ಬಿಜೆಪಿ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್‌, ಪುತ್ರರ ಮನೆಗೆ ಎಸ್‌ಐಟಿ ದಾಳಿ

Kannadaprabha News   | Kannada Prabha
Published : Oct 18, 2025, 04:04 AM IST
Subhash Guttedar SIT raid

ಸಾರಾಂಶ

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಿಡಿಸಿದ್ದ ಮತಗಳ್ಳತನ ಆರೋಪ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಆಳಂದ ಕ್ಷೇತ್ರದ ‘ವೋಟ್‍ ಚೋರಿ’ ಪ್ರಕರಣ ಸಂಬಂಧ ಎಸ್‍ಐಟಿ ತನಿಖೆ ಚುರುಕುಗೊಂಡಿದೆ.

ಕಲಬುರಗಿ : ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಿಡಿಸಿದ್ದ ಮತಗಳ್ಳತನ ಆರೋಪ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಆಳಂದ ಕ್ಷೇತ್ರದ ‘ವೋಟ್‍ ಚೋರಿ’ ಪ್ರಕರಣ ಸಂಬಂಧ ಎಸ್‍ಐಟಿ ತನಿಖೆ ಚುರುಕುಗೊಂಡಿದೆ. ಶುಕ್ರವಾರ ಬಿಜೆಪಿಯ ಆಳಂದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್‌ ಅವರಿಗೆ ಸೇರಿದ ಮನೆ, ಬಾರ್ ಮತ್ತು ರೆಸ್ಟೋರೆಂಟ್, ನಗರದ ಗುಬ್ಬಿ ಕಾಲೋನಿಯಲ್ಲಿರುವ ಸುಭಾಷ್‌ ಗುತ್ತೇದಾರ್‌ ಅವರ ಪುತ್ರ, ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್‌ ಹಾಗೂ ವಸಂತ ನಗರದಲ್ಲಿರುವ ಇನ್ನೋರ್ವ ಪುತ್ರ, ಉದ್ಯಮಿ ಸಂತೋಷ್ ಗುತ್ತೇದಾರ್ ಅವರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ.

ಆಳಂದದಲ್ಲಿರುವ ಸುಭಾಷ್ ಗುತ್ತೇದಾರ್ ಅವರ ಮನೆ, ಅವರ ಒಡೆತನದ ಅಪ್ನಾ ಬಾರ್‌ ಅಂಡ್ ರೆಸ್ಟೋರೆಂಟ್ ಮೇಲೆ ದಾಳಿ ನಡೆದಿದೆ. ದಾಳಿ ವೇಳೆ, ಸುಭಾಷ್ ಗುತ್ತೇದಾರ್ ಅವರ ಆಳಂದ ಮನೆ ಬಳಿ 2 ಕಡೆ ಮತಪತ್ರ , ವೋಟರ್‌ ಐಡಿಗಳನ್ನು ರಾಶಿ ಹಾಕಿ ಬೆಂಕಿ ಹಚ್ಚಿದ್ದು ಕಂಡು ಬಂದಿದೆ. ಮತಪತ್ರ ಸೇರಿ ಹಲವು ಕಾಗದ ಪತ್ರಗಳಿಗೆ ಬೆಂಕಿ ಬಿದ್ದಿರುವ ವಿಡಿಯೋ ವೈರಲ್ ಆಗಿದೆ.

ಆಳಂದ ಪಟ್ಟಣದ ಸೋಲಾಪೂರ ಮಾರ್ಗದ ರಾಜ್ಯ ಹೆದ್ದಾರಿಯ ಶಖಾಪೂರ ಸೇತುವೆ ಬಳಿ ಅರೆಬರೆ ಸುಟ್ಟ ಮತದಾರರ ಪಟ್ಟಿಯ ದಾಖಲೆಗಳು ಪತ್ತೆಯಾದರೆ, ಮಟಕಿ ರಸ್ತೆಯ ಮನೆಯೊಂದರ ಬಳಿ ಮತಪಟ್ಟಿ ಸಂಪೂರ್ಣವಾಗಿ ಸುಟ್ಟು ಕರಕಲು ಆಗಿರುವುದು ಪತ್ತೆಯಾಗಿದೆ. ಶುಕ್ರವಾರ ಇವೆರಡೂ ಸ್ಥಳಗಳಿಗೆ ಎಸ್‌ಐಟಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಈ ಘಟನೆಯು ಸಾಕ್ಷ್ಯ ನಾಶಪಡಿಸುವ ಪ್ರಯತ್ನವೆಂದು ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ,

ಈ ದಾಖಲೆಗಳನ್ನು ಮಿನಿ ಗೂಡ್ಸ್‌ನಲ್ಲಿ ಹೊರವಲಯಕ್ಕೆ ಸಾಗಿಸಿ, ನಂತರ ಅವುಗಳನ್ನು ರಾತ್ರಿ ಸಮಯದಲ್ಲಿ ಸುಟ್ಟು ಹಾಕಿ ನೀರಿನಲ್ಲಿ ತಳ್ಳಲಾಗಿದೆ ಎಂಬ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ. ಆದರೆ, ಈ ದಾಖಲೆಗಳನ್ನು ಯಾವಾಗ ಸುಡಲಾಗಿದೆ ಎಂಬ ಬಗ್ಗೆ ನಿಖರ ಮಾಹಿತಿ ಗೊತ್ತಾಗಿಲ್ಲ.

