ಈಗ ಪರಿಹಾರ ನೀಡುವ ಕಾರ್ಯವನ್ನು ಆರಂಭಿಸಲಾಗುವುದು. ಒಟ್ಟು 223 ಕೋಟಿ ರು. ಪರಿಹಾರ ನೀಡಬೇಕಿದ್ದು, ಶೀಘ್ರದಲ್ಲಿ ರೈತರ ಖಾತೆಗೆ ಪಾವತಿಸಲಾಗುವುದು: ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ
ಬೆಂಗಳೂರು(ಮೇ.31): ನೆಟೆ ರೋಗದಿಂದ ತೊಗರಿ ಬೆಳೆ ನಾಶವಾಗಿ ನಷ್ಟ ಅನುಭವಿಸಿದ ರೈತರಿಗೆ ಪ್ರತಿ ಹೆಕ್ಟೇರ್‌ಗೆ ತಲಾ 10 ಸಾವಿರ ರು.ನಂತೆ ಪರಿಹಾರ ನೀಡುವ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ, ಬೀದರ್, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ 2.43 ಲಕ್ಷ ಹೆಕ್ಟೇರ್ ತೊಗರಿ ಬೆಳೆ ನೆಟೆ ರೋಗದಿಂದ ಹಾಳಾಗಿ ರೈತರಿಗೆ ನಷ್ಟ ವುಂಟಾಗಿತ್ತು. ಆ ರೈತರಿಗೆ ಪ್ರತಿ ಹೆಕ್ಟೇರ್‌ಗೆ ತಲಾ 10 ಸಾವಿರ ರು. ಪರಿಹಾರ ನೀಡುವುದಾಗಿ ಹಿಂದಿನ ಸರ್ಕಾರ ಘೋಷಿಸಿತ್ತು. ಆದರೆ, ಪರಿಹಾರ ನೀಡಲು ಹಿಂದಿನ ಸರ್ಕಾರ ವಿಫಲವಾಗಿತ್ತು. ಈಗ ಪರಿಹಾರ ನೀಡುವ ಕಾರ್ಯವನ್ನು ಆರಂಭಿಸಲಾಗುವುದು. ಒಟ್ಟು 223 ಕೋಟಿ ರು. ಪರಿಹಾರ ನೀಡಬೇಕಿದ್ದು, ಶೀಘ್ರದಲ್ಲಿ ರೈತರ ಖಾತೆಗೆ ಪಾವತಿಸಲಾಗುವುದು ಎಂದು ಹೇಳಿದರು.
undefined
ನೆಟೆ ರೋಗದಿಂದ ತೊಗರಿ ಬೆಳೆ ನಷ್ಟ: ರಾಜ್ಯ ಸರ್ಕಾರದಿಂದ ಪರಿಹಾರ ಘೋಷಣೆ
2023ರ ಪೂರ್ವ ಮುಂಗಾರಿನಲ್ಲಿ 2.95 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಅದರಲ್ಲಿ ಈವರೆಗೆ 2.48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳಲಾಗಿದೆ. ಮುಂಗಾರು ಹಂಗಾಮಿನಲ್ಲಿ 82.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳುವ ಗುರಿಯಿದೆ. ಪ್ರಸಕ್ತ ವರ್ಷದಲ್ಲಿ 5.54 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳ ಬೇಡಿಕೆಯಿದ್ದು, 7.85 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯವಿದೆ. ಈ ವರ್ಷ ಬಿತ್ತನೆ ಬೀಜದ ಕೊರತೆ ಉಂಟಾಗುವುದಿಲ್ಲ ಎಂದರು. 2023-24ನೇ ಮುಂಗಾರು ಹಂಗಾಮಿಗೆ 25.75 ಲಕ್ಷ ಮೆಟ್ರಿಕ್ ಟನ್ ವಿವಿಧ ಗ್ರೇಡ್‌ನ ರಸಗೊಬ್ಬರಕ್ಕೆ ಬೇಡಿಕೆಯಿದೆ. ಈವರೆಗೆ 7.30 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜಾಗಿರುತ್ತದೆ ಎಂದು ವಿವರಿಸಿದರು.
ಕೃಷಿ ಇಲಾಖೆಯ ಶೇ.57 ಹುದ್ದೆ ಖಾಲಿ
ಕೃಷಿ ಇಲಾಖೆಗೆ 8 ಸಾವಿರ ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 5 ಸಾವಿರ ಹುದ್ದೆಗಳು ಖಾಲಿಯಿವೆ. ಅಂದರೆ ಶೇ. 57 ಹುದ್ದೆಗಳು ಖಾಲಿಯಿದ್ದು, ಅತ್ಯಗತ್ಯವಿರುವ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲು ಹಣಕಾಸು ಇಲಾಖೆ ಸಮ್ಮತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈಗಾಗಲೆ 368 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳ ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.