ಸುತ್ತೋಲೆಯಲ್ಲೇ ಉಳಿದ ಸ್ಮೋಕಿಂಗ್‌ ಝೋನ್‌: ಅನುಷ್ಠಾನದಲ್ಲಿ ಸಂಪೂರ್ಣ ವಿಫಲ

By Kannadaprabha NewsFirst Published Dec 29, 2020, 3:04 PM IST
Highlights

ಬಾರ್‌, ರೆಸ್ಟೋರೆಂಟ್‌, ಹೋಟೆಲ್‌ಗಳಲ್ಲಿ ಸಿಗರೆಟ್‌ ಸೇವನೆಗೆ ಪ್ರತ್ಯೇಕ ‘ಸ್ಮೋಕಿಂಗ್‌ ಝೋನ್‌’ | ನಿಯಮ ಅನುಷ್ಠಾನಕ್ಕೆ ತರುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲ

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಡಿ.29): ಧೂಮಪಾನದಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಾರ್‌, ರೆಸ್ಟೋರೆಂಟ್‌, ಹೋಟೆಲ್‌ಗಳಲ್ಲಿ ಸಿಗರೆಟ್‌ ಸೇವನೆಗೆ ಪ್ರತ್ಯೇಕ ‘ಸ್ಮೋಕಿಂಗ್‌ ಝೋನ್‌’ ಇರಬೇಕೆಂಬ ನಿಯಮ ಅನುಷ್ಠಾನಕ್ಕೆ ತರುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿವೆ.

ಸಿಗರೆಟ್‌ ಮತ್ತು ತಂಬಾಕು ಸೇವನೆಯಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಸಿಗರೆಟ್‌ ಮತ್ತು ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ (ಕಾಟ್ಪಾ) ಜಾರಿಗೆ ತರಲಾಗಿದೆ. ರಾಜ್ಯದಲ್ಲೂ ಸಿಗರೆಟ್‌ ಮತ್ತು ತಂಬಾಕು ಸೇವನೆ ನಿಯಂತ್ರಣ ಕಾಯ್ದೆ- 2003ನ್ನು ಜಾರಿಗೆ ತಂದಿದ್ದು, ಅನುಷ್ಠಾನದ ಜವಾಬ್ದಾರಿ ಪೊಲೀಸ್‌ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗಿದೆ. ಈ ಕುರಿತು ಬಿಬಿಎಂಪಿ 2018ರಲ್ಲಿಯೇ ಸುತ್ತೋಲೆ ಹೊರಡಿಸಿದೆ.

ಹನುಮ ಗುಲಾಮಗಿರಿಯ ಸಂಕೇತ : ಡಾ.ಬಿ.ಪಿ. ಮಹೇಶ್‌

ಜತೆಗೆ ‘ಸ್ಮೋಕಿಂಗ್‌ ಝೋನ್‌’ ಇಲ್ಲದ ಬಾರ್‌, ರೆಸ್ಟೋರೆಂಟ್‌, ಹೋಟೆಲ್‌ಗಳ ಪರವಾನಗಿ ನವೀಕರಿಸದಂತೆ ಹಾಗೂ ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಸುತ್ತೋಲೆ ಹೊರಡಿಸಿ ಬರೋಬ್ಬರಿ ಎರಡು ವರ್ಷ ಕಳೆದರೂ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ.

ಒಂದೇ ಒಂದು ಸ್ಮೋಕಿಂಗ್‌ ಝೋನ್‌ ಇಲ್ಲ

30ಕ್ಕಿಂತ ಹೆಚ್ಚು ಆಸನ ವ್ಯವಸ್ಥೆ ಇರುವ ಬಾರ್‌, ರೆಸ್ಟೋರೆಂಟ್‌, ಹೋಟೆಲ್‌, ಪಬ್‌ ಹಾಗೂ ಕ್ಲಬ್‌ಗಳಲ್ಲಿ ಪ್ರತ್ಯೇಕ ಧೂಮಪಾನ ಪ್ರದೇಶ ಸ್ಥಾಪಿಸಬೇಕೆಂಬ ನಿಯಮವಿದ್ದರೂ ಈವರೆಗೆ ನಗರದಲ್ಲಿ ಒಂದೇ ಒಂದು ಅಧಿಕೃತ ಸ್ಮೋಕಿಂಗ್‌ ಝೋನ್‌ ನಿರ್ಮಾಣವಾಗಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಬಿಬಿಎಂಪಿ ಅವಕಾಶ ಮಾಡಿಕೊಟ್ಟಿದೆ. ಆದರೆ, ಸಲ್ಲಿಕೆ ಮಾಡಿದ ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡುತ್ತಿಲ್ಲ.

