
ಮೈಸೂರು (ಫೆ.4): ಮುಡಾ ಹಗರಣದ ಬೆನ್ನಲ್ಲಿಯೇ ಸಿಎಂ ಸಿದ್ದರಾಮಯ್ಯ ಕುಟುಂಬದ ಮೇಲೆ ಬೇನಾಮಿ ಆಸ್ತಿ ಸಂಪಾದಿಸಿದ ಆರೋಪ ಪ್ರಕರಣ ಎದುರಾಗಿದೆ. ತವರಿನಿಂದ ಬಂದ ಉಡುಗೊರೆಯನ್ನು ಒಂದೇ ತಿಂಗಳಿಗೆ ಮಗನಿಗೆ ತಾಯಿ ದಾನ ಮಾಡಿದ್ದಾರೆ. ತಾಯಿ ಕೊಟ್ಟ ಉಡುಗೊರೆಯನ್ನು ಮೂರೇ ತಿಂಗಳಿಗೆ ಮಗ ಬೇರೆಯವರಿಗೆ ಮಾರಿದ್ದಾನೆ. ಇಡೀ ವ್ಯವಹಾರವೇ ಬೇನಾಮಿ ಆಸ್ತಿಯದ್ದು ಎಂದು ಮುಡಾ ಹಗರಣದಲ್ಲಿ ಸಿಎಂ ವಿರುದ್ಧದ ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಮನೆಯಲ್ಲಿ ನಡೆದ ಈ ವಹಿವಾಟು ಈಗ ಸಿಎಂ ಕುಟುಂಬಕ್ಕೆ ಮುಳ್ಳಾಗಿದೆ. 2010ರ ಅಕ್ಟೋಬರ್ 8 ರಂದು ಸಿಎಂ ಪತ್ನಿ ಪಾರ್ವತಿಗೆ ತಮ್ಮ ಸಹೋದರ ಮಲ್ಲಿಕಾರ್ಜುನ ಸ್ವಾಮಿಯಿಂದ 1 ಎಕರೆ ಜಮೀನು ಉಡುಗೊರೆ ರೂಪದಲ್ಲಿ ಬಂದಿದೆ. ಈ ಜಮೀನನ್ನು ಅಂದಾಜು ಒಂದೇ ತಿಂಗಳಲ್ಲಿ ಅಂದರೆ, 2010 ನವೆಂಬರ್ 11 ರಂದು ಸಿಎಂ ಪತ್ನಿ ಪಾರ್ವತಿ ತಮ್ಮ ಮಗ ಯತೀಂದ್ರಗೆ ದಾನದ ರೂಪದಲ್ಲಿ ನೀಡಿದ್ದಾರೆ. ಅಮ್ಮನಿಂದ ದಾನದ ರೂಪದಲ್ಲಿ ಬಂದ ಜಮೀನಿನ ಉಡುಗೊರೆಯನ್ನು ಡಾ.ಯತೀಂದ್ರ ಸಿದ್ದರಾಮಯ್ಯ ಮೂರೇ ತಿಂಗಳಿಗೆ ಅಂದರೆ, 2011ರ ಮಾರ್ಚ್ 23 ರಂದು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಈ ವಹಿವಾಟು ಸಿಎಂ ಕುಟುಂಬಕ್ಕೆ ಮುಳ್ಳಾಗುವ ಸಾಧ್ಯತೆ ಇದೆ.
ಬೇನಾಮಿ ಹೆಸರಿನಲ್ಲಿ ಸಿದ್ದರಾಮಯ್ಯ ಕುಟುಂಬ ಜಮೀನು ಖರೀದಿ ಆರೋಪ ವಿಚಾರದ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ಮತ್ತಷ್ಟು ದಾಖಲೆ ಬಿಡುಗಡೆ ಮಾಡಿದ್ದಾರೆ. ದಾಖಲೆ ಬಿಡುಗಡೆ ಮಾಡಿದ್ದಲ್ಲದೆ, ಇಡೀ ವಹಿವಾಟಿನಲ್ಲಿ ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ.
ಅನ್ಯಕ್ರಾಂತ (ಭೂ ಪರಿವರ್ತನೆ) ಆದೇಶ ಪಡೆದ ನಂತರ ಆರ್.ಟಿ.ಸಿ.ಯಲ್ಲಿ ಮಾಲೀಕರ ಹೆಸರು ಬರುವಂತಿಲ್ಲ. ಎನ್.ಎ.ಖರಾಬು ಅಥವಾ ಅನ್ಯಕ್ರಾಂತ ಎಂದು ಉಲ್ಲೇಖಿಸಬೇಕು. ಆದರೆ 2006 ಅನ್ಯಕ್ರಾಂತ ಆದೇಶವಾಗಿದ್ದರೂ ಈಗಲೂ ಕೃಷಿ ಭೂಮಿ ಎಂದು ಮಲ್ಲಿಕಾರ್ಜುನ ಸ್ವಾಮಿ ಹೆಸರು ಉಲ್ಲೇಖಿಸಲಾಗಿದೆ.
MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ದೂರು ದಾಖಲಿಸಿದ ಸ್ನೇಹಮಯಿ ಕೃಷ್ಣ
ಕೃಷಿಭೂಮಿ ಎಂದು ದಾಖಲೆಗಳನ್ನು ನೋಂದಣಿ ಮಾಡಲಾಗಿದೆ. 2009-10 ರಲ್ಲಿ ಭೂಸ್ವಾಧೀನದಿಂದ ಕೈಬಿಡಲಾಗಿದೆ ಎಂಬ ಉಲ್ಲೇಖವಿದೆ. ಅಂದರೆ ಅಂತಿಮ ಅಧಿಸೂಚನೆ (1996) ಹೊರಡಿಸಿದ ಸುಮಾರು 13 ವರ್ಷಗಳ ನಂತರ ಕೈಬಿಡಲಾಗಿದೆ. ಇದು ಹೇಗೆ ಸಾಧ್ಯವಾಗುತ್ತದೆ ? ಎಂದು ಸ್ನೇಹಮಯಿ ಕೃಷ್ಣ ಸೋಶಿಯಲ್ ಮೀಡಿಯಾ ಮೂಲಕ ಪ್ರಶ್ನೆ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ದಿಢೀರ್ ಆಸ್ಪತ್ರೆಗೆ ದಾಖಲು; ಎಲ್ಲ ಕಾರ್ಯಕ್ರಮಗಳೂ ರದ್ದು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