ಮೋದಿ ಸರ್ಕಾರದಿಂದ ರಾಜ್ಯದ ರೈತರಿಗೆ ಗುಡ್ ನ್ಯೂಸ್

By Web DeskFirst Published Jan 20, 2019, 10:46 AM IST
Highlights

ರಾಜ್ಯದ ರೈತರಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಕಡಿಮೆ ದರದಲ್ಲಿ ರಸಗೊಬ್ಬರ ಪೂರೈಸಲು ರಾಜ್ಯದಲ್ಲಿ ರಸಗೊಬ್ಬರ ಕಾರ್ಖಾನೆ ಸ್ಥಾಪಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ. 

ಮಂಗಳೂರು :  ರಾಜ್ಯದ ರೈತರಿಗೆ ಕಡಿಮೆ ದರದಲ್ಲಿ ರಾಜ್ಯದಿಂದಲೇ ರಸಗೊಬ್ಬರ ಪೂರೈಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ರಸಗೊಬ್ಬರ ಕಾರ್ಖಾನೆ ಸ್ಥಾಪನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಸಹಕಾರ ರತ್ನ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷರಾಗಿ 25 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರಿನಲ್ಲಿ ಹಮ್ಮಿಕೊಂಡ ರಜತ ಸಂಭ್ರಮ ಹಾಗೂ ನವೋದಯ ಸ್ವಸಹಾಯ ಸಂಘಗಳ ವಿಂಶತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರ ಭೂಮಿ ಮಂಜೂರಾತಿ ನೀಡಿದ ಕೂಡಲೇ ಕಾರ್ಖಾನೆ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಲಿದೆ ಎಂದು ತಿಳಿಸಿದರು.

ರೈಲು, ನೀರು, ಗ್ಯಾಸ್‌ ಸಂಪರ್ಕ ಒಂದೇ ಕಡೆ ಇರುವ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ರಸಗೊಬ್ಬರ ಕಾರ್ಖಾನೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈಗಾಗಲೇ ನಷ್ಟದಲ್ಲಿರುವ ಐದಾರು ರಸಗೊಬ್ಬರ ಕಾರ್ಖಾನೆಗಳ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ನೆರವು ನೀಡುತ್ತಿರುವುದರಿಂದ ಹೊಸ ಕಾರ್ಖಾನೆಗೆ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್‌, ಮಾರುಕಟ್ಟೆಫೆಡರೇಷನ್‌ ನೆರವು ಕೇಳಿದರೆ ರಾಜ್ಯ ಸರ್ಕಾರ ನೀಡಲು ಸಿದ್ಧವಿದೆ ಎಂದರು.

ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಮಾತನಾಡಿ, ದಾವಣಗೆರೆಯಲ್ಲಿ ಯೂರಿಯಾ ಘಟಕ ಸ್ಥಾಪಿಸಲು 400 ಎಕರೆ ಜಾಗದ ಅಗತ್ಯವಿದೆ. ರಾಜ್ಯ ಸರ್ಕಾರ ಜಾಗ ಮಂಜೂರಾತಿ ನೀಡದಿದ್ದರೆ, ಕಬ್ಬು ಬೆಳೆಗಾರರು 336 ಎಕರೆ ಜಾಗ ನೀಡಲು ಮುಂದೆ ಬಂದಿದ್ದಾರೆ. ಇನ್ನು 15 ದಿನದೊಳಗೆ ರಸಗೊಬ್ಬರ ಕಾರ್ಖಾನೆ ಸ್ಥಾಪನೆಗೆ ಅಗತ್ಯವಾದ ಜಮೀನು ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಗಡುವು ವಿಧಿಸಿದರು.

click me!