ಜ್ಞಾನಪೀಠಕ್ಕೆ ಭೈರಪ್ಪ, ಮೊಯ್ಲಿ, ಕಣವಿ ಹೆಸರು ಶಿಫಾರಸು!

By Suvarna News  |  First Published Oct 5, 2021, 10:09 AM IST

* ಪ್ರಶಸ್ತಿ ಆಯ್ಕೆ ಸಮಿತಿಗೆ 3 ಕನ್ನಡಿಗ ಸಾಹಿತಿಗಳ ಹೆಸರು ನೀಡಿದ ಸಾಹಿತ್ಯ ಅಕಾಡೆಮಿ

* ಜ್ಞಾನಪೀಠಕ್ಕೆ ಭೈರಪ್ಪ, ಮೊಯ್ಲಿ, ಕಣವಿ ಹೆಸರು ಶಿಫಾರಸು


ಬೆಂಗಳೂರು(ಅ.05): ಪ್ರತಿಷ್ಠಿತ ಜ್ಞಾನಪೀಠ ಪುರಸ್ಕಾರದ(Jnanpith Award) ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದ್ದು, ಪ್ರಶಸ್ತಿಗಾಗಿ ಕನ್ನಡ ಸಾರಸ್ವತ ಲೋಕದ ಮೂವರು ದಿಗ್ಗಜರ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಟೈಮ್ಸ್‌ ಗ್ರೂಪ್‌ ನೀಡುವ ಭಾರತೀಯ ಜ್ಞಾನಪೀಠ ಪ್ರಶಸ್ತಿಗೆ ಕರುನಾಡ ಸಾರಸ್ವತ ಲೋಕದ ದಿಗ್ಗಜರಾದ ಎಸ್‌.ಎಲ್‌.ಭೈರಪ್ಪ(SL Bhyrappa), ವೀರಪ್ಪ ಮೊಯ್ಲಿ(Veerappa Moily) ಮತ್ತು ಚೆನ್ನವೀರ ಕಣವಿ(Chennaveera Kanavi) ಹೆಸರು ಶಿಫಾರಸುಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ಡಾ.ಚಂದ್ರಶೇಖರ್‌ ಕಂಬಾರ ಅವರಿಗೆ ವೀರಪ್ಪ ಮೊಯ್ಲಿ ಅವರು ಆಪ್ತರಾಗಿರುವ ಕಾರಣ ಕರುನಾಡಿಗೆ 9ನೇ ಜ್ಞಾನಪೀಠ ಪ್ರಶಸ್ತಿ ಮೊಯ್ಲಿ ಮೂಲಕ ಪ್ರಾಪ್ತವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Tap to resize

Latest Videos

ಈಗಾಗಲೇ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಒಂದು ಭಾಷೆಗೆ ಜ್ಞಾನಪೀಠ ಪ್ರಶಸ್ತಿ ನೀಡಿದ ಬಳಿಕ ಮುಂದಿನ ಮೂರು ವರ್ಷ ಆ ಭಾಷೆಯ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸುವುದಿಲ್ಲ. ಈಗಾಗಲೇ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದು ದಶಕ ಕಳೆದಿದೆ. ಹಾಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆಗಿರುವ ಡಾ.ಚಂದ್ರಶೇಖರ್‌ ಕಂಬಾರರಿಗೆ 2010ರಲ್ಲಿ ಸಮಗ್ರ ಸಾಹಿತ್ಯದ ಕೊಡುಗೆಗಾಗಿ ಜ್ಞಾನಪೀಠ ಪ್ರಶಸ್ತಿ ನೀಡಲಾಗಿತ್ತು.

ಅತ್ಯಂತ ಪ್ರತಿಷ್ಠಿತವೂ ವಿಶಿಷ್ಟವೂ ಆಗಿರುವ ಮತ್ತು ಅಧಿಕೃತತೆಯನ್ನು ಪಡೆದಿರುವ ಈ ಪ್ರಶಸ್ತಿಯು ವ್ಯಾಪಕವಾಗಿರುವ ತನ್ನ ಆಯ್ಕೆ ಪ್ರಕ್ರಿಯೆಯಿಂದಾಗಿ ಪಾರದರ್ಶಕತೆ ಉಳಿಸಿಕೊಂಡಿದೆ. ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಶಿಫಾರಸನ್ನು ಕೂಡ ಕೇಳಲಾಗುತ್ತದೆ. ಶಿಫಾರಸಾದ ಸಾಹಿತಿಗಳ ಕೃತಿಗಳನ್ನು ಪರಿಣತರಿಗೆ ನೀಡಿ ಮೌಲ್ಯಮಾಪನ ನಡೆಸಿ ಅನಂತರ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಕನ್ನಡದ ಜ್ಞಾನಪೀಠ ಪುರಸ್ಕೃತರು:

ಕುವೆಂಪು- ಶ್ರೀರಾಮಾಯಣ ದರ್ಶನಂ(1967), ದ.ರಾ.ಬೇಂದ್ರೆ- ನಾಕುತಂತಿ (1973), ಶಿವರಾಮ ಕಾರಂತ- ಮೂಕಜ್ಜಿಯ ಕನಸುಗಳು(1977), ಮಾಸ್ತಿ ವೆಂಕಟೇಶ ಅಯ್ಯಂಗಾರ್‌- ಸಮಗ್ರ ಸಾಹಿತ್ಯ: ವಿಶೇಷ ಉಲ್ಲೇಖ- ಚಿಕವೀರ ರಾಜೇಂದ್ರ (1983), ವಿ.ಕೃ.ಗೋಕಾಕ್‌- ಸಮಗ್ರ ಸಾಹಿತ್ಯ- ವಿಶೇಷ ಉಲ್ಲೇಖ: ಭಾರತ ಸಿಂಧುರಶ್ಮಿ (1990), ಯು.ಆರ್‌.ಅನಂತಮೂರ್ತಿ- ಸಮಗ್ರ ಸಾಹಿತ್ಯ (1994), ಗಿರೀಶ್‌ ಕಾರ್ನಾಡ್‌- ಸಮಗ್ರ ಸಾಹಿತ್ಯ (1998), ಡಾ.ಚಂದ್ರಶೇಖರ್‌ ಕಂಬಾರ- ಸಮಗ್ರ ಸಾಹಿತ್ಯ (2010)

click me!