ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ ನೀಡಿದ ಸಿಎಂ ಸಿದ್ದರಾಮಯ್ಯ..!

By Kannadaprabha NewsFirst Published Feb 28, 2024, 5:16 AM IST
Highlights

 ಹಿಂದಿನ ಸರ್ಕಾರ ಶೇ.17ರಷ್ಟು ಹೆಚ್ಚಳ ನಿಗದಿ ಮಾಡಿತ್ತು. ನೀವು ಶೇ.40ರಷ್ಟು ಕೇಳುತ್ತಿದ್ದೀರಿ. ಅಂತಿಮ ವರದಿ ನೀಡಲು ಕಾಲಾವಕಾಶ ಬೇಕೆಂದು ಆಯೋಗದ ಆಧ್ಯಕ್ಷ ಕೆ.ಸುಧಾಕರ್‌ ರಾವ್‌ ಕೋರಿದ್ದು, ಮಾ.15 ರವರೆಗೂ ಸಮಯಾವಕಾಶ ನೀಡಲಾಗಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಂತಿಮ ವರದಿಯನ್ನು ಶೀಘ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ನಾನು ಸರ್ಕಾರಿ ನೌಕರರ ಪರವಾಗಿದ್ದೇನೆ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ 

ಬೆಂಗಳೂರು(ಫೆ.28):  ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ, ಹಳೆಯ ಪಿಂಚಣಿ ವ್ಯವಸ್ಥೆ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಮಾಡುವ ಬಗ್ಗೆ ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಮಂಗಳವಾರ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು.

7ನೇ ವೇತನ ಆಯೋಗದ ಮಧ್ಯಂತರ ವರದಿಯಂತೆ ಹಿಂದಿನ ಸರ್ಕಾರ ಶೇ.17ರಷ್ಟು ಹೆಚ್ಚಳ ನಿಗದಿ ಮಾಡಿತ್ತು. ನೀವು ಶೇ.40ರಷ್ಟು ಕೇಳುತ್ತಿದ್ದೀರಿ. ಅಂತಿಮ ವರದಿ ನೀಡಲು ಕಾಲಾವಕಾಶ ಬೇಕೆಂದು ಆಯೋಗದ ಆಧ್ಯಕ್ಷ ಕೆ.ಸುಧಾಕರ್‌ ರಾವ್‌ ಕೋರಿದ್ದು, ಮಾ.15 ರವರೆಗೂ ಸಮಯಾವಕಾಶ ನೀಡಲಾಗಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಂತಿಮ ವರದಿಯನ್ನು ಶೀಘ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ನಾನು ಸರ್ಕಾರಿ ನೌಕರರ ಪರವಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌: ಶೀಘ್ರದಲ್ಲೇ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಹೆಚ್ಚಳ!

ನಾನು ಉಪ ಮುಖ್ಯಮಂತ್ರಿಯಾಗಿದ್ದಾಗ 1996ರಲ್ಲಿ 5ನೇ ವೇತನ ಆಯೋಗ, ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ 6ನೇ ವೇತನ ಆಯೋಗ ಜಾರಿಗೆ ತರಲಾಗಿತ್ತು. ಆಗ ಸರ್ಕಾರಿ ನೌಕರರ ವಿರುದ್ಧವಾಗಿ ನಾನಿದ್ದೇನೆ ಎಂಬ ಸುಳ್ಳು ಆರೋಪ ಮಾಡಿದ್ದರು. ನಾನು ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಿದ್ದೆ. ಇದೀಗ ನಾನು ಮುಖ್ಯಮಂತ್ರಿಯಾಗಿದ್ದಾಗಲೇ 7ನೇ ವೇತನ ಆಯೋಗ ಬಂದಿದೆ ಎಂದು ವಿವರಿಸಿದರು.

ಪ್ರಾಮಾಣಿಕತೆ ಆದ್ಯತೆಯಿರಲಿ

ಎನ್‌ಪಿಎಸ್‌ ಬದಲಿಗೆ ಹಳೆಯ ಪಿಂಚಣಿ ವ್ಯವಸ್ಥೆ(ಓಪಿಎಸ್‌)ಯನ್ನು ಜಾರಿ ಮಾಡುವ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಲು ಶೀಘ್ರದಲ್ಲೇ ತೀರ್ಮಾನಿಸಲಾಗುವುದು. ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಜವಾಬ್ದಾರಿಯುತ ಕೆಲಸವನ್ನು ಮಾಡುತ್ತಿರುವ ನೀವು ಪ್ರಾಮಾಣಿಕತೆಗೆ ಮೊದಲ ಆದ್ಯತೆ ನೀಡಿ ಎಂದು ಕರೆ ನೀಡಿದರು.

