ಬೆಂಗಳೂರು- ಮೈಸೂರು ನಡುವೆ ನಮೋ ಭಾರತ ರೈಲು: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್​

Published : Feb 04, 2025, 07:05 AM IST
ಬೆಂಗಳೂರು- ಮೈಸೂರು ನಡುವೆ ನಮೋ ಭಾರತ ರೈಲು: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್​

ಸಾರಾಂಶ

ಕಡಿಮೆ ಅಂತರ ಹೊಂದಿರುವ ರೈಲು ನಿಲ್ದಾಣಗಳ ಮಧ್ಯೆ ನಮೋ ಭಾರತ ರೈಲು ಓಡಿಸಲು ಕ್ರಮಕೈಗೊಳ್ಳಲಾಗುತ್ತಿದೆ. 100, 150, 200 ಕಿಮೀ ಅಂತರಗಳ ರೈಲು ನಿಲ್ದಾಣಗಳ ಮಧ್ಯೆ ಈ ರೈಲು ಸಂಚರಿಸಲಿದೆ. ಬೆಂಗಳೂರು ಮತ್ತು ಮೈಸೂರು ಮಧ್ಯೆ ನಮೋ ಭಾರತ ರೈಲು ಓಡಿಸುವ ಉದ್ದೇಶ ಹೊಂದಲಾಗಿದೆ ಎಂದು ಮಾಹಿತಿ ನೀಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್  

ಹುಬ್ಬಳ್ಳಿ(ಫೆ.04): ಶನಿವಾರ ಮಂಡಿಸಲಾದ ಕೇಂದ್ರ ಬಜೆಟ್​ನಲ್ಲಿ ರೈಲ್ವೆಗಾಗಿ ಕರ್ನಾಟಕಕ್ಕೆ ₹7,564 ಕೋಟಿ ಮೀಸಲಿರಿಸಲಾಗಿದೆ. ಈ ಹಿಂದಿನ ಯುಪಿಎ ಸರ್ಕಾರದ ಅಧಿಕಾರದ ಅವಧಿ ಹೋಲಿಸಿದರೆ 9 ಪಟ್ಟು ಹೆಚ್ಚು ಹಣ ನೀಡಲಾಗಿದೆ. ಕಡಿಮೆ ಅಂತರ ಹೊಂದಿರುವ ರೈಲು ನಿಲ್ದಾಣಗಳಲ್ಲಿ ನಮೋ ಭಾರತ ರೈಲು ಓಡಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಹೇಳಿದರು. ಸೋಮವಾರ ವಿಡಿಯೋ ಕಾನ್ಫೆರೆನ್ಸ್​ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಬಜೆಟ್​ನಲ್ಲಿ ಕರ್ನಾಟಕ ರೈಲ್ವೆಗೆ ನೀಡಿರುವ ಕೊಡುಗೆಗಳ ಕುರಿತು ಮಾಹಿತಿ ನೀಡಿದರು.

2025-26ನೇ ಹಣಕಾಸು ವರ್ಷದಲ್ಲಿ ರೈಲ್ವೆಯ ಬೆಳವಣಿಗೆ ಮತ್ತು ದಕ್ಷತೆ ವೇಗಗೊಳಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸಾಮರ್ಥ್ಯ ದುರ್ಬಲಗೊಂಡಿರುವ ರೈಲು ಹಳಿಗಳನ್ನು ಹಂತ-ಹಂತವಾಗಿ ಬದಲಾಯಿಸಲಾಗುತ್ತಿದ್ದು, 4-5 ವರ್ಷಗಳಲ್ಲಿ ಎಲ್ಲೆಡೆ ಹೊಸ ಹಳಿ ಅಳವಡಿಕೆಗೆ ಕ್ರಮಕೈಗೊಳ್ಳಲಾಗುವುದು ಎಂದರು.

