'ತಾಯಿ ದೇವರನ್ನೋದು ಇದಕ್ಕೆ..' 10 ನಿಮಿಷಕ್ಕೂ ಮುನ್ನ ಬಂದ ಅಮ್ಮನ ಕರೆಯಿಂದ ರಾಮೇಶ್ವರಂ ಕಫೆಯಲ್ಲಿ ಸಾವು ತಪ್ಪಿಸಿಕೊಂಡೆ!

Published : Mar 02, 2024, 05:06 PM IST
'ತಾಯಿ ದೇವರನ್ನೋದು ಇದಕ್ಕೆ..' 10 ನಿಮಿಷಕ್ಕೂ ಮುನ್ನ ಬಂದ ಅಮ್ಮನ ಕರೆಯಿಂದ ರಾಮೇಶ್ವರಂ ಕಫೆಯಲ್ಲಿ ಸಾವು ತಪ್ಪಿಸಿಕೊಂಡೆ!

ಸಾರಾಂಶ

ಶುಕ್ರವಾರ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ಮೊದಲ ವೀಡಿಯೊವನ್ನು ಹಂಚಿಕೊಂಡ ವ್ಯಕ್ತಿ ಈ ಸಮಯದಲ್ಲಿ ಆದ ಭಯದ ವಾತಾವರಣದ ಬಗ್ಗೆ ಮಾತನಾಡಿದ್ದಾರೆ.  

ಬೆಂಗಳೂರು (ಮಾ.2): 'ತಾಯಿಯೇ ದೇವರು ಅನ್ನೋದಕ್ಕೆ ನನಗೆ ಮತ್ತೆ ಉದಾಹರಣೆ ಬೇಕಿಲ್ಲ..' ಹೀಗೆನ್ನುತ್ತಾರೆ ಬಿಹಾರ ಮೂಲದ ಸಾಫ್ಟ್‌ವೇರ್‌ ಇಂಜಿನಿಯರ್‌ ಕುಮಾರ್‌ ಅಲಂಕೃತ್‌.  ಹೌದು, ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಬ್ಲಾಸ್ಟ್‌ ವೇಳೆ ಕುಮಾರ್‌ ಅಲಂಕೃತ್‌ ಕೂದಲೆಳೆಯ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು 10 ನಿಮಿಷಕ್ಕೆ ಮುನ್ನ ಬಂದ ಅವರ ತಾಯಿಯ ಫೋನ್‌ ಕರೆ.  ಶಕ್ರವಾರ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ 9 ಮಂದಿ ಗಾಯಗೊಂಡಿದ್ದಾರೆ. ಸ್ವರ್ಣಾಂಭ ಎನ್ನುವ ಮಹಿಳೆಗೆ ಶೇ. 40ರಷ್ಟು ಸುಟ್ಟ ಗಾಯಗಳಾಗಿದ್ದು, ಅವರಿಗೆ 4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಯಾರಿಗೂ ಪ್ರಾಣಾಪಾಯವಾಗಿಲ್ಲ ಎನ್ನುವುದು ಸಮಾಧಾನದ ಅಂಶವಾದರೆ, ಬೆಂಗಳೂರಿನಲ್ಲಿ ನೆಮ್ಮದಿಯಾಗಿ ಹೋಟೆಲ್‌ಲ್ಲಿ ಊಟ-ತಿಂಡಿ ಮಾಡೋದಕ್ಕೂ ಭಯ ಪಡುವ ವಾತಾವರಣ ನಿರ್ಮಾಣವಾಗಿರುವುದು ಸತ್ಯ. ರಾಮೇಶ್ವರಂ ಕೆಫೆ ಎಲ್ಲರ ಅಚ್ಚುಮೆಚ್ಚಿನ ತಾಣ. ಅಲ್ಲಿನ ಘೀ ಮಸಾಲೆ, ಪುಡಿ ಇಡ್ಲಿಗೆ ದೊಡ್ಡ ಪ್ರಮಾಣದ ಅಭಿಮಾನಿಗಳಿದ್ದಾರೆ. ಕುಮಾರ್‌ ಅಲಂಕೃತ್‌ಗೂ ಈ ಹೋಟೆಲ್‌ನ ದೋಸೆಗಳು ಇಷ್ಟ. ಶುಕ್ರವಾರ ಎಂದಿನಂತೆ ತಮಗೆ ಇಷ್ಟವಾದ ತಿಂಡಿ ತಿನ್ನುವ ಸಮಯದಲ್ಲಿ ಅವರ ತಾಯಿಯ ಕರೆ ಬಂದಿದೆ. ಇದು ಅವರ ಜೀವವನ್ನೇ ಉಳಿಸಿದೆ.

