ್ಯ ವಹಿಸಿರುವುದು ದುರದೃಷ್ಟಕರ. ಕೂಡಲೇ ಈ ಎಲ್ಲಾ ಗೊಂದಲಗಳನ್ನು ಸರಿಪಡಿಸಿ, ಎಲ್ಲಾ ಸಮುದಾಯದ ಅಭ್ಯರ್ಥಿಗಳಿಗೂ ಸಮಾನವಾಗಿ ಶಿಷ್ಯವೇತನ ಹಾಗೂ ವಸತಿ ಸೌಲಭ್ಯ ನೀಡಬೇಕು ಎಂದು ಅಶೋಕ್ ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಸವಣ್ಣ ದೇವರಲ್ಲ ಕಾಮುಕ, ಅಕ್ಕಮಹಾದೇವಿಯೂ ಅಂಥವಳೇ! ಸಾಮಾಜಿಕ ಜಾಲತಾಣದಲ್ಲಿ ಶರಣರ ವಿರುದ್ಧವೂ ಅಶ್ಲೀಲ ಪೋಸ್ಟ್!
ಬಾಗಲಕೋಟೆ: ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ: ಧಗಧಗನೇ ಹೊತ್ತಿ ಉರಿದ ಪೀಠೋಪಕರಣ ಮಳಿಗೆ