ವಿಲೇವಾರಿಗೆ ಬಿಬಿಎಂಪಿ ಆಯುಕ್ತರು, ಸಾರ್ವಜನಿಕರ ಆರೋಗ್ಯ ವಿಭಾಗದ ಅಧಿಕಾರಿಗಳು, ವಲಯ ಆರೋಗ್ಯ ಅಧಿಕಾರಿ, ಸ್ವಯಂ ಸೇವಾ ಸಂಸ್ಥೆಯ ಸದಸ್ಯರ ನೇತೃತ್ವದಲ್ಲಿ ಸಮಿತಿ ರಚನೆಯಾಗಬೇಕು. ಸಮಿತಿ ಸಭೆಯಲ್ಲಿ ಚರ್ಚೆ ಮಾಡಿ ಅನುಮತಿ ನೀಡಬೇಕು. ಆದರೆ, ಈವರೆಗೆ ಸಮಿತಿ ರಚನೆ ಆಗದ ಹಿನ್ನೆಲೆಯಲ್ಲಿ ಯಾವುದೇ ಸ್ಮೋಕಿಂಗ್‌ ಝೋನ್‌ಗೆ ಅನುಮತಿ ನೀಡಿಲ್ಲ ಎಂದು ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಚಿಲ್ಲರೆ ದಂಡಕ್ಕೆ ಸೀಮಿತ

ಪ್ರತ್ಯೇಕ ಸ್ಮೋಕಿಂಗ್‌ ಝೋನ್‌ಗೆ ನಿರ್ಮಾಣಕ್ಕೆ ಅನುಮತಿ ನೀಡದ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುವ ವ್ಯಾಪಾರಿಗಳಿಗೆ ಸಿಗರೆಟ್‌ ಹಾಗೂ ತಂಬಾಕು ಮಾರಾಟಕ್ಕೆ ದಂಡ ವಿಧಿಸುತ್ತಿದ್ದಾರೆ. ಕಳೆದ ಜನವರಿಯಿಂದ ಅಕ್ಟೋಬರ್‌ ಅಂತ್ಯದ ವರೆಗೆ ನಗರದಲ್ಲಿ 282 ಮಂದಿಗೆ ಕಾಟ್ಪಾ ಕಾಯ್ದೆ ಉಲ್ಲಂಘನೆಯಡಿ 40,240 ರು. ದಂಡ ವಿಧಿಸಿದ್ದಾರೆ. ಇನ್ನು ಬೆಂಗಳೂರು ನಗರ ಪೊಲೀಸರು 1,520 ಪ್ರಕರಣಗಳಿಂದ 2,86,350 ರು. ದಂಡ ವಸೂಲಿ ಮಾಡಿದ್ದಾರೆ.

ನಗರದಲ್ಲಿ ಈವರೆಗೆ ಪ್ರತ್ಯೇಕ ಸ್ಮೋಕಿಂಗ್‌ ಝೋನ್‌ ನಿರ್ಮಾಣಕ್ಕೆ ಯಾವುದೇ ಅನುಮತಿ ನೀಡಿಲ್ಲ. ಆದರೆ, ಕಳೆದ ಜನವರಿಯಿಂದ ಅಕ್ಟೋಬರ್‌ ವರೆಗೆ ಎರಡು ಸಭೆ ನಡೆಸಿ ಏಳು ಬಾರಿ ನಗರದ ವಿವಿಧ ತಪಾಸಣೆ ನಡೆಸಿ ಕಾಟ್ಪಾ ಕಾಯ್ದೆ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲಾಗಿದೆ ಎಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಮನೋರಂಜನ್‌ ಹೆಗ್ಡೆ ಹೇಳಿದ್ದಾರೆ.

click me!