
ಬೆಂಗಳೂರು (ಫೆ.20): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ಬಗ್ಗೆ ದೊಡ್ಡವರ ಬಗ್ಗೆ ದೂರು ನೀಡಿ ಹೋರಾಟ ಮಾಡುತ್ತಿರುವ ನನ್ನ ತಂದೆಯನ್ನು ಸಿಸಿಬಿ ಪೊಲೀಸರು ಎಲ್ಲಿಗೆ ಕರೆದೊಯ್ದಿದ್ದಾರೆ ಎಂಬ ಮಾಹಿತಿ ನೀಡುತ್ತಿಲ್ಲ, ಅವರ ಜೀವಕ್ಕೆ ಅಪಾಯವಾದರೆ ಈ ಸರ್ಕಾರವೇ ನೇರ ಹೊಣೆ ಎಂದು ಸ್ನೇಹಮಯಿ ಕೃಷ್ಣ ಅವರ ಪುತ್ರ ವಿವೇಕ್ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಮುಡಾ ಹಗರಣದ ಪ್ರಮುಖ ದೂರುದಾರ ಹಾಗೂ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ಬಂಧನ ಪ್ರಕ್ರಿಯೆ ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಮುಡಾ ಹಗರಣಕ್ಕೆ ಸಂಬಂಧಿಸಿದ ವಿಚಾರಣೆ ಇತ್ತು. ಪ್ರಕರಣದ ವಿಚಾರಣೆ ಮುಗಿಸಿ ಕೋರ್ಟ್‌ನಿಂದ ಕೆಳಗಿಳಿದು ಬರುತ್ತಿದ್ದಂತೆಯೇ, ಸಿಸಿಬಿ ಅಧಿಕಾರಿಗಳೆಂದು ಗುರುತಿಸಿಕೊಂಡ ತಂಡವೊಂದು ಸ್ನೇಹಮಯಿ ಕೃಷ್ಣ ಅವರನ್ನು ಇನೋವಾ ಕಾರಿನಲ್ಲಿ ಬಲವಂತವಾಗಿ ಕರೆದೊಯ್ದಿದೆ. ಈ ವೇಳೆ ಅವರ ಜೊತೆಗಿದ್ದ ಪುತ್ರ ವಿವೇಕ್ ಪೊಲೀಸರನ್ನು ಪ್ರಶ್ನಿಸಿದರೂ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎನ್ನಲಾಗಿದೆ.
ತಂದೆಯನ್ನು ಕರೆದೊಯ್ದ ಬೆನ್ನಲ್ಲೇ ಶಾಂತಿನಗರದಲ್ಲಿರುವ ಸಿಸಿಬಿ ಮುಖ್ಯ ಕಚೇರಿಗೆ ಧಾವಿಸಿದ ವಿವೇಕ್ ಅವರಿಗೆ ಅಲ್ಲಿ ನಿರಾಸೆ ಕಾದಿತ್ತು. 'ನನ್ನ ತಂದೆಯ ಬಗ್ಗೆ ವಿಚಾರಿಸಿದರೆ ಇಲ್ಲಿ ಅಂತಹವರು ಯಾರೂ ಇಲ್ಲ, ನಮಗೆ ಗೊತ್ತಿಲ್ಲ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಪೊಲೀಸರು ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆಯೇ ಎಂಬ ಆತಂಕ ನಮಗೆ ಕಾಡುತ್ತಿದೆ' ಎಂದು ವಿವೇಕ್ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಒಂದೆಡೆ ಬೆಂಗಳೂರಿನಲ್ಲಿ ಸ್ನೇಹಮಯಿ ಕೃಷ್ಣ ಅವರನ್ನು ವಶಕ್ಕೆ ಪಡೆಯಲಾಗಿದ್ದರೆ, ಇನ್ನೊಂದೆಡೆ ಮೈಸೂರಿನಲ್ಲಿರುವ ಅವರ ನಿವಾಸದ ಮೇಲೆ 10ಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಸರ್ಚ್ ವಾರಂಟ್ ತೋರಿಸಿ ಮನೆಯ ಮೂಲೆ ಮೂಲೆಯನ್ನು ಜಾಲಾಡುತ್ತಿರುವ ಅಧಿಕಾರಿಗಳು, ಹಲವು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮುಡಾ ಹಗರಣದಲ್ಲಿ ರಾಜ್ಯದ ಪ್ರಭಾವಿ ನಾಯಕರ ಹೆಸರುಗಳು ಕೇಳಿಬರುತ್ತಿವೆ. ನನ್ನ ತಂದೆ ಯಾವುದೇ ಆಮಿಷಕ್ಕೆ ಬಗ್ಗದೆ ಸತತವಾಗಿ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿಯೇ ಅವರನ್ನು ಹತ್ತಿಕ್ಕಲು ಸರ್ಕಾರ ಈ ತಂತ್ರ ಹೂಡಿದೆ. ನನ್ನ ತಂದೆಯ ಜೀವಕ್ಕೆ ಏನಾದರೂ ತೊಂದರೆಯಾದರೆ ಅದಕ್ಕೆ ಈ ಸರ್ಕಾರ ಮತ್ತು ಸಿಸಿಬಿ ಅಧಿಕಾರಿಗಳೇ ಜವಾಬ್ದಾರರು" ಎಂದು ವಿವೇಕ್ ಎಚ್ಚರಿಕೆ ನೀಡಿದ್ದಾರೆ.
ಸದ್ಯ ಸ್ನೇಹಮಯಿ ಕೃಷ್ಣ ಅವರ ನಿಖರವಾದ ಸ್ಥಳದ ಬಗ್ಗೆ ಸಿಸಿಬಿ ಪೊಲೀಸರು ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಈ ನಡುವೆ ಕಾರ್ಯಕರ್ತನ ಬಂಧನವು ರಾಜಕೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