ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತವರು ಕ್ಷೇತ್ರ ಸೊರಬದಲ್ಲಿ ಕನಿಷ್ಟ ವ್ಯವಸ್ಥೆಗಳಿಲ್ಲದೆ ಕ್ರೀಡಾಪಟುಗಳು ಪರದಾಡಿದ ಘಟನೆ ನಡೆದಿದೆ.
ಶಿವಮೊಗ್ಗ (ಸೆ.3) : ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತವರು ಕ್ಷೇತ್ರ ಸೊರಬದಲ್ಲಿ ಕನಿಷ್ಟ ವ್ಯವಸ್ಥೆಗಳಿಲ್ಲದೆ ಕ್ರೀಡಾಪಟುಗಳು ಪರದಾಡಿದ ಘಟನೆ ನಡೆದಿದೆ.
ಸೊರಬ ಪಟ್ಟಣದ ಎಸ್. ಬಂಗಾರಪ್ಪ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ದಸರಾ ಆಯ್ಕೆ ಕ್ರೀಡಾಕೂಟ ಆಯೋಜನೆ . ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಖೋಖೋ, ಕಬಡ್ಡಿ, ವಾಲಿಬಾಲ್, ಥ್ರೋಬಾಲ್ ಪಂದ್ಯಾವಳಿಗಳ ಆಯೋಜನೆ ಮಾಡಲಾಗಿತ್ತು.ತಾಲೂಕಿನ ವಿವಿಧ ಭಾಗಗಳಿಂದ 500ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿಗೆ ಚಿಂತನೆ: ಸಚಿವ ಮಧು ಬಂಗಾರಪ್ಪ
ವಿದ್ಯಾರ್ಥಿನಿಯರಿಗೆ ಬಟ್ಟೆ ಬದಲಿಸಲು ಕೊಠಡಿ ಇಲ್ಲದೆ ಮುಜುಗರ ಅನುಭವಿಸುಂತಾಯಿತು. ಕುಡಿಯುವ ನೀರಿನ ವ್ಯವಸ್ಥೆಯಂತೂ ಕೇಳಲೇಬೇಡಿ. ಕ್ರೀಡಾಪಟುಗಳು ಬಾಯಾರಿಕೆಗೆ ಹೊರಗಡೆಯಿಂದ ನೀರು ತಂದು ಕುಡಿಯಲು ಹರಸಾಹಸ ಪಡುವಂತಾಯಿತು. ಅಥ್ಲೆಟಿಕ್ಸ್ ಕ್ರೀಡಾಪಟುಗಳು ರನ್ನಿಂಗ್ ಟ್ರ್ಯಾಕ್ ಸಮರ್ಪಕವಾಗಿಲ್ಲದೇ ಅನೇಕರು ಗಾಯಗೊಂಡರು. ಆದರೆ ಆಟದಲ್ಲಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆಯ ಸೌಲಭ್ಯವೂ ಇರಲಿಲ್ಲ. ಖೋಖೋ, ಕಬಡ್ಡಿ ಅಂಕಣಗಳಂತೂ ಕ್ರೀಡಾಪಟುಗಳಿಗೆ ವ್ಯತಿರಿಕ್ತ ಪರಿಣಾಮ ಬೀರಿತು. ಎಲ್ಲೆಂದರಲ್ಲಿ ಬೆಳೆದ ಹುಲ್ಲುಗಳು, ಕಲ್ಲು ಮಿಶ್ರಿತ (ಗೊಚ್ಚು ಕಲ್ಲು) ಅಂಕಣದಿಂದ ಕ್ರೀಡಾಪಟುಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ತೊಂದರೆ ಅನುಭವಿಸುವಂತಾಯಿತು. ಕ್ರೀಡಾಂಗಣದಲ್ಲಿ ತಗ್ಗು ಉಬ್ಬುಗಳಿದ್ದು ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ.
ಕ್ರೀಡಾಂಗಣದಲ್ಲಿ ಯಾವುದೇ ಸೌಲಭ್ಯ ಇಲ್ಲ:
ಯಾವುದೇ ರೀತಿಯಲ್ಲೂ ಕ್ರೀಡಾಂಗಣದಂತೆ ಇಲ್ಲ. ಜಾನುವಾರುಗಳನ್ನು ಮೇಯಿಸುವ ಮೈದಾನದಂತಿದೆ. ಕ್ರೀಡಾಂಗಣದ ಯಾವುದೇ ಅಂಕಣಗಳು ಸಮರ್ಪಕವಾಗಿಲ್ಲ. ಕ್ರೀಡಾಕೂಟದ ವೇಳೆ ಅನೇಕ ಕ್ರೀಡಾಪಟುಗಳು ಗಾಯಗೊಂಡಿದ್ದಾರೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.ಕ್ರೀಡಾಂಗಣದಲ್ಲಿ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ. ಸಮರ್ಪಕ ಶೌಚಗೃಹ ವ್ಯವಸ್ಥೆ ಇಲ್ಲ. ಕಲ್ಲು ಮುಳ್ಳುಗಳಿಂದ ತುಂಬಿದ ಕ್ರೀಡಾಂಗಣದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಲು ಸಾದ್ಯವಾಗಲಿಲ್ಲ ಎಂದು ಅಳಲು ತೋಡಿಕೊಂಡ ಕ್ರೀಡಾಪಟುಗಳು.
ಹೊಸ ಶಾಸಕರ ಸೇರಿಸಿಕೊಳ್ಳುವಷ್ಟು ನಮ್ಮ ಹೊಟ್ಟೆ ದೊಡ್ಡದಿದೆ: ಸಚಿವ ಮಧು ಬಂಗಾರಪ್ಪ
ಒಟ್ಟಿನಲ್ಲಿ ಉಸ್ತುವರಿ ಸಚಿವರ ತವರು ಕ್ಷೇತ್ರವಾದ ಸೊರಬ ಕ್ರೀಡಾಂಗಣ ಅವ್ಯವಸ್ಥೆಯ ಆಗರವಾಗಿದೆ. ಇಂಥ ಕ್ರೀಡಾಂಗಣದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ ಕ್ರೀಡಾಪಟುಗಳಿಗೆ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗದ ಸ್ಥಿತಿ ಇದೆ.