
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹೈವೋಲ್ಟೇಜ್ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಸ್ಯಾಂಡಲ್‌ವುಡ್‌ನ ಅಂಗಳದಲ್ಲಿ ರಾಜಕೀಯ ಚದುರಂಗದಾಟದ ನಡುವೆಯೇ ಹೊಸ ಇತಿಹಾಸ ಸೃಷ್ಟಿಯಾಗಿದೆ.
ಬಹಳ ದಿನಗಳಿಂದ ಕುತೂಹಲ ಕೆರಳಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC) ಚುನಾವಣಾ ಕಣದಲ್ಲಿ ಅಂತಿಮವಾಗಿ ನಟಿ ಜಯಮಾಲಾ ಭಾರಿ ಬಹುಮತದೊಂದಿಗೆ ಗೆದ್ದು ಬೀಗಿದ್ದಾರೆ. ಇದು ಕೇವಲ ಚಲನಚಿತ್ರ ಮಂಡಳಿಯ ಗೆಲುವಲ್ಲ, ಬದಲಿಗೆ ತೆರೆಮರೆಯಲ್ಲಿ ನಡೆದ 'ರಾಜಕೀಯ ಮೇಲಾಟ'ದ ಗೆಲುವು ಎಂದೇ ವಿಶ್ಲೇಷಿಸಲಾಗುತ್ತಿದೆ.
ಈ ಬಾರಿಯ ಚುನಾವಣೆ ಅಕ್ಷರಶಃ ರಾಜ್ಯ ರಾಜಕೀಯದ ಪ್ರತಿಬಿಂಬದಂತಿತ್ತು. ಮುಖ್ಯಮಂತ್ರಿಗಳ ಬಣದಲ್ಲಿ ಗುರುತಿಸಿಕೊಂಡಿದ್ದ ಜಯಮಾಲಾ ಅವರ ಎದುರು ಡಿಕೆ ಶಿವಕುಮಾರ್ ಅವರ ಆಪ್ತ ಬಾ.ಮಾ. ಹರೀಶ್ ಕಣದಲ್ಲಿದ್ದರು. ಸಿಎಂ ಆಪ್ತರು ಜಯಮಾಲಾ ಅವರ ಪರವಾಗಿ ಭರ್ಜರಿ ತಂತ್ರಗಾರಿಕೆ ನಡೆಸಿದ್ದರು. ವಿಶೇಷವೆಂದರೆ, ಸ್ಪರ್ಧೆಯಲ್ಲಿದ್ದ ಮುನಿರತ್ನ ಅವರ ಮನವೊಲಿಸಿ ನಾಮಪತ್ರ ಹಿಂಪಡೆಯುವಂತೆ ಮಾಡುವಲ್ಲಿ ಬಿ.ಕೆ. ಹರಿಪ್ರಸಾದ್ ಯಶಸ್ವಿಯಾಗಿದ್ದರು. ಈ ಎಲ್ಲಾ ರಾಜಕೀಯ ದಾಳಗಳ ಪರಿಣಾಮವಾಗಿ ಇಂದು ಜಯಮಾಲಾ ಅವರು 512 ಮತಗಳನ್ನು ಪಡೆಯುವ ಮೂಲಕ ಸುಲಭ ಜಯ ಸಾಧಿಸಿದ್ದಾರೆ.
ಗುರುರಾಜ ಕಲ್ಯಾಣ ಮಂಟಪದಲ್ಲಿ ನಡೆದ ಮತದಾನ ಪ್ರಕ್ರಿಯೆ ನಡುವೆ ನಡೆದ ಕಾರ್ಯಕಾರಿ ಸಮಿತಿ ಸಭೆಯು ರಣರಂಗವಾಗಿ ಮಾರ್ಪಟ್ಟಿತ್ತು. ಸ್ಪರ್ಧಿಗಳು ಮೈಕ್ ಕಿತ್ತುಕೊಂಡು ಪರಸ್ಪರ ಕಿತ್ತಾಡಿಕೊಂಡ ದೃಶ್ಯಗಳು ಕಂಡುಬಂದವು. ಒಟ್ಟು 1,430 ಮತದಾರರ ಪೈಕಿ 843 ಮತಗಳು ಚಲಾವಣೆಯಾಗಿದ್ದು, ಗಲಾಟೆಯ ನಡುವೆಯೂ ಚಿತ್ರರಂಗದ ಪ್ರತಿನಿಧಿಗಳು ತಮ್ಮ ನಾಯಕಿಯನ್ನು ಆರಿಸಿದ್ದಾರೆ.
ಹೊಸ ಸಮಿತಿಯ ಸಾರಥಿಗಳು: ಜಯಮಾಲಾ ತಂಡದ ಪಟ್ಟಿ
ಅಧ್ಯಕ್ಷರಾಗಿ ಜಯಮಾಲಾ ಆಯ್ಕೆಯಾಗುತ್ತಿದ್ದಂತೆ ಅವರ ಜೊತೆ ಕೆಲಸ ಮಾಡುವ ಪದಾಧಿಕಾರಿಗಳ ಪಟ್ಟಿಯೂ ಬಿಡುಗಡೆಯಾಗಿದೆ. ಗೌರವ ಉಪಾಧ್ಯಕ್ಷರಾಗಿ ನಿರ್ಮಾಪಕರ ವತಿಯಿಂದ ಸುಂದರ್ ರಾಜು, ವಿತರಕರ ಪರವಾಗಿ ಕೆ. ಮಂಜು ಮತ್ತು ಪ್ರದರ್ಶಕರ ಪರವಾಗಿ ಕಿಶೋರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳಾಗಿ ಎ. ಗಣೇಶ್, ರಮೇಶ್ ಮತ್ತು ಅಶೋಕ್ ಆಯ್ಕೆಯಾಗಿದ್ದರೆ, ಖಜಾಂಚಿಯಾಗಿ ಜಯಸಿಂಹ ಮುಸುರಿ ಅಧಿಕಾರ ಸ್ವೀಕರಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