ಪುತ್ರರ ಮನೆ ಮೇಲೂ ದಾಳಿ:

ಈ ಮಧ್ಯೆ, ಕಲಬುರಗಿಯ ಗುಬ್ಬಿ ಕಾಲೋನಿಯಲ್ಲಿರುವ ಸುಭಾಷ ಗುತ್ತೇದಾರ್‌ ಅವರ ಪುತ್ರ , ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್‌ ಹಾಗೂ ವಸಂತ ನಗರದಲ್ಲಿರುವ ಇನ್ನೋರ್ವ ಪುತ್ರ, ಉದ್ಯಮಿ ಸಂತೋಷ್ ಗುತ್ತೇದಾರ್ ಅವರ ನಿವಾಸದ ಮೇಲೆಯೂ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಇದಲ್ಲದೆ, ಇಲ್ಲಿನ ವಿವೇಕಾನಂದ ನಗರದಲ್ಲಿರುವ ಚಾರ್ಟರ್ಡ್‌ ಅಕೌಂಟೆಂಟ್‌ ಮಲ್ಲಿಕಾರ್ಜುನ ಮಹಾಂತಗೋಳ ಅವರ ನಿವಾಸದ ಮೇಲೂ ದಾಳಿ ನಡೆದಿದೆ.

ಎಸ್‍ಐಟಿ ಅಧಿಕಾರಿಗಳು ಗುರುವಾರ ಕಲಬುರಗಿಯಲ್ಲಿ ಅಕ್ರಂ ಎಂಬಾತನ ಮನೆ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ರಾಶಿ, ರಾಶಿ ವೋಟರ್ ಐಡಿಗಳು ಪತ್ತೆ ಆಗಿದ್ದವು. 15 ಮೊಬೈಲ್, 7 ಲ್ಯಾಪ್ ಟಾಪ್ ಸೀಜ್ ಮಾಡಲಾಗಿತ್ತು.

ಆರೋಪವೇನು?:

2023ರ ವಿಧಾನಸಭಾ ಚುನಾವಣೆಯಲ್ಲಿ ಆಳಂದ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಬೆಂಬಲವಿರುವ ಮತದಾರರ ಹೆಸರುಗಳನ್ನೇ ಅನಾಮಧೇಯವಾಗಿ ಫಾರ್ಮ್‌ 7 ಆನ್‌ಲೈನ್‌ ಮೂಲಕ ಸಲ್ಲಿಸಿ ಮತಪಟ್ಟಿಯಿಂದ ತೆಗೆದು ಹಾಕುವ ಸಂಚು ನಡೆದಿತ್ತು. ತಮ್ಮ ಎದುರಾಳಿ, ಬಿಜೆಪಿಯ ಸುಭಾಷ ಗುತ್ತೇದಾರ್‌ ಈ ಸಂಚು ರೂಪಿಸಿರಬಹುದು ಎಂದು ಶಾಸಕ ಬಿ.ಆರ್‌.ಪಾಟೀಲ್‌ ದೂರು ನೀಡಿದ್ದರು. ಈ ದೂರನ್ನಾಧರಿಸಿ ಅಂದಿನ ಚುನಾವಣಾಧಿಕಾರಿಗಳು ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

 - ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆ ವೇಳೆ ಮತಗಳವು ಆಗಿದೆ ಎಂದು ಆರೋಪಿಸಿದ್ದ ರಾಹುಲ್‌ ಗಾಂಧಿ

- ಈ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚಿಸಿದ್ದ ರಾಜ್ಯ ಸರ್ಕಾರ. ಎಸ್‌ಐಟಿಯಿಂದ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್‌ ಮನೆ ಮೇಲೆ ದಾಳಿ

- ಗುತ್ತೇದಾರ್‌ಗೆ ಸೇರಿದ ಬಾರ್‌- ರೆಸ್ಟೋರೆಂಟ್‌, ಅವರ ಪುತ್ರ ಹರ್ಷಾನಂದ, ಸಂತೋಷ್‌ ನಿವಾಸದಲ್ಲೂ ಶೋಧ ಕಾರ್ಯ ನಡೆಸಿದ ಎಸ್‌ಐಟಿ

- ಗುತ್ತೇದಾರ್ ಅವರ ಆಳಂದ ಮನೆ ಬಳಿಯೇ 2 ಕಡೆ ಮತಪತ್ರ, ವೋಟರ್‌ ಐಡಿಗಳನ್ನು ರಾಶಿ ಹಾಕಿ ಬೆಂಕಿ ಹಚ್ಚಿರುವುದು ತನಿಖೆ ವೇಳೆ ಪತ್ತೆ

- ಆಳಂದ ಪಟ್ಟಣದ ಶಖಾಪೂರ ಸೇತುವೆ ಬಳಿಯೂ ಅರೆಬರೆ ಸುಟ್ಟ ಮತದಾರರ ಪಟ್ಟಿಯ ದಾಖಲೆಗಳು ಲಭ್ಯ. ಎಸ್‌ಐಟಿಯಿಂದ ಪರಿಶೀಲನೆ

- ಕೆಲವು ದಾಖಲೆಗಳನ್ನು ಮಿನಿ ಗೂಡ್ಸ್‌ ವಾಹನದಲ್ಲಿ ಹೊರವಲಯಕ್ಕೆ ಸಾಗಿಸಿ ಅಲ್ಲಿ ರಾತ್ರಿ ವೇಳೆ ಸುಟ್ಟು, ನೀರಿಗೆ ಎಸೆದಿರುವ ಬಗ್ಗೆ ಅನುಮಾನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!