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್, ದೇಶದ ಎಲ್ಲಾ ಭಾಗದಿಂದ ವಂದೇ ಭಾರತ್, ನಮೋ ಭಾರತ್ ಟ್ರೈನ್

1,652 ಕಿಮೀ ಹೊಸ ರೈಲು ಮಾರ್ಗ:

ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿ ವರ್ಷ 15 ಕಿಮೀ ಮಾತ್ರ ವಿದ್ಯುದ್ದಿಕರಣ​ ಕಾಮಗಾರಿ ನಡೆಯುತ್ತಿತ್ತು. ಈಗಿನ ಅವಧಿಯಲ್ಲಿ ಪ್ರತಿ ವರ್ಷ 300 ಕಿಮೀಗೂ ಹೆಚ್ಚು ವಿದ್ಯುದೀಕರಣ​ ಮಾಡಲಾಗುತ್ತಿದೆ. 2014ರ ನಂತರ ಕರ್ನಾಟಕದಲ್ಲಿ 1,652 ಕಿಮೀ ಹೊಸ ರೈಲ್ವೆ ಮಾರ್ಗಗಳನ್ನು ಅಳವಡಿಸಲಾಗಿದೆ. ಇಡೀ ಶ್ರೀಲಂಕಾದ ವಿಸ್ತೀರ್ಣದಷ್ಟು ರೈಲ್ವೆ ಮಾರ್ಗ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರದ ಅವಧಿಯಲ್ಲಿ ಆಗಿದೆ ಎಂದರು.

ನಮೋ ರೈಲು ಓಡಿಸಲು ಕ್ರಮ:

ಕಡಿಮೆ ಅಂತರ ಹೊಂದಿರುವ ರೈಲು ನಿಲ್ದಾಣಗಳ ಮಧ್ಯೆ ನಮೋ ಭಾರತ ರೈಲು ಓಡಿಸಲು ಕ್ರಮಕೈಗೊಳ್ಳಲಾಗುತ್ತಿದೆ. 100, 150, 200 ಕಿಮೀ ಅಂತರಗಳ ರೈಲು ನಿಲ್ದಾಣಗಳ ಮಧ್ಯೆ ಈ ರೈಲು ಸಂಚರಿಸಲಿದೆ. ಬೆಂಗಳೂರು ಮತ್ತು ಮೈಸೂರು ಮಧ್ಯೆ ನಮೋ ಭಾರತ ರೈಲು ಓಡಿಸುವ ಉದ್ದೇಶ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

₹51,479 ಕೋಟಿ ಮೀಸಲು:

ರೈಲ್ವೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸದಾ ಬದ್ಧವಾಗಿದೆ. ಹಲವಾರು ಹೊಸ ಮಾರ್ಗ ಸೇರಿದಂತೆ ನೂತನ ಯೋಜನೆಗಳನ್ನು ಕೈಗೊಳ್ಳಲಾಗುವುದು. ದೇಶದಾದ್ಯಂತ ಹೊಸ ಮಾರ್ಗ, ಡಬ್ಲಿಂಗ್​, ವರ್ಕ್​ಶಾಪ್​ಗಳ ಅಭಿವೃದ್ಧಿ ಸೇರಿದಂತೆ ಇನ್ನಿತರ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ₹51,479 ಕೋಟಿ ಮೀಸಲಿರಸಲಾಗಿದ್ದು, ಕರ್ನಾಟಕದಲ್ಲಿರುವ ರೈಲ್ವೆ ಸೌಲಭ್ಯಗಳೂ ಅಭಿವೃದ್ಧಿಗೊಳ್ಳಲಿವೆ ಎಂದರು.

ಈಗಾಗಲೇ ಕರ್ನಾಟಕದಲ್ಲಿ 10 ವಂದೇ ಭಾರತ್​ ರೈಲುಗಳು ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ದೇಶದಾದ್ಯಂತ 100 ಹೊಸ ಅಮೃತ ಭಾರತ ಹಾಗೂ 200 ಹೊಸ ವಂದೇ ಭಾರತ್​ ರೈಲುಗಳು ಸಂಚರಿಸಲಿವೆ ಎಂದು ಹೇಳಿದರು.