ನನ್ನ ಆರ್ಡರ್‌ಅನ್ನು ಪಡೆದುಕೊಂಡ ಬೆನ್ನಲ್ಲಿಯೇ, ಅಮ್ಮನ ಕರೆ ಬಂದಿತ್ತು. ಫುಡ್‌ ಕೌಂಟರ್‌ನಿಂದ 10-15 ಮೀಟರ್‌ ದೂರ ಹೋಗಿ ಮಾತನಾಡುತ್ತಿದ್ದಾರೆ. ಅದಾದ ಕೆಲವೇ ಸೆಕೆಂಡ್‌ಗಳಲ್ಲಿ ದೊಡ್ಡ ಶಬ್ದ ಕೇಳಿಸಿತ್ತು. ತಿರುಗಿ ನೋಡುವಷ್ಟರಲ್ಲಿ ಧೂಳಿನ ಮೋಡವೇ ಆವರಿಸಿಕೊಂಡಿತ್ತು ಎಂದು ಘಟನೆಯ ಪ್ರತ್ಯಕ್ಷದರ್ಶಿಯಾಗಿರುವ ವ್ಯಕ್ತಿ ತಿಳಿಸಿದ್ದಾರೆ. ಬಿಹಾರದ ಪಾಟ್ನಾ ಮೂಲದ ಅಲಂಕೃತ್‌, ಘಟನೆಯ ಪ್ರತ್ಯಕ್ಷದರ್ಶಿ ಮಾತ್ರವಲ್ಲ, ಬ್ಲಾಸ್ಟ್‌ನ ವಿಡಿಯೋವನ್ನು ಮೊದಲ ಬಾರಿಗೆ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡವರೂ ಆಗಿದ್ದಾರೆ. ತಮ್ಮ ಜೀವನದಲ್ಲಿ ಹಿಂದೆಂದೂ ಈ ರೀತಿಯ ಘಟನೆಯನ್ನು ಕಂಡಿರಲಿಲ್ಲ ಎಂದಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿ ಮಧ್ಯಾಹ್ನ 1 ಗಂಟೆಯ ಹಾಗೆ ಊಟ ಮಾಡುವ ಸಲುವಾಗಿ ಇಡ್ಲಿ-ದೋಸೆ ತೆಗೆದುಕೊಂಡಿದ್ದೆ. ದೋಸೆ ತಿನ್ನೋಕು ಮುನ್ನವೇ ಅಮ್ಮ ಫೋನ್‌ ಮಾಡಿದ್ದರು. ಮಾತನಾಡುವ ಸಲುವಾಗಿ ಕೆಫೆಯಿಂದ ಸ್ವಲ್ಪವೇ ಹೊರಗೆ ಬಂದಿದ್ದೆ. 10 ಮೀಟರ್‌ ಸಾಗುತ್ತಿದ್ದಂತೆ ಸ್ಪೋಟ ಸಂಭವಿಸಿತ್ತು. ತಾಯಿಯೇ ದೇವರು ಅನ್ನೋದು ಇದಕ್ಕೆ' ಎಂದು ಅವರು ಬರೆದುಕೊಂಡಿದ್ದಾರೆ. ಆ ಬಳಿಕ ನಾನು ಕ್ಷೇಮವಾಗಿ ಮನೆಗೆ ಬಂದರೂ, 9 ಮಂದಿ ಗಾಯಾಳುವಾಗಿರುವ ಸುದ್ದಿ ಕೇಳಿ ಬೇಸರವಾಯಿತು ಎಂದಿದ್ದಾರೆ.

ತಕ್ಷಣ ನೋಡಿದ ಹಾಗೆ ಅಂದಾಜು 15ಕ್ಕೂ ಅಧಿಕ ಮಂದಿಗೆ ಗಾಯಗಳಾಗಿತ್ತು. ಸಾಕಷ್ಟು ಮಂದಿಗೆ ಸುಟ್ಟ ಗಾಯಗಳೂ ಆಗಿದ್ದವೂ, ಇನ್ನೂ ಕೆಲವರ ಕಿವಿಗಳಲ್ಲಿ ರಕ್ತ ಬರುತ್ತಿತ್ತು. ಶುಕ್ರವಾರ ವರ್ಕ್‌ಫ್ರಮ್‌ ಹೋಮ್‌ ಮಾಡುತ್ತಿದ್ದ ಅಲಂಕೃತ್‌, 12.30ರ ವೇಳೆಗೆ ಊಟಕ್ಕಾಗಿ ಕೆಫೆಗೆ ಬಂದಿದ್ದರು. ಬ್ರೂಕ್‌ಫೀಲ್ಡ್‌ನಲ್ಲಿರುವ ಕೆಫೆಯಿಂದ ಕೆಲವೇ ದೂರದಲ್ಲಿ ತಾವು ಬಾಡಿಗೆ ಮನೆಯಲ್ಲಿ ವಾಸವಿರುವುದಾಗಿ ತಿಳಿಸಿದ್ದಾರೆ.