ರಾಜ್ಯದಲ್ಲಿ ಸುಮಾರು 5.90 ಲಕ್ಷ ಸರ್ಕಾರಿ ನೌಕರರು ಕಾರ್ಯನಿರ್ವಹಿಸುತ್ತಿದ್ದು 2.50 ಲಕ್ಷ ಹುದ್ದೆ ಖಾಲಿ ಇವೆ. 7 ಕೋಟಿ ಜನರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮಹತ್ತರ ಕಾರ್ಯದಲ್ಲಿ ನೀವು ಭಾಗಿಯಾಗಿದ್ದೀರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು 5 ವರ್ಷಕ್ಕೊಮ್ಮೆ ನಮ್ಮನ್ನು ಚುನಾಯಿಸಿದರೆ ನೀವು ಸೇವೆಗೆ ಸೇರ್ಪಡೆಯಾದ ಮೇಲೆ ನಿವೃತ್ತಿ ಆಗುವವರೆಗೂ ನವೀಕರಿಸಿಕೊಳ್ಳುವ ಪ್ರಮೇಯವಿಲ್ಲ ಎಂದು ಹೇಳಿದರು.

ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಮಾತನಾಡಿ, ಸರ್ಕಾರಿ ನೌಕರರು ನಿವೃತ್ತಿ ಸಮಯದಲ್ಲಿ ತಾವು ಉಳಿಸಿದ ಹಣವನ್ನು ಒಗ್ಗೂಡಿಸಿ ಮನೆ ನಿರ್ಮಿಸಿಕೊಳ್ಳುವ ವಾತಾವರಣ ಹಿಂದೆ ಇತ್ತು. ಆದರೆ ಈಗ ಪ್ರೊಬೇಷನರಿ ಅವಧಿಯಲ್ಲೇ ಮನೆ ನಿರ್ಮಿಸಿಕೊಳ್ಳಬೇಕೆಂಬ ಮನಸ್ಥಿತಿ ಇದ್ದು ಇದು ಸರಿಯಲ್ಲ ಎಂದು ಸಲಹೆ ನೀಡಿದರು.

ಸಚಿವರಾದ ಈಶ್ವರ ಖಂಡ್ರೆ, ಭೈರತಿ ಸುರೇಶ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌, ಸಂಘದ ಕಾರ್ಯದರ್ಶಿ ಶೀನಿವಾಸ ತಿಮ್ಮೇಗೌಡ, ಖಜಾಂಚಿ ಡಾ.ಸಿದ್ದರಾಮಣ್ಣ ಮತ್ತಿತರರು ಹಾಜರಿದ್ದರು.

ಬೇಡಿಕೆ ಈಡೇರದಿದ್ದರೆ ಹೋರಾಟ

ಹೋರಾಟದ ಹಾದಿಯಲ್ಲಿ ಸರ್ಕಾರಿ ನೌಕರರಿಗೆ ಯಾವಾಗಲೂ ಸೋಲಾಗಿಲ್ಲ. ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ ತಾಳ್ಮೆ ಕಳೆದುಕೊಳ್ಳುವುದು ಬೇಡ. ಬೇಡಿಕೆಗಳು ಈಡೇರದಿದ್ದರೆ ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಹೋರಾಟ ನಡೆಸೋಣ, ಮುಷ್ಕರ ನಡೆಸೋಣ ಎಂದು ಸಂಘದ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ ಕರೆ ನೀಡಿದರು.

ಇಂಥದ್ದೇ ಸ್ಥಳಕ್ಕೆ ವರ್ಗಾವಣೆ ಕೇಳುವ ಹಕ್ಕು ನೌಕರರಿಗಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು !

7ನೇ ವೇತನ ಆಯೋಗದ ವರದಿ ಪಡೆದು ಜಾರಿಗೊಳಿಸಬೇಕು. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಬೇಕು. ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು ಎಂಬುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೌರವಿಸಲಾಯಿತು. ಸಂಘದ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ, ಕಾರ್ಯದರ್ಶಿ ಶೀನಿವಾಸ ತಿಮ್ಮೇಗೌಡ, ಖಜಾಂಚಿ ಡಾ.ಸಿದ್ದರಾಮಣ್ಣ ಮತ್ತಿತರರು ಹಾಜರಿದ್ದರು.

click me!