
ಬೆಂಗಳೂರು: ಉನ್ನತ ತನಿಖೆಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರ ಒತ್ತಾಯದ ಬೆನ್ನಲ್ಲೇ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ.ರಾಯ್ ಆತ್ಮ*ಹತ್ಯೆ ಪ್ರಕರಣದ ತನಿಖೆಗೆ ಜಂಟಿ ಪೊಲೀಸ್ ಆಯುಕ್ತ (ಪಶ್ಚಿಮ) ಸಿ.ವಂಶಿಕೃಷ್ಣ ನೇತೃತ್ವದಲ್ಲಿ ಇಬ್ಬರು ಡಿಸಿಪಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ಪೊಲೀಸ್ ಆಯುಕ್ತರು ಶನಿವಾರ ರಚಿಸಿದ್ದಾರೆ.
ಎಸ್‌ಐಟಿಗೆ ವಂಶಿಕೃಷ್ಣ ಸಾರಥ್ಯ ವಹಿಸಿದರೆ, ಮುಖ್ಯ ತನಿಖಾಧಿಕಾರಿಯಾಗಿ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಸಾರ್ ನೇಮಕವಾಗಿದ್ದಾರೆ. ಇನ್ನು ತಂಡದಲ್ಲಿ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಮಚ್ಚಿಂದ್ರ ಹಾಕೆ, ಹಲಸೂರು ಗೇಟ್ ಉಪ ವಿಭಾಗದ ಎಸಿಪಿ ಸುಧೀರ್, ನಗರ ಅಪರಾಧ ದಾಖಲಾತಿ ಕೇಂದ್ರದ ಎಸಿಪಿ ರಾಮಚಂದ್ರ ಹಾಗೂ ಅಶೋಕ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಬಿ.ರವಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಈ ಆದೇಶ ಹೊರ ಬಿದ್ದ ಬೆನ್ನಲ್ಲೇ ತನಿಖಾ ರಂಗಕ್ಕೆ ಎಸ್‌ಐಟಿ ಪ್ರವೇಶಿಸಿದ್ದು, ಘಟನಾ ಸ್ಥಳಕ್ಕೆ ಮುಖ್ಯ ತನಿಖಾಧಿಕಾರಿ ಹಾಗೂ ಡಿಸಿಪಿ ಲೋಕೇಶ್ ತೆರಳಿ ಶನಿವಾರ ಸಂಜೆ ಪರಿಶೀಲನೆ ನಡೆಸಿದರು.
ತೆರಿಗೆ ವಂಚನೆ ಆರೋಪ ಸಂಬಂಧ ರಿಚ್ಮಂಡ್ ಟೌನ್ ಸಮೀಪದ ತಮ್ಮ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿಯೇ ಕಾನ್ಫಿಡೆಂಟ್ ಕಂಪನಿ ಮುಖ್ಯಸ್ಥ ಸಿ.ಜೆ.ರಾಯ್ ಅವರು ಎದೆಗೆ ಗುಂಡಿಟ್ಟುಕೊಂಡು ಆತ್ಮ*ಹತ್ಯೆಗೆ ಶರಣಾಗಿದ್ದರು. ಈ ಘಟನೆ ಸಂಬಂಧ ಮೃತರ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜೋಸೆಫ್ ಅವರು ನೀಡಿದ ದೂರಿನ ಮೇರೆಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾ*ವು ಪ್ರಕರಣ ದಾಖಲಾಗಿದೆ.