'ನಾನು ಇಡ್ಲಿ ಮತ್ತು ದೋಸೆ ಆರ್ಡರ್‌ ಮಾಡಿದ್ದೆ. ಇಡ್ಲಿ ತಿಂದ ಬಳಿಕ, ದೋಸೆ ಕೌಂಟರ್‌ನತ್ತ ಹೋಗಿದ್ದೆ. ಸಾಮಾನ್ಯವಾಗಿ ನಾನು ದೋಸೆ ತೆಗೆದುಕೊಳ್ಳುವ ಪಾಯಿಂಟ್‌ ಸನಿಹವೇ ಕುಳಿತುಕೊಳ್ಳುತ್ತಿದ್ದೆ' ಎಂದು 24 ವರ್ಷದ ವ್ಯಕ್ತಿ ತಿಳಿಸಿದ್ದಾರೆ. ಆದರೆ, ಶುಕ್ರವಾರ ನಾನು ದೋಸೆ ತೆಗೆದುಕೊಂಡ ಬಳಿಕ, ತಾಯಿ ಕರೆ ಮಾಡಿದ್ದರು. ಕೆಫೆಯಲ್ಲಿ ಸಾಕಷ್ಟು ಶಬ್ದವಿದ್ದ ಕಾರಣ, ನಾನು ಹೊರಗಡೆ ಇದ್ದ ಸಿಟಿಂಗ್‌ ಪ್ರದೇಶದ ಕಡೆಗೆ ಹೋಗಿ ತಾಯಿಯೊಂದಿಗೆ ಮಾತನಾಡುತ್ತಿದೆ. ಈ ವೇಳೆ ದೊಡ್ಡ ಶಬ್ದ ನನಗೆ ಕೇಳಿಸಿತು ಎಂದಿದ್ದಾರೆ.

ಐಐಎಸ್‌ಸಿ, ಚಿನ್ನಸ್ವಾಮಿ, ಚರ್ಚ್‌ಸ್ಟ್ರೀಟ್‌ ಈಗ ರಾಮೇಶ್ವರಂ ಕೆಫೆ... ನಮ್ಮ ಸರ್ಕಾರಗಳು ಪಾಠ ಕಲಿಯೋದ್ಯಾವಾಗ?

ಅಪಾರ ಸಂಖ್ಯೆಯ ಏಕಕಾಲಕ್ಕೆ ಹೊರಗೆ ಬಂದಿದ್ದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿತ್ಉತ. "ಇಷ್ಟು ದೊಡ್ಡ ಶಬ್ದವನ್ನು ನಾನು ನನ್ನ ಜೀವನದಲ್ಲಿ ಕೇಳಿಲ್ಲ. ಅಡುಗೆ ಮನೆಯಿಂದ ಸಾಕಷ್ಟು ಹೊಗೆ ಬರುವುದನ್ನು ನಾನು ನೋಡಿದೆ" ಎಂದು ಅವರು ಹೇಳಿದರು. ಹಲವರ ಬಟ್ಟೆ ಸುಟ್ಟು ಕರಕಲಾಗಿದ್ದು, ಕೆಲವರ ಕಿವಿಯಿಂದ ರಕ್ತ ಸುರಿಯುತ್ತಿತ್ತು "ಒಬ್ಬ ಮಹಿಳೆಯ ಬಟ್ಟೆ ಹಿಂದಿನಿಂದ ಸಂಪೂರ್ಣವಾಗಿ ಹರಿದುಹೋಗಿತ್ತು. ಮತ್ತೊಬ್ಬ ವ್ಯಕ್ತಿಯ ತಲೆಯಿಂದ ರಕ್ತಸ್ರಾವವಾಗಿತ್ತು. 80ರ ಹರೆಯದ ಇಬ್ಬರು ವೃದ್ಧ ಮಹಿಳೆಯರು ರಕ್ತದ ಮಡುವಿನಲ್ಲಿದ್ದರು. ಜನರು ಹತ್ತಿ ಬ್ಯಾಂಡೇಜ್‌ಗಳನ್ನು ಹಾಕುತ್ತಿದ್ದರು" ಎಂದು ಅಲಂಕೃತ್ ತಿಳಿಸಿದ್ದಾರೆ.

Exclusive: ರಾಮೇಶ್ವರಂ ಕಫೆಯಲ್ಲಿನ ಸ್ಪೋಟದ ಎಕ್ಸ್‌ಕ್ಲೂಸಿವ್‌ ಸಿಸಿಟಿವಿ ದೃಶ್ಯ!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುಜರಾಯಿ ದೇಗುಲಗಳಲ್ಲಿ ಇಂದು ಭಕ್ತರಿಗೆ ಎಳ್ಳು-ಬೆಲ್ಲ
ಬಿಗ್ ಬಾಸ್ ಪುಟುಗೋಸಿ ಶೋ, ಆಕ್ರೋಶಕ್ಕೆ ಗುರಿಯಾದ ಬೆಂಗಳೂರು ಕರವೇ ನಾಯಕನ ಹೇಳಿಕೆ