ಮೆಮು ರೈಲುಗಳ ಸೇವೆ ಒದಗಿಸಲು ಆದ್ಯತೆ: ಜೈನ್

ಧಾರವಾಡ ಮತ್ತು ಬೆಳಗಾವಿ ನೂತನ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರ ಇನ್ನೂ ಭೂಮಿ ಹಸ್ತಾಂತರ ಮಾಡಿಲ್ಲ. ಭೂಮಿ ವಶಪಡಿಸಿಕೊಳ್ಳುವ ಕಾರ್ಯ ಇನ್ನೂ ನಡೆದಿದೆ. ಹುಬ್ಬಳ್ಳಿ ಮತ್ತು ಗೋವಾ ಮಧ್ಯದ ಘಾಟ್​ ಪ್ರದೇಶದಲ್ಲಿ ಡಬ್ಲಿಂಗ್​ ಕಾಮಗಾರಿ ಇನ್ನೂ ಆಗಿಲ್ಲ ಎಂದು ನೈಋತ್ಯ ರೈಲ್ವೆ ವಲಯದ ಅಪರ ಪ್ರಧಾನ ವ್ಯವಸ್ಥಾಪಕ ಕೆ.ಎಸ್​. ಜೈನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಗ್ರಾಮೀಣ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ಮೆಮು ರೈಲುಗಳ ಸೇವೆ ಒದಗಿಸಲು ನೈಋತ್ಯ ರೈಲ್ವೆ ಉದ್ದೇಶಿಸಲಾಗಿದೆ. ರಾಜ್ಯದ 10 ಮಾರ್ಗಗಳಲ್ಲಿ ಕಾರ್ಯಾಚರಣೆಗೆ ಅವಕಾಶ ನೀಡುವಂತೆ ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದರು.

ಹುಬ್ಬಳ್ಳಿ-ಗದಗ, ದಾವಣಗೆರೆ-ಹುಬ್ಬಳ್ಳಿ, ಹೊಸಪೇಟೆ- ಬಳ್ಳಾರಿ, ಸೊಲ್ಲಾಪುರ-ಗದಗ, ಮೈಸೂರು- ಚಾಮರಾಜ ನಗರ, ಬೆಂಗಳೂರು-ಚಿಕ್ಕಮಗಳೂರು ಸೇರಿದಂತೆ 10 ಮಾರ್ಗಗಳಲ್ಲಿ ಮೆಮು ರೈಲು ಕಾರ್ಯಾಚರಣೆ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಡಳಿಯು ಅನುಮೋದನೆ ನೀಡುತ್ತಿದ್ದಂತೆ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದರು. ಹುಬ್ಬಳ್ಳಿಯಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್ ಸ್ಥಾಪನೆ ಕುರಿತು 4 ತಿಂಗಳ ಹಿಂದೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ನಿರೀಕ್ಷೆಯಲ್ಲಿದ್ದೇವೆ ಎಂದರು.

ಶೀಘ್ರ ರಾಜ್ಯಕ್ಕೆ ಮೊದಲ ನಮೋ ಭಾರತ್‌ ರ್‍ಯಾಪಿಡ್‌ ರೈಲು: ಅಶ್ವಿನ್ ವೈಷ್ಣವ್ ಭರವಸೆ

ಹುಬ್ಬಳ್ಳಿ ವಿಭಾಗೀಯ ಹೆಚ್ಚುವರಿ ವ್ಯವಸ್ಥಾಪಕ ಎ.ಕೆ. ವರ್ಮಾ ಮಾತನಾಡಿ, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ ಸಂಬಂಧಿಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಬಹುತೇಕ ಅಂತಿಮ ಹಂತದಲ್ಲಿದೆ. ಇನ್ನು 6 ತಿಂಗಳಲ್ಲಿ ಸರ್ಕಾರದಿಂದ ಅನುಮೋದನೆ ಸಿಗುವ ಸಾಧ್ಯತೆ ಇದೆ ಎಂದರು.

ಅಮೃತ ಭಾರತ್ ಯೋಜನೆಯ ಅಡಿ ಮರು ನಿರ್ಮಿಸಲಾಗುತ್ತಿರುವ ರೈಲು ನಿಲ್ದಾಣಗಳು ಮಾರ್ಚ್ ಹೊತ್ತಿಗೆ ಪೂರ್ಣಗೊಳ್ಳಲಿವೆ. ಈ ನಿಲ್ದಾಣಗಳ ಉದ್ಘಾಟನೆಗೆ ಪ್ರಧಾನಿಯವರು ಆಗಮಿಸುವ ಸಾಧ್ಯತೆ ಇದೆ ಎಂದರು.
ಈ ವೇಳೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