ರಾಯ್ ಆತ್ಮ*ಹತ್ಯೆ ಹಿಂದಿನ ಕಾರಣ ಪತ್ತೆಗೆ ಉನ್ನತ ಮಟ್ಟದ ತನಿಖೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಪ್ರಿಯಾಂಕ ಖರ್ಗೆ, ಶಾಸಕ ಪ್ರದೀಪ್ ಈಶ್ವರ್, ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಸೇರಿದಂತೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರು ಆಗ್ರಹಿಸಿದ್ದರು. ಅಲ್ಲದೆ ರಾಯ್ ಅವರ ಆತ್ಮ*ಹತ್ಯೆಗೆ ಐಟಿ ಅಧಿಕಾರಿಗಳ ಕಿರುಕುಳವೇ ಕಾರಣವಾಗಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹಾಗೂ ಶಾಸಕ ಪ್ರದೀಪ್ ಈಶ್ವರ್ ಗಂಭೀರ ಆರೋಪ ಮಾಡಿದ್ದರು.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಡಿಜಿ-ಐಜಿಪಿ ಡಾ.ಎಂ.ಸಲೀಂ ಅವರನ್ನು ಭೇಟಿಯಾಗಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಚರ್ಚಿಸಿದರು. ಅಲ್ಲದೆ ರಾಯ್ ಅವರ ಉದ್ಯಮ ಸಾಮ್ರಾಜ್ಯವು ರಾಜ್ಯ-ಹೊರ ರಾಜ್ಯಗಳಲ್ಲಿ ಸಹ ಹರಡಿದೆ. ಹೀಗಾಗಿ ಇನ್ನು ಕೇರಳ ಮೂಲದ ಭೂ ವ್ಯವಹಾರ ಮುಂದಿಟ್ಟು ರಾಯ್ ಅವರ ವಿರುದ್ಧ ಐಟಿ ತನಿಖೆ ಆರಂಭವಾಗಿದೆ. ತನಿಖೆ ಸಲುವಾಗಿ ಕೇರಳ ರಾಜ್ಯಕ್ಕೂ ಸಹ ಪೊಲೀಸರು ತೆರಳಬೇಕಿದೆ. ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆ ಬಳಿಕ ರಾಯ್ ಆತ್ಮ*ಹತ್ಯೆ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸುವಂತೆ ಸರ್ಕಾರ ಸೂಚಿಸಿತು. ಈ ಸೂಚನೆ ಹಿನ್ನಲೆಯಲ್ಲಿ ಜಂಟಿ ಆಯುಕ್ತ ವಂಶಿ ಕೃಷ್ಣ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ದೇಶ-ವಿದೇಶಗಳಲ್ಲಿ ಭೂ ವ್ಯವಹಾರ ಹೊಂದಿದ್ದ ರಾಯ್ ಅವರು, ಎರಡು ದಶಕಗಳಲ್ಲಿ ಜಾಗತಿಕ ಮಟ್ಟದಲ್ಲಿ ‘ಕಾನ್ಫಿಡೆಂಟ್’ ಕಂಪನಿ ಮೂಲಕ ಉದ್ಯಮ ಸಾಮ್ರಾಜ್ಯ ಕಟ್ಟಿದ್ದರು. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಕೇರಳ ಹಾಗೂ ದುಬೈ ಸೇರಿದಂತೆ ದೇಶ-ವಿದೇಶಗಳಲ್ಲಿ ಅವರು ಸಾವಿರಾರು ಕೋಟಿ ರು ಮೌಲ್ಯದ ಆಸ್ತಿ ಹೊಂದಿದ್ದಾರೆ. ತಮ್ಮ ಕುಟುಂಬದ ಜತೆ ದುಬೈನಲ್ಲಿ ನೆಲೆಸಿದ್ದ ರಾಯ್ ಅವರು, ಬೆಂಗಳೂರಿನ ಕೋರಮಂಗಲ ಸಮೀಪ ಕೂಡ ಮನೆ ಹೊಂದಿದ್ದರು. ಇತ್ತೀಚಿಗೆ ಆದಾಯ ತೆರಿಗೆ ವಂಚನೆ ಆಪಾದನೆಗೆ ರಾಯ್ ತುತ್ತಾಗಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ರಾಯ್ ಮೇಲೆ ಕೇರಳ ಘಟಕದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಎರಡು ತಿಂಗಳಿಂದ ರಾಯ್ ಅವರ ಉದ್ಯಮ ಸ್ರಾಮಾಜ್ಯದಲ್ಲಿ ಕಡತಗಳ ಶೋಧನೆಗೆ ಐಟಿ ಇಳಿದಿತ್ತು. ಈ ತನಿಖೆ ಭಾಗವಾಗಿ ಮೂರು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಐಟಿ ತಂಡ ಕಡತಗಳ ಪರಿಶೀಲನೆ ಮುಂದಾಗಿತ್ತು. ಈ ತನಿಖೆಯಿಂದ ಆತಂಕಗೊಂಡಿದ್ದ ರಾಯ್ ಅವರು, ರಿಚ್ಮಂಡ್ ಟೌನ್ ಸಮೀಪದ ಹೊಸೂರು ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಬಗ್ಗೆ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ತನಿಖೆಗೆ ಎಸ್‌ಐಟಿಗೆ ಪೂರ್ಣ ಅಧಿಕಾರವನ್ನು ಆಯುಕ್ತರು ನೀಡಿದ್ದಾರೆ.
ಉದ್ಯಮಿ ಸಿ.ಜೆ.ರಾಯ್ ಆತ್ಮ*ಹತ್ಯೆ ಪ್ರಕರಣ ಸಂಬಂಧ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಿ ಆತ್ಮ*ಹತ್ಯೆ ಹಿಂದಿನ ಕಾರಣವನ್ನು ಎಸ್‌ಐಟಿ ಪತ್ತೆ ಮಾಡಲಿದೆ.- ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಆಯುಕ್ತ, ಬೆಂಗಳೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